More

    ಇಂದು ಆರ್‌ಸಿಬಿ ತಂಡಕ್ಕೆ ಕೆಕೆಆರ್ ಸವಾಲು 

    ಅಬುಧಾಬಿ: ಮೂರು ಆವೃತ್ತಿಗಳ ಬಳಿಕ ಪ್ಲೇ-ಆಫ್ ಸನಿಹದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 10ನೇ ಪಂದ್ಯದಲ್ಲಿ ಎರಡು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಪಂದ್ಯ ಇವೊಯಿನ್ ಮಾರ್ಗನ್ ಪಡೆ ಪಾಲಿಗೆ ಮಹತ್ವ ಪಡೆದಿದೆ. ಕಳೆದ ಪಂದ್ಯದಲ್ಲಿ ಲಾಕಿ ಫರ್ಗ್ಯುಸನ್ ಮಾರಕ ದಾಳಿಯಿಂದಾಗಿ ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್‌ ಎದುರು ಜಯ ದಾಖಲಿಸಿತ್ತು. ಇದೀಗ ಕೆಕೆಆರ್ ತಂಡಕ್ಕೆ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ತಂಡವನ್ನು ಕಟ್ಟಿಹಾಕುವುದೇ ದೊಡ್ಡ ಸವಾಲಾಗಿದೆ. ಉಭಯ ತಂಡಗಳ ಹಿಂದಿನ ಮುಖಾಮುಖಿಯಲ್ಲಿ ಆರ್‌ಸಿಬಿ 82 ರನ್‌ಗಳಿಂದ ಸುಲಭ ಜಯ ದಾಖಲಿಸಿತ್ತು.
    * ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
    ಎಬಿ ಡಿವಿಲಿಯರ್ಸ್‌ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ್ದ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಉತ್ತಮ ಲಯ ಕಂಡುಕೊಂಡಿದೆ. ರಾಯಲ್ಸ್ ಎದುರು ಕೇವಲ 33 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಎಬಿಡಿ ಪ್ರಮುಖ ಪಾತ್ರವಹಿಸಿದ್ದರು. ವೇಗಿ ಲಾಕಿ ಫರ್ಗ್ಯುಸನ್ ಹಾಗೂ ಎಬಿಡಿ ನಡುವಿನ ಹಣಾಹಣಿ ಅಂತಾನೇ ವಿಶ್ಲೇಷಿಸಲಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ, ಆರಂಭಿಕರಾದ ದೇವದತ್ ಪಡಿಕಲ್ ಹಾಗೂ ಆರನ್ ಫಿಂಚ್, ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಕ್ರಿಸ್ ಮಾರಿಸ್ ಒಳಗೊಂಡ ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ. ಕೆಕೆಆರ್ ಎದುರು ಜಯ ದಾಖಲಿಸಿ ಪ್ಲೇ-ಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗುವ ಕನಸಿನಲ್ಲಿದೆ ಆರ್‌ಸಿಬಿ.
    * ಕೆಕೆಆರ್‌ಗೆ ಫರ್ಗ್ಯುಸನ್ ಬಲ
    ಸನ್‌ರೈಸರ್ಸ್‌ ಎದುರು ಪಂದ್ಯದಲ್ಲಿ 15ರನ್‌ಗೆ 3 ವಿಕೆಟ್ ಕಬಳಿಸಿ ಪಂದ್ಯ ಟೈಆಗಲು ಪ್ರಮುಖ ಪಾತ್ರವಹಿಸಿದ್ದ ಲಾಕಿ ಫರ್ಗ್ಯುಸನ್, ಬಳಿಕ ಸೂಪರ್ ಓವರ್‌ನಲ್ಲಿ 2 ವಿಕೆಟ್ ಪಡೆದು ತಂಡದ ಹೀರೋ ಆಗಿ ಹೊರಹೊಮ್ಮಿದರು. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿರುವ ಫರ್ಗ್ಯುಸನ್ ತಂಡದ ವಿಶ್ವಾಸ ಹೆಚ್ಚಿಸಿದ್ದಾರೆ. ಪ್ರಮುಖ ಆಟಗಾರ ಆಂಡ್ರೆ ರಸೆಲ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಕೈಕೊಡುತ್ತಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೆಕೆಆರ್ ತಂಡಕ್ಕೆ ಪ್ಲೇ-ಆಫ್ ಹಂತಕ್ಕೇರುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ.

    ಟೀಮ್ ನ್ಯೂಸ್:
    ಕೆಕೆಆರ್:
    ಹಿಂದಿನ ಪಂದ್ಯದಲ್ಲಿ ಜಯ ದಾಖಲಿಸಿರುವ ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಹಿಂದಿನ ಪಂದ್ಯದಲ್ಲಿ ದುಬಾರಿಯಾಗಿದ್ದ ಶಿವಂ ಮಾವಿ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ವಾಪಸಾಗಬಹುದು. ಲಾಕಿ ಫರ್ಗ್ಯುಸನ್ ಹಿಂದಿನ ಪಂದ್ಯದಲ್ಲಿ ಮಿಂಚಿರುವುದರಿಂದ ಸುನೀಲ್ ನಾರಾಯಣ್ ಹೊರಗುಳಿಯುವುದು ಅನಿವಾರ್ಯ.
    ಸಂಭಾವ್ಯ ತಂಡ: ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಆಂಡ್ರೆ ರಸೆಲ್, ಇವೊಯಿನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೀ), ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ/ಪ್ರಸಿದ್ಧ್ ಕೃಷ್ಣ , ಕುಲದೀಪ್ ಯಾದವ್, ಲಾಕಿ ಫರ್ಗ್ಯುಸನ್, ವರುಣ್ ಚಕ್ರವರ್ತಿ.
    ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು ಸೂಪರ್ ಓವರ್‌ನಲ್ಲಿ ಗೆಲುವು

    ಆರ್‌ಸಿಬಿ:
    ಶಾಬಾಜ್ ಅಹಮದ್ ಬದಲಿಗೆ ಶಿವಂ ದುಬೆ ತಂಡಕ್ಕೆ ವಾಪಸಾಗಬಹುದು. ವೇಗದ ಬೌಲಿಂಗ್ ವಿಭಾಗಕ್ಕೆ ಒತ್ತು ನೀಡಿದರೆ ಗುರುಕೀರತ್ ಮಾನ್ ಸಿಂಗ್ ಬದಲಿಗೆ ಮೊಹಮದ್ ಸಿರಾಜ್ ವಾಪಸಾಗಬಹುದು.
    ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ಗುರುಕೀರತ್ ಮಾನ್ ಸಿಂಗ್/ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕ್ರಿಸ್ ಮಾರಿಸ್, ಶಾಬಾಜ್ ಅಹಮದ್/ಮೊಹಮದ್ ಸಿರಾಜ್, ಇಸುರು ಉದಾನ, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
    ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಜಯ

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 26, ಕೆಕೆಆರ್: 15, ಆರ್‌ಸಿಬಿ: 11.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts