

ಮಿರ್ಜಾಪುರ (ಉತ್ತರ ಪ್ರದೇಶ): ಮೊಬೈಲ್ಫೋನ್ನಗಳು ಎಷ್ಟು ಉಪಕಾರಿಯೋ ಅಷ್ಟೇ ಪ್ರಾಣಹಾನಿಯನ್ನೂ ತಂದೊಡ್ಡಬಲ್ಲುದು ಎನ್ನುವುದಕ್ಕೆ ಇದಾಗಲೇ ಹಲವಾರು ಘಟನೆಗಳು ನಡೆದಿವೆ. ಅದರಲ್ಲಿಯೂ ಕಳಪೆ ಗುಣಮಟ್ಟದ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಅನೇಕರು ಮೃತಪಟ್ಟಿದ್ದೂ ನಡೆದಿದೆ.
ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಬ್ಯಾಟರಿ ಸ್ಫೋಟಗೊಂಡ ಪರಿಣಾಮ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮುಖದ ಬಳಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಬಾಲಕಿ ಅಸುನೀಗಿದ್ದಾನೆ.
ಬಾಲಕ ಮೊಬೈಲ್ ಫೋನ್ ಜಾರ್ಜ್ಗೆ ಹಾಕಿದ್ದ. ಅದು ಚಾರ್ಜ್ ಆಗಿದೆಯೋ ಇಲ್ಲವೋ ಎಂದು ನೋಡಲು ಹೋಗಿದ್ದ. ಅದೇ ವೇಳೆ ಬ್ಯಾಟರಿ ಬ್ಲಾಸ್ಟ್ ಆಗಿದ್ದು, ಬಾಲಕ ಮೋನು ಮೃತಪಟ್ಟಿದ್ದಾನೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಮುಖ ಛಿದ್ರಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತನಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಿರ್ಜಾಪುರ ಜಿಲ್ಲೆಯ ಹಳಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮತ್ವಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಶಬ್ದ ಕೇಳುತ್ತಿದ್ದಂತೆಯೇ ಪಾಲಕರು ಬಂದು ನೋಡಿದ್ದಾರೆ. ಅದಾಗಲೇ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದ.