More

    ಮುಂಬೈ ಇಂಡಿಯನ್ಸ್ ಎದುರು ಅಬ್ಬರಿಸಿದ ಆರ್‌ಸಿಬಿ; ಕೊಹ್ಲಿ ಬಳಗಕ್ಕೆ 54 ರನ್ ಜಯ

    ದುಬೈ: ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ (56 ರನ್, 37 ಎಸೆತ, 6 ಬೌಂಡರಿ, 3 ಸಿಕ್ಸರ್, 23ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆ ಹಾಗೂ ವೇಗಿ ಹರ್ಷಲ್ ಪಟೇಲ್ (17ಕ್ಕೆ 4) ಹ್ಯಾಟ್ರಿಕ್ ವಿಕೆಟ್ ಸಾಧನೆ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-14ರ ಎರಡನೇ ಭಾಗದಲ್ಲಿ ಮೊದಲ ಗೆಲುವಿನ ನಗೆ ಬೀರಿತು. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 54 ರನ್‌ಗಳಿಂದ ಸೋಲಿಸಿತು. ಇದರಿಂದ ಲೀಗ್‌ನಲ್ಲಿ 6ನೇ ಜಯ ಕಂಡ ವಿರಾಟ್ ಕೊಹ್ಲಿ ಬಳಗ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿತು. ಮತ್ತೊಂದೆಡೆ, ಹ್ಯಾಟ್ರಿಕ್ ಸೋಲು ಕಂಡ ರೋಹಿತ್ ಶರ್ಮ ಬಳಗದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣಗೊಂಡಿತು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ (51 ರನ್, 42 ಎಸೆತ, 75 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಮ್ಯಾಕ್ಸ್‌ವೆಲ್ ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 165 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ರೋಹಿತ್ ಶರ್ಮ (43 ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಕ್ವಿಂಟನ್ ಡಿ ಕಾಕ್ (24 ರನ್, 23 ಎಸೆತ, 4 ಬೌಂಡರಿ) ಜೋಡಿ ನೀಡಿದ ಉತ್ತಮ ಆರಂಭದ ನಡುವೆಯೂ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ, ಯಜುವೇಂದ್ರ ಚಾಹಲ್ (11ಕ್ಕೆ 3) ಮಾರಕ ದಾಳಿಗೆ ನಲುಗಿ 18.1 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಮುಂಬೈ ಎದುರು ಎರಡೂ ಮುಖಾಮುಖಿಯಲ್ಲಿ ಜಯ ದಾಖಲಿಸಿತು. ರೋಹಿತ್ ಶರ್ಮ ಹಾಗೂ ಕ್ವಿಂಟನ್ ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಉತ್ತಮ ಸ್ಥಿತಿಯಲ್ಲಿದ್ದ ಮುಂಬೈ ಪತನಕ್ಕೆ ಚಾಹಲ್ ಮುನ್ನುಡಿ ಬರೆದರು. ಆರಂಭಿಕರನ್ನು ಹೊರತುಪಡಿಸಿ ಮುಂಬೈನ ಉಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ಮುಟ್ಟಲು ವಿಫಲರಾದರು. ಮುಂಬೈ 32 ರನ್‌ಗಳ ಅಂತರದಲ್ಲಿ 9 ವಿಕೆಟ್ ಕೈಚೆಲ್ಲಿತು.

    ಆರ್‌ಸಿಬಿ: 6 ವಿಕೆಟ್‌ಗೆ 165 (ವಿರಾಟ್ ಕೊಹ್ಲಿ 51, ಗ್ಲೆನ್ ಮ್ಯಾಕ್ಸ್‌ವೆಲ್ 56, ಕೆಎಸ್ ಭರತ್ 32, ಜಸ್‌ಪ್ರೀತ್ ಬುಮ್ರಾ 36ಕ್ಕೆ 3, ಟ್ರೆಂಟ್ ಬೌಲ್ಟ್ 17ಕ್ಕೆ 1), ಮುಂಬೈ ಇಂಡಿಯನ್ಸ್: 18.1 ಓವರ್‌ಗಳಲ್ಲಿ 111 (ರೋಹಿತ್ ಶರ್ಮ 43, ಕ್ವಿಂಟನ್ ಡಿ ಕಾಕ್ 24, ಹರ್ಷಲ್ ಪಟೇಲ್ 17ಕ್ಕೆ 4, ಯಜುವೇಂದ್ರ ಚಾಹಲ್ 11ಕ್ಕೆ 3, ಗ್ಲೆನ್ ಮ್ಯಾಕ್ಸ್‌ವೆಲ್ 23ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts