More

    ಬ್ರಿಟನ್​ ಪ್ರಧಾನಿ ರೇಸ್​ನಿಂದ ಹಿಂದೆ ಸರಿದ ಬೋರಿಸ್​ ಜಾನ್ಸನ್​: ರಿಷಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆ

    ಲಂಡನ್​: ಬ್ರಿಟನ್​ ಪ್ರಧಾನಿ ರೇಸ್​ನಿಂದ ಹಿಂದಕ್ಕೆ ಸರಿಯುವ ಬೋರಿಸ್​ ಜಾನ್ಸನ್​ ಅವರ ಅಚ್ಚರಿಯ ನಿರ್ಧಾರದ ಬೆನ್ನಲ್ಲೇ ಬ್ರಿಟನ್​ನ ಮಾಜಿ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಅವರು ಬ್ರಿಟನ್​ ಪ್ರಧಾನಿಯಾಗುವ ಸಾಧ್ಯತೆ ದಟ್ಟವಾಗಿದೆ.

    ಇದೀಗ ರಿಷಿ ಸುನಕ್​ ಅವರಿಗೆ ಪೆನ್ನಿ ಮೊರ್ಡಾಂಟ್ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ, ರಿಷಿ ಅವರಿಗೆ ಕನ್ಸರ್ವೆಟಿವ್ ಅಥವಾ ಟೋರಿ ಪಕ್ಷದ 142 ಸದಸ್ಯರ ಬೆಂಬಲವಿದೆ. ಅಧಿಕಾರದ ಗದ್ದುಗೆ ಏರಲು 100 ಸದಸ್ಯರ ಬಲ ಬೇಕು. ಆದರೆ, ರಿಷಿ ಅದಕ್ಕಿಂತ ಹೆಚ್ಚು ಬೆಂಬಲವನ್ನು ಹೊಂದಿದ್ದಾರೆ.

    ದೇಶದ ಆರ್ಥಿಕತೆಯನ್ನು ನಿಭಾಯಿಸಲು ಮತ್ತು ಪಕ್ಷದ ಸದಸ್ಯರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಹುದ್ದೆ ಅಲಕಂರಿಸಿದ 6 ವಾರಗಳಲ್ಲೇ ಲಿಜ್​ ಟ್ರಸ್​ ರಾಜೀನಾಮೆ ನೀಡಿದ್ದು, ಅವರಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಮತ್ತೊಮ್ಮೆ ಚುನಾವಣೆ ನಡೆಯುತ್ತಿದೆ. ಅ.28ರ ಒಳಗೆ ಹೊಸ ಪ್ರಧಾನಿ ಆಯ್ಕೆ ನಡೆಯಬೇಕಿದ್ದು, ರಿಷಿ ಸುನಕ್​ ಪ್ರಧಾನಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.

    ರಿಷಿ ಸುನಕ್​ ಎದುರು ಮತ್ತೆ ಸ್ಪರ್ಧಿಸಲು ಬೋರಿಸ್​ ಜಾನ್ಸನ್​ ಮುಂದಾಗಿದ್ದರು. ಆದರೆ, ಇದೀಗ ಹಿಂದೆ ಸರಿದಿದ್ದಾರೆ. ಚುನಾವಣಾ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಹೋಗಲು ಬೇಕಾದ ಸಾಕಷ್ಟು ಸದಸ್ಯರ ಬಲವನ್ನು ಹೊಂದಿದ್ದೇನೆ. ಆದರೆ, ಬೆಂಬಲ ಸದಸ್ಯರ ಸಂಖ್ಯೆಯಲ್ಲಿ ರಿಷಿ ಸುನಕ್​ ಅವರಿಗಿಂತ ಕೆಳಗಿದ್ದೇನೆ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯು ಇತ್ತು. ಆದರೆ, ಸ್ಪರ್ಧೆಯಿಂದ ನಾನು ಹಿಂದೆ ಸರಿಯುತ್ತಿದ್ದೇನೆ ಎಂದು ಬೋರಿಸ್​ ಜಾನ್ಸನ್​ ಹೇಳಿದ್ದಾರೆ. ಆದರೆ, ಅಧಿಕಾರದ ಗದ್ದುಗೆಗೆ ಹಿಂದಿರುಗುವ ತನ್ನ ಪ್ರಯತ್ನವನ್ನು ಅಧಿಕೃತವಾಗಿ ಘೋಷಿಸದ ಜಾನ್ಸನ್, ಈಗಲೂ ಬೆಂಬಲ ನೀಡುವಂತೆ ಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ತಮಗೆ 102 ಮಂದಿಯ ಬೆಂಬಲ ಇರುವುದಾಗಿ ಜಾನ್ಸನ್​ ಭಾನುವಾರ ಹೇಳಿಕೊಂಡಿದ್ದರು.

    ಸದ್ಯ ಬ್ರಿಟನ್​ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಮುಂದಿನ ಪ್ರಧಾನಿಗೆ ಭಾರಿ ಸವಾಲಿನ ಕೆಲಸ ಇದಾಗಿದೆ. ಎರಡನೇ ಬಾರಿಗೆ ಪ್ರಧಾನಿ ಚುನಾವಣೆಗೆ ಸ್ಪರ್ಧಿಸುವುದನ್ನು ಖಚಿತಪಡಿಸುವ ಸಮಯದಲ್ಲಿ ಮಾತನಾಡಿದ ರಿಷಿ ಸುನಕ್​, ನಮ್ಮ ದೇಶದ ಆರ್ಥಿಕತೆಯನ್ನು ಸರಿಪಡಿಸಲು ಮತ್ತು ಪಕ್ಷವನ್ನು ಒಗ್ಗೂಡಿಸಲು ಬಯಸುವುದಾಗಿ ಹೇಳಿದರು.

    ಬೋರಿಸ್​ ಜಾನ್ಸನ್​ ಹಿಂದೆ ಸರಿಯುವುದಾಗಿ ಹೇಳಿದ್ದು, ಇದೀಗ ರಿಷಿ ಸುನಕ್​ ಮತ್ತು ಪೆನ್ನಿ ಮೊರ್ಡಾಂಟ್ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ಪೆನ್ನಿ ಅವರಿಗೆ 29 ಸದಸ್ಯರ ಬೆಂಬಲ ಇದೆ ಎನ್ನಲಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಮಧ್ಯಾಹ್ನ 2 ಗಂಟೆಯವರೆಗೆ ಪೆನ್ನಿ ಅವರು 100 ಸದಸ್ಯರ ಬಲವನ್ನು ಹೊಂದದೇ ಹೋದರೆ, ರಿಷಿ ಸುನಕ್​ ಅವರೇ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.

    ಬೋರಿಸ್​ ಜಾನ್ಸನ್​ ರಾಜೀನಾಮೆ
    ಸಮರ್ಪಕ ಆಡಳಿತ ನೀಡುತ್ತಿಲ್ಲ ಎಂದು ಬೋರಿಸ್​​​​ ಜಾನ್ಸನ್​ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕದಲ್ಲೇ ಭಾರೀ ಅಸಮಾಧಾನವಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಹಲವು ತಿಂಗಳಿಂದ ಒತ್ತಾಯಿಸುತ್ತಿದ್ದರೂ ಬೋರಿಸ್​ ಮಾತ್ರ ಮಣಿದಿರಲಿಲ್ಲ. ಇವರ ಸಂಪುಟದಲ್ಲೇ ಸ್ಫೋಟಗೊಂಡ ಅಸಮಾಧಾನದ ಪರಿಣಾಮ 40ಕ್ಕೂ ಹೆಚ್ಚು ಸಚಿವರು ಮತ್ತು ಸಹಾಯಕರು ರಾಜೀನಾಮೆ ನೀಡಿದ್ದರು. ಯುಕೆ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್​ ಕೂಡ ರಾಜೀನಾಮೆ ನೀಡಿದ್ದರು. ಸರಣಿ ರಾಜೀನಾಮೆಯಿಂದ ಇಕ್ಕಟ್ಟಿಗೆ ಸಿಲುಗಿದ್ದ ಬೋರಿಸ್​​​​ ಜಾನ್ಸನ್​, ಕೊನೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿದ್ದೇನೆ ಎಂದು ಗುರುವಾರ (ಜುಲೈ 7) ಮಧ್ಯಾಹ್ನ ಘೋಷಿಸಿದ್ದರು. ಇದಾದ ಕೆಲವೇ ಗಂಟೆಯಲ್ಲೇ ರಾಜೀನಾಮೆ ನೀಡಿದರು. ನಂತರ ನಡೆದು ಚುನಾವಣೆಯಲ್ಲಿ ಲಿಜ್​ ಟ್ರಸ್​ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರು. ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ರಿಷಿ ಸುನಕ್ ಎರಡನೇ ಸ್ಥಾನಕ್ಕೆ ಕುಸಿದರು. ಇದೀಗ ಮತ್ತೊಂದು ಅವಕಾಶ ಒದಗಿಬಂದಿದೆ.

    ಏನಿದು ಟೋರಿ ಲೀಡರ್​ಶಿಪ್ ಸ್ಪರ್ಧೆ?
    ಕನ್ಸರ್ವೆಟಿವ್ ಪಕ್ಷವನ್ನು ಟೋರಿ ಪಕ್ಷ ಎಂದೂ ಕರೆಯಲಾಗುತ್ತದೆ. ಸದ್ಯ ಬ್ರಿಟನ್​ನಲ್ಲಿ ಅದು ಅಧಿಕಾರದಲ್ಲಿದೆ. ಈ ಪಕ್ಷದ ನಾಯಕ ರಾಜೀನಾಮೆ ನೀಡಿದರೆ ಹೊಸ ನಾಯಕನನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ನಾಯಕರಾಗಿ ಆಯ್ಕೆಯಾಗುವವರೇ ನೂತನ ಪ್ರಧಾನಿ ಕೂಡ ಆಗಲಿದ್ದಾರೆ. ಕನ್ಸರ್ವೆಟಿವ್ ಪಕ್ಷವು ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನೇ ‘ಟೋರಿ ಲೀಡರ್​ಶಿಪ್ ಕಂಟೆಸ್ಟ್’ (ಟೋರಿ ಪಕ್ಷದ ನಾಯಕತ್ವ ಸ್ಪರ್ಧೆ) ಎಂದು ಕರೆಯಲಾಗುತ್ತದೆ. ಮೊದಲ ಸುತ್ತುಗಳಲ್ಲಿ ಪಕ್ಷದ ಸಂಸದರು ಈ ನಾಯಕತ್ವ ಸ್ಪರ್ಧೆಯಲ್ಲಿ ಮತದಾನ ಮಾಡುತ್ತಾರೆ.

    ಯಾರು ಈ ರಿಷಿ ಸುನಕ್​
    42 ವರ್ಷದ ರಿಷಿ ಸುನಕ್ ಅವರು 1980ರಲ್ಲಿ ಸೌತಾಂಪ್ಟನ್​ನಲ್ಲಿ ಜನಿಸಿದರು. ಪೂರ್ವ ಆಫ್ರಿಕಾ ದಿಂದ ಇಂಗ್ಲೆಂಡ್​ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟ್ಯಾನ್​ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ. ಅಲ್ಲಿಯೇ ಅವರು ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿದ್ದು. ಮುಂದೆ ಅವರಿಬ್ಬರು ವಿವಾಹವಾದರು. (ಏಜೆನ್ಸೀಸ್​)

    ಕುಮಾರಣ್ಣ ಸಿಎಂ ಆದ್ರೆ ಮೊದಲು ಸಂತೋಷ ಪಡೋದು ನಾನೇ… ಎಂದ ಬಿಜೆಪಿ ಶಾಸಕ!

    ಚಳ್ಳಕೆರೆಯ CPI ವಿರುದ್ಧ ರೇಪ್​ ಕೇಸ್​ ದಾಖಲು: ಇಬ್ಬರು ಪತ್ನಿಯರಿದ್ರು ಯುವತಿಗೆ 5 ಬಾರಿ ಗರ್ಭಪಾತ ಮಾಡಿಸಿದ ಆರೋಪ

    ರಿಪೇರಿ ಮಾಡುವಾಗ ಬಾಂಬ್​ ರೀತಿ ಸ್ಫೋಟಗೊಂಡ ಮೊಬೈಲ್​ ಫೋನ್​! ಭಯಾನಕ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts