More

    ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೂ ರೋಹಿತ್ ಅಲಭ್ಯ, ಕನ್ನಡಿಗ ಕೆಎಲ್ ರಾಹುಲ್ ನಾಯಕ

    ಬೆಂಗಳೂರು: ಸೀಮಿತ ಓವರ್ ತಂಡದ ನಾಯಕ ರೋಹಿತ್ ಶರ್ಮ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿ ತಪ್ಪಿಸಿಕೊಂಡ ಬಳಿಕ ಏಕದಿನ ಸರಣಿಗೂ ಅಲಭ್ಯರಾಗಿದ್ದಾರೆ. ಇದರಿಂದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಹಂಗಾಮಿ ನಾಯಕರನ್ನಾಗಿ ನೇಮಿಸಲಾಗಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಹಂಗಾಮಿ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.

    18 ಆಟಗಾರರ ತಂಡದಲ್ಲಿ ಸೀಮಿತ ಓವರ್ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಪುತ್ರಿಯ ಜನ್ಮದಿನ ಹಿನ್ನೆಲೆಯಲ್ಲಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದ್ದರೂ, ಪ್ರವಾಸಕ್ಕೆ ತೆರಳುವ ಮೊದಲೇ ಅವರು ಏಕದಿನದಲ್ಲೂ ಆಡುವುದಾಗಿ ಸ್ಪಷ್ಟಪಡಿಸಿದ್ದರು. ಏಕದಿನ ಸರಣಿಯ 3 ಪಂದ್ಯಗಳು ಜನವರಿ 19, 21 (ಪಾರ್ಲ್) ಮತ್ತು 23ರಂದು (ಕೇಪ್‌ಟೌನ್) ನಡೆಯಲಿವೆ.

    ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ರೋಹಿತ್ ಶರ್ಮ ಮಂಡಿರಜ್ಜು ಗಾಯದಿಂದ ಇನ್ನೂ ಪೂರ್ಣ ಫಿಟ್ ಆಗಿಲ್ಲ. ಯಾವುದೇ ಅಪಾಯ ತೆಗೆದುಕೊಳ್ಳಲು ನಾವು ಬಯಸಲಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ತಿಳಿಸಿದ್ದಾರೆ. ಅವರೊಂದಿಗೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡ ಫಿಟ್ನೆಸ್ ಸಮಸ್ಯೆಯಿಂದಾಗಿ ಸರಣಿಗೆ ಅಲಭ್ಯರಾಗಿದ್ದಾರೆ. ವೇಗಿ ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

    ಅಶ್ವಿನ್, ವಾಷಿಂಗ್ಟನ್ ವಾಪಸ್
    ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಟಿ20 ಬಳಿಕ ಏಕದಿನ ತಂಡಕ್ಕೂ 4 ವರ್ಷಗಳ ಬಳಿಕ ಪುನರಾಗಮನ ಕಂಡಿದ್ದಾರೆ. ಟಿ20 ವಿಶ್ವಕಪ್ ಮತ್ತು ಕಿವೀಸ್ ವಿರುದ್ಧ ತವರಿನ ಟಿ20 ಸರಣಿಯಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದ ಅಶ್ವಿನ್ ಏಕದಿನದಲ್ಲೂ ಅವಕಾಶ ಪಡೆದಿದ್ದಾರೆ. ಗಾಯದಿಂದ ಗುಣಮುಖರಾಗಿ ಮರಳಿರುವ ವಾಷಿಂಗ್ಟನ್ ಸುಂದರ್ ಮತ್ತು ಯಜುವೇಂದ್ರ ಚಾಹಲ್ ತಂಡದಲ್ಲಿರುವ ಮತ್ತಿಬ್ಬರು ಸ್ಪಿನ್ನರ್‌ಗಳು.

    ಧವನ್‌ಗೆ ಮತ್ತೆ ಅವಕಾಶ
    ರೋಹಿತ್ ಶರ್ಮ ಗೈರಿನಲ್ಲಿ ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಆರಂಭಿಕನ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 36 ವರ್ಷದ ಧವನ್‌ಗೆ ಇದು ವೃತ್ತಿಜೀವನಕ್ಕೆ ಮರುಹುಟ್ಟು ನೀಡಲು ಇದು ಕೊನೇ ಅವಕಾಶವೆನಿಸಿದೆ.

    ಋತುರಾಜ್, ವೆಂಕಟೇಶ್ ಹೊಸಮುಖ
    ಐಪಿಎಲ್‌ನಲ್ಲಿ ಮಿಂಚಿದ ಆಟಗಾರರಾದ ಆರಂಭಿಕ ಋತುರಾಜ್ ಗಾಯಕ್ವಾಡ್ ಮತ್ತು ಆಲ್ರೌಂಡರ್ ವೆಂಕಟೇಶ್ ಅಯ್ಯರ್ ನಿರೀಕ್ಷೆಯಂತೆಯೇ ಏಕದಿನ ತಂಡದಲ್ಲಿ ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

    ಏಕದಿನ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್.

    ಭಾರತ ಕಿರಿಯರ ತಂಡಕ್ಕೆ ಏಷ್ಯಾಕಪ್ ಕಿರೀಟ, ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts