More

    ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿರುವ ಅವರ ಫ್ಯಾಮಿಲಿ ವೈದ್ಯರಾಗಿರುವ ಡಾ.ರಮಣ ರಾವ್‌ ಅವರಿಗೆ ಈಗ ಭಾರಿ ಸಂಕಟ ಎದುರಾಗಿದೆ. ಪುನೀತ್‌ ಅವರು ಆರಂಭದಲ್ಲಿ ಈ ವೈದ್ಯರ ಬಳಿ ಹೋದಾಗ ಅವರು ಸರಿಯಾದ ಚಿಕಿತ್ಸೆ ನೀಡಲಿಲ್ಲ, ಆಂಬುಲೆನ್ಸ್‌ ವ್ಯವಸ್ಥೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಆರಾಧ್ಯ ದೈವ ಅಪ್ಪುವನ್ನು ಕಳೆದುಕೊಂಡಿರುವುದಾಗಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

    ಈ ಹಿನ್ನೆಲೆಯಲ್ಲಿ ಡಾ.ರಮಣ ಅವರ ವಿರುದ್ಧ ಇದಾಗಲೇ ಕೇಸ್‌ ಕೂಡ ದಾಖಲಾಗಿದೆ. ಅವರು ಅಪ್ಪು ಆಸ್ಪತ್ರೆಗೆ ದಾಖಲಾದ ದಿನದ ಸಿಸಿಟಿವಿ ಫುಟೇಜ್‌ ಕೊಡುತ್ತಿಲ್ಲ, ಸರಿಯಾಗಿ ಮಾತೂ ಆಡುತ್ತಿಲ್ಲ ಎಂದೆಲ್ಲಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡಾ.ರಮಣ ಅವರಿಗೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಅವರ ನಿವಾಸದ ಮುಂದೆ ಅವರ ಕ್ಲಿನಿಕ್ ಇದ್ದು ಎರಡೂ ಕಡೆ ಭದ್ರತೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಭಂಗವಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ನಡುವೆಯೇ, ಡಾ.ರಮಣ ಅವರು ಅಪ್ಪು ಅಭಿಮಾನಿಗಳ ಕೆಲವೊಂದು ಪ್ರಶ್ನೆಗಳಿಗೆ ಮಾಧ್ಯಮಗಳ ಮುಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ ಪುನೀತ್ ಅವರು ನಮ್ಮ ಕ್ಲಿನಿಕ್‌ಗೆ ಬಂದದ್ದು ಅಂದು ಬೆಳಗ್ಗೆ 11.15ರಿಂದ 11.20ರ ಹೊತ್ತಿನ ಸುಮಾರಿಗೆ. ಅವರು ನಡೆದುಕೊಂಡೇ ಬಂದರು. (ಬಂದ ತಕ್ಷಣ ಅವರನ್ನು ಕಾಯಿಸಲಾಯಿತು ಎಂದು ಕೆಲವರು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಡಾ.ರಮಣ ಅವರು) ಪುನೀತ್‌ ಅವರು ಬಂದು ಕೇವಲ ಒಂದು ನಿಮಿಷ ಹೊರಗೆ ಕುಳಿತಿದ್ದರು. ಆಗ ನಮ್ಮ ಸಹಾಯಕರು ಅವರು ಬಂದಿರುವ ಸುದ್ದಿಯನ್ನು ನನಗೆ ತಿಳಿಸಿದರ. ನಾನು ನೋಡಿದಾಗ ಪುನೀತ್‌ಗೆ ಹೃದಯದ ನೋವಾಗಲಿ, ಸುಸ್ತು, ಬಳಲಿಕೆ ಯಾವುದೂ ಇರಲಿಲ್ಲ. ಆದರೂ ಅವರನ್ನು ಒಳಗೆ ಕರೆಸಿಕೊಂಡೆ. ಆ ವೇಳೆಗೆ ನನ್ನ ಬಳಿ ಸಮಾಲೋಚನೆಗೆಂದು ಇನ್ನೊಬ್ಬ ರೋಗಿ ಇದ್ದರು.ಅವರನ್ನು ಹೊರಗೆ ಕಳುಹಿಸಿ, ಪುನೀತ್‌ ಅವರನ್ನು ಒಳಗೆ ಕರೆಸಿಕೊಂಡೆ. 4ರಿಂದ 5 ನಿಮಿಷಯದಲ್ಲಿ ಪರೀಕ್ಷೆ ಮುಗಿದೆ. ಆಗ ಶ್ವಾಸಕೋಶ, ಹೃದಯಬಡಿತ ಎಲ್ಲವೂ ಸಹಜವಾಗಿತ್ತು.

    ಆ ಸಮಯದಲ್ಲಿ ಪುನೀತ್‌ ವಿಪರೀತ ಬೆವರುತ್ತಿದ್ದರು. ಯಾಕೆ ಇಷ್ಟು ಬೆವರುತ್ತಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು, ಈಗ ತಾನೇ ಜಿಮ್‌ನಲ್ಲಿ ವ್ಯಾಯಾಮ ಮಾಡಿ ಬಂದಿದ್ದೇನೆ, ಈ ಬೆವರು ನನಗೆ ನಾರ್ಮಲ್ ಎಂದರು. ಆದರೂ ನಾನು ಅದೆಲ್ಲಾ ಬೇಡ ಎಂದು ಇಸಿಜಿ ಮಾಡಬೇಕು ಎಂದು ಹೇಳಿ ಅವರಿಗೆ ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ, ಇಸಿಜಿ ಮಾಡಿಸಿದೆ. ಸಂಪೂರ್ಣ ಪ್ರಕ್ರಿಯೆ ಎರಡು-ಎರಡೂವರೆ ನಿಮಿಷದಲ್ಲಿ ಮುಗಿಯಿತು. ಇಸಿಜಿ ವರದಿಯಲ್ಲಿ ಹೃದಯಕ್ಕೆ ತೀವ್ರ ಒತ್ತಡವಾಗಿದ್ದಂತೆ ಕಂಡುಬಂತು. ಅವರ ಜತೆ ಬಂದಿದ್ದ ಪತ್ನಿ ಅಶ್ವಿನಿಯವರಲ್ಲಿ ಅಪ್ಪು ಅವರ ಹೃದಯಕ್ಕೆ ತೀವ್ರ ಒತ್ತಡ ಬಿದ್ದಂತೆ ಕಂಡುಬರುತ್ತಿದೆ, ಅವರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಿ, ಹೆಚ್ಚಿನ ಹೃದಯ ತಪಾಸಣೆಯ ಅಗತ್ಯವಿದೆ ಎಂದು ಹೇಳಿದೆ.

    ಆಗ ಮನೆಯವರಿಗೆ ಕರೆ ಮಾಡಲು ಅಶ್ವಿನಿ ಹೊರಕ್ಕೆ ಹೋದರು. ಅಷ್ಟರಲ್ಲಿಯೇ ಪುನೀತ್‌ ತಲೆ ಸುತ್ತು ಬರುತ್ತಿದೆ ಎಂದರು. ಆಗ ನಾನು ಕುಳ್ಳಿರಿಸಿ ತಲೆ ಕೆಳಗಡೆ ಇಡು, ನಿಂತುಕೊಳ್ಳಬೇಡ, ನಡೆಯುವುದು ಬೇಡ, ಈಗಾಗಲೇ ಸುಸ್ತು ಇದೆ ಎಂದು ನಾವು ಕರೆದುಕೊಂಡು ಹೋಗುತ್ತೇವೆ ಎಂದೆ. ಮೂವರ ಸಹಾಯ ತೆಗೆದುಕೊಂಡು ಕಾರಿನ ಬಳಿ ಎತ್ತಿಕೊಂಡು ಹೋಗಿ ಮಲಗಿಸಿದೆವು. ಆಗ ಅಪ್ಪು ಅವರು ಪ್ರತಿಕ್ರಿಯಿಸುತ್ತಿದ್ದರು. ಅವರು ಉಸಿರಾಡುತ್ತಿದ್ದರು, ಪಲ್ಸ್ ಕೂಡ ಸಹಜವಾಗಿತ್ತು. ಇಷ್ಟು ನಮ್ಮ ಕ್ಲಿನಿಕ್‌ನಲ್ಲಿ ನಡೆದದ್ದು. ನಮ್ಮ ವೈದ್ಯಕೀಯ ಶಿಷ್ಠಾಚಾರ ಪ್ರಕಾರ ಅವರಿಗೆ ನೀಡಬೇಕಾಗಿದ್ದ ಚಿಕಿತ್ಸೆಯನ್ನು ನೀಡಿದ್ದೆ.

    ನಮ್ಮದು ಬರೀ ಕ್ಲಿನಿಕ್ ಅಷ್ಟೆ. ಇಲ್ಲಿ ಸಮಾಲೋಚನೆ ಮಾಡಲಾಗುತ್ತದೆ. ಚಿಕಿತ್ಸೆ ಕೊಡುವುದಿಲ್ಲ.ಹೃದಯದಲ್ಲಿ ಸಮಸ್ಯೆಯಿದ್ದರೆ ಬಾಯಲ್ಲಿಟ್ಟುಕೊಳ್ಳಲು ಮಾತ್ರೆ ಕೊಟ್ಟಿದ್ದೆ, ನಂತರವಷ್ಟೇ ಅವರನ್ನು ಕಳುಹಿಸಿಕೊಟ್ಟಿದ್ದೆ. ಉಸಿರಾಟದ ತೊಂದರೆ ಇದ್ದರೆ ಮಾತ್ರ ಸಿಪಿಆರ್ ಟೆಸ್ಟ್ ಮಾಡಲಾಗುತ್ತದೆ. ಆದರೆ ಅಪ್ಪುಗೆ ಅದು ಕೂಡ ಸಮಸ್ಯೆ ಇರಲಿಲ್ಲ. ಸಿಪಿಆರ್ ಸಹಜ ರೋಗಿಗಳಿಗೆ ಮಾಡುವುದಿಲ್ಲ. ಆದ್ದರಿಂದ ಅವರನ್ನು ಇಲ್ಲಿಂದ ವಿಕ್ರಮ್‌ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಡಾ. ರಮಣ್ ರಾವ್ ಹೇಳಿದರು.

    ಆಂಬುಲೆನ್ಸ್‌ಗೆ ಕರೆ ಮಾಡಿಲ್ಲ ಎಂಬ ಆರೋಪಕ್ಕೂ ಉತ್ತರಿಸಿದ ಅವರು, ಆಂಬುಲೆನ್ಸ್‌ಗೆ ಫೋನ್ ಮಾಡಿ ಅದು ಬಂದು ಕರೆದುಕೊಂಡು ಹೋಗುವಷ್ಟು ಹೊತ್ತಿಗೇ ಏನಿಲ್ಲವೆಂದರೂ 10-15 ನಿಮಿಷವಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗೆ ತಲುಪಿಸಬೇಕಿತ್ತು. ನನ್ನ ಮಗನಿಗೆ ಈ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡುತ್ತಿದ್ದೆನೋ ಅದನ್ನೇ ನಾನು ಪುನೀತ್ ಅವರಿಗೂ ಮಾಡಿದ್ದೇನೆ, ನನ್ನ ಕಡೆಯಿಂದ ಯಾವುದೇ ವ್ಯತ್ಯಯವಾಗಿಲ್ಲ ಎಂದರು. ಅವರ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ವಿಷಯ ಬಹಿರಂಗ ಸಾಧ್ಯವಿಲ್ಲ. ಜನರಿಗೆ ವೈದ್ಯನಾಗಿ ಏನೇನು ಹೇಳಬೇಕು ಅದನ್ನೇ ಬಹಿರಂಗಪಡಿಸುತ್ತೇವಷ್ಟೆ. ಅದಕ್ಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…

    ಕಲಾವಿದನ ಕಲ್ಪನೆಯಲ್ಲಿ ಸ್ವರ್ಗದಲ್ಲಿ ಅಪ್ಪಾಜಿ-ಅಪ್ಪು: ಹೃದಯಸ್ಪರ್ಶಿ ಫೋಟೋ ನೋಡಿ ಭಾವುಕರಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts