12 ದಿನಗಳ ಸತತ ನಷ್ಟದ ಸರಣಿಗೆ ಬ್ರೇಕ್​; ಶೇ. 3ರಷ್ಟು ಲಾಭ ಕಂಡ ರೇಮಂಡ್​ ಷೇರು

raymond final
Published on

ಮುಂಬೈ: 12 ದಿನಗಳ ಕಾಲದ ಸತತ ನಷ್ಟದ ಸರಣಿಯಿಂದ ರೇಮಂಡ್ ಲಿಮಿಟೆಡ್‌ನ ಷೇರುಗಳು ಶುಕ್ರವಾರ ಹೊರಬಂದವು. ರೇಮಂಡ್​ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ನಡುವಿನ ವಿವಾಹ ವಿಚ್ಛೇದದ ವಿವಾದದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆ ಕಂಪನಿಯ ಷೇರುಗಳು ಬೆಲೆ ಕುಸಿತ ಕಾಣುತ್ತಿದ್ದವು. ಆದರೆ, ಶುಕ್ರವಾರ 3 ಪ್ರತಿಶತದಷ್ಟು ಲಾಭ ಗಳಿಸಿವೆ.

ಶುಕ್ರವಾರ ಮಧ್ಯಾಹ್ನ 1:35ರ ಸುಮಾರಿಗೆ, ರೇಮಂಡ್‌ನ ಷೇರುಗಳು 3.18 ಪ್ರತಿಶತದಷ್ಟು ಏರಿಕೆಯಾಗಿ ರೂ 1,551.25 ಗೆ ತಲುಪಿದವು. ಈ ಮೂಲಕ ಕಂಪನಿಯ ಷೇರುದಾರು ನಿಟ್ಟುಸಿರು ಬಿಡುವಂತಾಗಿ, ಸುದೀರ್ಘ ನಷ್ಟದ ಸರಣಿಯು ಕೊನೆಗೊಂಡಿತು.

ಕಂಪನಿಯ ಅಧ್ಯಕ್ಷ ಗೌತಮ್ ಸಿಂಘಾನಿಯಾ ಮತ್ತು ಆಳಿತ ಮಂಡಳಿಯ ಸದಸ್ಯೆಯಾಗಿರುವ ಅವರ ಪತ್ನಿ ನವಾಜ್ ಮೋದಿ ನಡುವೆ ನಡೆಯುತ್ತಿರುವ ವೈವಾಹಿಕ ವಿಚ್ಚೇದನ ಕುರಿತು ಕಂಪನಿಯ ಸ್ವತಂತ್ರ ನಿರ್ದೇಶಕರು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ ನಂತರ ಈ ಏರಿಕೆ ಕಂಡುಬಂದಿದೆ.

ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಷೇರುದಾರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಸ್ವತಂತ್ರ ನಿರ್ದೇಶಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಗೌತಮ್ ಸಿಂಘಾನಿಯಾ ಅವರ ಪರಿತ್ಯಕ್ತ ಪತ್ನಿ ನವಾಜ್ ಮೋದಿ ಮಾಡಿರುವ ಹಲ್ಲೆ ಆರೋಪಗಳ ಕುರಿತು ತನಿಖೆಗೆ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಸ್ವತಂತ್ರ ನಿರ್ದೇಶಕರು ಈ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net