More

    ರಕ್ಷಣಾ ಅವಲೋಕನ: ಏಷ್ಯಾದಲ್ಲಿ ಹೆಚ್ಚುತ್ತಿರುವ ತಳಮಳಗಳೇ ಜಪಾನಿನ ಸೇನಾ ವಿಸ್ತರಣೆಗೆ ಹಾದಿ

    ರಕ್ಷಣಾ ಅವಲೋಕನ: ಏಷ್ಯಾದಲ್ಲಿ ಹೆಚ್ಚುತ್ತಿರುವ ತಳಮಳಗಳೇ ಜಪಾನಿನ ಸೇನಾ ವಿಸ್ತರಣೆಗೆ ಹಾದಿ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಹಲವು ಮೂಲಗಳ ಪ್ರಕಾರ, ಜಪಾನ್ ಮುಂದಿನ ಐದು ವರ್ಷಗಳ ಅವಧಿಯಲ್ಲಿ ರಕ್ಷಣಾ ವಲಯದಲ್ಲಿ 40ರಿಂದ 43 ಟ್ರಿಲಿಯನ್ ಯೆನ್ ಅಂದರೆ, 318 ಬಿಲಿಯನ್ ಡಾಲರ್ ಮೊತ್ತವನ್ನು ವೆಚ್ಚ ಮಾಡಲು ನಿರ್ಧರಿಸಿದೆ. ಈ ಯೋಜನೆ ಜಾರಿಗೆ ಬಂದ ಬಳಿಕ ಜಪಾನ್ ಜಾಗತಿಕವಾಗಿ ಮಿಲಿಟರಿ ವಲಯದಲ್ಲಿ ಅಮೆರಿಕ ಮತ್ತು ಚೀನಾದ ಬಳಿಕ ಮೂರನೇ ಅತಿಹೆಚ್ಚು ಖರ್ಚು ಮಾಡುವ ರಾಷ್ಟ್ರ ಎನಿಸಿಕೊಳ್ಳಲಿದೆ. ಈ ಹೂಡಿಕೆ ಸರ್ಕಾರದ ಮಿಡ್ ಟರ್ಮ್ ಡಿಫೆನ್ಸ್ ಪ್ರೋಗ್ರಾಮ್ ಭಾಗವಾಗಿದೆ.

    ಈ ರಕ್ಷಣಾ ಬಜೆಟ್‌ನ ಹಣವನ್ನು ಪ್ರಾಥಮಿಕವಾಗಿ ನೂತನ ಉಪಕರಣಗಳು, ಚೀನಾ ಮತ್ತು ತೈವಾನ್ ಬಳಿಯ ನೈಋತ್ಯ ದ್ವೀಪಗಳ ಬಳಿಗೆ ಸೈನಿಕರನ್ನು ನಿಯೋಜಿಸಲು ಮತ್ತು ಕ್ಷಿಪಣಿ ರಕ್ಷಣೆಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದರೊಡನೆ, ಜಪಾನ್ ನೌಕಾಪಡೆಯ ಹಡಗುಗಳಿಗೆ ಹಣ ಹೂಡಿಕೆ ಮಾಡಿ, ಅವುಗಳನ್ನು ನೆಲ ಆಧಾರಿತ ಇಂಟರ್‌ಸೆಪ್ಟರ್ ಕ್ಷಿಪಣಿ ವ್ಯವಸ್ಥೆಗಳ ಬದಲಿಗೆ ಉಪಯೋಗಿಸಲಿದೆ. 2035ರಲ್ಲಿ ಕಾರ್ಯಾಚರಣೆಗೆ ಲಭ್ಯವಾಗುವಂತಹ ಮುಂದಿನ ತಲೆಮಾರಿನ ಯುದ್ಧ ವಿಮಾನಗಳ ನಿರ್ಮಾಣದಲ್ಲೂ ಹೂಡಿಕೆ ಮಾಡಲಿದೆ. ಜಪಾನ್ ಬಾಹ್ಯಾಕಾಶದಿಂದ ಕ್ಷಿಪಣಿ ಉಡಾವಣೆಗಳನ್ನು ಗುರುತಿಸಬಲ್ಲ ಉಪಗ್ರಹಗಳ ಮೇಲೆ ಮತ್ತು ಸೈಬರ್ ದಾಳಿಗಳನ್ನು ತಡೆಗಟ್ಟಬಲ್ಲ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಹಣ ಹೂಡಿಕೆ ಮಾಡಲಿದೆ.

    ವಿನಾಶದಿಂದ ಪ್ರಜಾಪ್ರಭುತ್ವದ ಕಡೆಗೆ: ಸ್ವಾತಂತ್ರ್ಯದ ಹಾದಿಯಲ್ಲಿ ಜಪಾನ್

    ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ 1945ರಲ್ಲಿ ನಡೆದ ಅಣುಬಾಂಬ್ ದಾಳಿ ಜಪಾನಿನ ನಗರಗಳು ನಾಶವಾಗುವಂತೆ ಮಾಡಿದವು. ಅದರ ಪರಿಣಾಮವಾಗಿ ಜಪಾನ್ ಅಮೆರಿಕಾ ಮತ್ತು ಮಿತ್ರಪಡೆಗಳಿಗೆ ಶರಣಾಗಿತ್ತು. ಅದರ ತರುವಾಯ ಜಪಾನ್ 1945ರಿಂದ 1952ರ ತನಕ ಮಿತ್ರಪಡೆಯ ಅಧೀನದಲ್ಲಿತ್ತು. ಅದರ ನೇತೃತ್ವವನ್ನು ಮಿತ್ರಪಡೆಗಳ ಸುಪ್ರೀಂ ಕಮಾಂಡರ್ ಆಗಿದ್ದ ಜನರಲ್ ಡಗ್ಲಾಸ್ ಮ್ಯಾಕ್ ಆರ್ಥರ್ ವಹಿಸಿದ್ದರು. ಆ ಅವಧಿಯಲ್ಲಿ ಜಪಾನಿನಲ್ಲಿ “ಶಾ ಡೈರೆಕ್ಟಿವ್” ಅಥವಾ ಜಪಾನಿಗೆ ಶರಣಾಗತಿಯ ಬಳಿಕದ ನೀತಿ ಎಂದು ಕರೆಯಲಾದ ನೀತಿಯನ್ನು ಜಾರಿಗೆ ತರಲಾಯಿತು. ಈ ನೀತಿ ಜಪಾನಿನ ನಿಶ್ಶಸ್ತ್ರೀಕರಣ, ಹಾಗೂ ಪ್ರಜಾಪ್ರಭುತ್ವ ಸ್ಥಾಪನೆಯನ್ನೂ ಒಳಗೊಂಡಿತ್ತು. ಅದರೊಡನೆ ಜಪಾನಿನಲ್ಲಿ ನೂತನ ಸರ್ಕಾರ ಮತ್ತು ಪಾಶ್ಚಾತ್ಯ ನೀತಿಗಳಿಗೆ ಹೊಂದಿಕೊಳ್ಳುವಂತಹ ಆರ್ಥಿಕತೆಯನ್ನು ತರುವ ಉದ್ದೇಶವನ್ನು ಈ ನೀತಿ ಹೊಂದಿತ್ತು. ಆ ಮೂಲಕ ಮುಂದಿನ ದಿನಗಳಲ್ಲಿ ಜಪಾನನ್ನು ಕಡಿಮೆ ಆಕ್ರಮಣಕಾರಿಯಾಗಿಸುವ ಉದ್ದೇಶವಿತ್ತು. ಅಮೆರಿಕ ಜಪಾನನ್ನು ಅಲ್ಲಿದ್ದ ಜಪಾನಿ ಸರ್ಕಾರದ ಮೂಲಕವೇ ಆಳುವುದನ್ನು ಆಯ್ಕೆ ಮಾಡಿಕೊಂಡಿತ್ತು. ಅದು ಜಪಾನಿನ ರಾಜಕೀಯವನ್ನು ಪ್ರಜಾಪ್ರಭುತ್ವವಾದಿಯಾಗಿಸಲು ಒಂದು ನೂತನ ಪ್ರಜಾಪ್ರಭುತ್ವ ಆಧಾರಿತ ಸಂವಿಧಾನವನ್ನು ರಚಿಸಲು ಸೂಚಿಸಿತು.

    ಶೀತಲ ಸಮರದ ಅವಧಿಯಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ಮಧ್ಯ ಬಿಕ್ಕಟ್ಟು ಹೆಚ್ಚಾಗತೊಡಗಿತು. ಆಗ ಅಮೆರಿಕಾ ಜಪಾನಿನ ಮೇಲಿನ ಹಸ್ತಕ್ಷೇಪದ ತನ್ನ ನೀತಿಯನ್ನು ಮಾರ್ಪಡಿಸಿತು. 1948ರಲ್ಲಿ ಅಮೆರಿಕಾದ ಸೇನಾ ಕಾರ್ಯದರ್ಶಿ ಕೆನ್ನೆತ್ ರಾಯಲ್ ಜಪಾನ್ ಒಂದು ಸ್ವಾವಲಂಬಿ ಪ್ರಜಾಪ್ರಭುತ್ವ ರಾಷ್ಟ್ರವಾಗಬೇಕು ಮತ್ತು ಪೂರ್ವದಲ್ಲಿ ನಿರಂಕುಶವಾದಿ ಸಾಧ್ಯತೆಗಳ ವಿರುದ್ಧವಾಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ಜಪಾನಿಗೆ ಮರಳಿ ಒಂದು ಸ್ವತಂತ್ರ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಸಮುದಾಯದೊಡನೆ ಬೆರೆಯುವ ಅವಕಾಶವನ್ನು ಅಮೆರಿಕಾ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸೆಪ್ಟೆಂಬರ್ 1951ರಲ್ಲಿ ಆಯೋಜಿಸಿದ್ದ ಶಾಂತಿ ಸಮಾವೇಶದಲ್ಲಿ ನೀಡಲಾಯಿತು. ಸ್ವಾತಂತ್ರ್ಯ ಪಡೆದುಕೊಂಡ ಬಳಿಕ, ಜಪಾನ್ ಮತ್ತೆ ತನ್ನನ್ನು ತಾನು ಕಾಪಾಡಿಕೊಳ್ಳಲು ಒಂದು ರಕ್ಷಣಾ ನೀತಿಯನ್ನು ನಿರ್ಮಿಸತೊಡಗಿತು. ಅದಕ್ಕಾಗಿ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿತು.

    ಮಿಲಿಟರಿ ಆಧುನೀಕರಣ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣಾ ಹೆಚ್ಚಳ

    ಶೀತಲ ಸಮರ ಅಂತ್ಯಗೊಂಡ ಬಳಿಕ, ಜಪಾನಿನ ರಕ್ಷಣಾ ನೀತಿ ಸಾಕಷ್ಟು ಅಭಿವೃದ್ಧಿ ಕಂಡಿತು. ಜಪಾನ್ ಐತಿಹಾಸಿಕವಾಗಿ ಶಾಂತಿಪ್ರಿಯ ರಾಷ್ಟ್ರವಾದರೂ, ಅದರ ಸಂವಿಧಾನ ಅಂತಾರಾಷ್ಟ್ರೀಯ ಸಮಸ್ಯೆಗಳ ಪರಿಹಾರಕ್ಕಾಗಿ ಮಿಲಿಟರಿ ಬಲದ ಬಳಕೆಯನ್ನು ವಿರೋಧಿಸುತ್ತದಾದರೂ, ಜಪಾನ್ ಇತ್ತೀಚೆಗೆ ಪ್ರಾಂತೀಯ ಮತ್ತು ಜಾಗತಿಕ ಸುರಕ್ಷತೆಯ ವಿಚಾರದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಲು ಆರಂಭಿಸಿದೆ. ಜಪಾನಿನ ಈ ಬದಲಾವಣೆಗೆ ಇಂಡೊ ಪೆಸಿಫಿಕ್ ಪ್ರದೇಶದಲ್ಲಿ ಬದಲಾದ ರಕ್ಷಣಾ ಪರಿಸ್ಥಿತಿಯೂ ಕಾರಣವಾಗಿದೆ.

    ಜಪಾನ್ ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದ್ದರ ಹಿಂದೆ ಅದು ಚೀನಾ ಮತ್ತು ಉತ್ತರ ಕೊರಿಯಾದಿಂದ ಎದುರಾಗಬಹುದಾದ ರಕ್ಷಣಾ ಅಪಾಯಗಳ ಆತಂಕವೂ ಕಾರಣವಾಗಿತ್ತು. ಉಕ್ರೇನ್ ಯುದ್ಧದ ಬಳಿಕ ಈ ಭಯ ಹೆಚ್ಚಾಗಿದ್ದು, ಚೀನಾ ಇದೇ ರೀತಿಯಲ್ಲಿ ತೈವಾನ್ ಮೇಲೆ ಅತಿಕ್ರಮಣ ನಡೆಸಿದರೆ, ಆಗ ಜಪಾನಿನ ರಕ್ಷಣೆಗೂ ಅಪಾಯ ಎದುರಾಗಬಲ್ಲದು. 1998ರಲ್ಲಿ ಉತ್ತರ ಕೊರಿಯಾ ಜಪಾನ್ ಮೇಲೆ ಕ್ಷಿಪಣಿ ಹಾರಿಸಿತ್ತು. ಇದರ ಪರಿಣಾಮವಾಗಿ ಟೋಕಿಯೋ ರಕ್ಷಣಾ ಉದ್ದೇಶಗಳಿಗಾಗಿ ಮಿಲಿಟರಿ ಉಪಗ್ರಹಗಳನ್ನು ಪಡೆದುಕೊಂಡಿತು. ಚೀನಾ ಮತ್ತು ಉತ್ತರ ಕೊರಿಯಾಗಳು ತಮ್ಮ ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾರಣ, ಜಪಾನ್ ಕೇವಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುವ ಬದಲು ಪ್ರತಿ ದಾಳಿ ನಡೆಸುವ ಸಾಮರ್ಥ್ಯವನ್ನು ಗಳಿಸುವ ಕಡೆ ಗಮನ ಹರಿಸುತ್ತಿದೆ. ಒಂದು ವೇಳೆ ಕೊರಿಯಾ ಅಥವಾ ತೈವಾನ್‌ನಲ್ಲಿ ಕದನ ಆರಂಭವಾದರೆ, ಜಪಾನ್‌ನಲ್ಲಿ ಅಮೆರಿಕಾದ ಸೇನಾ ನೆಲೆಗಳ ಮೇಲೆ ಶತ್ರುಗಳು ದಾಳಿ ನಡೆಯುವ ಅಪಾಯಗಳು ಹೆಚ್ಚಿವೆ. ಇತ್ತೀಚೆಗೆ ಚೀನಾ ಮತ್ತು ಉತ್ತರ ಕೊರಿಯಾಗಳು ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದರಿಂದ, ಪ್ರಧಾನಿ ಫುಮಿಯೋ ಕಿಶಿಡಾ ಸೇರಿದಂತೆ ಜಪಾನ್ ನಾಯಕರು ಜಪಾನಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಪ್ರಯೋಜನಕಾರಿಯಾಗದು ಎಂದು ಯೋಚಿಸುತ್ತಿದ್ದಾರೆ. ಇದರಿಂದಾಗಿ ಜಪಾನ್ ಪ್ರತಿದಾಳಿ ಸಾಮರ್ಥ್ಯ ವೃದ್ಧಿಸಿಕೊಳ್ಳುವ ಕುರಿತು ಚಿಂತಿಸುತ್ತಿದೆ. ಜಪಾನ್ ಪ್ರಸ್ತುತ ಅಮೆರಿಕಾ ಮತ್ತು ಆಸ್ಟ್ರೇಲಿಯಾದಂತಹ ರಾಷ್ಟ್ರಗಳೊಡನೆ ರಕ್ಷಣಾ ಸಹಯೋಗ ಹೊಂದಿ, ಈ ಪ್ರದೇಶದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡುವ ಕುರಿತು ಯೋಚಿಸುತ್ತಿದೆ.

    ಜಪಾನ್ ತಾನು ಎದುರು ನೋಡುತ್ತಿರುವ ರಕ್ಷಣಾ ಅಪಾಯಗಳನ್ನು ಎದುರಿಸಲು ಸತತವಾಗಿ ತನ್ನ ರಕ್ಷಣಾ ಬಜೆಟನ್ನು ಹೆಚ್ಚಿಸುತ್ತಾ, ಮಿಲಿಟರಿ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವತ್ತ ಪ್ರಯತ್ನ ಪಡುತ್ತಿದೆ. ಜಪಾನ್ ತನ್ನ ಮಿಲಿಟರಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ವಿದೇಶಗಳಲ್ಲೂ ಜಪಾನಿ ಸೇನಾಪಡೆಗಳನ್ನು ನಿಯೋಜಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಇದು ಒಳಗೊಂಡಿದೆ. ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ, ಜಪಾನ್ ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳೊಡನೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳ ಮೂಲಕ ರಕ್ಷಣಾ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ, ಜಪಾನ್ – ಅಮೆರಿಕಾ ರಕ್ಷಣಾ ಒಪ್ಪಂದ. ಈ ಒಪ್ಪಂದದ ಪ್ರಕಾರ, ಜಪಾನಿನ ರಕ್ಷಣೆಗಾಗಿ ಅಮೆರಿಕ ಜಪಾನಿನಲ್ಲಿ ತನ್ನ ಸೈನಿಕರನ್ನು ನಿಯೋಜಿಸಬಹುದಾಗಿದೆ. ಅಂತಿಮವಾಗಿ, ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜಾಗತಿಕ ಸುರಕ್ಷತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಜಪಾನಿಗೆ ಹಲವು ಕಾರಣಗಳಿವೆ. ಅವುಗಳಲ್ಲಿ ತನ್ನ ಪ್ರಾಂತ್ಯದಲ್ಲಿ ಬದಲಾಗುತ್ತಿರುವ ಸುರಕ್ಷತಾ ಸ್ಥಿತಿಗತಿ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಅಗತ್ಯತೆ, ಹಾಗೂ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವ ಉದ್ದೇಶಗಳೂ ಸೇರಿವೆ.

    ಜಪಾನ್ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿರುವ ಕಾರಣದಿಂದ, ಜಪಾನ್ ಬಳಿ ಈಗ ತಾಂತ್ರಿಕವಾಗಿ ಅತ್ಯಾಧುನಿಕವಾದ ಸೇನಾಪಡೆಯಿದೆ. ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಪ್ರಕಾರ, ಜಪಾನಿನ ರಕ್ಷಣಾ ಬಜೆಟ್ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ. ಜಪಾನಿನ ಸೇನೆ ಆಧುನಿಕವಾಗಿದ್ದು, ಉನ್ನತ ತರಬೇತಿ ಹೊಂದಿರುವ ಪಡೆಯಾಗಿದೆ. ಜಪಾನಿನ ಬಳಿ ಬೆಳೆಯುತ್ತಿರುವ ನೌಕಾಪಡೆ ಮತ್ತು ವಾಯುಪಡೆಯೂ ಇದೆ.

    ನೆರೆಹೊರೆಯ ಕಾಳಜಿ, ಜಪಾನೀಯರ ದ್ವಂದ್ವ: ಜಪಾನಿನ ರಕ್ಷಣಾ ಬಜೆಟಿನ ವಿವಾದಾತ್ಮಕ ಹೆಚ್ಚಳ

    ಜಪಾನಿನ ಕೆಲ ನೆರೆಹೊರೆಯ ರಾಷ್ಟ್ರಗಳು ಜಪಾನ್ ಐತಿಹಾಸಿಕವಾಗಿ ಶಾಂತಿಪ್ರಿಯ ರಾಷ್ಟ್ರ ಮತ್ತು ತನ್ನ ರಕ್ಷಣೆಗಾಗಿ ಅಮೆರಿಕಾದ ಮೇಲೆ ಅವಲಂಬಿತವಾಗಿದ್ದ ರಾಷ್ಟ್ರವಾಗಿರುವುದರಿಂದ, ಈಗ ಹೀಗೆ ರಕ್ಷಣಾ ಬಜೆಟ್ ಹೆಚ್ಚಿಸುವುದು ವಿವಾದಾತ್ಮಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜಪಾನ್ ರಕ್ಷಣೆಗಾಗಿ ಅಪಾರವಾದ ಖರ್ಚು ಮಾಡುವುದು ಜಪಾನಿಗೂ ಆರ್ಥಕ ನಷ್ಟ ಮತ್ತು ನೆರೆಹೊರೆಯ ರಾಷ್ಟ್ರಗಳೊಡನೆ ಅಸಮಾಧಾನ ಮೂಡಲು ಕಾರಣವಾಗುವ ಸಾಧ್ಯತೆಗಳಿವೆ.

    ಸರ್ಕಾರದ ಹಣಕಾಸಿನ ಸುಸ್ಥಿರತೆಯ ಕುರಿತು ಕಾಳಜಿ ಹೊಂದಿರುವ ಜಪಾನೀಯರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. 51.7% ಪ್ರತಿಕ್ರಿಯಿಸಿದವರು ಜಪಾನ್ ತನ್ನ ಬಜೆಟನ್ನು ರಕ್ಷಣಾ ವೆಚ್ಚಕ್ಕೂ ಹಂಚಬೇಕು, ಕೇವಲ ಬಾಂಡ್‌ಗಳ ಹಂಚಿಕೆ ಮತ್ತು ಟ್ಯಾಕ್ಸ್ ಹೆಚ್ಚಳ ಮಾಡುವಂತಾಗಬಾರದು ಎಂದಿದ್ದರು. ಸರ್ಕಾರ ನೂತನ ತೆರಿಗೆ ಹಾಕುವಾಗ, ಇರುವ ತೆರಿಗೆ ನೀತಿಯನ್ನು ಬದಲಾಯಿಸುವಾಗ ವಿರೋಧ ಬರುವುದು ಸಹಜವೇ. ಆದರೆ ಬಹಳ ಸಮಯದಿಂದಲೂ ಜಪಾನಿನ ಸರ್ಕಾರಿ ಹಣಕಾಸು ಒಂದು ಕಾಳಜಿಯ ವಿಚಾರವೇ ಆಗಿದೆ. ಒಇಸಿಡಿ ದೇಶಗಳ ಪೈಕಿ ಜಪಾನ್ ಅತಿಹೆಚ್ಚು ಜಿಡಿಪಿ ಸಂಬಂಧಿತ ಸರ್ಕಾರಿ ಸಾಲ ಹೊಂದಿದೆ. ಸಾಲದೆಂಬಂತೆ ಕೋವಿಡ್-19 ಸಾಂಕ್ರಾಮಿಕ ಜಪಾನಿನ ಆರ್ಥಿಕ ಸವಾಲುಗಳಿಗೆ ಇನ್ನಷ್ಟು ತೊಂದರೆ ತಂದೊಡ್ಡಿತು. ಆರ್ಥಿಕ ಕುಸಿತ ಮತ್ತು ಕೋವಿಡ್ ಸಂಬಂಧಿತ ಖರ್ಚುಗಳ ಪರಿಣಾಮವಾಗಿ ಸರ್ಕಾರಿ ಬೊಕ್ಕಸದ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಯಾಯಿತು. ಜಪಾನ್ ಸರ್ಕಾರ ರಕ್ಷಣಾ ವೆಚ್ಚಕ್ಕೆ ಹಣ ಸಂಗ್ರಹಿಸಲು ಹೊಸ ತೆರಿಗೆಯನ್ನು ಪರಿಚಯಿಸಲು ಮುಂದಾಗಿದ್ದು ರಾಜಕೀಯ ಹಿನ್ನಡೆಗೆ ಕಾರಣವಾಗಿದೆ. ಹಲವರು ದೇಶದ ಸುರಕ್ಷತೆ ಮತ್ತು ರಕ್ಷಣಾ ಪಡೆಗಳ ಸಾಮರ್ಥ್ಯ ವೃದ್ಧಿಗಾಗಿ ಈ ತೆರಿಗೆ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರೆ, ಇನ್ನೂ ಹಲವರು ಈ ಹೆಚ್ಚಿನ ತೆರಿಗೆ ಈಗಾಗಲೇ ಆರ್ಥಿಕ ಸವಾಲು ಎದುರಿಸುತ್ತಿರುವ ಜನರಿಗೆ ಇನ್ನಷ್ಟು ಭಾರವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    10 ವರ್ಷದ ಸರ್ಕಾರಿ ಬಾಂಡ್‌ಗಳ ಮೇಲಿನ ಮಿತಿಯನ್ನು 0.25%ದಿಂದ 0.50%ಗೆ ಹೆಚ್ಚಿಸಲು ಬ್ಯಾಂಕ್ ಆಫ್ ಜಪಾನ್ ಮುಂದಾಗಿರುವುದು ಅದು ದೀರ್ಘಕಾಲದ ಬಡ್ಡಿ ದರಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುವುದನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಆದರೆ ಈ ನಿರ್ಧಾರ ದೀರ್ಘಕಾಲದ ಬಡ್ಡಿ ದರಗಳು ಕಡಿಮೆ ಇರಬೇಕು ಎನ್ನುವ ಬ್ಯಾಂಕಿನ ಯೀಲ್ಡ್ ಕರ್ವ್ ಕಂಟ್ರೋಲ್ (ವೈಸಿಸಿ) ನೀತಿಯ ಪರಿಣಾಮಕಾರಿತ್ವದ ಬಗ್ಗೆ ಅನುಮಾನ ಮೂಡಿಸುತ್ತದೆ. ಆದ್ದರಿಂದ ಒಂದಷ್ಟು ಜನ ಬ್ಯಾಂಕ್ ಆಫ್ ಜಪಾನ್ ವಿರುದ್ಧ ಕ್ರಮ ಕೈಗೊಳ್ಳಲು ಬಾಂಡ್‌ಗಳನ್ನು‌ ಮಾರಾಟ ಮಾಡಿ, ಸೆಂಟ್ರಲ್ ಬ್ಯಾಂಕ್ ತನ್ನ ಬಾಂಡ್ ಖರೀದಿಯನ್ನು ಕಡಿಮೆ ಮಾಡುವುದು ಅಥವಾ ನಿಲ್ಲಿಸುವುದು ಮಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಿರಲೂ ಬಹುದು.

    ಜಪಾನ್ ಈಗ ತನ್ನ ಮಿಲಿಟರಿಯ ಆಧುನೀಕರಣ ಮತ್ತು ರಕ್ಷಣಾ ಸಾಮರ್ಥ್ಯದ ಹೆಚ್ಚಳಕ್ಕಾಗಿ ಪ್ರಯತ್ನ ನಡೆಸುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಸಮುದಾಯ ಹೇಗೆ ಸ್ವೀಕರಿಸುತ್ತದೆ, ಜಪಾನಿನ ನೆರೆಯ ರಾಷ್ಟ್ರಗಳ ಜೊತೆಗಿನ ಸಂಬಂಧಕ್ಕೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts