More

    ಹೊಂಡಗುಂಡಿ ಕಲ್ಯಾ – ನೆಲ್ಲಿಗುಡ್ಡೆ ರಸ್ತೆ

    ವಿಜಯವಾಣಿ ಸುದ್ದಿಜಾಲ ಬೆಳ್ಮಣ್

    ಕಲ್ಯಾ-ನೆಲ್ಲಿಗುಡ್ಡೆ ರಸ್ತೆಯ ಜಲ್ಲಿ, ಟಾರು ಎದ್ದು ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ನಿತ್ಯ ವಾಹನ ಸವಾರರು ಎದ್ದುಬಿದ್ದು ಸಂಚರಿಸುವ ಪರಿಸ್ಥಿತಿ ಇದೆ.

    ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಪರಿಸರದಲ್ಲಿ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾವಾಗಿದ್ದು, ಅವುಗಳಲ್ಲಿ ಮಳೆಯ ನೀರು ಶೇಖರಣೆಗೊಂಡು ರಸ್ತೆಯು ಕೆರೆಯಂತಾಗಿ ಮಾರ್ಪಟ್ಟಿದೆ. ನಿತ್ಯ ವಾಹನ ಸಂಚಾರ ನಡೆಸುವ ಸವಾರರು ಸಂಕಷ್ಟ ಪಡುವಂತಾಗಿದೆ.

    ಪ್ರಮುಖ ಸಂಪರ್ಕ ರಸ್ತೆ: ಒಂದೆಡೆ ನಂದಳಿಕೆ ಗ್ರಾಮವನ್ನು ಕೂಡುವ ರಸ್ತೆಯಾದರೆ ಮತ್ತೊಂದೆಡೆ ಕಲ್ಯಾ ಗ್ರಾಮದ ರಸ್ತೆಯಾಗಿದ್ದು ಹಾಗೂ ಪಳ್ಳಿ, ಕುಂಟಾಡಿ ಪರಿಸರವನ್ನು ಸಂಪರ್ಕಿಸಲು ಹತ್ತಿರದ ರಸ್ತೆ ಇದಾಗಿದೆ. ಅಲ್ಲಲ್ಲಿ ಹೊಂಡಗುಂಡಿಗಳ ನಿರ್ಮಾಣದಿಂದ ವಾಹನ ಸಂಚಾರವೇ ಅಸಾಧ್ಯವಾಗಿದೆ. ಈ ಭಾಗದಲ್ಲಿ ಅನೇಕ ಕಲ್ಲು ಕೋರೆ ಕ್ರಶರ್ ಇರುವುದರಿಂದ ಘನ ವಾಹನಗಳು ಹೆಚ್ಚಾಗಿ ಸಂಚಾರ ನಡೆಸುತ್ತಿರುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಸಣ್ಣ ಪುಟ್ಟ ವಾಹನ ಸವಾರರಂತೂ ನಿತ್ಯ ಅಪಘಾತ ಮಾಡಿಕೊಳ್ಳುವಂತಾಗಿದೆ. ಮಳೆಯ ನೀರು ರಸ್ತೆಯುದ್ದಕ್ಕೂ ಹರಡಿಕೊಂಡು ಹೊಂಡದ ಗೋಚರವಿಲ್ಲದೆ ಸಾಕಷ್ಟು ಸವಾರರು ನಿತ್ಯ ಬಿದ್ದು ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೂರು ಗ್ರಾಮಗಳಿಗೆ ಸಂಪರ್ಕ: ನಂದಳಿಕೆ, ಕಲ್ಯಾ, ಹಾಗೂ ಪಳ್ಳಿ ಹೀಗೆ ಮೂರು ಗ್ರಾಮಗಳಿಗೆ ಒಂದಕ್ಕೊಂದು ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ಪ್ರಮುಖ ರಸ್ತೆ ಇದು. ನೂರಾರು ವಾಹನಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತವೆ. ಪಳ್ಳಿ, ನಂದಳಿಕೆ, ಕಲ್ಯಾ ಹೀಗೆ ಗ್ರಾಮವನ್ನು ಸಂಪರ್ಕಿಸುವ ಕೂಡು ರಸ್ತೆಯ ಬಳಿಯಲ್ಲೇ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಕಳೆದ ಹಲವು ತಿಂಗಳುಗಳಿಂದ ಇದೇ ರೀತಿಯಾದ ಪರಿಸ್ಥಿತಿಯು ನಿರ್ಮಾಣವಾಗಿದ್ದೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಹೊಂಡಕ್ಕೆ ತೇಪೆ ಹಾಕಲು ಕೂಡ ಮನಸ್ಸು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಕ್ರೀಟ್ ಮಾರ್ಗ ನಿರ್ಮಾಣವಾಗಲಿ: ಈ ಭಾಗದಲ್ಲಿ 10ಕ್ಕೂ ಅಧಿಕ ಕಲ್ಲು ಕೋರೆ, 10ಕ್ಕೂ ಅಧಿಕ ಕ್ರಷರ್‌ಗಳಿದ್ದು ಇಲ್ಲಿಂದ ನಿತ್ಯ ಟನ್‌ಗಟ್ಟಲೆ ಲೋಡು ತುಂಬಿದ ಲಾರಿ, ಟಿಪ್ಪರ್‌ಗಳು ಇದೇ ಮಾರ್ಗವಾಗಿ ಕಾರ್ಕಳ, ಮಣಿಪಾಲ, ಉಡುಪಿ ಹಾಗೂ ಹೆಬ್ರಿ ಭಾಗಕ್ಕೆ ಹೋಗುತ್ತಿವೆ. ಹೀಗಾಗಿ ಈ ರಸ್ತೆಗೆ ಡಾಂಬರು ಬೇಡ ನಮಗೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಟಿಪ್ಪರ್‌ಗಳಿಂದ ಸಮಸ್ಯೆ: ನಿತ್ಯ ನೂರಾರು ಟಿಪ್ಪರ್‌ಗಳು ಜಲ್ಲಿ ಕಲ್ಲು ಹೇರಿಕೊಂಡು ಸಂಚರಿಸುವುದರಿಂದ ಈ ರಸ್ತೆ ಮಾತ್ರವಲ್ಲದೆ ಕಲ್ಯಾ ಪರಿಸರದ ಎಲ್ಲ ರಸ್ತೆಗಳು ಹದಗೆಡುತ್ತಿವೆ. ಪ್ರತಿವರ್ಷ ತೇಪೆ, ಡಾಂಬರು ಎಂದು ದುರಸ್ತಿ ಕೆಲಸ ನಡೆಸಿದರೂ ಯಮ ಭಾರದ ಟಿಪ್ಪರ್‌ಗಳಿಂದಾಗಿ ಕೆಲವೇ ತಿಂಗಳಲ್ಲಿ ರಸ್ತೆಗಳು ಹದಗೆಡುತ್ತವೆ. ಟಿಪ್ಪರ್‌ಗಳ ಭಾರವನ್ನು ತಾಳಿಕೊಳ್ಳೂವಷ್ಟು ಧಾರಣ ಸಾಮರ್ಥ್ಯದ ರಸ್ತೆ ನಿರ್ಮಿಸಿದರೆ ಮಾತ್ರ ಔ ಭಾಗದ ಸಮಸ್ಯೆ ಬಗೆಹರಿಯುತ್ತದೆ. ಆದರೆ ಪಂಚಾಯಿತಿ ರಸ್ತೆಗಳಾಗಿರುವುದರಿಂದ ಇಂಥ ಉತ್ತಮ ರಸ್ತೆ ನಿರ್ಮಿಸಲು ಶಾಧ್ಯವಿಲ್ಲ ಎನ್ನುವುದು ಅಧಿಕಾರಿಗಳ ಮಾತು.

    ನೆಲ್ಲಿಗುಡ್ಡೆಯ ರಸ್ತೆಯಲ್ಲಿ ಸಂಚರಿಸುವುದೆಂದರೆ ಅದೊಂದು ಸಾಹಸವೇ. ಪ್ರತಿ ನಿತ್ಯ ಸಣ್ಣ ಪುಟ್ಟ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯ ಹೊಂಡ ಮುಚ್ಚುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
    – ದೀಪಕ್, ಗ್ರಾಮಸ್ಥ

    ರಸ್ತೆಯುದ್ದಕ್ಕೂ ಜಿಲ್ಲಿ ಕಲ್ಲು ಎದ್ದು ರಸ್ತೆಯೇ ಕೆರೆಯಂತಾಗಿದೆ. ಹಲವು ಸಮಯದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿಯ ವರೆಗೂ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
    -ರಮೇಶ್, ಸ್ಥಳೀಯರು

    ನೆಲ್ಲಿಗುಡ್ಡೆಯ ರಸ್ತೆ ನಮ್ಮ ಮೂರು ಗ್ರಾಮಕ್ಕೆ ಪ್ರಮುಖ ಕೊಂಡಿ ರಸ್ತೆಯಾಗಿದೆ. ಇಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಕೂಡಲೇ ಸರಿಪಡಿಸುವ ಅಗತ್ಯವಿದೆ.
    -ನಿತ್ಯಾನಂದ ಅಮೀನ್, ನಂದಳಿಕೆ ಗ್ರಾಪಂ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts