More

    ನಿರ್ಬಂಧಗಳ ಹೇರಿಕೆಗಳನ್ನು ಮೀರಿ ಹೇಗೆ ಮುಂದುವರಿಯುತ್ತಿದೆ ರಷ್ಯಾ?!

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ನಿರ್ಬಂಧಗಳ ಹೇರಿಕೆಗಳನ್ನು ಮೀರಿ ಹೇಗೆ ಮುಂದುವರಿಯುತ್ತಿದೆ ರಷ್ಯಾ?!ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಆರಂಭಿಸಿ ಈಗಾಗಲೇ ಒಂಬತ್ತು ತಿಂಗಳುಗಳೇ ಕಳೆದು ಹೋದವು. ರಷ್ಯಾದ ಆರ್ಥಿಕ ಸಂಸ್ಥೆಗಳು, ಬ್ಯಾಂಕುಗಳು, ಹಾಗೂ ವಿದೇಶೀ ಆಸ್ತಿಗಳ ಮೇಲೆ ಯುರೋಪಿಯನ್ ಒಕ್ಕೂಟ ಹಾಗೂ ಅಮೆರಿಕಾಗಳು ಆರಂಭಿಸಿದ ನಿರಂತರ ನಿರ್ಬಂಧಗಳು ಇಂದಿಗೂ ಹಾಗೇ ಮುಂದುವರಿದಿವೆ. ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ಎಲ್ಎನ್‌ಜಿ ಖರೀದಿಯನ್ನೂ ಅಪಾರ ಪ್ರಮಾಣದಲ್ಲಿ ಕಡಿಮೆ ಮಾಡಿವೆ. (ಆದರೆ ಬೆಲ್ಜಿಯಂ ಮತ್ತು ಸ್ಪೇನ್ ರಷ್ಯಾದಿಂದ ಇಂಧನ ಆಮದು ಹೆಚ್ಚಿಸವೆ.) ಜರ್ಮನಿ ರಷ್ಯಾದಿಂದ ತನ್ನ ಅನಿಲ ಆಮದನ್ನು 40% ದಿಂದ 9%ಗೆ ಇಳಿಸಿದೆ. ಆ ಬಳಿಕ ರಷ್ಯಾಗೆ ಜಾಗತಿಕ ಮಾರುಕಟ್ಟೆಯೊಡನೆ ವ್ಯವಹಾರ ಏರ್ಪಡದಂತೆ ತಡೆಯಲು ಹಾಗೂ ರಷ್ಯಾದ ಆರ್ಥಿಕತೆಯನ್ನು ಮಂಡಿಯೂರುವಂತೆ ಮಾಡಲು ಇನ್ನಷ್ಟು ನಿರ್ಬಂಧಗಳನ್ನು ಹೇರಲಾಯಿತು. ಆ ಮೂಲಕ ಉಕ್ರೇನ್‌ನಲ್ಲಿ ರಷ್ಯಾದ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂದು ಅಂದಾಜಿಸಲಾಗಿತ್ತು.

    ನಿರ್ಬಂಧಗಳ ಪರಿಣಾಮಗಳು
    ಈ ರೀತಿಯ ನಿರ್ಬಂಧಗಳ ಹೇರಿಕೆಗಳು ರಷ್ಯಾದ ವಿರುದ್ಧ ಜಾಗತಿಕ, ಆರ್ಥಿಕ ಭದ್ರಕೋಟೆಯನ್ನೇ ನಿರ್ಮಿಸಿಬಿಟ್ಟವು. ಈ ನಿರ್ಬಂಧಗಳ ಪರಿಣಾಮವಾಗಿ ರಷ್ಯಾಗೆ ಸಾಗಾಟ ಕಂಟೇನರ್‌ಗಳು, ಸೆಮಿ ಕಂಡಕ್ಟರ್ ಚಿಪ್‌ಗಳು, ಔದ್ಯಮಿಕ ಬಿಡಿಭಾಗಗಳು, ಆಟೋಮೊಬೈಲ್ ಹಾಗೂ ರೈಲ್ವೇ ಬಿಡಿಭಾಗಗಳು, ವೈಮಾನಿಕ ಬಿಡಿಭಾಗಗಳ ಅಪಾರ ಕೊರತೆ ಎದುರಾಯಿತು. ಇಂತಹ ನಿರ್ಬಂಧಗಳು ರಷ್ಯಾದ ಆಂತರಿಕ ಉದ್ಯಮಗಳ ಮೇಲಂತೂ ಗಂಭೀರ ಪರಿಣಾಮ ಉಂಟಾಯಿತು. ರಷ್ಯಾ ಈಗ ಬೋಯಿಂಗ್ ಹಾಗೂ ಏರ್‌ಬಸ್ ವಿಮಾನಗಳನ್ನು ಬಳಸಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ನಿರ್ಬಂಧಗಳ ಪರಿಣಾಮವಾಗಿ ಆ ವಿಮಾನಗಳು ಅವುಗಳ ಉತ್ಪಾದಕ ಸಂಸ್ಥೆಗಳೊಡನೆ ಸಂಪರ್ಕ ಕಳೆದುಕೊಂಡಿವೆ.

    ರಷ್ಯಾದ 1,000ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ 12,000ಕ್ಕೂ ಹೆಚ್ಚು ಅತ್ಯಂತ ಶ್ರೀಮಂತ ಜನರ ಮೇಲೆ ನಿರ್ಬಂಧಗಳ ಹೇರಿಕೆ ಆಗಿರುವುದರಿಂದ ರಷ್ಯಾದ ಆಂತರಿಕ ಉದ್ಯಮಕ್ಕೆ ಅಗತ್ಯವಿರುವ ಸಿದ್ಧವಸ್ತುಗಳನ್ನು ಉತ್ಪಾದಿಸಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದರೂ ರಷ್ಯಾ ಆರ್ಥಿಕ ಸ್ಥಿರತೆಯನ್ನು ಹೇಗೆ ಸಾಧಿಸಿತು?

    ರಷ್ಯಾಗೆ ಅಗತ್ಯವಾಗಿದ್ದ ಆರ್ಥಿಕತೆಯ ತುರ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸೆನ್ ಬ್ಯಾಂಕ್ ಅಥವಾ ರಷ್ಯನ್ ಸೆಂಟ್ರಲ್ ಬ್ಯಾಂಕ್ ರಷ್ಯನ್ನರು ಪಡೆದುಕೊಳ್ಳಬಹುದಾದ ವಿದೇಶೀ ಹಣದ ಮೇಲೆ ಮಿತಿ ಹೇರಿತು. ರಷ್ಯಾದ ಮಧ್ಯವರ್ತಿಗಳು ಸೆಕ್ಯುರಿಟಿ ಬಾಂಡ್‌ಗಳನ್ನು ವಿದೇಶಿಯರಿಗೆ ಮಾರಾಟ ಮಾಡದಂತೆ ನಿರ್ಬಂಧಿಸಿತು. ಅದರಿಂದಾಗಿ ರೂಬೆಲ್ ಮಾರಾಟ ಕಷ್ಟಕರವಾಯಿತು. ಆ ಬಳಿಕ ರಷ್ಯಾ ತನ್ನ ರಫ್ತುದಾರರು 80%ದಷ್ಟು ವಿದೇಶೀ ಹಣದ ಆದಾಯವನ್ನು ರೂಬೆಲ್ ಜೊತೆ ಬದಲಾಯಿಸುವಂತೆ ಮಾಡಿತು. ಆ ಮೂಲಕ ವಿದೇಶೀ ಹಣ ರಷ್ಯಾದ ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯಿತು. ಇದು ರಷ್ಯಾದ ನಗದು ರೂಬೆಲ್ ಅನ್ನು ಇನ್ನಷ್ಟು ಸ್ಥಿರಗೊಳಿಸಿ, ಅದರ ಬೆಲೆ ಹೆಚ್ಚಳವಾಗುವಂತೆ ಮಾಡಿತು.

    ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌ಗೂ ಹೆಚ್ಚಾಗುತ್ತಿದೆ. ಆದ್ದರಿಂದ ರಷ್ಯಾ ತೈಲ ಹಾಗೂ ಅನಿಲವನ್ನು ಭಾರತ, ಚೀನಾ, ಬ್ರೆಜಿಲ್, ಸ್ಪೇನ್, ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಹಾಗೂ ಟರ್ಕಿಗಳಿಗೆ ಕಳೆದ ವರ್ಷಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಸಂಪಾದಿಸುತ್ತಿದೆ. ಅದರೊಡನೆ ರಷ್ಯಾ ತನ್ನ ಮೇಲೆ ಪೂರ್ಣ ಪ್ರಮಾಣದ ನಿರ್ಬಂಧ ಹೇರಿರುವ ರಾಷ್ಟ್ರಗಳೊಡನೆ ವ್ಯಾಪಾರವನ್ನು ಬಹುತೇಕ ಕಡಿಮೆಗೊಳಿಸಿದೆ.

    ಈ ಕ್ರಮಗಳು ರಷ್ಯಾಗೆ ಅನುಕೂಲಕರ ಬದಲಾವಣೆಗಳನ್ನು ಮೂಡಿಸಿದವು. ಅಕ್ಟೋಬರ್ ತಿಂಗಳಲ್ಲಿ ರಷ್ಯಾ ರಿಯಾಯಿತಿ ದರದೊಡನೆ ತೈಲ ಹಾಗೂ ನೈಸರ್ಗಿಕ ಅನಿಲವನ್ನು ಭಾರತಕ್ಕೆ ಪೂರೈಕೆ ಮಾಡುವ ಮೂಲಕ, ಭಾರತದ ಅತಿದೊಡ್ಡ ತೈಲ ಹಾಗೂ ಅನಿಲ ಪೂರೈಕೆದಾರ ಎನಿಸಿತು. ಅದೇ ತಿಂಗಳಲ್ಲಿ ರಷ್ಯಾ ಭಾರತಕ್ಕೆ ಅತಿದೊಡ್ಡ ಗೊಬ್ಬರ ಪೂರೈಕೆದಾರ ರಾಷ್ಟ್ರ ಎನಿಸಿತು. ಚೀನಾ ಸಹ ರಷ್ಯಾದಿಂದ ಆಮದು ಹೆಚ್ಚಿಸಿದ್ದರೂ, ಚೀನಾ ತೈಲ ಮತ್ತು ಅನಿಲ ಆಮದು ಪ್ರಮಾಣವನ್ನು 20%ಕ್ಕಿಂತ ಹೆಚ್ಚಿಸುವುದಿಲ್ಲ. ಯಾಕೆಂದರೆ ಚೀನಾ ಪೂರೈಕೆಯ ಕೊರತೆಯ ಆಘಾತ ಎದುರಾಗಬಾರದು ಎಂಬ ಕಾರಣದಿಂದ ಯಾವುದೇ ಒಂದು ರಾಷ್ಟ್ರದಿಂದ 20%ಕ್ಕಿಂತ ಹೆಚ್ಚಿನ ಇಂಧನ ಆಮದು ನಡೆಸುವುದಿಲ್ಲ.

    ಪೂರ್ವ ಏಷ್ಯಾದ ರಾಷ್ಟ್ರಗಳು ಕಲ್ಲಿದ್ದಲು ಆಮದಿಗೆ ರಷ್ಯಾ ಮೇಲಿನ ತಮ್ಮ ಅವಲಂಬನೆಯನ್ನು ಕಡಿಮೆಗೊಳಿಸಿದ್ದು, ಅನಿಲ ಆಮದನ್ನು ಹೆಚ್ಚಿಸಿವೆ. ಉದಾಹರಣೆಗೆ, ಆಗಸ್ಟ್ 2021ಕ್ಕೆ ಹೋಲಿಸಿದರೆ, ಆಗಸ್ಟ್ 2022ರಲ್ಲಿ ಜಪಾನಿನ ಎಲ್ಎನ್‌ಜಿ ಆಮದು 211% ಹೆಚ್ಚಳ ಕಂಡಿದೆ. ಆದರೆ ಅಕ್ಟೋಬರ್ ತಿಂಗಳ ವೇಳೆಗೆ ಜಪಾನ್ ರಷ್ಯಾದ ಮೇಲೆ ರಫ್ತು ನಿರ್ಬಂಧ ಹೇರಿದೆ.

    ರಷ್ಯಾ ಈಗಾಗಲೇ ರಫ್ತು ಹೆಚ್ಚಳವನ್ನು ನಮೂದಿಸಿದೆ. ಆದರೆ ರಷ್ಯಾದ ಆಮದು ಅಪಾರ ಪ್ರಮಾಣದಲ್ಲಿ ಕುಸಿತ ಕಂಡಿವೆ. ಆಮದು ಕಡಿಮೆಯಾಗಿರುವುದರ ನಡುವೆಯೂ, ರಷ್ಯಾ ತನ್ನ ಪ್ರಮುಖ ಉದ್ಯಮಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಈಗ ಮೂಡಿ ಬರುತ್ತಿರುವ ಪ್ರಶ್ನೆ ಎಂದರೆ ರಷ್ಯಾ ಹೇಗೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ?

    ಈ ಮೇಲೆ ನಮೂದಿಸಿರುವ ವಲಯಗಳಲ್ಲಿ ರಷ್ಯನ್ ಫೆಡರೇಷನ್ ಎದುರಿಸುತ್ತಿರುವ ಕೊರತೆಗಳನ್ನು ನಿವಾರಿಸಲು ರಷ್ಯಾ ತಾನು ರಿಯಾಯಿತಿ ದರದಲ್ಲಿ ತೈಲ ಹಾಗೂ ಅನಿಲ ಪೂರೈಸುತ್ತಿರುವ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಆ ಮೂಲಕ ರಷ್ಯಾ ಶಿಪ್ಪಿಂಗ್ ಕಂಟೇನರ್, ಸೆಮಿ ಕಂಡಕ್ಟರ್ ಚಿಪ್, ಆಟೋಮೊಬೈಲ್, ಹಾಗೂ ವೈಮಾನಿಕ ಬಿಡಿಭಾಗಗಳನ್ನು ಪಡೆದುಕೊಳ್ಳುತ್ತಿದೆ.

    ಮಾಸ್ಕೋದ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಉಪನ್ಯಾಸಕ, ವಿಶ್ಲೇಷಕರಾಗಿರುವ ಅಲೆಕ್ಸಿ ಬೆಜ಼್‌ಬೋರೋಡೋವ್ ಅವರ ಪ್ರಕಾರ, ರಷ್ಯಾ ಕನಿಷ್ಠ ಹಡಗು ನಿರ್ಮಾಣ ಸಾಮರ್ಥ್ಯ ಹೊಂದಿದ್ದರೂ, ಅದು ಈಗಾಗಲೇ 2023ರ ಹಣಕಾಸು ವರ್ಷಕ್ಕಾಗಿ 29 ಹೆಚ್ಚಿನ ಕಂಟೇನರ್ ಹಡಗುಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಈ ಉತ್ಪನ್ನಗಳು ಚೀನಾದ ಪರವಾಗಿ ಖರೀದಿಸಲಾಗುತ್ತದೆ. ಹಡಗುಗಳಿಗಾಗಿ ಹೆಚ್ಚಾದ ಬೇಡಿಕೆ ರಷ್ಯಾ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ ಎಂದು ಸೂಚಿಸುತ್ತದೆ.

    ಇತ್ತೀಚೆಗೆ ರಷ್ಯಾ ಭಾರತಕ್ಕೆ ತನಗೆ ಅಗತ್ಯವಿರುವ 500 ವಸ್ತುಗಳ ಪಟ್ಟಿಯನ್ನು ಸಲ್ಲಿಸಿದೆ. ಅದರಲ್ಲಿ ರೈಲಿನ ಉಪಕರಣಗಳ ಬಿಡಿಭಾಗಗಳು, ವಿಮಾನ ಹಾಗೂ ಕಾರುಗಳ ಬಿಡಿಭಾಗಗಳೂ ಸೇರಿವೆ. ಈ ಉತ್ಪನ್ನಗಳ ಪೂರೈಕೆ ಹಾಗೂ ಅದಕ್ಕಾಗಿ ಬೇಕಾದ ಸಮಯದ ಕುರಿತು ಇನ್ನೂ ಸೂಕ್ತ ಮಾಹಿತಿ ಲಭ್ಯವಿಲ್ಲ. ರಷ್ಯಾದ ಉದ್ಯಮ ಮತ್ತು ವ್ಯಾಪಾರ ಸಚಿವಾಲಯ ರಷ್ಯಾದ ಬೃಹತ್ ಸಂಸ್ಥೆಗಳಿಗೆ ಅಗತ್ಯವಿರುವ ಬಿಡಿಭಾಗಗಳು ಹಾಗೂ ಉತ್ಪನ್ನಗಳ ಪಟ್ಟಿ ಒದಗಿಸುವಂತೆ ಸೂಚಿಸಿತ್ತು.

    ರಷ್ಯಾ ಸಹ ತನ್ನ ಉತ್ಪನ್ನಗಳನ್ನು ಟರ್ಕಿ ಮೂಲಕ ಕಾಕಸಸ್ ಅಥವಾ ಕಪ್ಪು ಸಮುದ್ರದ ಹಾದಿಯಲ್ಲಿ ಆಮದು ಮಾಡಿಕೊಳ್ಳುತ್ತದೆ. ನ್ಯಾಟೋ ಒಕ್ಕೂಟದ ಸದಸ್ಯ ರಾಷ್ಟ್ರಗಳೊಡನೆ ರಷ್ಯಾದ ವ್ಯಾಪಾರ 87% ಹೆಚ್ಚಳ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

    ಪ್ರಸ್ತುತ ಇರುವ ಮಾಹಿತಿಗಳ ಪ್ರಕಾರ, ರಷ್ಯಾ ತನ್ನ ಪ್ರಮುಖ ಉದ್ಯಮಗಳಿಗೆ ಅಗತ್ಯವಿರುವ ಉತ್ಪನ್ನಗಳನ್ನು ಭಾರತ, ಚೀನಾ ಹಾಗೂ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಈ ಸಂದರ್ಭದಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕೋವಿಡ್-19 ಪ್ಯಾನ್‌ಡೆಮಿಕ್ ನಿಂದ ಹೊಡೆತ ಅನುಭವಿಸಿದ ಜಾಗತಿಕ ಪೂರೈಕೆ ವ್ಯವಸ್ಥೆ ಈಗಿನ್ನೂ ಚೇತರಿಸಿಕೊಳ್ಳುತ್ತಿದೆ. ಆದ್ದರಿಂದ ಕಂಟೇನರ್ ಕೊರತೆ ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ. ಅದರಲ್ಲೂ ರಷ್ಯಾದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಸ್ತುಗಳನ್ನು ಸಾಗಾಟ ಮಾಡುವ ಪ್ರಕ್ರಿಯೆಯೂ ಕಷ್ಟಕರವಾಗಿರುತ್ತದೆ. ಇದರ ಪರಿಣಾಮವಾಗಿ ಪೂರೈಕೆ ಪ್ರಕ್ರಿಯೆಯಲ್ಲಿ ತಡವಾಗುವುದು ಅತ್ಯಂತ ಸಹಜವಾಗಿದೆ. ಇದು ಉಕ್ರೇನ್ ಯುದ್ಧದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನಲೂ ಸಾಧ್ಯವಿಲ್ಲ. ರಷ್ಯಾದ ಆರ್ಥಿಕ ಪರಿಸ್ಥಿತಿ ಈಗ ಅತಿ ಹೆಚ್ಚು ಹಣದುಬ್ಬರ ಎದುರಿಸುತ್ತಿದ್ದು, ಹಣದುಬ್ಬರದ ದರ 12.9% ತಲುಪಿದೆ. ಇದು ಬಳಕೆದಾರರ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದರೆ ಇದೆಲ್ಲದರ ನಡುವೆಯೂ ರಷ್ಯಾದಲ್ಲಿ ಉಕ್ರೇನ್ ಮೇಲಿನ ಯುದ್ಧದ ಕುರಿತಾದ ಜನರ ಭಾವನೆಗಳು ಮಾತ್ರ ಇನ್ನೂ ಬದಲಾಗದೆ ಹಾಗೆಯೇ ಉಳಿದಿದೆ.

    ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಎಂದು ಕರೆ ನೀಡಿದ್ದ ಕಾಂಗ್ರೆಸ್​ ನಾಯಕನ ಬಂಧನ

    ತಂದೆಯನ್ನ ಕೊಂದು ಶವ ತುಂಡರಿಸಿ ಕೊಳವೆಬಾವಿಗೆ ತುರುಕಿದ ಮಗ! ಬಾಗಲಕೋಟೆಯಲ್ಲಿ ಭಯಾನಕ ಕೃತ್ಯ ಬಯಲು

    ಯೂಟ್ಯೂಬ್​ ವಿಡಿಯೋ ನೋಡಿ ಬಾಲಕನ ಎಡವಟ್ಟು: ಮರ್ಮಾಂಗದಲ್ಲಿ ಸಿಲುಕಿದ್ದ ರಿಂಗ್​ ತೆಗೆಯಲು ಹರಸಾಹಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts