More

    ಬಣ್ಣದಲ್ಲಿ ಮಿಂದೆದ್ದ ಜನ

    ರೋಣ: ಮಹಿಳೆಯರಾದಿಗಾಗಿ ಪರಸ್ಪರ ಬಣ್ಣ ಎರಚಾಟ, ಕಲ್ಪಿತ ಶವಯಾತ್ರೆ, ಬಣ್ಣದಲ್ಲಿ ಮಿಂದೆದ್ದ ಚಿಣ್ಣರು ಇದೆಲ್ಲ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಕಂಡು ಬಂದ ದೃಶ್ಯಗಳು.

    ಪಟ್ಟಣದ ಸೂಡಿ, ಮುಲ್ಲಾನಭಾವಿ, ಪೋತರಾಜನಕಟ್ಟೆ, ಬಸ್ ನಿಲ್ದಾಣ ವೃತ್ತ, ಬದಾಮಿ ರಸ್ತೆ, ಹೂಲಿಚಾಳ ಸೇರಿ ವಿವಿಧೆಡೆ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಸೋಮವಾರ ತಡರಾತ್ರಿ ಪಟ್ಟಣದ ಎಲ್ಲ ಸಮುದಾಯದ ಜನರು ಸಾಂಪ್ರದಾಯಿಕವಾಗಿ ಪೂಜಾ ವಿಧಿವಿಧಾನಗಳ ಪ್ರಕಾರ ಕಾಮದಹನ ನೆರವೇರಿಸಿದರು. ಮಂಗಳವಾರ ನಸುಕಿನಿಂದಲೇ ಎಲ್ಲಿ ನೋಡಿದರೂ ಬಣ್ಣದೋಕುಳಿಯ ಚಿತ್ತಾರ ಎದ್ದು ಕಾಣುತ್ತಿತ್ತು.

    ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಬೀದಿ, ಬೀದಿಗಳಲ್ಲಿ ಯುವಕರು, ಮಕ್ಕಳು ಕೈಯಲ್ಲಿ ವಿವಿಧ ಬಣ್ಣ ಹಿಡಿದು ಹೋಗು-ಬರುವವರಿಗೆ ಎರಚಿ ‘ಹ್ಯಾಪಿ ಹೋಳಿ’ ಎಂದು ಶುಭ ಕೋರುತ್ತಿದ್ದದ್ದು ಕಂಡು ಬಂತು.

    ಸಂಭ್ರಮದ ರಂಗಿನಾಟ

    ನರಗುಂದ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ 47 ಸಾರ್ವಜನಿಕ ಸ್ಥಳಗಳಲ್ಲಿ ಮಂಗಳವಾರ ಕಾಮದಹನ ನೆರವೇರಿಸುವ ಮೂಲಕ ಹಿಂದು, ಮುಸ್ಲಿಂ ಸಮಾಜದವರು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಆಚರಿಸಿದರು.

    ಪಟ್ಟಣದ ಮಹಿಳೆಯರು, ಮಕ್ಕಳು ಬೆಳಗ್ಗೆ ಕಾಮ ದಹನಕ್ಕೂ ಮುನ್ನವೇ ಬಣ್ಣದಾಟ ಪ್ರಾರಂಭಿಸಿದರು. ರಂಗು ರಂಗಿನ ಬಣ್ಣದಾಟದಲ್ಲಿ ಈ ಬಾರಿ ಮಹಿಳೆಯರೇ ಹೆಚ್ಚು ಪಾಲ್ಗೊಂಡಿದ್ದು ಕಂಡು ಬಂತು. ಹೋಳಿ ನಿಮಿತ್ತ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತಿದ್ದ ಭಕ್ತರು ರತಿ, ಕಾಮಣ್ಣರಿಗೆ ವಿಶೇಷ ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

    ಹುಲುಗಾಮನ ದಹನ

    ಶಿರಹಟ್ಟಿ: ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಶಿರಹಟ್ಟಿಯಲ್ಲಿ ಪ್ರತಿ ವರ್ಷ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.

    ಸೋಮವಾರ ಹುಲಗಾಮನ ಮೂರ್ತಿ (ಹುಲ್ಲಿನಿಂದ ತಯಾರಿಸಲಾದ ಮನುಷ್ಯನ ಆಕಾರದ ಮೂರ್ತಿ) ಸಿದ್ಧಪಡಿಸಿ ಮೆರವಣಿಗೆ ಮಾಡಲಾಯಿತು.

    ಮೂರ್ತಿ ವಿಶೇಷ: ಹುಲುಗಾಮನ ಮೂರ್ತಿಗೆ ಭತ್ತದ ಹುಲ್ಲಿನ ಹೊದಿಕೆ ಮಾಡಿ ತಲೆಗೆ ಜರತಾರಿ ಪೇಟಾ (ಮುಂಡಾಸು), ಕೊರಳಲ್ಲಿ ರತ್ನಮಾಲೆ, ತೋಳಿಗೆ ಸಿಕ್ಕೆ, ಬಿಲ್ಲೆ, ಕವಚಗಳನ್ನು ತೊಡಿಸಿ, ಮುಖಕ್ಕೆ ಕಾಮನ ಹೋಲಿಕೆಯ ಅಗಲವಾದ ಮೀಸೆ ಇತ್ಯಾದಿಯೊಂದಿಗೆ ರಾಜ ಪೋಷಾಕಿನಲ್ಲಿ ಶೃಂಗರಿಸಲಾಗುತ್ತದೆ. ಬೇವಿನ ಟೊಂಗೆ, ಬಾಳೆ ಕಂಬ, ಬಣ್ಣ ಬಣ್ಣದ ಬಲೂನುಗಳಿಂದ ಅಲಂಕರಿಸಿದ ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

    ಸೋಮವಾರ ರಾತ್ರಿ 10 ಗಂಟೆಗೆ ವಾಲ್ಮೀಕಿ ವೃತ್ತದಿಂದ ಆರಂಭವಾದ ಮೆರವಣಿಗೆ ವೇಳೆ ಯುವಕರು ಜಾನಪದ ಹಾಡು ಹಾಡುತ್ತಾ ಇಡೀ ರಾತ್ರಿ ಪಟ್ಟಣದಲ್ಲಿ ಸಂಚರಿಸಿ ಬೆಳಗ್ಗೆ ಮತ್ತದೇ ಸ್ಥಳಕ್ಕಾಗಮಿಸಿ ಹುಲಗಾಮನ ದಹನ ಮಾಡಿದ ಬಳಿಕ ರಂಗಿನಾಟಕ್ಕೆ ಚಾಲನೆ ನೀಡಲಾಯಿತು.

    ಈ ಊರಲ್ಲಿಲ್ಲ ರಂಗಿನಾಟ: ತಾಲೂಕಿನ ಮಾಗಡಿ, ಹೊಳಲಾಪೂರ, ಪರಸಾಪೂರ ಮತ್ತು ಖಾನಾಪೂರ ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ. ಹಿರಿಯರು ಹೇಳುವಂತೆ ಈ ಹಿಂದೆ ಮಾಗಡಿ ಗ್ರಾಮದಲ್ಲಿ ಹಬ್ಬದ ದಿನದಂದು ಬೆಂಕಿ ಅವಘಡ ಸಂಭವಿಸಿತ್ತಂತೆ. ಹೀಗಾಗಿ, ಅಂದಿನಿಂದ ಹೋಳಿ ಹಬ್ಬ ನಿಲ್ಲಿಸಲಾಗಿದೆ. ಹಬ್ಬ ಆಚರಿಸಿದರೆ ಅವಘಡ ಸಂಭವಿಸುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿ ಬೇರೂರಿದೆ. ಹಾಗೆಯೇ ಪಕ್ಕದ ಖಾನಾಪೂರ ಗ್ರಾಮದಲ್ಲಿ 40 ವರ್ಷಗಳಿಂದ ಕಾಮ ಪ್ರತಿಷ್ಠಾಪನೆ, ದಹನ, ಹಲಿಗೆ ಬಾರಿಸುವುದು, ಬಣ್ಣ ಎರಚಾಟ ನಡೆಯುವುದಿಲ್ಲ. ಆದರೆ, ಗ್ರಾಮದ ಸುಭಿಕ್ಷೆಗಾಗಿ ಸರ್ವಧರ್ವಿುಯರು ಸೇರಿ ತ್ರಿವಿಧ ದಾಸೋಹಿ ಶರಣಬಸವೇಶ್ವರ ಪುರಾಣ ಏರ್ಪಡಿಸಿ, ಅನ್ನದಾಸೋಹ ಮತ್ತಿತರ ಧರ್ವಚರಣೆ ಕಾರ್ಯದಲ್ಲಿ ತೊಡಗುತ್ತಾರೆ.

     

    ಅಕ್ರಮ ಮರಳು ಸಾಗಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts