More

    ಪತ್ನಿ ತುಂಬಾ ಚೆಲ್ಲುಚೆಲ್ಲು… ಅವಳೀಗ ಗರ್ಭಿಣಿ, ಹುಟ್ಟುವ ಮಗುವಿನ ಮೇಲೆ ಅನುಮಾನ ಹೇಗೆ ಪರಿಹರಿಸಿಕೊಳ್ಳಲಿ?

    ಪತ್ನಿ ತುಂಬಾ ಚೆಲ್ಲುಚೆಲ್ಲು... ಅವಳೀಗ ಗರ್ಭಿಣಿ, ಹುಟ್ಟುವ ಮಗುವಿನ ಮೇಲೆ ಅನುಮಾನ ಹೇಗೆ ಪರಿಹರಿಸಿಕೊಳ್ಳಲಿ?ನನಗೆ ಮದುವೆಯಾಗಿದ್ದು 12 ವರ್ಷದ ಮಗುವಿದ್ದಾನೆ. ಆದರೆ ಹೆಂಡತಿಯೇ ವಿಚಿತ್ರ. ಅವರಳು ತುಂಬಾ ಚಲ್ಲುಚಲ್ಲು.

    ಅವಳಿಗೆ ಹೇಳುತ್ತಲೇ ಇದ್ದೆ ಸ್ವಲ್ಪ ಮಾನ ಮರ್ಯಾದೆಯಿಂದ ನಡೆದುಕೋ ಅಂತ. ಆದರೆ ಅವಳು ಹಠಮಾರಿ. ಮನೆಯಲ್ಲಿ ಸದಾ ಜಗಳ. ನಾನೋ ಕೆಲಸದ ನಿಮಿತ್ತ ಬೆಳಗ್ಗೆ ಹೋದರೆ ರಾತ್ರಿಯೇ ಬರುವುದು. ಮನೆಯಲ್ಲಿರುವುದೇ ಸ್ವಲ್ಪ ಹೊತ್ತು. ಆಗಲೂ ಬರೀ ಜಗಳ. ಇವಳು ನನ್ನೊಡನೆ ಜಗಳವಾಡಿ ತನ್ನಪ್ಪನ್ಬಿಗೋ ಅಣ್ಣತಮ್ಮಂದಿರಿಗೋ ಫೋನ್ ಮಾಡಿ ಕರೆಸುವುದು, ಅವರು ಬುದ್ಧಿ ಹೇಳುವುದು ಹೀಗೇ ನಡೆಯಿತು. ನನ್ನ ಮಗನನ್ನು ಇಲ್ಲೇ ಒಳ್ಳೆಯ ಶಾಲೆಗೆ ಸೇರಿಸಿದ್ದೆ. ನಮ್ಮತ್ತೆ ಮನೆಯವರು ಈ ವಾತಾವರಣದಲ್ಲಿ ಮಗು ಬೆಳೆಯುವುದು ಬೇಡವೆಂದು ತಮ್ಮೂರಿಗೆ ಕರೆದುಕೊಂಡು ಹೋಗಿ ಶಾಲೆಗೆ ಸೇರಿಸಿದರು. ಫೀಸು ಮತ್ತು ಇತರ ಖರ್ಚನ್ನು ನಾನೇ ಕೊಡುತ್ತಿದ್ದೇನೆ.

    ಆದರೂ ನಾವು ಮಗುವನ್ನು ಸಾಕುತ್ತಿದ್ದೇವೆ ಅಂತ ಹೇಳಿಕೊಳ್ಳುತ್ತಾರೆ. ಇವೆಲ್ಲವನ್ನೂ ಹೇಗೋ ಸಹಿಸಬಹುದಿತ್ತು. ಆದರೆ ಈಗೆರಡು ವರ್ಷಗಳಿಂದ ನನ್ನ ಹೆಂಡತಿಯ ನಡತೆಯ ಬಗ್ಗೆಯೂ ನನಗೆ ಅನುಮಾನ ಬಂದಿದೆ. ಅವಳು ಮತ್ತೆ ಗರ್ಭಿಣಿಯಾದಳು. ಒಂದು ದಿನ ಯಾವುದೋ ವಿಷಯಕ್ಕೆ ಜಗಳವಾದಾಗ ‘ನಾಳೆ ಮಗು ಹುಟ್ಟುತ್ತದೆಯಲ್ಲ ಆಗ ನಿನ್ನ ಮುಖಕ್ಕೆ ಮಂಗಳಾರತಿಯಾಗುತ್ತದೆ. ಅದು ಯಾರದೋ ಮುಖವನ್ನು ಹೋಲುತ್ತಿರುತ್ತದೆ. ನೀನು ಸಾಯುವವರೆಗೆ ಅದರ ಮುಖನೋಡುತ್ತಾ ನೋವು ತಿನ್ನುತ್ತೀಯ’ ಎಂದು ಬೈದಳು. ಆಗಿನಿಂದ ನನಗೆ ಬದುಕೇ ಬೇಸರವೆನಿಸಿದೆ.

    ಮತ್ತೊಂದು ಗಂಡುಮಗು ಹುಟ್ಟಿತು. ನಾನು ಅದನ್ನು ನೋಡಲೂ ಹೋಗಲಿಲ್ಲ. ಅವರ ಮನೆಯವರು ಡಿ.ಎನ್.ಎ ಟೆಸ್ಟ್ ಮಾಡಿಸುತ್ತೇವೆ, ಅದು ನಿಮ್ಮದೇ ಮಗು ಎಂದರು. ಆದರೆ ಅವರೇನೂ ಯಾವ ಟೆಸ್ಟ್ ಮಾಡಿಸದೇ ಆರು ತಿಂಗಳಿಗೆ ಅವಳನ್ನೂ ಮಗುವನ್ನೂ ನನ್ನ ಮನೆಗೆ ಕರೆದುತಂದು ಬಿಟ್ಟರು. ಈಗ ನನ್ನ ಬದುಕು ಮೂರಾಬಟ್ಟೆಯಾಗಿದೆ. ನನ್ನ ಹೆಂಡತಿ ಸಿಕ್ಕಾಪಟ್ಟೆ ಹಣ ಖರ್ಚುಮಾಡುತ್ತಾಳೆ. ನಾನು ನನಗೆ ಬರುವ ಸಂಬಳ ಇಷ್ಟು ನೋಡಿಕೊಂಡು ಖರ್ಚು ಮಾಡು ಅಂದರೆ ಹಣ ನೀನು ಕೊಡದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಕೀಳಾಗಿ ಮಾತಾಡುತ್ತಾಳೆ. ಇಂಥಾ ಬದುಕು ಸಾಕಾಗಿದೆ.

    ಉತ್ತರ: ನಿಮ್ಮ ಎಂಟು ಪುಟಗಳ ಪತ್ರ ಓದಿ ನಿಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಊಹಿಸಿದೆ. ನನಗೆನಿಸುತ್ತದೆ, ನಿಮ್ಮ ಹೆಂಡತಿಯ ಸಂಸ್ಕೃತಿಗೆ ನೀವು ಹೊಂದಿಕೊಳ್ಳಲು ಕಷ್ಟಪಡುತ್ತಿದ್ದೀರಿ. ಆಕೆ ಚಲ್ಲುಚಲ್ಲು ಎಂದು ಬರೆದಿದ್ದೀರಿ. ಕೆಲವು ಹೆಣ್ಣುಮಕ್ಕಳು ಸ್ವಲ್ಪ ಜಾಸ್ತಿ ಮಾತಾಡುತ್ತಾರೆ. ಸದಾ ಬಿಂದಾಸ್ ಆಗಿ ಕ್ಷಣಿಕ ಸುಖಗಳನ್ನು ಅಪೇಕ್ಷಿಸುತ್ತಾರೆ. ಸಿನಿಮಾ ನೋಡುವುದು, ಹೋಟೆಲ್​ಗೆ ಹೋಗುವುದು ಇಂಥಾ ಆಸೆಗಳು ಕೆಲವರಿಗೆ ಹೆಚ್ಚಾಗಿರುತ್ತದೆ. ಅದೇ ಸುಖದ ಪರಮಾವಧಿ ಎಂದೂ ಭಾವಿಸುತ್ತಾರೆ. ನಿಮಗೆ ಹೆಣ್ಣು ಎಂದರೆ ಸದಾ ಗಂಭೀರೆಯಾಗಿರಬೇಕು, ಮಿತವ್ಯಯಿಯಾಗಿರಬೇಕು, ಮನೆಯ ಹೊಸ್ತಿಲಿನಿಂದಾಚೆ ಹೋಗಬಾರಬೇಕು ಎಂದೆಲ್ಲಾ ನಿರೀಕ್ಷೆಯಿದೆ.

    ಅದಕ್ಕೆ ತದ್ವಿರುದ್ಧವಾದ ನಿಮ್ಮ ಹೆಂಡತಿಯ ನಡವಳಿಕೆಯಿಂದ ನಿಮಗೆ ಆಕೆಯ ಶೀಲದ ಬಗ್ಗೆಯೇ ಅನುಮಾನ ಬಂದಿದೆ. ಜಗಳವಾಗುತ್ತದೆ ಎಂದು ನೀವೇ ಬರೆದಿದ್ದೀರಿ. ಜಗಳವೆನ್ನುವುದು ಒಬ್ಬರಿಂದಲೇ ಏನಾಗುವುದಲ್ಲವಲ್ಲ? ನಿಮ್ಮ ಅನುಮಾನದ ಬೈಗುಳ ಆಕೆಯ ಆತ್ಮಗೌರವಕ್ಕೆ ಧಕ್ಕೆ ತಂದಿರಬಹುದು.

    ಯಾವ ಹೆಣ್ಣಿಗೇ ಆಗಲೀ ಆಕೆಯ ಶೀಲದ ಬಗ್ಗೆ ಅನುಮಾನಪಟ್ಟರೆ ರೊಚ್ಚಿಗೇಳುವುದು ಸಹಜ. ಅಲ್ಲದೇ ನೀವೇ ಬರೆದಿರುವಂತೆ ಆಕೆ ಸ್ವಲ್ಪ ಒರಟು ಸ್ವಭಾವದವಳು ಬೇರೆ. ಹಾಗಾಗಿ ಅತಿ ಕೋಪದಲ್ಲಿ ಇದು ನಿನ್ನ ಮಗುವಲ್ಲ, ದುಡ್ಡಿಗಾಗಿ ನಾನು ಏನಾದರೂ ಮಾಡುತ್ತೇನೆ ಇತ್ಯಾದಿ ಮಾತುಗಳನ್ನಾಡಿರಬಹುದು. ಈ ಕೋಪದ ಮಾತುಗಳನ್ನೇ ಮೂಲವಾಗಿಟ್ಟುಕೊಂಡು ನಿಮ್ಮ ಹೆಂಡತಿಯ ಶೀಲವನ್ನೇ ಶಂಕಿಸುವುದು ಅಷ್ಟೊಂದು ಒಳ್ಳೆಯದಲ್ಲ. ನೀವೀಗ ಪ್ರತಿಯೊಂದನ್ನೂ ತೀರಾ ನೆಗೆಟೀವ್ ಆಗಿ ನೋಡುತ್ತಿದ್ದೀರಿ. ಸ್ವಲ್ಪ ಭಿನ್ನವಾಗಿ ನೋಡುವ ಪ್ರಯತ್ನ ಮಾಡಿ.

    ಮೊದಲನೆಯದಾಗಿ ನಿಮ್ಮ ವೃತ್ತಿಯ ಕಾರಣ ನೀವು ಹೆಚ್ಚುಹೊತ್ತು ಮನೆಯಲ್ಲಿರುವುದಿಲ್ಲ. ಒಂಟಿಯಾಗಿರುವ ಆಕೆ ಸದಾ ಟಿ.ವಿ ನೋಡುವುದು ಅಥವಾ ಪರಿಚಿತರ ಮನೆಗೆ ಹೋಗುವುದು ಇತ್ಯಾದಿಗಳನ್ನು ಮಾಡಬಹುದು. ಆಕೆಯ ದೃಷ್ಟಿಯಿಂದ ಇದು ಆಕೆಗೆ ಬೇಸರ ಕಳೆಯಲು ತೋಚಿದ ಮಾರ್ಗ. ನೀನು ಹೀಗೆ ಮಾಡಬೇಡ, ಅಕ್ಕಪಕ್ಕದವರ ಮುಂದೆ ಮಾನ ಹೋಗುತ್ತದೆ, ಎಂದು ಬೇಕಾದಷ್ಟು ಬುದ್ಧಿ ಹೇಳಿದೆ ಎಂದು ಬರೆದಿದ್ದೀರಿ. ಆದರೆ ನಾನಿಲ್ಲದಾಗ ಅವಳು ಒಬ್ಬಳೇ ಹೇಗೆ ಕಾಲ ಕಳೆಯಬೇಕು ಎಂದು ಎಂದಾದರೂ ಯೋಚಿಸಿದಿರಾ? ಬದಲಿಗೆ ಆಕೆಯ ನಡತೆಯ ಬಗ್ಗೆಯೇ ಅನುಮಾನ ಪಟ್ಟಿದ್ದುರಿಂದ ಜಗಳ ಹೆಚ್ಚಾಯಿತೇ ವಿನಾ ಆಕೆಯ ಒಂಟಿತನಕ್ಕೆ ಪರಿಹಾರ ಸಿಗಲಿಲ್ಲ.

    ಎರಡನೆಯದಾಗಿ, ಈ ಜಗಳದ ಪರಿಸರದಲ್ಲಿ ಮಗು ಬೆಳೆಯುವುದು ಬೇಡವೆಂದು ನಿಮ್ಮತ್ತೆಮನೆಯವರು ನಿಮ್ಮ ಮಗನನ್ನು ಬೆಳೆಸುತ್ತಿರುವುದನ್ನೂ ನೀವು ನೆಗೆಟೀವ್ ಆಗಿ ನೋಡುತ್ತಿದ್ದೀರಿ. ನಾನು ಹಣ ಕೊಡುತ್ತೇನೆ ಎಂದಿದ್ದೀರಿ. ಆದರೆ ಮಕ್ಕಳನ್ನು ಸಾಕುವುದು ಬರೀ ಹಣದಿಂದಲ್ಲ. ಮಕ್ಕಳಿಗೆ ಪ್ರೀತಿಯ ವಾತಾವರಣ, ಭರವಸೆ ನೀಡುವ ಅಪ್ಪ ಅಮ್ಮ, ಪ್ರೀತಿ ಪಡುವ ಹಿರಿಯರು ಎಲ್ಲಾ ಬೇಕಾಗುತ್ತದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇವೆಲ್ಲಾ ಅಗತ್ಯವಿದೆ. ಇದನ್ನು ಸ್ವಲ್ಪ ಪಾಸಿಟೀವ್ ಆಗಿ ನೋಡಿ.

    ನಿಮ್ಮತ್ತೆ ಮನೆಯವರು ನಿಮಗೆ ಒಳ್ಳೇಯದನ್ನೇ ಮಾಡುತ್ತಿದ್ದಾರಲ್ಲವೇ? ಅಜ್ಜಿ-ತಾತ ಮಾವಂದಿರು ಇರುವ ಕುಟುಂಬದಲ್ಲಿ ಬೆಳೆಯುತ್ತಿದ್ದಾನಲ್ಲ? ಇದೂ ಅವನಿಗೆ ಒಳ್ಳೆಯದನ್ನೇ ಮಾಡಬಹುದಲ್ಲ? ಸ್ವಲ್ಪ ಆ ಮಗುವಿನ ದೃಷ್ಟಿಯಿಂದ ಯೋಚಿಸಿ. ನೀವು ದಂಪತಿ ಜಗಳದ ಕಾರಣ ಅವನು ಹೆತ್ತವರಿದ್ದೂ ಬೇರೆಯವರ ಹತ್ತಿರ ಬೆಳೆಯಬೇಕಾಗಿದೆಯಲ್ಲ? ಈ ವಿಷಯಕ್ಕೆ ನೀವು ನಿಮ್ಮ ಹೆಂಡತಿಯೊಬ್ಬರನ್ನೇ ಹೊಣೆಗಾರರನ್ನಾಗಿಸಬಾರದಲ್ಲವೇ?

    ನಿಮಗೀಗಾಲೇ ಎರಡನೇ ಮಗ ಹುಟ್ಟಿದ್ದಾನೆ. ಇನ್ನಾದರೂ ಮನೆಯ ವಾತಾವರಣವನ್ನು ಪ್ರೀತಿಯ ವಾತಾವರಣವನ್ನಾಗಿಸಿ. ಹೆಂಡತಿಯ ಬಗ್ಗೆ ಅನುಮಾನವನ್ನು ದೂರಮಾಡಿಕೊಳ್ಳಿ. ದಾಂಪತ್ಯದ ಬೇರುಗಳು ಗಟ್ಟಿಯಾಗುವುದೇ ಒಬ್ಬರನ್ನೊಬ್ಬರು ನಂಬಿದಾಗ. ಆ ನಂಬಿಕೆಗೇ ಕೊಡಲಿ ಏಟು ಬಿದ್ದರೆ, ಜೀವನ ಸಹ್ಯವಾಗುವುದಿಲ್ಲ. ನಿಮ್ಮ ಹೆಂಡತಿ ಒರಟರಿರಬಹುದು, ಚಲ್ಲುಚಲ್ಲೂ ಇರಬಹುದು. ಅಷ್ಟಕ್ಕೇ ಆಕೆಯ ಶೀಲವನ್ನೇ ಪಣವಿಡಬಾರದು. ಎಲ್ಲಾ ಮಕ್ಕಳನ್ನೂ ಡಿ.ಎನ್.ಎ ಟೆಸ್ಟಿನಿಂದಲೆ ೕ ಅಪ್ಪ ಅಮ್ಮಂದಿರನ್ನು ನಿರ್ಧರಿಸುವ ಕಾಲ ಬರಬಾರದು. ಆ ಟೆಸ್ಟುಗಳನ್ನೆಲ್ಲಾ ಸಂಶೋಧನೆ ಮಾಡಿರುವುದು ಸಮಾಜದಲ್ಲಿ ಬೇರೆ ಗುರುತರವಾದ ಕಾರಣಗಳುಂಟಾದಾಗ ಖಚಿತಪಡಿಸಿಕೊಳ್ಳುವುದಕ್ಕೇ ವಿನಾ ಪ್ರತಿಮಗುವಿನ ಅಪ್ಪಂದಿರನ್ನು ಗುರುತಿಸುವುದಕ್ಕಲ್ಲ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಇಬ್ಬರು ಮಕ್ಕಳ ತಂದೆಯವರು- ಆದ್ರೆ ಅವ್ರು ನನಗೆ ಬೇಕು- ಸಾಯಲೂ ಆಗದೇ, ಬದುಕಲೂ ಆಗದೆ ಕೊರಗುತ್ತಿರುವೆ ಮೇಡಂ…

    ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts