More

    ವಿರಾಟ್​ ಕೊಹ್ಲಿ ಔಟ್​ ಎಂಬ ತೀರ್ಪು: ಅಂಪೈರ್​ಗಳ ವಿರುದ್ಧ ಗುಡುಗಿದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗರು

    ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್​) ವಿರುದ್ಧದ ನಿನ್ನೆ (ಏಪ್ರಿಲ್ 21) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಸೋತಿದ್ದು ಗೊತ್ತೇ ಇದೆ. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿನ ಬದಲು ವಿರಾಟ್​ ಕೊಹ್ಲಿ ಔಟಾದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್​ ನೀಡಿದರು. ಆದರೆ, ಆ ಬಾಲ್ ನೋಬಾಲ್​ ಆಗಿದ್ದರೂ ಅಂಪೈರ್​ ಔಟ್​ ನೀಡಿದ್ದಕ್ಕೆ ಸ್ವತಃ ಕೊಹ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಹಾಗೂ ಅಂಪೈರ್‌ಗಳ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಇದರ ನಡುವೆ ಟೀಮ್​ ಇಂಡಿಯಾದ ದಿಗ್ಗಜ ಮಾಜಿ ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರದ್ದು ನಾಟೌಟ್ ಎಂದು ಹೇಳುತ್ತಿದ್ದಾರೆ.

    ಭಾರತದ ಮಾಜಿ ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿಧು ಮತ್ತು ಮೊಹಮ್ಮದ್ ಕೈಫ್ ಅವರು ಕೊಹ್ಲಿ ನಾಟೌಟ್ ಎಂದು ತೀರ್ಮಾನಿಸಿದ್ದಾರೆ. ಸಿಧು ಹೇಳಿದ್ದೇನು ಎಂದು ನೋಡುವುದಾದರೆ, ‘ಕೊಹ್ಲಿ ಔಟಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಬೀಮರ್ ಹಾಕಿ, ಔಟ್​ ಎಂದು ಹೇಳಿದರೆ ಹೇಗೆ? ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಆಟಕ್ಕೆ ಇದು ಒಳ್ಳೆಯದಲ್ಲ. ನಾವು ಬೀಮರ್‌ಗಳೊಂದಿಗೆ ಹೇಗೆ ಹೊರಬರುವುದು? ಇದು ಸ್ಪಷ್ಟವಾಗಿ ನಾಟ್ ಔಟ್ ಎಂದು ಸಿಧು ಹೇಳಿದರು.

    ಆದರೆ, ಬಾಲ್ ಟ್ರ್ಯಾಕಿಂಗ್ ಮಾಡುವಾಗ ಚೆಂಡು ಕ್ರೀಸ್ ಪ್ರವೇಶಿಸುವ ವೇಳೆಗೆ ಮುಳುಗುತ್ತಿತ್ತು ಮತ್ತು ವಿಕೆಟ್​ಗೆ ಬಡಿಯುತ್ತಿತ್ತು ಎಂದು ಹೇಳಲಾಗಿದೆ. ಅಂದರೆ ಚೆಂಡಿನ ಎತ್ತರ ಕಡಿಮೆ ಇದೆ ಎಂಬುದು ಇದರರ್ಥ. ಹೀಗಾಗಿ ಅಂಪೈರ್‌ಗಳು ಆ ಎಸೆತವನ್ನು ಸರಿಯಾದ ಎಂದು ದೃಢಪಡಿಸಿದರು. ಅದೇನೇ ಇರಲಿ ಚೆಂಡಿಗೆ ವೇಗವಿದ್ದರೆ ಅಷ್ಟೇ ಎತ್ತರದಲ್ಲಿ ಕ್ರೀಸ್​ಗೆ ಪಯಣಿಸುತ್ತಿತ್ತು. ಆದರೆ, ಚೆಂಡಿನಲ್ಲಿ ವೇಗದ ಕೊರತೆ ಇದ್ದಿದ್ದರಿಂದ ಅದು ಕುಸಿಯುತ್ತದೆ ಎನ್ನುತ್ತಾರೆ ಕ್ರಿಕೆಟ್ ತಜ್ಞರು.

    ಟೀಮ್​ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಇದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ. ಚೆಂಡು ಬ್ಯಾಟ್‌ಗೆ ತಗುಲಿರುವ ಜಾಗವನ್ನು ನೋಡಿದರೆ, ಅದು ಸೊಂಟದ ಮೇಲೆ ತುಂಬಾ ಎತ್ತರದಲ್ಲಿದೆ. ಅದು ಖಂಡಿತವಾಗಿಯೂ ನೋ ಬಾಲ್ ಎಂದು ಪರಿಗಣಿಸಬೇಕು. ಅಲ್ಲದೆ ಬಾಲ್ ಟ್ರ್ಯಾಕಿಂಗ್‌ನಲ್ಲಿ ಪ್ರತಿ ಬಾರಿ ಚೆಂಡು ಬ್ಯಾಟ್‌ಗೆ ಬಡಿದ ಸ್ಥಳದಿಂದ ಚೆಂಡು ಡಿಪ್ ಆಗುತ್ತದೆ ಎನ್ನುವ ಮೂಲಕ ಬಾಲ್ ಟ್ರ್ಯಾಕಿಂಗ್ ಬಗ್ಗೆ ಕೈಫ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕೈಫ್​ ಹೇಳಿದ್ದು ಕೂಡ ಯೋಚಿಸಬೇಕಾದ ಸಂಗತಿಯೇ. ಬಾಲ್ ಟ್ರ್ಯಾಕಿಂಗ್​ನಲ್ಲಿ ಬಾಲ್ ದಿಢೀರ್ ಡಿಪ್ ಆಗುತ್ತದೆ. ಬಾಲ್ ಟ್ರ್ಯಾಕಿಂಗ್ ಅನ್ನು ಬೌಲರ್ ಕೈ ಹತ್ತಿರ ತೋರಿಸಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳೂ. ಒಟ್ಟಾರೆ ಕೊಹ್ಲಿ ಔಟಾಗಿರುವುದು ಆರ್​ಸಿಬಿ ಮೇಲೆ ಗಾಢ ಪರಿಣಾಮ ಬೀರಿದೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಏಪ್ರಿಲ್​ 21) ಈಡನ್ ಗಾರ್ಡ್​ನ್ಸ್​ನಲ್ಲಿ ನಡೆದ ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು 1 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದೆ. ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

    ಆರ್​ಸಿಬಿ ತಂಡದ ವಿಲ್ ಜಾಕ್ಸ್ ಹಾಗೂ ರಜತ್ ಪಾಟಿದಾರ್ ಅರ್ಧಶತಕದ ಕೊಡುಗೆ, ಸ್ಪಿನ್ ಬೌಲರ್​ ಕರಣ್‌ ಶರ್ಮಾ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ. ಕೆಕೆಆರ್​ ನೀಡಿದ 223 ರನ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 20 ಓವರ್​ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು. (ಏಜೆನ್ಸೀಸ್​)

    ನೋಬಾಲ್​ ಆಗಿದ್ರೂ ಔಟ್​ ನೀಡಿದ್ರು ಅಂತ ವಿರಾಟ್​ ಕೊಹ್ಲಿ ಆಕ್ರೋಶ: ಆದ್ರೆ ಐಸಿಸಿ ನಿಯಮ ಹೇಳುವುದೇನು?

    ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts