More

    ನಿಮ್ಮ ಸಂಬಂಧ ಪತ್ನಿ ಒಪ್ಪಿಕೊಳ್ಳಬೇಕು, ಆದ್ರೆ ಅವಳ ಸಂಬಂಧ ನಿಮ್ಮಿಂದ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಲ್ವಾ?

    ನಿಮ್ಮ ಸಂಬಂಧ ಪತ್ನಿ ಒಪ್ಪಿಕೊಳ್ಳಬೇಕು, ಆದ್ರೆ ಅವಳ ಸಂಬಂಧ ನಿಮ್ಮಿಂದ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಲ್ವಾ?ಪ್ರಶ್ನೆ : ನಾನೊಬ್ಬಳನ್ನು ಪ್ರೀತಿಸಿ ಎರಡು ವರ್ಷ ಲಿವ್‌ ಇನ್‌ ರಿಲೇಷನ್‌ನಲ್ಲಿ ಇದ್ದೆ. ಆದರೆ ನಮ್ಮಿಬ್ಬರ ನಡುವೆ ಮನಸ್ತಾಪವಾಗಿ ಬೇರೆ ಬೇರೆಯಾದ್ವಿ. ನಂತೆ ನನಗೆ ಬೇರೆ ಹುಡುಗಿಯನ್ನು ಗೊತ್ತು ಮಾಡಿದರು. ಈ ಮದುವೆಗೆ ಮುನ್ನವೇ ಪತ್ನಿಯಾಗುವವಳಿಗೆ ಎಲ್ಲಾ ವಿಷಯ ತಿಳಿಸಿದೆ. ಅವಳು ಅದನ್ನು ಒಪ್ಪಿಕೊಂಡಳು.

    ” ಹಳೆಯದನ್ನು ಮರೆತುಬಿಡು, ನಾವೀಗ ಹೊಸ ಜೀವನವನ್ನು ಪ್ರಾರಂಭಿಸೋಣ ” ಎಂದು ಸಮಾಧಾನ ಮಾಡಿದಳು. ಅವಳು ನಗುನಗುತ್ತಾ ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವದವಳು. ಇದು ನನ್ನ ತಂದೆ ಮತ್ತು ತಾಯಿಗೆ ಬಹಳ ಇಷ್ಟವಾಗಿದೆ. ಆರು ತಿಂಗಳು ನಾವು ಎಲ್ಲಾ ಕಡೆಗೆ ಖುಷಿಯಾಗಿ ಸುತ್ತಾಡಿದೆವು. ನಮ್ಮ ಮದುವೆಗೆ ಇನ್ನೂ ಮೂರುತಿಂಗಳಿದೆ. ಈಗ ಹದಿನೈದು ದಿನಗಳ ಕೆಳಗೆ ಅವಳೊಂದು ಘೋರ ಸುದ್ದಿಯನ್ನು ಬಯಲು ಮಾಡಿದಳು.

    ಅವಳು ಸಹ ಈ ಮೊದಲು ಮೂರು ತಿಂಗಳು ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದಳಂತೆ. ಆದರೆ ಆತನ ನಡವಳಿಕೆ ಸರಿ ಕಾಣದ ಕಾರಣ, ಬಿಟ್ಟಿದ್ದಾಳೆ. ಈ ವಿಷಯ ಅಪ್ಪ- ಅಮ್ಮನಿಗೂ ತಿಳಿದಿಲ್ಲ. ನಿನಗೆ ಮಾತ್ರ ಹೇಳುತ್ತಿದ್ದೇನೆ. ಏಕೆಂದರೆ ನೀನೂ ಇಂಥಾ ಜೀವನವನ್ನು ಕಳೆದಿರುವುದರಿಂದ ನಿನಗೆ ನನ್ನ ನೋವು ಅರ್ಥವಾಗುತ್ತದೆ, ಮತ್ತು ನೀನು ಉದಾರವಾಗಿ ಇದನ್ನು ಗ್ರಹಿಸುತ್ತೀಯಾ ಎಂದು ನಂಬಿದ್ದೇನೆ ” ಎಂದು ಹೇಳಿದಳು. ಇದನ್ನು ಕೇಳಿದಾಗಿನಿಂದ ನನ್ನ ಮನಸ್ಸು ಒಡೆದಂತಾಗಿದೆ ಮೇಡಂ . ಇಂಥಾ ಹುಡುಗಿಯನ್ನು ಹೇಗೆ ಮದುವೆಯಾಗುವುದು? ನಾನು ಯಾವುದನ್ನು ಹೂವೆಂದು ಕೈಲಿ ಹಿಡಿದೆನೋ ಅದು ಹಾವಾಗಿದೆಯಲ್ಲ? ಹೇಗೆ ಸಹಿಸುವುದು?

    ಉತ್ತರ: ನಿಮ್ಮ ಪತ್ರದಲ್ಲಿ ಎರಡು ಸ್ಪಷ್ಟವಾದ ಅಂಶಗಳಿವೆ. ಒಳ್ಳೆಯ ದಾಂಪತ್ಯಕ್ಕೆ ಒಬ್ಬರನ್ನೊಬ್ಬರು ದರ್ಪದಿಂದ ಆಳುವುದು ಹಿತವಲ್ಲ ಎನ್ನುವುದನ್ನು ನೀವೂ ಮತ್ತು ಈಗ ನಿಮ್ಮನ್ನು ಮದುವೆಯಾಗಲು ಒಪ್ಪಿರುವ ಹುಡುಗಿಯೂ ಅರಿತಿದ್ದೀರಿ. ನಿಮ್ಮಿಬ್ಬರ ಈ ಅಭಿಪ್ರಾಯವನ್ನು ನಿಜಕ್ಕೂ ಗೌರವಿಸಬೇಕು. ನಿಮ್ಮ ಮೊದಲ ಹುಡುಗಿ ನಿಮ್ಮನ್ನು ಸರ್ವಾಧಿಕಾರಿಯಂತೆ ಆಳಲು ಪ್ರಯತ್ನಿಸಿದ್ದನ್ನು ನೀವು ತಿರಸ್ಕರಿಸಿದಿರಿ.

    ಈಗ ಗೊತ್ತಾಗಿರುವ ಹುಡುಗಿಯ ಹಳೆಯ ಗೆಳೆಯನ ಕ್ರೌರ್ಯವನ್ನು ಅವಳು ತಿರಸ್ಕರಿಸಿದಳು. ಇಬ್ಬರೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೀರಿ. ಇದಕ್ಕಾಗಿ ನಿಮ್ಮಿಬ್ಬರನ್ನು ಅಭಿನಂದಿಸುತ್ತೇನೆ. ಆದರೆ ಈಗಿನ ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ. ನೀವು ’ ಲಿವಿಂಗ್ ಟುಗೆದರ್ ’ ಒಪ್ಪಿ ಬದುಕಿದ್ದು ಎರಡು ವರ್ಷ! ನಿಮ್ಮ ಹೆಂಡತಿಯಾಗುವವಳು ಇದ್ದದ್ದು ಮೂರು ತಿಂಗಳು! ನೀವು ಎರಡು ವರ್ಷ ಅನುಭವಿಸಿದ ವ್ಯವಸ್ಥೆಯನ್ನು ಅವಳು ಮೂರು ತಿಂಗಳು ಒಪ್ಪಿದ್ದಳು ಎಂದರೆ ನಿಮಗೇಕೆ ಮನಸ್ಸು ಒಡೆಯಬೇಕು? ಅಂದರೆ ಹೆಣ್ಣಿಗೊಂದು ಮೌಲ್ಯ, ಗಂಡಿಗೊಂದು ಮೌಲ್ಯವೇ? ಪಾಶ್ಚಾತ್ಯರು ಈ ಲಿವಿಂಗ್ ಟುಗೆದರ್ ವ್ಯವಸ್ಥೆಯನ್ನು ಮಾಡಿಕೊಂಡಿರುವುದೇ ಉದಾರ ಮನಸ್ಥಿತಿಯ ಕಾರಣವಾಗಿ. ಮದುವೆ ಎಂದಾಗಿಬಿಟ್ಟರೆ, ಅನೇಕ ಕಟ್ಟುಪಾಡುಗಳಿಗೆ ಒಳಗಾಗಬೇಕಾಗುತ್ತದೆ.

    ಗಂಡ ಅವನಿಗೆ ಒಂದಷ್ಟು ಕರ್ತ್ಯವ್ಯಗಳು, ಹೆಂಡತಿ ಅವಳಿಗೊಂದಷ್ಟು ಕರ್ತವ್ಯಗಳು. ಇದನ್ನು ಸರಿಯಾಗಿ ಪಾಲಿಸದಿದ್ದರೆ ಉಭಯ ಕಡೆಯ ಬಂಧುಗಳಿಗೂ ಉತ್ತರಿಸಬೇಕಾದ ಅನಿವಾರ್ಯತೆ! ಇನ್ನು ವಿಚ್ಛೇದನವೋ ಪರದೇಶಗಳಲ್ಲಿ ವಿಪರೀತ ದುಬಾರಿ! ಹೀಗಾಗಿ ಅವರು ಈ ವ್ಯವಸ್ಥೆಯನ್ನು ಕಂಡುಕೊಂಡರು. ಇಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರು! ನಮ್ಮ ದೇಶದ ಯುವಜನತೆಗೆ ಪಾಶ್ಚಾತ್ಯ ಹೊಸ ವ್ಯವಸ್ಥೆಗಳು ಆಕರ್ಷಕವಾಗಿ ಕಾಣುತ್ತವೆ. ತಕ್ಷಣ ಅನುಕರಿಸಲು ಪ್ರಯತ್ನಿಸುತ್ತೀರಿ. ಆದರೆ ಗಂಡುಗಳಿನ್ನೂ ಅಂತರಂಗದಲ್ಲಿ ’ ಓಲ್ಡ್ ಸ್ಕೂಲ್ ಆಫ಼್ ಥಾಟ್ ’ ನಲ್ಲೇ ಇರುತ್ತೀರಿ! ಈಗ ನಿಮ್ಮ ಮನಸ್ಥಿತಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನೀವು ಎರಡು ವರ್ಷ ಯಾರದೋ ಜೊತೆ ಬದುಕಿದರೂ ಪರವಾಗಿಲ್ಲ, ಆದರೆ ನಿಮ್ಮನ್ನು ಮದುವೆಯಾಗುವವಳು ಮಾತ್ರ ೧೦೦% ಕನ್ಯೆಯೇ ಆಗಿರಬೇಕು ಎನ್ನುವ ನಿರೀಕ್ಷೆ! ಇದು ಎಷ್ಟರ ಮಟ್ಟಿಗೆ ಸರಿ? ಶೀಲವೆನ್ನುವುದು ಇರಲೇ ಬೇಕಾದರೆ ಗಂಡಿಗೂ ಹೆಣ್ಣಿಗೂ ಇಬ್ಬರಿಗೂ ಸಮಾನವಾಗಿರಬೇಕೇಲ್ಲವೇ? ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ? ಯಾರೋ ಅವಿದ್ಯಾವಂತ ಹೆಳ್ಳಿಯ ಜನ ಈ ಮಾತನ್ನು ಹೇಳಿದರೆ ಕ್ಷಮಿಸಬಹುದು.

    ವಿದ್ಯಾವಂತರಾದ, ಮತ್ತು ಲಿವಿಂಗ್ ಟುಗೆದರ್ ವ್ಯವಸ್ಥೆಯಲ್ಲಿ ಎರಡು ವರ್ಷ ಜೀವನದ ಅನುಭವಗಳನ್ನು ಪಡೆದ ನೀವು ಈ ರೀತಿ ಚಿಂತಿಸುವುದು ಅಕ್ಷಮ್ಯ ಅಪರಾಧ! ನಿಮಗೂ ನಿಮ್ಮ ಮನೆಯ ಎಲ್ಲರಿಗೂ ಇಷ್ಟವಾಗಿರುವ ಈ ಹುಡುಗಿಯನ್ನು ನಿರ್ಮಲ ಮನಸ್ಸಿನಿಂದ ಮದುವೆಯಾಗಿ ಸುಖವಾಗಿರಿ. ನೀವೇನೂ ಅವಳಿಗೆ ಉಪಕಾರ ಮಾಡುತ್ತಿಲ್ಲ. ಬದಲಿಗೆ ಅವಳೆ ನಿಮಗೆ ಉಪಕಾರ ಮಾಡುತ್ತಿದ್ದಾಳೆ. ಎರಡು ವರ್ಷ ಒಬ್ಬಳ ಜೊತೆ ಬದುಕಿದ ನಿಮ್ಮನ್ನು ಒಪ್ಪಿಕೊಂಡಿರುವ ಅವಳ ಔದಾರ್ಯವನ್ನು ನೀವು ಮೆಚ್ಚಲೇ ಬೇಕು. ಅವಳಿಗಿರುವ ಹೃದಯ ವೈಶಾಲ್ಯದ ಮುಂದೆ ನಿಮ್ಮ ಈ ಚಿಂತನೆ ಸಂಕುಚಿತ ಮನೋಭಾವದ್ದಂದೆ ಅನ್ನಿಸುವುದಿಲ್ಲವೇ? ನೀವೇ ಸರಿಯಾಗಿ ಮತ್ತೊಮ್ಮೆ ಯೋಚಿಸಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?

    ದೇಹ ಒಪ್ಪಿಸಿದ್ದೇನೆ, ಕಿಡ್ನಿ ಮಾರಿ 20 ಲಕ್ಷ ರೂ ಕೊಡುವೆ ಎಂದ್ರೂ ಕೇಳದೇ ಬೇರೆ ಮದ್ವೆಯಾಗ್ತಿದ್ದಾನೆ- ಏನು ಮಾಡಲಿ?

    ನಂಗೆ ಸಾಯಲು ಇಷ್ಟ ಇಲ್ಲ ಆಂಟಿ… ನನ್‌ ಕಷ್ಟ ಹೇಗೆ ಹೇಳಲೋ ಗೊತ್ತಾಗ್ತಿಲ್ಲ… ಪ್ಲೀಸ್‌ ಏನಾದ್ರೂ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts