More

    ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ

    ಹಾವೇರಿ: ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಬೇಕು. ಕೊಳವೆ ಬಾವಿ ಮೋಟರ್​ಗಳ ದುರಸ್ತಿಗೆ ತಾಲೂಕುವಾರು ತಂಡ ರಚಿಸಿ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಮುಂಜಾಗ್ರತಾ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಪ್ರಗತಿಯ ಮಾಹಿತಿ ಪಡೆದ ಅವರು, ‘ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ತೆರೆದು, ತುರ್ತು ದುರಸ್ತಿಗೆ ಪ್ರತ್ಯೇಕ ತಂಡಗಳನ್ನು ರಚಿಸಬೇಕು’ ಎಂದರು.

    ಜಿಲ್ಲೆಯಲ್ಲಿ ಬಾಕಿಯಿರುವ ಪೋಡಿ ಪ್ರಕರಣ, ಲೆವೆನ್ ಸ್ಕೆಚ್, ಪೋಡಿಮುಕ್ತ ಗ್ರಾಮಗಳ ಘೊಷಣೆ, ಆರ್​ಟಿಸಿ ತಿದ್ದುಪಡಿ ಸೇರಿ ತ್ವರಿತ ಇತ್ಯರ್ಥಕ್ಕೆ ಆಂದೋಲನ ರೀತಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪಹಣಿ ತಿದ್ದುಪಡಿಗೆ ಸರ್ಕಾರ ತಹಸೀಲ್ದಾರ್​ಗಳಿಗೆ ತಾತ್ಕಾಲಿಕವಾಗಿ ಅಧಿಕಾರ ನೀಡಿದೆ. ಎಲ್ಲ ಉಪವಿಭಾಗಾಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು. ಸರ್ಕಾರಿ ಜಮೀನನಲ್ಲಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕುರಿತು ಪರಿಷ್ಕೃತ ಸರ್ಕಾರಿ ಆದೇಶದಂತೆ ಕ್ರಮವಹಿಸಬೇಕು. ಅರಣ್ಯ ಜಾಗ ಹಾಗೂ ಖಾಸಗಿ ಜಾಗದಲ್ಲಿರುವ ಜನವಸತಿಗಳನ್ನು ಗುರುತಿಸಿ ಕ್ರಮವಹಿಸಬೇಕು. ಸರ್ವೆ ಕೈಗೊಂಡು ಅಧಿಸೂಚನೆ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್​ಗೆ ಸೂಚನೆ ನೀಡಿದರು.

    ಸ್ಮಶಾನ ಭೂಮಿ ಕೊರತೆ ಇರುವ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿ ಜಮೀನು ಗುರುತಿಸಿ ದರ ನಿಗದಿಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪಿಂಚಣಿ ಪಡೆಯುತ್ತಿರುವವರ ಪೈಕಿ ಮರಣ ಹೊಂದಿದವರನ್ನು ಗುರುತಿಸಿ ಅಂಥವರ ಪಿಂಚಣಿ ರದ್ದು ಮಾಡುವ ಕುರಿತು ಕ್ರಮವಹಿಸಬೇಕು. ಅಂಚೆ ಇಲಾಖೆ ಹಾಗೂ ಬ್ಯಾಂಕ್​ಗಳಲ್ಲಿ ಪಿಂಚಣಿದಾರರ ವಿಳಾಸ ಪಡೆದು ಪರಿಶೀಲನೆ ನಡೆಸಬೇಕು ಎಂದರು.

    ಬೆಳೆ ವಿಮೆ, ಬೆಳೆ ಪರಿಹಾರ, ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆ, ವಿದ್ಯಾರ್ಥಿ ವೇತನ ಪಾವತಿ, ವಿದ್ಯಾರ್ಥಿ ನಿಲಯಗಳ ಆರಂಭ, ಹಾಸ್ಟೆಲ್ ಕಟ್ಟಡಕ್ಕೆ ನಿವೇಶನದ ಕೊರತೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ವಿವಿಧ ಇಲಾಖೆ, ನಿಗಮಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಕೋವಿಡ್ 2ನೇ ಅಲೆ ಎದುರಿಸಲು ಸಜ್ಜಾಗಿ

    ಕೋವಿಡ್ 2ನೇ ಅಲೆ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳಗಾವಿ ಮಾರ್ಗದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಸೇರಿ ಹೊರ ಜಿಲ್ಲೆಯಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ರ್ಯಾಂಡಮ್ ಆಗಿ ತಪಾಸಣೆ ನಡೆಸಬೇಕು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚೆಚ್ಚು ಮಾಡಬೇಕು. 2ನೇ ಅಲೆಯನ್ನು ಎದುರಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನೋಜ್ ಜೈನ್ ಖಡಕ್ ಸೂಚನೆ ನೀಡಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ದ್ವಿಗುಣಗೊಳಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕು. ಮೋಟಿವೇಷನ್ ಮೂಲಕ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕೋವಿಡ್ ವ್ಯಾಕ್ಸಿನ್ ಪಡೆಯಲು ಮುಂದಾಗುವಂತೆ ಕ್ರಮವಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts