More

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!

    ಬೆಂಗಳೂರು: ನಾಳೆಯಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಆದರೆ ಅದಕ್ಕೂ ಒಂದು ದಿನ ಮೊದಲೇ ನಟ-ನಿರ್ದೇಶಕ-ನಿರ್ಮಾಪಕ ರಿಷಬ್​ ಶೆಟ್ಟಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

    ಹೌದು.. ರಿಷಬ್​ ಹೀಗೆ ಬೇಸರಗೊಳ್ಳಲು ಕಾರಣ ಈ ಸಲದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ನಿರ್ಮಾಣದ ‘ಪೆದ್ರೊ’ ಆಯ್ಕೆ ಆಗದಿರುವುದು. ಆ ಬಗ್ಗೆ ಅವರು ತಮ್ಮ ಬೇಸರವನ್ನು ಅಧಿಕೃತವಾಗಿ ಲಿಖಿತ ರೂಪದಲ್ಲೇ ಹಂಚಿಕೊಂಡಿದ್ದಾರೆ. ರಿಷಬ್​ ಶೆಟ್ಟಿ ಫಿಲ್ಮ್ಸ್​ ಎಂಬ ತಮ್ಮ ನಿರ್ಮಾಣ ಸಂಸ್ಥೆಯ ಅಧಿಕೃತ ಲೆಟರ್ ಹೆಡ್ ಮೂಲಕ ತಮ್ಮ ಅನಿಸಿಕೆಯನ್ನು ಅವರು ಹೇಳಿಕೊಂಡಿದ್ದಾರೆ.

    ‘ನಮ್ಮ ನಿರ್ಮಾಣದ ಪೆದ್ರೊ ಸಿನಿಮಾ ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು, ವಿಮರ್ಶಕರಿಂದಲೂ ಪ್ರಶಂಸೆ ಪಡೆದಿದೆ. ಆದರೆ ಪೆದ್ರೊ ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ..’ ಎಂದು ಬರೆದುಕೊಂಡಿರುವ ಅವರು ಇದರಿಂದ ತಮಗೆ ಬೇಸರವಾಗಿದ್ದರೂ, ಆ ನೋವನ್ನು ನುಂಗಿಕೊಂಡು ತಮ್ಮ ಪೆದ್ರೊ ಚಿತ್ರವನ್ನು ಸಿನಿಪ್ರಿಯರಿಗೆ ತಲುಪಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ‘ಪೆದ್ರೊ’ ನಮ್ಮ ಸಿನಿಮಾ ಚಿತ್ರೋತ್ಸವದಿಂದ ಅವಕಾಶ ವಂಚಿತವಾಯಿತು ಎಂಬುದು ಎಷ್ಟು ಸತ್ಯವೋ, ನಮ್ಮದೇ ಊರಿನ ಜನ ತಮ್ಮದೇ ಸಿನೆಮಾ ವೀಕ್ಷಿಸಲು ವಂಚಿತರಾದರು ಎಂಬುದು ಅಷ್ಟೇ ಸತ್ಯ. ಸಿನಿಮಾ ಎಂಬ ನದಿಗೆ ಎಲ್ಲ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲ ಇವತ್ತು ಕುಳಿತಿರುವ ಜಾಗ ನಮಗೆ ಸಿನೆಮಾ ಎಂಬ ಮಾಧ್ಯಮ ನೀಡಿದ ಭಕ್ಷೀಸು ಒಂದು ಸಿನಿಮಾವನ್ನು ಜನರಿಗೆ ತಲುಪಿಸುವುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನು ಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ ಎನ್ನುವ ಮೂಲಕ ಅವರು ಈ ನೋವನ್ನೂ ಸವಾಲಾಗಿ ಸ್ವೀಕರಿಸಿರುವ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ಸದ್ಯದಲ್ಲೇ ಪೆದ್ರೊ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts