More

    ವಿಧಾನಮಂಡಲದ ಅಧಿವೇಶನ ಶುರು: ಅವರ ಜಾಗದಲ್ಲಿ ಇವರು, ಇವರ ಜಾಗದಲ್ಲಿ ಅವರು…

    ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಇಂದಿನಿಂದ ಶುರುವಾಗಿದ್ದು, ಈ ಬಾರಿ ಮುಖಂಡರ ಸ್ಥಾನ ಬದಲಾವಣೆಯಾಗಿರುವುದು ಗಮನ ಸೆಳೆಯುತ್ತಿದೆ. ಈವರೆಗೂ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿನ ಇರುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್‍ಶೆಟ್ಟರ್ ನಾಲ್ಕನೆ ಸಾಲಿನ ಖುರ್ಚಿಯನ್ನು ಅಲಂಕರಿಸಿದ್ದಾರೆ.

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದ್ದರೆ, ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವೂ ಹೌದು. ಆದ್ದರಿಂದ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಕುತೂಹಲ ಮೂಡಿಸಿದೆ.

    ಇದರ ಮೊದಲ ಕೇಂದ್ರಬಿಂದುವಾಗಿರುವುದು ಮುಖಂಡದ ಸ್ಥಾನ ಪಲ್ಲಟ. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಹಿರಿಯ ಸದಸ್ಯರಾಗಿರುವ ಕಾರಣ ಅವರು ಕೇಳಿದ ಸಾಲಿನಲ್ಲೇ ಆಸನ ನಿಗದಿಪಡಿಸುವ ಸಂಪ್ರದಾಯವಿದೆ. ಈ ಬಾರಿ ಅವರು ಕೊನೆಯ ಸಾಲಿನಲ್ಲಿ ಕುಳಿತು ಸದನವನ್ನು ಆಲಿಸುತ್ತಿದ್ದಾರೆ. ಇವರ ಜತೆಗೆ ಮಾಜಿ ಸಚಿವ ಸುರೇಶ್​ ಕುಮಾರ್​ ಅವರಿಗೂ ಕೊನೆಯ ಸಾಲಿನಲ್ಲಿ ಸೀಟು ಮೀಸಲು ಇರಿಸಲಾಗಿದೆ. ಸದಾ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಮೊದಲ ಸಾಲಿನ ಒಂದನೆ ಕುರ್ಚಿಯಲ್ಲಿ ಕುಳಿತಿದ್ದಾರೆ.

    ಅಗಲಿದ ಗಣ್ಯರಿಗೆ ಸಂತಾಪ ಕಲಾಪ ಆರಂಭವಾಗಿದೆ. ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಗಲಿದ ನಾಯಕರಾದ ಪ್ರೊ.ಜಿ.ವೆಂಕಟ ಸುಬ್ಬಯ್ಯ, ಮಾಜಿ ಸಚಿವ ಉದಾಸಿ, ಡಾ.ಸಿದ್ದಲಿಂಗಯ್ಯ, ಎಚ್​.ಸಿ.ದೊರೆಸ್ವಾಮಿ, ಎನ್​.ಎಸ್​.ಖೇಡ್​​, ಸೂ.ರಂ.ರಾಮಯ್ಯ, ರಾಜಶೇಖರ್​ ಸಿಂಧೂರ್, ಮಾಜಿ ಮಾದೇಗೌಡ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್​​​​ ಸೇರಿ ಹಲವರಿಗೆ ಸಂತಾಪ ಸೂಚಕ ನಿಲುವಳಿ ಮಂಡಿಸಿದರು. ನಂತರ ಕಲಾಪ ಆರಂಭವಾಯಿತು.

    ಅಧಿವೇಶನಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಜೆಡಿಎಸ್‌ ಮುಖಂಡ ಎಚ್​.ಡಿ.ಕುಮಾರಸ್ವಾಮಿ ಅವರ ಅನುಪಸ್ಥಿತಿ ಕಾಣುತ್ತಿದೆ. ಕಾಂಗ್ರೆಸ್ ಶಾಸಕರು ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನಕ್ಕೆ ತಡವಾಗಿ ಆಗಮಿಸಿದ್ದಾರೆ. ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಇದಾಗಲೇ ಡಿ.ಕೆ.ಶಿಮಕುಮಾರ್‌ ನೇತೃತ್ವದಲ್ಲಿ ಎತ್ತಿನಗಾಡಿ ರ್ಯಾಲಿಯೂ ನಡೆದಿದೆ.

    ಕರೊನಾ ವೈರಸ್, ಲಾಕ್‌ಡೌನ್‌, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಕಾಂಗ್ರೆಸ್ ಈಗಾಗಲೇ ತಯಾರಿ ಮಾಡಿಕೊಂಡಿದ್ದು, ಸದನ ರಣರಂಗವಾಗಲಿದೆಯೇ ಎಂದು ಕಾದುನೋಡಬೇಕಿದೆ.

    ಅನುದಾನ ಸಿಕ್ಕರೂ ನಿರ್ಮಿಸದ ಶೌಚಗೃಹ: ಗ್ರಾ.ಪಂ ಅಧ್ಯಕ್ಷೆಯನ್ನೇ ಕೂಡಿ ಹಾಕಿದ ಗ್ರಾಮಸ್ಥರು!

    ಎಸ್‌ಬಿಐ ಗ್ರಾಹಕರಾಗಿದ್ದರೆ ಕೂಡಲೇ ಈ ಕೆಲಸ ಮಾಡಿ: ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಲಿದೆ ಬ್ಯಾಂಕ್‌ ಅಕೌಂಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts