More

    ಇದು ಅಪ್ರಾಪ್ತರ ಆನ್‌ಲೈನ್‌ ಲವ್‌ ಸ್ಟೋರಿ: ಲಿವ್‌ಇನ್‌ನಲ್ಲಿ ಇರಲು ಸ್ವೀಡನ್‌ನಿಂದ ಮುಂಬೈಗೆ ಹಾರಿದ ಬಾಲಕಿ! ಮುಂದೆ?

    ಮುಂಬೈ: ಆನ್‌ಲೈನ್‌ ಕ್ಲಾಸ್‌ಗೆಂದು ಪಾಲಕರು ಸ್ಮಾರ್ಟ್‌ಫೋನ್‌ ಕೊಡಿಸಿದ್ರೆ ಮಕ್ಕಳು ಇಲ್ಲಸಲ್ಲದ ಕೆಲಸ ಮಾಡುತ್ತಿರುವುದು ಹೊಸ ವಿಷಯವಲ್ಲ. ಸುಲಭದಲ್ಲಿ ಇಂಟರ್‌ನೆಟ್‌ ಸಿಕ್ಕಿದೆಯೆಂದು ಜಾಲತಾಣದ ಮೂಲಕ ಪ್ರೀತಿಯ ಬಲೆಗೆ ಬಿದ್ದ ಮಕ್ಕಳಿಗೇನೂ ಕಮ್ಮಿಯಿಲ್ಲ. ಆದರೆ ಇಲ್ಲೊಂದು ಅಂತಾರಾಷ್ಟ್ರೀಯ ಲವ್‌ ಪ್ರಕರಣ ನಡೆದಿದೆ. ಎರಡು ದೇಶಗಳ ಪೊಲೀಸರಿಗೆ ತಲೆನೋವಾಗಿರುವ ವಿಚಿತ್ರ ಘಟನೆಯಿದು.

    19 ವರ್ಷದ ಮುಂಬೈನ ಹುಡುಗ, 16 ವರ್ಷದ ಸ್ವೀಡನ್‌ ಬಾಲಕಿ ಇವರ ನಡುವೆ ಹುಟ್ಟಿದ ಪ್ರೀತಿಯ ಕಥೆಯಿದು. ಇನ್‌ಸ್ಟಾಗ್ರಾಂ ಮೂಲಕ ಬಾಲಕಿಗೆ ಈ ಬಾಲಕನ ಪರಿಯಚವಾಗಿದೆ. ಪರಿಚಯ ಸಲುಗೆಯಾಗಿ ಅದು ಪ್ರೀತಿಯವರೆಗೂ ಹೋಗಿಬಿಟ್ಟಿದೆ. ಹುಡುಗನನ್ನು ಬಿಟ್ಟಿರಲಾರದ ಮಟ್ಟಿಗೆ ಈ ಆನ್‌ಲೈನ್‌ ಪ್ರೀತಿ ಬೆಳೆದಿದೆ.

    ಮೊದಮೊದಲು ಚಾಟ್‌, ಫೋನ್‌ ಕಾಲ್‌ ಎಲ್ಲವೂ ಆದ ಮೇಲೆ ಒಟ್ಟಗೇ ಇರುವ ನಿರ್ಣಯಕ್ಕೆ ಬಂದಿದೆ ಈ ಅಪ್ರಾಪ್ತ ಜೋಡಿ. ಪ್ರಾಪ್ತ ವಯಸ್ಕರಾಗುವವರೆಗೂ ಲಿವಿಂಗ್‌ ಟುಗೆದರ್‌ನಲ್ಲಿ ಇರೋಣ, ಆಮೇಲೆ ಮದುವೆಯಾಗೋಣ ಎಂದುಕೊಂಡಿದ್ದಾರೆ ಇವರು!

    ನವೆಂಬರ್ 17 ರಂದು ಬಾಲಕಿ ಮನೆಯಲ್ಲಿ ಯಾರಿಗೂ ಹೇಳದೇ ಒಬ್ಬಳೇ ವಿಮಾನ ಏರಿ ಸ್ವೀಡನ್‌ನಿಂದ ಮುಂಬೈಗೆ ಬಂದಿದ್ದಾರೆ. ಎಷ್ಟು ದೂರ ಅಂತೀರಾ? 6,228 ಕಿಲೋಮೀಟರ್! ಹುಡುಗ ತನ್ನ ಮನೆಯ ವಿಳಾಸ ಕೊಟ್ಟಿದ್ದರಿಂದ ಬಾಲಕಿ ಸೀದಾ ಅವನ ಮನೆಗೆ ಬಂದುಬಿಟ್ಟಿದ್ದಾಳೆ.

    ಈ ಹುಡುಗಿಯನ್ನು ನೋಡಿ ಮನೆಯವರಿಗೆ ಗಾಬರಿಯಾಗಿದೆ. ಕೊನೆಗೆ ವಿಷಯ ತಿಳಿದು ಆಕೆಯನ್ನು ವಾಪಸ್‌ ಕಳುಹಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ಸುತರಾಂ ಅದಕ್ಕೆ ಒಪ್ಪಲಿಲ್ಲ. ತಾನು ಈ ಹುಡುಗನ ಜತೆಯಲ್ಲಿಯೇ ಇರುವುದು ಎಂದಿದ್ದಾಳೆ. ಆಕೆ ಅಥವಾ ತಮ್ಮ ಮಗ ಏನಾದರೂ ಹೆಚ್ಚೂ ಕಡಿಮೆ ಮಾಡಿಕೊಂಡರೆ ಎಂಬ ಭಯದಲ್ಲಿ ಹಾಗೂ ಕುಟುಂಬದ ಮಾನ ಮರ್ಯಾದೆ ಅಂಜಿ ಬಾಲಕನ ಪಾಲಕರು, ಬಾಲಕಿಯನ್ನು ತಮ್ಮ ಸಂಬಂಧಿಯೊಬ್ಬರ ಜತೆಯಲ್ಲಿ ಬೇರೊಂದು ಅಪಾರ್ಟ್‌ಮೆಂಟ್‌ನಲ್ಲಿ ಇರಲು ವ್ಯವಸ್ಥೆ ಮಾಡಿದ್ದಾರೆ. ಕೊನೆಗೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

    ಅತ್ತ ಮಗಳಿಗಾಗಿ ತಡಕಾಡಿದ ಪಾಲಕರು ಎಲ್ಲಿಯೂ ಮಗಳು ಸಿಗದಾದಾಗ ಗಾಬರಿಗೊಂಡಿದ್ದಾರೆ. ತೀವ್ರವಾಗಿ ಹುಡುಕಾಟ ನಡೆಸಿದರೂ ಎಲ್ಲಿಯೂ ಮಗಳು ಸಿಗದ ಕಾರಣ, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆಕೆ ಫೋನ್ ನಂಬರ್, ಸಾಮಾಜಿಕ ಜಾಲತಾಣ ಎಲ್ಲಾ ಪರಿಶೀಲನೆ ಮಾಡಿದಾಗ ಭಾರತಕ್ಕೆ ಹೋಗಿರುವುದು ತಿಳಿದಿದೆ.

    ಕೂಡಲೇ ಇಂಟರ್‌ಪೋಲ್ ಮೂಲಕ ಭಾರತಕ್ಕೆ ಮಾಹಿತಿ ನೀಡಲಾಗಿದೆ. ಇದರ ಆಧಾರದ ಮೇಲೆ ಮುಂಬೈ ಪೊಲೀಸರು ಹುಡುಗಿ ಇರುವ ಜಾಗ ಪತ್ತೆ ಹಚ್ಚಿ ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ನಂತರ ಈ ಕುರಿತು ಸ್ವೀಡನ್‌ಗೆ ಮಾಹಿತಿ ನೀಡಿದ್ದಾರೆ.

    ಹುಡುಗಿ ಪೋಷಕರು ದೆಹಲಿ ಮೂಲಕ ಮುಂಬೈಗೆ ಬಂದಿದ್ದಾರೆ. ಇತ್ತ ಹುಡುಗಿಯ ತಂದೆ ಮುಂಬೈ ಹುಡುಗನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ವಿದ್ಯಾರ್ಥಿಯಾಗಿರುವ ಕಾರಣ ಆತನ ಭವಿಷ್ಯಕ್ಕೆ ಸಮಸ್ಯೆಯಾಗದಿರಲಿ, ಈ ರೀತಿಯ ತಪ್ಪು ಮಾಡಬಾರದು ಎಂದು ಬುದ್ದಿವಾದ ಹೇಳಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸದ್ಯ ಸುಖಾಂತರಗೊಂಡಿದ್ದು, ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ.

    VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

    ರಾಹುಲ್‌ ಗಾಂಧಿ ಬಾಯಲ್ಲಿ ‘ಹಿಂದೂ ಸರ್ಕಾರ’: ಕೆಂಡಾಮಂಡಲವಾದ ಓವೈಸಿ- ಟ್ವೀಟ್‌ ಮೂಲಕ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts