More

    ಕಲಬುರಗಿ ಸಂಸದರಾದವರಿಗೆ ಸಿಎಂ ಯೋಗ: ಉನ್ನತ ಹುದ್ದೆಗೇರಿದ್ದ ವೀರೇಂದ್ರ ಪಾಟೀಲ್, ಧರ್ಮಸಿಂಗ್

    | ಬಾಬುರಾವ ಯಡ್ರಾಮಿ ಕಲಬುರಗಿ

    ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಮತ್ತು ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬೀದರ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದವರು ರಾಜ್ಯದ ಮುಖ್ಯಮಂತ್ರಿಗಳಾಗಿರುವುದು ಗಮನಾರ್ಹ. ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ 1984ರಲ್ಲಿ ಚುನಾಯಿತರಾಗಿದ್ದ ವೀರೇಂದ್ರ ಪಾಟೀಲ್ ಹಾಗೂ 1980ರಲ್ಲಿ ವಿಜೇತರಾಗಿದ್ದ್ದ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು. ಕಲಬುರಗಿ ಇಬ್ಬರು ಸಿಎಂ, ಮೂವರು ಕೆಪಿಸಿಸಿ ಅಧ್ಯಕ್ಷರನ್ನು ಕೊಟ್ಟರೆ, ಬೀದರ್ ಕ್ಷೇತ್ರದಿಂದ 2008ರಲ್ಲಿ ಸಂಸದರಾಗಿದ್ದ ಧರ್ಮಸಿಂಗ್ ಅದಕ್ಕೂ ಮೊದಲೇ ಸಿಎಂ ಆದವರು.

    ಸಂಸತ್ ಪ್ರವೇಶಿಸಿದವರು ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಮೊದಲಿನಿಂದಲೂ ಒಂದು ಖದರ್ ಇದೆ. ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಆಪ್ತರಾಗಿದ್ದವರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಹಿಂದೆ ಇಂದಿರಾಗಾಂಧಿ ಆಪ್ತ ಸಿ.ಎಂ.ಸ್ಟೀಫನ್ ದೂರಸಂಪರ್ಕ ಖಾತೆ ಸಚಿವರಾಗಿದ್ದರು. ವೀರೇಂದ್ರ ಪಾಟೀಲ್ ಸಂಸದರಾಗಿದ್ದಾಗ ಕೇಂದ್ರದ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಸಚಿವರಾಗಿದ್ದರು. ಇನ್ನು ಧರ್ಮಸಿಂಗ್ ಹಲವು ಸದನ ಸಮಿತಿಗಳ ಸದಸ್ಯರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಸಹ ಕೇಂದ್ರ ಕಾರ್ವಿುಕ ಮತ್ತು ರೈಲ್ವೆ ಸಚಿವರಾಗಿದ್ದರು. ಇಲ್ಲಿ ರಾಜ್ಯಭಾರ ಮಾಡಿದ ನಂತರ ಧರ್ಮಸಿಂಗ್ ಮತ್ತು ವೀರೇಂದ್ರ ಪಾಟೀಲ್ ಕ್ರಮವಾಗಿ ಬೀದರ್ ಮತ್ತು ಬಾಗಲಕೋಟ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು. ಕಳೆದ ಸಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. ಹೀಗೆ ರಾಜಕೀಯ ಶಕ್ತಿಯಾಗಿ ಕಲಬುರಗಿ ಮುನ್ನುಗ್ಗುತ್ತಲೇ ಹೊರಟಿದೆ.

    ಎರಡು ಸಲ ಸಿಎಂ ಆಗಿದ್ದ ಪಾಟೀಲ್: ಕಲಬುರಗಿ ಸಂಸದರಾಗಿದ್ದ ವೀರೇಂದ್ರ ಪಾಟೀಲ್​ಗೆ ಎರಡು ಬಾರಿ ಸಿಎಂ ಯೋಗ ಬಂದಿತ್ತು. 1968ರ ಮೇ 29ರಿಂದ 1971ರ ಮಾರ್ಚ್​ವರೆಗೂ ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. 1989ರ ನ.30ರಿಂದ 1990ರ ಅ.10ರವರೆಗೆ ಕರ್ನಾಟಕ ಸಿಎಂ ಆಗಿ ಕಲಬುರಗಿಯಿಂದ ಎರಡು ಸಲ ಸಿಎಂ ಆದ ಕೀರ್ತಿ ಅವರದು. 2004ರ ಮೇ 28ರಂದು ರಾಜ್ಯದ 11ನೇ ಮುಖ್ಯಮಂತ್ರಿಗಳಾದ ಎನ್.ಧರ್ಮಸಿಂಗ್, 2006ರ ಜ.28ವರೆಗೂ ಸಿಎಂ ಆಗಿದ್ದರು. ಸಮ್ಮಿಶ್ರ ಸರ್ಕಾರದ ಮೊದಲ ಸಿಎಂ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇಬ್ಬರಲ್ಲಿ ಸಾಮ್ಯತೆ ಎಂದರೆ ಜನರೊಂದಿಗೆ ಬೆರೆಯುವ ಗುಣ. ಪಾಟೀಲರದು ಖಡಕ್ ವ್ಯಕ್ತಿತ್ವವಾಗಿದ್ದರೆ, ಧರ್ಮಸಿಂಗ್ ಮೃದು ಸ್ವಭಾವದವರು.

    ಮೂವರು ಕೆಪಿಸಿಸಿ ಅಧ್ಯಕ್ಷರು: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ವಿಜೇತರಾಗಿದ್ದ ವೀರೇಂದ್ರ ಪಾಟೀಲ್, ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆ ಮಾಡಿದ್ದಾರೆ. ಅವರ ಅಧ್ಯಕ್ಷಗಿರಿ ಅವಧಿಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬಂದಿದ್ದು ಗಮನಾರ್ಹ. ಇನ್ನು ವೀರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಜರುಗಿದ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗಳಿಸಿದ್ದು ದಾಖಲೆ. ಮಲ್ಲಿಕಾರ್ಜುನ ಖರ್ಗೆ ಪ್ರಸ್ತುತ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿದ್ದಾರೆ. ಇನ್ನೊಂದು ಗಮನಾರ್ಹ ಅಂಶ ಎಂದರೆ ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕೆಲಸ ಮಾಡಿದ್ದಾರೆ. ಖರ್ಗೆ ಈಗ ರಾಜ್ಯಸಭೆ ವಿಪಕ್ಷ ನಾಯಕರು.

    ಚೆನ್ನೈ: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ನಂತರ ಸಾವಿಗೀಡಾದ 26 ವರ್ಷದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts