More

    ಶಿಕಾರಿಪುರ ನಗರಸಭೆಗೆ ಅಂಬಾರಗೊಪ್ಪ ಸೇರಿಸದಂತೆ ನಿರ್ಣಯ: ಗ್ರಾಮಸಭೆಯಲ್ಲಿ ಪ್ರತಿಭಟನೆ, ಮಾತಿನಚಮಕಿ

    ಶಿಕಾರಿಪುರ: ಗಲಾಟೆ, ಪ್ರತಿಭಟನೆ ಮಧ್ಯೆ ಪ್ರಸ್ತಾವಿತ ಶಿಕಾರಿಪುರ ನಗರಸಭೆಗೆ ತಾಲೂಕಿನ ಅಂಬಾರಗೊಪ್ಪ ಗ್ರಾಮವನ್ನು ಸೇರಿಸದಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.
    ಶಿಕಾರಿಪುರ ಪುರಸಭೆಯು ನಗರಸಭೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಂಬಾರಗೊಪ್ಪ ಗ್ರಾಮವನ್ನು ನಗರಸಭೆಗೆ ಸೇರಿಸಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಅಂಬಾರಗೊಪ್ಪ ಗ್ರಾಪಂನಲ್ಲಿ ಶುಕ್ರವಾರ ಹಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತಿನ ಚಕಮಕಿ ನಡೆಸಿದರು. ಕೆಲಕಾಲ ಪ್ರತಿಭಟನೆ ನಡೆದು ಗೊಂದಲಮಯ ವಾತಾವರಣ ಸೃಷ್ಟಿಯಾಯಿತು. ನೂರಾರು ಜನರನ್ನು ನಿಭಾಯಿಸಲು ಪೊಲೀಸರು ಆಗಮಿಸಬೇಕಾಯಿತು. ಗ್ರಾಮಸ್ಥರ ಒತ್ತಡದ ಫಲವಾಗಿ ನಗರಸಭೆಗೆ ಅಂಬಾರಗೊಪ್ಪ ಸೇರಿಸದಂತೆ ನಿರ್ಣಯ ಕೈಗೊಳ್ಳಲಾಯಿತು.
    ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ರಾಜಾನಾಯ್ಕ, ಉಪಾಧ್ಯಕ್ಷ ಜಗದೀಶ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಾಜಣ್ಣ, ಶಿವಪ್ಪ, ಕೃಷ್ಣಾನಾಯ್ಕಾ, ರವಿನಾಯ್ಕ, ಸತೀಶ್, ರಾಘುನಾಯ್ಕ, ಸಂದೇಶ್ ಇತರರಿದ್ದರು.
    ಭದ್ರಾಪುರ, ಧೂಪದಹಳ್ಳಿ, ತಿಮ್ಲಾಪುರ, ಅಂಬಾರಗೊಪ್ಪ ಸೇರಿ ಶಿಕಾರಿಪುರ ನಗರಸಭೆಯಾಗುತ್ತಿದೆ. ನಗರಸಭೆಯಾಗಲು ಕನಿಷ್ಠ 50 ಸಾವಿರ ಜನಸಂಖ್ಯೆಯ ಅಗತ್ಯವಿರುವುದರಿಂದ ಈ ನಾಲ್ಕು ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆ ಮಾಡಲಾಗುತ್ತಿದೆ. ಇದರಿಂದ ಅಂಬಾರಗೊಪ್ಪ ಅರ್ಧ ಗ್ರಾಮ ಕಂದಾಯ, ಇನ್ನರ್ಧ ಗ್ರಾಮ ಬಗರ್‌ಹುಕುಂ ಆಗಿದೆ. ಹಳ್ಳಿಯಲ್ಲಿ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿರುವ ಜನರಿಗೆ ಯಾವುದೇ ದಾಖಲೆ ಪತ್ರಗಳಿಗೆ ಶಿಕಾರಿಪುರಕ್ಕೆ ಅಲೆದಾಡಬೇಕು. ಇಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಶ್ರಮಿಕ ವರ್ಗದವರೇ ಹೆಚ್ಚು ಇರುವುದರಿಂದ ನಗರಸಭೆಯಾದರೆ ಅಲ್ಲಿನ ಕಂದಾಯ ಕಟ್ಟಳೆಗಳಿಂದ ಗ್ರಾಮದ ಜನರಿಗೆ ತೊಂದರೆಯಾಗುತ್ತದೆ. ತಕ್ಷಣ ಅಂಬಾರಗೊಪ್ಪ ಗ್ರಾಮವನ್ನು ಶಿಕಾರಿಪುರ ನಗರಸಭೆಗೆ ಸೇರಿಸುವುದನ್ನು ಕೈ ಬಿಡಬೇಕು ಮತ್ತು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದು ನಿರ್ಣಯ ಮಾಡಬೇಕಾಗಿತ್ತು. ಏಕಪಕ್ಷೀಯ ನಿರ್ಧಾರ ಸರಿಯಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
    ಎಂಪಿ, ತಹಸೀಲ್ದಾರ್‌ಗೂ ಮನವಿ: ಅಂಬಾರಗೊಪ್ಪ ಗ್ರಾಮವನ್ನು ಶಿಕಾರಿಪುರ ನಗರಸಭೆ ಗೆ ಸೇರಿಸಬಾರದೆಂದು ಅಂಬಾರಗೊಪ್ಪ ಗ್ರಾಮಸ್ಥರು ಶುಕ್ರವಾರ ಸಂಜೆ ಲೋಕಸಭಾ ಸದಸ್ಯರ ಕಚೇರಿಗೆ, ತಹಸೀಲ್ದಾರ್ ಅವರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬಾರಗೊಪ್ಪ ಗ್ರಾಪಂ ಅದ್ಯಕ್ಷೆ ಲಕ್ಷ್ಮೀಬಾಯಿ ರಾಜಾನಾಯ್ಕ, ಉಪಾಧ್ಯಕ್ಷ ಜಗದೀಶ್, ಸದಸ್ಯ ವಿಜಯನಾಯ್ಕ, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಾಜಣ್ಣ, ಶಿವಪ್ಪ, ಸಂದೇಶ್, ರಾಘುನಾಯ್ಕ, ರವಿನಾಯ್ಕ, ಮಂಜುನಾಯ್ಕ, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts