More

    ಅಕ್ರಮ ಕ್ವಾರಿಗಳಿಗೆ ಕಡಿವಾಣ, ಡಿಸಿ ನಿರ್ದೇಶನದಂತೆ ಕಾರ್ಯಾಚರಣೆ

    ಕುಂದಾಪುರ: ಅಕ್ರಮ ಕೆಂಪುಕಲ್ಲು ಕ್ವಾರಿ ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಕಾರ್ಯಾಚರಣೆಗಿಳಿದಿದೆ. ಎರಡು ವಾರಗಳ ಅವಧಿಯಲ್ಲಿ ಹತ್ತಾರು ಗಣಿಗಳಿಗೆ ಕಂದಾಯ, ಗಣಿ, ಅರಣ್ಯ ಇಲಾಖೆ ಅಧಿಕಾರಿಗಳು ಪಿಡಿಒ ಸಹಿತ ದಾಳಿ ನಡೆಸಿದ್ದಾರೆ.

    ‘ಅಕ್ರಮ ಗಣಿಗಾರಿಕೆಗಿಲ್ಲ ಕಡಿವಾಣ’ ಶೀರ್ಷಿಕೆಯಲ್ಲಿ ಜೂ.9ರಂದು ವಿಜಯವಾಣಿ ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು. ಇದರ ಬೆನ್ನಿಗೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವಿಡಿಯೋ ಸಂವಾದ ನಡೆಸಿದ್ದು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು ಕಾರ್ಯಾಚರಣೆ ನೇತೃತ್ವ ವಹಿಸಿದ್ದು, ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ.

    ಈ ಎರಡು ತಾಲೂಕುಗಳ ವ್ಯಾಪ್ತಿಯ ಪಶ್ಚಿಮಘಟ್ಟದ ಸಾಲು, ವನ್ಯಜೀವಿ ವಿಭಾಗ, ರಕ್ಷಿತಾರಣ್ಯ, ಅಕ್ರಮ ಸಕ್ರಮ, ಶಾಲಾ ವಠಾರದಲ್ಲಿ ಪರವಾನಗಿ ಪಡೆಯದೆ ಕೆಂಪುಕಲ್ಲು ಕ್ವಾರಿ ನಡೆಸಲಾಗುತ್ತಿತ್ತು. ಕೆಂಪು ಕಲ್ಲು ತೆಗೆದ ನಂತರ ಜಿಲ್ಲಾಡಳಿತದ ಆದೇಶವಿದ್ದರೂ ಕ್ವಾರಿಯ ಹೊಂಡ ಹಾಗೆ ಬಿಡುವ ಮೂಲಕ ಜನ, ಜಾನುವಾರು, ವನ್ಯ ಜೀವಿಗಳ ಪ್ರಾಣಕ್ಕೆ ಆಪತ್ತು ತರುತ್ತಿತ್ತು. ಯಡೆಮೊಗೆ ಪಶ್ಚಿಮ ಘಟ್ಟ ಸಾಲಲ್ಲಿ ನಿರಂತರ ಗಣಿಗಾರಿಕೆಗೆ ಘಟ್ಟದ ಬುಡದಲ್ಲಿ ಕುಸಿತ ಸಂಭವಿಸಿದರೆ, ಗಂಗನಾಡಲ್ಲಿ ಭೂ ಕಂಪನ ಉಂಟಾಗಿತ್ತು.

    ಭೂ ವಿಜ್ಞಾನಿಗಳು ಘಟ್ಟದ ಬುಡದಲ್ಲಿ ಗಣಿಗಾರಿಕೆ ಹಾಗೂ ಭಾರಿ ವಾಹನಗಳ ಸಂಚಾರ ಅಪಾಯ ತರಲಿದೆ ಎಂದು ಎಚ್ಚರಿಕೆ ನೀಡಿದ್ದರು. ಪ್ರಸ್ತುತ ಕಂದಾಯ, ಅರಣ್ಯ, ವೈಲ್ಡ್‌ಲೈಫ್ ಸರ್ವೇ ಮೂಲಕ ಜಾಗದ ನಿಖರತೆವರೆಗೆ ಕ್ವಾರಿ ನಿಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಪರವಾನಗಿ ಪಡೆಯದಿದ್ದರೆ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು ತಾಕೀತು ಮಾಡಿದೆ.

    ಎಲ್ಲಿ ಎಷ್ಟು ಪ್ರಕರಣ?: ಅಕ್ರಮ ಗಣಿಗಾರಿಕೆ ಮೇಲೆ ಅಧಿಕಾರಿಗಳು ಹಿಂದೆಯೂ ದಾಳಿ ನಡೆಸಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. 2018-19ರಲ್ಲಿ ಆಲೂರು 3, ಹರ್ಕೂರು 3, ಯಡೆಮೊಗೆ 5, ಹೊಸಂಗಡಿ 2, ಕಕುಂಜೆ ಹೆಂಗವಳ್ಳಿಯಲ್ಲಿ ತಲಾ 2 ಸೇರಿ ಒಟ್ಟು 17 ಅಕ್ರಮ ಕ್ವಾರಿ ಪತ್ತೆಯಾಗಿದ್ದು, 8 ಅತಿಕ್ರಮದ ವಿರುದ್ಧ ಖಾಸಗಿ ದೂರು ದಾಖಲಾಗಿದೆ. 2019-20ರಲ್ಲಿ ಅತಿ ಹೆಚ್ಚು 8 ಅಕ್ರಮ ಗಣಿ ಆಲೂರಲ್ಲಿ ಪತ್ತೆಯಾಗಿದ್ದು, ಯಡಮೊಗೆಯಲ್ಲಿ 7 ಗಣಿ ಪತ್ತೆಯಾಗಿದೆ. ಒಟ್ಟು 24 ಅಕ್ರಮ ಪತ್ತೆಯಾಗಿದ್ದು, 11 ಪ್ರಕರಣದಲ್ಲಿ ಖಾಸಗಿ ದೂರು ದಾಖಲಾಗಿದೆ. 2020-21 ಆಲೂರಲ್ಲಿ 10, ಹರ್ಕೂರಲ್ಲಿ 6 ಪ್ರಕರಣ ದಾಖಲಾಗಿದ್ದು, 21 ಅಕ್ರಮ ಪತ್ತೆಯಾಗಿದ್ದು, 11 ಪ್ರಕರಣದಲ್ಲಿ ಖಾಸಗಿ ದೂರು ದಾಖಲಾಗಿದೆ. ಕುಂದಾಪುರ ವ್ಯಾಪ್ತಿಯಲ್ಲಿ ಒಟ್ಟು 9,05,716 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಬ್ರಹ್ಮಾವರ ತಾಲೂಕಲ್ಲಿ 14,081 ಸಾವಿರ, ಬೈಂದೂರು ತಾಲೂಕಿನಲ್ಲಿ ಹೇರಂಜಾಲು ಪರಿಸರದಲ್ಲಿ 8 ಅತಿಕ್ರಮ ಗಣಿ ನಡೆಯುತ್ತಿರುವುದು ಪತ್ತೆ ಮಾಡಲಾಗಿದ್ದು, ತಾಲೂಕಿನಲ್ಲಿ ಒಟ್ಟು 53 ಅತಿಕ್ರಮ ಕೆಂಪುಕಲ್ಲು ಗಣಿ ಪತ್ತೆ ಮಾಡಲಾಗಿದ್ದು, 4 ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದ್ದು, 49 ಅತಿಕ್ರಮ ಕ್ವಾರಿಯಿಂದ 21.59.241 ದಂಡ ವಸೂಲು ಮಾಡಲಾಗಿದೆ. ಬೈಂದೂರು ತಾಲೂಕಿನಲ್ಲಿ ಕೃಷಿ ಉದ್ದೇಶಕ್ಕಾಗಿ 11 ಕಡೆ ಕೆಂಪುಕಲ್ಲು ತೆರವಿಗೆ ಅನುಮತಿ ನೀಡಿದ್ದು, 14 ಅರ್ಜಿ ಸಲ್ಲಿಸಲಾಗಿದೆ. ಸದ್ಯ ನಡೆದಿರುವ ಕಾರ್ಯಾಚರಣೆಯ ನಿಖರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

    ಅಕ್ರಮ ಕ್ವಾರಿ ಪ್ರದೇಶಗಳಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಪಿಡಿಒಗೆ ಸೂಚಿಸಲಾಗಿದೆ. ಪರವಾನಗಿ ಇಲ್ಲದ ಕ್ವಾರಿಗಳನ್ನು ನಿಲ್ಲಿಸಲಾಗಿದೆ. ಕಂದಾಯ, ಅರಣ್ಯ, ವೈಲ್ಡ್‌ಲೈಫ್, ರಕ್ಷಿತಾರಣ್ಯ ಜಾಗಗಳನ್ನು ಜಂಟಿ ಸರ್ವೇ ನಡೆಸಿ, ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಗಣಿಗೆ ಅವಕಾಶ ನೀಡುವುದಿಲ್ಲ. ಜಂಟಿ ಸರ್ವೇ ತನಕ ಗಣಿಗಾರಿಕೆ ಕೂಡದು ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಪರವಾನಗಿ ಇಲ್ಲದೆ ಕಲ್ಲು ಕೀಳಲು ಬಿಡುವುದಿಲ್ಲ. ಧಿಕ್ಕರಿಸಿದರೆ ಪರಿಕರ ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
    ಕೆ.ರಾಜು, ಎಸಿ ಕುಂದಾಪುರ

    ಜಿಲ್ಲೆಯಲ್ಲಿ ಎಲ್ಲೆಲ್ಲಿ ಅಕ್ರಮ ಕ್ವಾರಿ ನಡೆಯುತ್ತದೋ ಅಲ್ಲೆಲ್ಲ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಗಂಗನಾಡಲ್ಲಿ 3ಕ್ಕೆ ಪರವಾನಗಿ ಇದ್ದು, ಉಳಿದಿರುವುದು ನಿಲ್ಲಿಸಲಾಗಿದೆ. ಬೈಂದೂರಿನಲ್ಲಿ 11 ಕ್ವಾರಿಗೆ ಅನುಮತಿ ಇದೆ. ಇಲಾಖೆಯಿಂದಲೇ ಆರ್‌ಟಿಸಿ ಪಡೆದು, ಕೃಷಿ ಇಲಾಖೆಗೆ ಕಳುಹಿಸುವ ಕೆಲಸ ಮಾಡಿದರೂ ಇನ್ನೂ ಕೃಷಿ ಇಲಾಖೆಯಲ್ಲಿ 19 ಫೈಲ್ ಬಾಕಿಯಿದೆ. ಈವರೆಗೆ ಅಕ್ರಮ ಕ್ವಾರಿ ನಡೆಸಿದವರಿಂದ 30 ಲಕ್ಷ ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ.
    ಮಹೇಶ್, ಭೂ ವಿಜ್ಞಾನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts