More

    ಮನೆ, ಜಮೀನು ಹಕ್ಕುಪತ್ರಗಳ ರಕ್ಷಣೆಗೆ ಮುಂದಾಗುವಂತೆ ಮನವಿ: ಬಿ.ಎ.ರಮೇಶ್ ಹೆಗ್ಡೆ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರು ಸೇರಿ ರಾಜ್ಯಾದ್ಯಂತ ವಿವಿಧ ಭೂ ಮಂಜೂರಾತಿ ಕಾಯ್ದೆಯಡಿ ಮನೆ, ಜಮೀನುಗಳಿಗೆ ನೀಡಿರುವ ಹಕ್ಕುಪತ್ರಗಳ ರಕ್ಷಣೆಗೆ ಮುಂದಾಗುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮಲೆನಾಡು ರೈತ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕ ಬಿ.ಎ.ರಮೇಶ್ ಹೆಗ್ಡೆ ತಿಳಿಸಿದರು.

    ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂ ಮಂಜೂರಾತಿ ನೀಡುವ ಸಲುವಾಗಿ ಸರ್ಕಾರದ ಡಿನೋಟಿಫಿಕೇಷನ್ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂಕೋರ್ಟ್‌ಗೆ ನಿಯಮಾನುಸಾರ ಮಧ್ಯಂತರ ಅರ್ಜಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರು, ಬ್ಯಾಣ, ಸೊಪ್ಪಿನಬೆಟ್ಟ ಮೊದಲಾದ ಸ್ವರೂಪದ ಭೂ ಮಂಜೂರಾತಿ, ಮೀಸಲು ಅರಣ್ಯ ಕ್ಷೇತ್ರ, ಡೀಮ್ಡ್ ಫಾರೆಸ್ಟ್‌ಗೆ ತಿದ್ದುಪಡಿ ಮೊದಲಾದವುಗಳ ಬಗ್ಗೆ ಚರ್ಚೆ ನಡೆಸಿ ಕಾನೂನು ತಿದ್ದುಪಡಿ ಮಾಡಲು ಸರ್ಕಾರದ ಮುಂದೆ ಅಹವಾಲು ಮಂಡಿಸಲು ನಿರ್ಧರಿಸಲಾಗಿದೆ ಎಂದರು.
    ಜಿಲ್ಲೆಯಲ್ಲಿ ಮಂಗಗಳ ನಿಯಂತ್ರಣಕ್ಕೆ ಜಮೀನಿನಲ್ಲಿ ಆಲ್ಟ್ರಾಸೌಂಡ್ ಮಂಕಿ ರೆಬರ್ ಯಂತ್ರ ಅಳವಡಿಕೆಗೆ ಹಾಗೂ ಜಂಟಿ ಸರ್ವೇ ನಡೆಸಲು ಸಭೆ ಅನುಮತಿ ನೀಡಿದೆ ಎಂದು ಹೇಳಿದರು.
    2.50 ಲಕ್ಷಕ್ಕೂ ಅಧಿಕ ಅರ್ಜಿಗಳು ತಿರಸ್ಕೃತ: ರಾಜ್ಯದಲ್ಲಿ 2,94,363 ಅರ್ಜಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಬಂದಿವೆ. ಆದರೆ 16,199 ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. 2.50 ಲಕ್ಷಕ್ಕೂ ಅಧಿಕ ಅರ್ಜಿಗಳು ತಿರಸ್ಕೃತವಾಗಿವೆ. ಹೀಗಾಗಿ 75 ವರ್ಷಗಳಿಂದ ಸಾಗುವಳಿ ಮಾಡುತ್ತಿರಬೇಕೆಂಬ ನಿಯಮಕ್ಕೆ ತಿದ್ದುಪಡಿ ತಂದು ಅದನ್ನು 25 ವರ್ಷಕ್ಕೆ ಇಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
    ಪ್ರತಿಯೊಬ್ಬರಿಗೆ 3 ಎಕರೆ ಮಿತಿಯಲ್ಲಿ 1977ರಲ್ಲಿ 19,348 ಜನರಿಗೆ ಅರಣ್ಯ ಭೂಮಿ ಮಂಜೂರಾತಿ ಮಾಡಲಾಗಿತ್ತು. ಆದರೆ 1978 ಅರಣ್ಯ ಕಾಯ್ದೆಯಲ್ಲಿ ಅದನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ ಭೂ ಹಕ್ಕು ನೀಡಿರಲಿಲ್ಲ. ಇಂತಹವರಿಗೂ ಭೂ ಹಕ್ಕು ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ, 2012ರಲ್ಲಿ ಜಿಲ್ಲೆಯಲ್ಲಿ ಅರಣ್ಯ ಇಂಡೀಕರಣ ಮಾಡಲಾಗಿದೆ. ಆ ಸಂದರ್ಭದಲ್ಲಿ ವಿವಿಧ ಯೋಜನೆಗಳಲ್ಲಿ ಭೂ ಹಕ್ಕು ಪಡೆಯುವವರ ಭೂಮಿಯನ್ನು ಇಂಡೀಕರಣ ಮಾಡಲಾಗಿದೆ. ಅಂತಹವರನ್ನು ಗುರುತಿಸಲು ಹಕ್ಕು ರಕ್ಷಣೆ ಮಾಡಲು ನಿರ್ಧರಿಸಲಾಗಿದೆ ಎಂದರು.
    ಡಿಸಿಸಿ ಹಿಂದುಳಿದ ವಿಭಾಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್, ಪ್ರಮುಖರಾದ ಎನ್.ಪಿ.ಧರ್ಮರಾಜ್, ಜಿ.ಡಿ.ಮಂಜುನಾಥ, ಡಿ.ಸಿ.ನಿರಂಜನ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts