More

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳು

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪು ಹೆಸರೇ ಸೂಚಿಸುವಂತೆ ಹೇರಳ ಪೋಷಕಾಂಶಗಳನ್ನು ಹೊಂದಿದ ಸೊಪ್ಪು. ಇದಕ್ಕೆ ಚಕ್ರಮುನಿ ಎಂಬ ಹೆಸರೂ ಇದೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಹೂವಿನ ತೋಟದಲ್ಲಿ ನೆಟ್ಟರೆ ಹೂಗಿಡಗಳಿಗೆ ಎರೆದ ನೀರು ಇದಕ್ಕೂ ಸಾಕಾಗುತ್ತದೆ. ಹೆಚ್ಚಿನ ಆರೈಕೆಯಿಲ್ಲದೆ ಬೆಳೆಯುವ ಸಸ್ಯ ಇದು. ಇದರ ಎಲೆ, ಚಿಗುರು, ಕಾಂಡವನ್ನು ಅಡುಗೆಯಲ್ಲಿ ಬಳಸುತ್ತಾರೆ. ವಿಟಮಿನ್ ಸೊಪ್ಪಿನ ಸೇವನೆ ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಸೊಪ್ಪಿನ ವೈವಿಧ್ಯಮಯ ಅಡುಗೆಗಳನ್ನು ಇಲ್ಲಿ ವಿವರಿಸಿದ್ದಾರೆ
    ಸಹನಾ ಕಾಂತಬೈಲು


    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪಿನ ಬೋಂಡ
    ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ವಿಟಮಿನ್ ಸೊಪ್ಪು 1 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/2 ಕಪ್, ಕಡ್ಲೆ ಹಿಟ್ಟು 1 ಕಪ್, ಅಕ್ಕಿ ಹಿಟ್ಟು 2 ಚಮಚ, ಅಚ್ಚ ಖಾರದ ಪುಡಿ 1 ಚಮಚ, ಗರಂ ಮಸಾಲೆ ಪುಡಿ 1/4 ಚಮಚ, ಇಂಗು ಕಡಲೆ ಗಾತ್ರ, ಉಪ್ಪು ರುಚಿಗೆ.
    ಮಾಡುವ ವಿಧಾನ: ಸಣ್ಣಗೆ ಹೆಚ್ಚಿದ ವಿಟಮಿನ್ ಸೊಪ್ಪು, ಈರುಳ್ಳಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚ ಖಾರದ ಪುಡಿ, ಗರಂ ಮಸಾಲೆ ಪುಡಿ, ಇಂಗು, ಉಪ್ಪು, ಸ್ವಲ್ಪ ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ವಿಟಮಿನ್ ಸೊಪ್ಪಿನ ಬೋಂಡ ಟೀ, ಕಾಫಿ ಜತೆ ತಿನ್ನಲು ರೆಡಿ.

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪಿನ ಪಲ್ಯ
    ಬೇಕಾಗುವ ಸಾಮಗ್ರಿ: ವಿಟಮಿನ್ ಸೊಪ್ಪು 4 ಮುಷ್ಟಿ, ಸಣ್ಣಗೆ ಹೆಚ್ಚಿದ ಬಟಾಟೆ 1, ನೀರುಳ್ಳಿ 1, ಕಾಯಿತುರಿ 1/4 ಕಪ್, ಹಸಿಮೆಣಸು 3, ಅರಸಿನಪುಡಿ 1/4 ಚಮಚ, ಖಾರದ ಪುಡಿ 1/4 ಚಮಚ, ಬೆಲ್ಲ 1 ಚಮಚ, ಉಪ್ಪು ರುಚಿಗೆ, ಒಗ್ಗರಣೆಗೆ ಎಣ್ಣೆ ಸ್ವಲ್ಪ, ಉದ್ದಿನಬೇಳೆ 1 ಚಮಚ, ಸಾಸಿವೆ 1 ಚಮಚ.
    ಮಾಡುವ ವಿಧಾನ: ವಿಟಮಿನ್ ಸೊಪ್ಪನ್ನು ಸ್ವಚ್ಛಗೊಳಿಸಿ ಹೆಚ್ಚಿ. ಈರುಳ್ಳಿಯನ್ನು ಹೆಚ್ಚಿ. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಉದ್ದಿನಬೇಳೆ, ಸಾಸಿವೆ ಹಾಕಿ ಸಾಸಿವೆ ಸಿಡಿದ ನಂತರ ಹಸಿಮೆಣಸು, ನೀರುಳ್ಳಿ ಹಾಕಿ ಬಾಡಿದ ಮೇಲೆ ವಿಟಮಿನ್ ಸೊಪ್ಪು, ಅರಸಿನಪುಡಿ, ಉಪ್ಪು, ಹೆಚ್ಚಿದ ಬಟಾಟೆ, ಬೆಲ್ಲ ಹಾಕಿ ನೀರು ಚಿಮುಕಿಸಿ ಬೇಯಿಸಿ. ಬೆಂದ ಮೇಲೆ ಕಾಯಿತುರಿ ಹಾಕಿ ಮಗುಚಿ ಇಳಿಸಿ.

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪಿನ ಮೊಸರು ಬಜ್ಜಿ
    ಬೇಕಾಗುವ ಸಾಮಗ್ರಿ: ವಿಟಮಿನ್ ಸೊಪ್ಪು 1 ಮುಷ್ಟಿ, ನೀರುಳ್ಳಿ 1, ಹಸಿಮೆಣಸು 1, ಮೊಸರು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಉದ್ದಿನಬೇಳೆ 1/2 ಚಮಚ, ಸಾಸಿವೆ 1 ಚಮಚ, ಒಣಮೆಣಸು 1.
    ಮಾಡುವ ವಿಧಾನ: ವಿಟಮಿನ್ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ.


    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪಿನ ತಂಬುಳಿ

    ಬೇಕಾಗುವ ಸಾಮಗ್ರಿ: ವಿಟಮಿನ್ ಸೊಪ್ಪು 2 ಕಪ್, ಕಾಯಿತುರಿ 1/2 ಕಪ್, ಸಿಹಿಮಜ್ಜಿಗೆ 1 ಕಪ್, ತುಪ್ಪ 1 ಚಮಚ, ಜೀರಿಗೆ 1/2 ಚಮಚ, ಕಾಳುಮೆಣಸು 5, ಉಪ್ಪು ರುಚಿಗೆ ತಕ್ಕಷ್ಟು.
    ಮಾಡುವ ವಿಧಾನ: ವಿಟಮಿನ್ ಸೊಪ್ಪನ್ನು ತುಪ್ಪದಲ್ಲಿ ಹುರಿಯಿರಿ. ಕಾಳುಮೆಣಸು ಮತ್ತು ಜೀರಿಗೆಯನ್ನೂ ಹುರಿದು ಕಾಯಿತುರಿಯೊಂದಿಗೆ ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಮಜ್ಜಿಗೆ ಬೆರೆಸಿ ತೆಳ್ಳಗೆ ಮಾಡಿ ಊಟದಲ್ಲಿ ಬಳಸಿ. ವಿಟಮಿನ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಈ ತಂಬುಳಿ ರಕ್ತಹೀನತೆಯಿಂದ ಬಳಲುವವರಿಗೆ ಒಳ್ಳೆಯದು.

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳುವಿಟಮಿನ್ ಸೊಪ್ಪಿನ ರೊಟ್ಟಿ
    ಬೇಕಾಗುವ ಸಾಮಗ್ರಿ: ವಿಟಮಿನ್ ಸೊಪ್ಪು 1 ಕಪ್, ತೆಂಗಿನತುರಿ 1/4 ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4 ಕಪ್, ಹಸಿಮೆಣಸು 2, ಅಕ್ಕಿಹಿಟ್ಟು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ.
    ಮಾಡುವ ವಿಧಾನ: ವಿಟಮಿನ್ ಸೊಪ್ಪು, ಉಪ್ಪು, ತೆಂಗಿನ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಎಲ್ಲವನ್ನು ಒಟ್ಟು ಹಾಕಿ ಚೆನ್ನಾಗಿ ಕಲಸಿ. ಆಮೇಲೆ ಅಕ್ಕಿಹಿಟ್ಟನ್ನು ಹಾಕಿ ಕಲಸಿ. ನಂತರ ಬಾಳೆ ಎಲೆಯ ಮೇಲೆ ತೆಳುವಾಗಿ ತಟ್ಟಿ ಕಾದ ಕಾವಲಿ ಮೇಲೆ ಎಣ್ಣೆ ಸವರಿ ಎರಡೂ ಬದಿ ಹೊಂಬಣ್ಣ ಬರುವ ಹಾಗೆ ತುಪ್ಪ ಹಾಕಿ ಬೇಯಿಸಿ. ಬೆಣ್ಣೆ ಹಾಗೂ ಕಾಯಿ ಚಟ್ನಿಯೊಂದಿಗೆ ಸವಿಯಿರಿ.

    ವಿಟಮಿನ್​ ಸೊಪ್ಪಿನ ಮಹಿಮೆ ಬಲ್ಲಿರಾ? ಇಲ್ಲಿವೆ ನೋಡಿ ನೀರೂರಿಸುವ ಖಾದ್ಯಗಳು

    ವಿಟಮಿನ್ ಸೊಪ್ಪಿನ ಪತ್ರೊಡೆ
    ಬೇಕಾಗುವ ಸಾಮಗ್ರಿ: ಹೆಚ್ಚಿದ ವಿಟಮಿನ್ ಸೊಪ್ಪು 8 ಕಪ್, ಬೆಳ್ತಿಗೆ ಅಕ್ಕಿ ಕಾಲು ಕೆ.ಜಿ., ಕುಚ್ಚಲು ಅಕ್ಕಿ ಕಾಲು ಕೆ.ಜಿ., ಕಾಯಿತುರಿ ಒಂದು ಕಪ್, ಒಣ ಮೆಣಸಿನಕಾಯಿ ಎಂಟು, ಹುಳಿ ನಿಂಬೆ ಗಾತ್ರ, ಅರಸಿನ ಪುಡಿ ಒಂದು ಚಮಚ, ಬೆಲ್ಲ ಅರ್ಧ ಅಚ್ಚು, ಕೊತ್ತಂಬರಿ ನಾಲ್ಕು ಚಮಚ, ಜೀರಿಗೆ ಅರ್ಧ ಚಮಚ, ಬಾಳೆಲೆ ಹತ್ತು, ಉಪ್ಪು ರುಚಿಗೆ ತಕ್ಕಷ್ಟು.
    ಮಾಡುವ ವಿಧಾನ: ಅಕ್ಕಿಯನ್ನು 3 ಗಂಟೆ ನೆನೆಹಾಕಿ ತೊಳೆದು ಇಟ್ಟುಕೊಳ್ಳಿ. ಕಾಯಿತುರಿ ಜೊತೆಗೆ ಒಣಮೆಣಸು, ಹುಳಿ, ಜೀರಿಗೆ, ಕೊತ್ತಂಬರಿ, ಉಪ್ಪು, ಬೆಲ್ಲ, ಅರಸಿನ ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಅಕ್ಕಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿ. ವಿಟಮಿನ್ ಸೊಪ್ಪನ್ನು ಸಣ್ಣಗೆ ಹೆಚ್ಚಿ ಈ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಬಾಡಿಸಿ ಒರೆಸಿದ ಬಾಳೆಲೆಯಲ್ಲಿ ನಾಲ್ಕು ಸೌಟು ಹಿಟ್ಟು ಹಾಕಿ ಮಡಚಿ ಉಗಿಯಲ್ಲಿ ಒಂದೂವರೆ ಗಂಟೆ ಬೇಯಿಸಿ. ಪತ್ರೊಡೆಯನ್ನು ಕೊಬ್ಬರಿ ಎಣ್ಣೆ, ತುಪ್ಪ ಅಥವಾ ಪದಾರ್ಥ ಹಾಕಿ ತಿನ್ನಬಹುದು. ಒಗ್ಗರಣೆ ಹಾಕಿಯೂ ಸವಿಯಬಹುದು.
    ಪತ್ರೊಡೆ ಒಗ್ಗರಣೆ: ಒಂದು ಈರುಳ್ಳಿಯನ್ನು ಸಣ್ಣ ಹೆಚ್ಚಿ. ಒಂದು ಹಸಿಮೆಣಸನ್ನು ಸಿಗಿದು ಸೇರಿಸಿ. ಒಲೆ ಮೇಲೆ ಬಾಣಲೆ ಇಟ್ಟು ಒಗ್ಗರಣೆ ಸಿಡಿಸಿ, ಒಂದು ಎಸಳು ಕರಿಬೇವು, ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸು ಹಾಕಿ. ಕೆಂಪಗೆ ಹುರಿದ ನಂತರ ನಾಲ್ಕು ಪತ್ರೊಡೆಯನ್ನು ಪುಡಿ ಮಾಡಿ ಸೇರಿಸಿ, ಕೆದಕಿ ಅರ್ಧ ಕಪ್ ಕಾಯಿತುರಿ ಮಿಶ್ರ ಮಾಡಿ. ಕಾಯಿತುರಿಗೆ ಚೂರು ಉಪ್ಪು ಬೆರೆಸಬೇಕು. ಬೆಳಗ್ಗಿನ ಉಪಾಹಾರಕ್ಕೆ, ಸಂಜೆಯ ಕಾಫಿಗೂ ಚೆನ್ನಾಗಿರುತ್ತದೆ.

    ನೀವೂ ಬರೆಯಬಹುದು: 
    ಅಡುಗೆಯಲ್ಲಿ ನಿಮಗೆ ಆಸಕ್ತಿ ಇದೆಯೆ? ಹೊಸ ಹೊಸ ಅಡುಗೆಗಳನ್ನು ಮಾಡಿರುವಿರಾ? ಹಾಗಿದ್ದರೆ ಸೂಕ್ತ ಫೋಟೋ ಜತೆ (ಫೋಟೋ ಜತೆ ಅಡುಗೆಯ ಹೆಸರು ಇರಬೇಕು) ನಿಮ್ಮದೊಂದು ಫೋಟೋ ಇಟ್ಟು ನಮಗೆ ಕಳುಹಿಸಿ. ಮೂರಕ್ಕಿಂತ ಹೆಚ್ಚು ಅಡುಗೆ ಇದ್ದರೆ ಚೆನ್ನ. ನಿಮ್ಮ ರೆಸಿಪಿಯನ್ನು [email protected] ಗೆ ಕಳುಹಿಸಿ. ಸಾಧ್ಯವಾದರೆ 2-3 ನಿಮಿಷಗಳ ವಿಡಿಯೋ ಮಾಡಿ ಕಳುಹಿಸಿ.

    ಕ್ಷಣ ಕ್ಷಣದ ಸುದ್ದಿಗಾಗಿ https://www.vijayavani.net/ ಕ್ಲಿಕ್ಕಿಸಿ. vijayavani ಫೇಸ್​ಬುಕ್​ ಪುಟವನ್ನು ಲೈಕ್​ ಮಾಡಿ ಸುದ್ದಿ ಪಡೆಯಿರಿ.

    ಮೆನೋಪಾಸ್ ನಂತರ ಲೈಂಗಿಕಕ್ರಿಯೆಯಲ್ಲಿ ತೊಂದರೆಯಾದರೆ ಆಯುರ್ವೇದದಲ್ಲಿದೆ ಪರಿಹಾರ…

    ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

    ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

    ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts