More

    ಪ್ರತಿ ರನ್​ಗೆ 27 ಲಕ್ಷ ರೂಪಾಯಿ! ಐಪಿಎಲ್​ ಇತಿಹಾಸದಲ್ಲೇ ದುಬಾರಿಯಾದ ಆರ್​ಸಿಬಿ ಆಟಗಾರ

    ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಧ್ಯಾಯ ಮುಗಿದಿದೆ. ಐಪಿಎಲ್ ಟ್ರೋಫಿ ಗೆಲ್ಲುವ ಅವರ ಕನಸು ಇನ್ನೂ ಒಂದು ವರ್ಷ ಮುಂದೂಡಲ್ಪಟ್ಟಿದೆ. ಈ ಸೀಸನ್​ನಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ ಆರ್​ಸಿಬಿ, ಎಲಿಮಿನೇಟರ್‌ನಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋತು ಮನೆಗೆ ತೆರಳಿತು. ಮೊದಲ 8 ಪಂದ್ಯಗಳಲ್ಲಿ 7 ಸೋಲು ಕಂಡ ಆರ್​ಸಿಬಿಗೆ ಪ್ಲೇ ಆಫ್ ತಲುಪುವ ಅವಕಾಶ ಶೇ.1 ರಷ್ಟಿತ್ತು. ಆದರೆ, ಆ ಶೇ.1ನ್ನು 100 ಪರ್ಸೆಂಟ್ ಮಾಡಿ, ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಪ್ಲೇ ಆಫ್ ತಲುಪಿತ್ತು. ಆದರೆ, ಅವರ ಹೋರಾಟ ಎಲಿಮಿನೇಟರ್‌ನಲ್ಲಿ ಕೊನೆಗೊಂಡಿತು.

    ಆರ್​ಸಿಬಿ ಸೋಲಿನ ನೋವನ್ನು ಆ ತಂಡದ ಅಭಿಮಾನಿಗಳು ಆಟಗಾರನೊಬ್ಬನ ಮೇಲೆ ತೋರಿಸುತ್ತಿದ್ದಾರೆ. ಯಾರು ಆ ಆಟಗಾರ ಅಂದರೆ ಗ್ಲೇನ್​ ಮ್ಯಾಕ್ಸ್‌ವೆಲ್. ಆರ್‌ಸಿಬಿಯಲ್ಲಿ ಸ್ಟಾರ್ ಆಟಗಾರರಾಗಿದ್ದ ಮ್ಯಾಕ್ಸಿ ಈ ಸೀಸನ್​ನಲ್ಲಿ ಸಂಪೂರ್ಣ ವಿಫಲರಾದರು. 2021 ರಿಂದ ಆರ್‌ಸಿಬಿ ಜೊತೆಗಿರುವ ಮ್ಯಾಕ್ಸ್‌ವೆಲ್ ಸತತ ಮೂರು ಸೀಸನ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

    ಆದರೆ, ಏನಾಯಿತೋ ಏನೋ ಈ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದರು. 2021ರ ಸೀಸನ್‌ನಲ್ಲಿ 513 ರನ್, 2022ರಲ್ಲಿ 301 ರನ್, 2023ರಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಈ ಋತುವಿನಲ್ಲಿ ಗಳಿಸಿದ್ದು 52 ರನ್ ಮಾತ್ರ. ಮ್ಯಾಕ್ಸ್‌ವೆಲ್‌ನಿಂದ ಇಂತಹ ಕೆಟ್ಟ ಪ್ರದರ್ಶನವನ್ನು ಆರ್‌ಸಿಬಿ ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ. ಈ ಋತುವಿನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್​ವೆಲ್ 5.78ರ ಸರಾಸರಿಯಲ್ಲಿ ಕೇವಲ 52 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧ ಶತಕವೂ ಇಲ್ಲ.

    ಮ್ಯಾಕ್ಸಿಯ ಈ ಅತ್ಯಂತ ಕಳಪೆ ಪ್ರದರ್ಶನವನ್ನು ಆರ್​ಸಿಬಿ ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್​ನಲ್ಲಿ ಮ್ಯಾಕ್ಸ್​ವೆಲ್​ ಟ್ರೆಂಡಿಂಗ್​ನಲ್ಲಿದ್ದಾರೆ. ಅದರಲ್ಲೂ ಮ್ಯಾಕ್ಸಿ ಅವರು ಐಪಿಎಲ್​ನಲ್ಲಿ ಪಡೆದಿರುವ ಮೊತ್ತಕ್ಕೂ ಮತ್ತು ಅವರು ಗಳಿಸಿರುವ ರನ್​ಗಳಿಗೆ ಲಿಂಕ್ ಮಾಡಿ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ.

    ಮ್ಯಾಕ್ಸ್‌ವೆಲ್ ಆರ್​ಸಿಬಿಗೂ ಮೊದಲು ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. ಐಪಿಎಲ್ 2020ರಲ್ಲಿ ಪಂಜಾಬ್ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್ ಅವರನ್ನು ಆರ್​ಸಿಬಿ 14.25 ಕೋಟಿ ರೂ.ಗಳಿಗೆ ಹೆಚ್ಚಿನ ಬೆಲೆಗೆ ಖರೀದಿಸಿತು. ಕಳೆದ ನಾಲ್ಕು ವರ್ಷಗಳಿಂದ ಮ್ಯಾಕ್ಸ್‌ವೆಲ್‌ಗೆ ಅದೇ ಮೊತ್ತವನ್ನು ಪಾವತಿಸುತ್ತಿದೆ. ಆದರೆ, ಈ ಸೀಸನ್​ನಲ್ಲಿ ಮ್ಯಾಕ್ಸ್‌ವೆಲ್ ಗಳಿಸಿದ ರನ್ ಕೇವಲ 52. ಈ 52 ರನ್‌ಗಳಿಗೆ 14.25 ಕೋಟಿ ಪಾವತಿಸಿದಂತಾಗಿದೆ. ಅಂದರೆ ಪ್ರತಿ ರನ್​ಗೆ ಲೆಕ್ಕ ಹಾಕಿದರೆ, 27 ಲಕ್ಷ ರೂಪಾಯಿ ಆಗುತ್ತದೆ.

    ಮ್ಯಾಕ್ಸ್‌ವೆಲ್ ಅವರು ಪ್ರತಿ ರನ್‌ಗೆ ಹೆಚ್ಚು ಹಣ ತೆಗೆದುಕೊಳ್ಳುವ ದುಬಾರಿ ಆಟಗಾರ ಎಂದು ಆರ್​ಸಿಬಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್​ನೊಂದಿಗೆ 8 ವಿಕೆಟ್​ಗೆ 172 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್​ಗಳಲ್ಲಿ 6 ವಿಕೆಟ್​ಗೆ 174 ರನ್​ಗಳಿಸಿ ರೋಚಕ ಗೆಲುವು ಕಂಡಿತು. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. (ಏಜೆನ್ಸೀಸ್​)

    ಆರ್​ಸಿಬಿ ತೊರೆದು ಈ ತಂಡಕ್ಕೆ ಸೇರಲು ವಿರಾಟ್​ ಕೊಹ್ಲಿಗೆ ಸಲಹೆ ನೀಡಿದ ಮಾಜಿ ಸ್ಟಾರ್​ ಆಟಗಾರ!

    ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ಆತನೊಬ್ಬನೇ ಕಾರಣ! ಅಭಿಮಾನಿಗಳಿಂದ ಹಿಡಿಶಾಪ

    ಆರ್​ಸಿಬಿ ಸೋತ ಬೆನ್ನಲ್ಲೇ ಡಿವಿಲಿಯರ್ಸ್​ ಬಿಚ್ಚುಮಾತು! ಟೀಕಾಕಾರರ ಬಾಯಿ ಮುಚ್ಚಿಸಿದ ಮಿಸ್ಟರ್. 360

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts