More

    ಮೇಲ್ಮನೆಗೆ ನುಸುಳಿದ ದ್ರೌಪದಿ… ಕಾಂಗ್ರೆಸ್​- ಬಿಜೆಪಿ ನಡುವೆ ಮಾತಿನ ಚಕಮಕಿ…

    ಬೆಂಗಳೂರು: ಸಂಘ-ಪರಿವಾರಕ್ಕೆ ಬೇಕಾದ‌ವರು ಏನು ಹೇಳಿದರೂ ಸರಿ. ಅದೇ ಭಗವಾನ್ ಹೇಳಿದರೆಂದರೆ ಮುಖಕ್ಕೆ ಮಸಿ ಬಳಿಯುತ್ತೀರಿ. ದ್ವಿಮುಖ ಧೋರಣೆಯಿದು. ಅಷ್ಟೇ ಅಲ್ಲ, ರಾಮ, ಕೃಷ್ಣ, ದ್ರೌಪದಿ ಬಗ್ಗೆ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ಮಾತು ಸರಿಯಲ್ಲವೆಂದು ಕಾಂಗ್ರೆಸ್​ನ ನ ಬಿ.ಕೆ.ಹರಿಪ್ರಸಾದ ಎತ್ತಿದ ಆಕ್ಷೇಪವು ಮೇಲ್ಮನೆಯಲ್ಲಿ ಮಾತಿನ ಜಟಾಪಟಿಗೆ ಎಡೆಮಾಡಿಕೊಟ್ಟಿತು.

    ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಹರಿಪ್ರಸಾದ್ ಆಡಿದ ಈ ಮಾತನ್ನು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ತಳ್ಳಿಹಾಕಿ, ಆಳವಾದ ಅಧ್ಯಯನ ಹಾಗೂ ಅಪಾರ ಪಾಂಡಿತ್ಯ ಹೊಂದಿರುವ ಎಸ್.ಎಲ್.ಭೈರಪ್ಪ ಅವರು ಯಾವ ಅರ್ಥದಲ್ಲಿ ಅಂತಹ ಮಾತು ಹೇಳಿದ್ದಾರೆ ಎಂದು ತಿಳಿದುಕೊಳ್ಳದೆ ಟೀಕಿಸುವ ಹಕ್ಕಿಲ್ಲವೆಂದರೆ, ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

    ಕಾಂಗ್ರೆಸ್​ನ ಎಂ.ನಾರಾಯಣಸ್ವಾಮಿ ಅವರು ದೇವತೆಯ ಸ್ಥಾನಮಾನ ನೀಡಿರುವ ದ್ರೌಪದಿ ಬಗ್ಗೆ ಲಘು ಮಾತುಗಳನ್ನು ಒಪ್ಪಲಾಗದು ಎಂದರು.

    ಮಧ್ಯೆಪ್ರವೇಶಿಸಿದ ಬಿಜೆಪಿಯ ಡಾ.ತೇಜಸ್ವಿನಿ ಗೌಡ ಅವರು 5 ಗಂಡಂದಿರುಳ್ಳ ದ್ರೌಪದಿಗೆ‌ ಪೂಜ್ಯನೀಯ ಸ್ಥಾನ ನೀಡಿರುವುದು ಭಾರತೀಯ ಸಂಸ್ಕೃತಿಯ ಉದಾತ್ತತೆ ತೋರಿಸುತ್ತದೆ. ಸುಂದರಿಯಾದ ದ್ರೌಪದಿ ಕಾಡಿನಲ್ಲಿರುವಾಗ ಆಕೆಯ ರಕ್ಷಣೆ ಪ್ರಶ್ನೆ ಮುಂದಿಟ್ಟುಕೊಂಡು ಭೈರಪ್ಪ ತಮ್ಮ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದೇ ಮಾತಿನಲ್ಲಿ ಅಲ್ಲಗಳೆಯುವುದು ಅನ್ಯಾಯವೆಂದರು.

    1 ಕೋಟಿ ರೂ ಪ್ರಶ್ನೆ
    ಇದೇ ವೇಳೆ ಭೈರಪ್ಪನವರ ಪರ್ವ ಕಾದಂಬರಿ ನಾಟಕ ರೂಪದಲ್ಲಿ ಪ್ರದರ್ಶನಕ್ಕಾಗಿ ಬಜೆಟ್ನ​ಲ್ಲಿ 1 ಕೋಟಿ ರೂ ಮೀಸಲಿಟ್ಟಿದ್ದರ ಔಚಿತ್ಯವೇನು ಎಂದು ಹರಿಪ್ರಸಾದ ಪ್ರಶ್ನಿಸಿದ್ದೂ ಚರ್ಚೆಯ ತಿರುವು ಪಡೆಯಿತು.

    ಜೆಡಿಎಸ್​ನ ಶ್ರೀಕಂಠೇಗೌಡ ಅವರು ರಾಷ್ಟ್ರಕವಿ‌ ಕುವೆಂಪು ಅವರ ಕಾದಂಬರಿಯು ನಾಟಕವಾಗಿದೆ. ಸರ್ಕಾರದಿಂದ ನಯಾ ಪೈಸೆ ಸಿಕ್ಕಿಲ್ಲ. ತಾರತಮ್ಯ, ಸಾಹಿತ್ಯದಲ್ಲಿ ರಾಜಕಾರಣ ಬೇಡವೆಂದರು. ಇದಕ್ಕೆ ಕಾಂಗ್ರೆಸ್ ನವರು ಧ್ವನಿಗೂಡಿಸಿದರು. ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಈ ರೀತಿಯ ನೆರವು ನೀಡಬಹುದಿತ್ತಲ್ಲ ಎಂದು ತೇಜಸ್ವಿನಿ ಗೌಡ ತಿರುಗೇಟು ನೀಡಿದರು.

    ಬಜೆಟ್ ಮೇಲಿನ ಚರ್ಚೆ ಎಲ್ಲೆಲ್ಲಿಗೋ ಹೊರಟಿರುವುದನ್ನು ಸಭಾಪತಿ ಪೀಠದಲ್ಲಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಗಮನಿಸಿ ಕಲಾಪವನ್ನು ಹಳಿಗೆ ತಂದರು. ಬಜೆಟ್ ಮೇಲಿನ ಮಾತು ಮುಂದುವರಿಸಿದ ಹರಿಪ್ರಸಾದ, ಭೈರಪ್ಪ ಕಾದಂಬರಿಗೆ ನೆರವು ನೀಡುವುದನ್ನು ಆಕ್ಷೇಪಿಸುತ್ತಿಲ್ಲ. ಆದರೆ ರಾಮ, ಕೃಷ್ಣ ಅವರ ಬಗ್ಗೆ ಸಂಘ-ಪರಿವಾರಕ್ಕೆ ಬೇಕಾದವರು ಲಘು ಹೇಳಿಕೆಯಿತ್ತಾಗ ಮೌನ, ಬೇರೆಯವರು ಇದೇ ಮಾತು ಹೇಳಿದರೆ ಪ್ರತಿಭಟನೆಯಂತಹ ತಾರತಮ್ಯ ನಿಲುವು ಬೇಡವೆಂದು ಹೇಳಿ, ಆ ವಿಷಯದ ಚರ್ಚೆಗೆ ತೆರೆ ಎಳೆದರು.

    ಶಾಸಕರ ದೌರ್ಜನ್ಯ ಸಹಿಸಲಾಗ್ತಿಲ್ಲ.. ದಯಾಮರಣ ಕೊಡಿ ಎಂದು ಸಿಎಂ ಪುತ್ರನ ಬಳಿ ಕಣ್ಣೀರಿಟ್ಟ ಮಹಿಳೆಯರು

    ಪತ್ನಿ ತುಂಬಾ ಚೆಲ್ಲುಚೆಲ್ಲು… ಅವಳೀಗ ಗರ್ಭಿಣಿ, ಹುಟ್ಟುವ ಮಗುವಿನ ಮೇಲೆ ಅನುಮಾನ ಹೇಗೆ ಪರಿಹರಿಸಿಕೊಳ್ಳಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts