More

    ಯುವತಿಯ ಕೊಲೆ: ಮಗನ ಹೀನ ಕೃತ್ಯಕ್ಕೆ ಬಿಜೆಪಿ ನಾಯಕನ ತಲೆದಂಡ- ಅಪ್ಪನ ಜತೆ ಅಣ್ಣನೂ ಪಕ್ಷದಿಂದ ಔಟ್​

    ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದ ವನತಾರಾ ರೆಸಾರ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಕಿತಾ ಭಂಡಾರಿಯ (19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣ ಪ್ರಮುಖ ಆರೋಪಿಯಾಗಿರುವುದು ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲಕಿತ್​ ಆರ್ಯ. ಮಗ ಮಾಡಿರುವ ತಪ್ಪಿಗೆ ಅಪ್ಪನ ತಲೆದಂಡವಾಗಿದೆ. ಪಕ್ಷದಿಂದ ಅವರನ್ನು ಉಚ್ಛಾಟಿಸಲಾಗಿದೆ.

    ತಂದೆ ಮಾತ್ರವಲ್ಲದೇ ಪುಲಕಿತ್​ ಸಹೋದರ, ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ಆಯೋಗದ ಉಪಾಧ್ಯಕ್ಷ ಅಂಕಿತ್ ಆರ್ಯ ಅವರನ್ನೂ ಪಕ್ಷದಿಂದ ಹೊರಹಾಕಲಾಗಿದೆ. ಈ ಕುರಿತು ಪಕ್ಷದ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಈ ಮಾಹಿತಿ ನೀಡಿದ್ದಾರೆ.

    ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್​ನಲ್ಲಿರುವ ಪುಲ್ಕಿತ್ ಆರ್ಯನ ವನತಾರಾ ರೆಸಾರ್ಟ್​ನಲ್ಲಿ ವಾರದ ಹಿಂದೆ ನಡೆದಿರುವ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಶುಕ್ರವಾರ) ಪುಲಕಿತ್​ ಆರ್ಯನನ್ನು ಪೊಲೀಸರು ಬಂಧಿಸಿದ್ದರು. ಈತನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರಿಂದ ತಡ ಮಾಡದ ಸರ್ಕಾರ, ಎಲ್ಲರಿಗೂ ಒಂದೇ ನ್ಯಾಯ ಎಂದು ರಾತ್ರೋರಾತ್ರಿ ವನತಾರಾ ರೆಸಾರ್ಟ್​ ನೆಲಸಮಗೊಳಿಸಿದೆ. ಇದರ ಬೆನ್ನಲ್ಲೇ ಇದೀಗ ಪುಲಕಿತ್​ನ ಅಪ್ಪ ಮತ್ತು ಸಹೋದರನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

    ಈ ನಡುವೆ, ಅಂಕಿತಾ ಭಂಡಾರಿ ಸಾವಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಅಂಕಿತಾರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ, ಅವರ ಸಾವಿನಿಂದ ನನ್ನ ಮನಸಿಗೆ ತೀವ್ರ ನೋವಾಗಿದೆ’ ಎಂದು ತಿಳಿಸಿದ್ದಾರೆ.

    ‘ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಡಿಐಜಿ ಪಿ. ರೇಣುಕಾ ದೇವಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಅಕ್ರಮವಾಗಿ ಕಟ್ಟಲಾದ ರೆಸಾರ್ಟ್​ ವಿರುದ್ಧ ಕಳೆದ ರಾತ್ರಿಯೇ ಬುಲ್ಡೋಜರ್ ಕಾರ್ಯಾಚರಣೆಯನ್ನೂ ನಡೆಸಲಾಗಿದೆ. ಇಂಥ ಹೀನ ಕೃತ್ಯ ಎಸಗಿದ ಆರೋಪಿಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ’ ಎಂದು ಟ್ವೀಟ್​ ಮೂಲಕ ಮುಖ್ಯಮಂತ್ರಿ ಧಾಮಿ ತಿಳಿಸಿದ್ದಾರೆ.


    ರೆಸಾರ್ಟ್​ನಲ್ಲಿ ಅಂಕಿತಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 18 ರಂದು ಅವರು ಕಾಣೆಯಾಗಿದ್ದರು. ಕಾಣೆಯಾಗಿ ವಾರದ ಬಳಿಕ ಇವತ್ತು (ಸೆ.24) ಶವವಾಗಿ ಪತ್ತೆಯಾಗಿದ್ದರು. ಅಂಕಿತಾ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್‌ ಠಾಣೆಯಲ್ಲಿ ಪುಲಕಿತ್​ ಆರ್ಯ ಕೂಡ ದೂರು ದಾಖಲಿಸಿದ್ದ. ಆದರೆ ಅಂಕಿತಾ ಕುಟುಂಬಸ್ಥರು ಪುಲಕಿತ್​ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ನಂತರ ತನಿಖೆಯಿಂದ ಪುಲಕಿತ್​ ರೆಸಾರ್ಟ್​ನ ಇಬ್ಬರು ಸಿಬ್ಬಂದಿಯೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ. ಕೂಡಲೇ ಎಲ್ಲರನ್ನೂ ಬಂಧಿಸಲಾಗಿದೆ. (ಏಜೆನ್ಸೀಸ್​)

    VIDEO: ಯುವತಿಯ ಹತ್ಯೆ; ಬಿಜೆಪಿ ನಾಯಕನ ಪುತ್ರನ ರೆಸಾರ್ಟ್​ ಮೇಲೆ ಬುಲ್ಡೋಜರ್​- ನ್ಯಾಯ ಎಲ್ಲರಿಗೂ ಒಂದೇ ಎಂದ ಸಿಎಂ

    VIDEO: ಭಯೋತ್ಪಾದನೆ ನಂಟು; ಮೂರನೇ ಮದರಸಾವೂ ನೆಲಸಮ- ಎಂಟು ಬುಲ್ಡೋಜರ್​ ಬಳಸಿ ಧ್ವಂಸ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts