More

    ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮಿ

    ನರಗುಂದ: ಸತ್ತವರ ಬ್ಯಾಂಕ್ ಖಾತೆಗೂ ಗ್ಯಾರಂಟಿ ಹಣ ಜಮೆಯಾಗುತ್ತಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿವೆ. ನರಗುಂದ ತಾಲೂಕಿನಲ್ಲಿ 7-8 ಇಂಥ ಪ್ರಕರಣಗಳು ನಡೆದಿವೆ. ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ದಾರಿತಪ್ಪುತ್ತಿರುವ ಶಂಕೆ ವ್ಯಕ್ತವಾಗಿದೆ.
    ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಅನೇಕ ಮಹಿಳೆಯರು ಹಣ ಪಡೆಯುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ಯೋಜನೆ ಜಾರಿಗೂ ಮುನ್ನವೇ ಸಾವನ್ನಪ್ಪಿದ ಮಹಿಳೆಯೊಬ್ಬರು ಈ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರತಿ ತಿಂಗಳು ಹಣ ಮೃತ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಈಗ ಆ ಹಣ ಪಡೆಯಲು ಕುಟುಂಬದ ಉಳಿದ ಸದಸ್ಯರು ಹರಸಾಹಸ ಪಡುತ್ತಿದ್ದಾರೆ.
    ತಾಲೂಕಿನ ಜಗಾಪುರ ಗ್ರಾಮದ ನಿಂಗವ್ವ ಶಿವಪ್ಪ ಹೂಲಿ 2020ರ ಆಗಸ್ಟ್ 26ರಂದು ಮೃತಪಟ್ಟಿದ್ದಾರೆ. ಆದರೆ, ಆಕೆಯ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತಗೊಂಡು ಪ್ರತಿ ತಿಂಗಳು ತಪ್ಪದೆ ಹಣ ಪಡೆಯುತ್ತಿದ್ದಾರೆ. ಮಹಿಳೆ ಮೃತಪಟ್ಟಿರುವ ಬಗ್ಗೆ ಕಂದಾಯ ಇಲಾಖೆಯಿಂದ 2020ರ ನ.2ರಂದು ಮರಣ ಪ್ರಮಾಣಪತ್ರ ವಿತರಿಸಲಾಗಿದೆ. ಆದರೂ ಈ ಹಣ ಹೇಗೆ ಜಮೆ ಆಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
    ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಯಲ್ಲಿ ಪ್ರಾರಂಭದಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ 4ನೇ ಸ್ಥಾನ ಪಡೆದರೆ, ಜಿಲ್ಲೆಗೆ ನರಗುಂದ ತಾಲೂಕು 3ನೇ ಸ್ಥಾನ ಪಡೆದಿತ್ತು. ಈ ಮೂಲಕ ತಾಲೂಕಿನಲ್ಲಿ ಯೋಜನೆಯು ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಸಾಧನೆಗೆಯ ಬಗ್ಗೆ ಈಗ ಅನುಮಾನ ಮೂಡುವಂತಾಗಿದೆ.
    ನಿಂಗವ್ವ ಅವರ ಕುಟುಂಬದ ಪಡಿತರ ಚೀಟಿಯಲ್ಲಿ 5 ಸದಸ್ಯರ ಹೆಸರಿದೆ. ನಿಂಗವ್ವ ಹೂಲಿ ಅವರ ಸೊಸೆ ಲಲಿತಾ ಹೂಲಿ ಗೃಹಲಕ್ಷ್ಮಿ ಯೋಜನೆ ಅಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕಾರಗೊಂಡಿದೆ. ಆದರೆ, ಹಣ ಮಾತ್ರ ಯೋಜನೆ ಪ್ರಾರಂಭಕ್ಕೂ ಮುನ್ನವೇ ಮೃತಟ್ಟಿರುವ ನಿಂಗವ್ವ ಹೂಲಿ ಅವರ ನರಗುಂದದ ಕೆಸಿಸಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಮೃತ ಮಹಿಳೆಗೆ ಮೂವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಎಲ್ಲರೂ ಬೇರೆ ಆಗಿರುವುದರಿಂದ ಬ್ಯಾಂಕ್‌ನಲ್ಲಿರುವ ಹಣ ಪಡೆದುಕೊಳ್ಳಲು ಸಾಕಷ್ಟು ಹರಸಾಹಸ ಪಡುವಂತಾಗಿದೆ.
    ಪಡಿತರ ಮಾತ್ರ ಇಲ್ಲ: ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಲಲಿತಾ ಅವರ ಅತ್ತೆ ನಿಂಗವ್ವ ಮೃತಪಟ್ಟಿದ್ದರಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯ 5 ಜನರ ಪೈಕಿ ಕೇವಲ ನಾಲ್ವರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಅತ್ತೆ ಮೃತಪಟ್ಟಿರುವುದರಿಂದ ಗೃಹಲಕ್ಷಿ ಹಣ ನನ್ನ ಖಾತೆಗೆ ಜಮೆ ಮಾಡುವಂತೆ ಸೊಸೆ ಲಲಿತಾ ಹೂಲಿ 2024ರ ಜ.8ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಹಣ ಜಮೆಯಾಗಿಲ್ಲ.

    ನರಗುಂದ ತಾಲೂಕಿನಲ್ಲಿ ಇಂಥ 7-8 ಪ್ರಕರಣಗಳು ಬೆಳಕಿಗೆ ಬಂದಿವೆ. ಗೃಹಲಕ್ಷ್ಮಿನೋಂದಣಿ ಮಾಡಿಸುವಾಗ ಕೆಲವರು ರೇಷನ್ ಕಾರ್ಡ್‌ನಲ್ಲಿ ಪೋತಿಯಾಗಿದ್ದವರ ಹೆಸರುಗಳನ್ನು ಡಿಲೀಟ್ ಮಾಡಿಸಿಲ್ಲ. ಹೀಗಾಗಿ ಸಮಸ್ಯೆಗಳಾಗಿವೆ. ಮೃತರ ಕುಟುಂಬಸ್ಥರು ರೇಷನ್ ಕಾರ್ಡ್‌ನಲ್ಲಿರುವ ಕುಟುಂಬದ ಯಜಮಾನಿ ಹೆಸರು ಡಿಲೀಟ್ ಮಾಡಿಸಿಕೊಂಡು ಅಗತ್ಯ ದಾಖಲಾತಿಗಳನ್ನು ತಂದರೆ ಹೊಸ ಅರ್ಜಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸಲಾಗುವುದು.
    ಪ್ರದೀಪ ನಾಡಿಗೇರ
    ಪ್ರಭಾರಿ ಸಿಡಿಪಿಒ ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts