More

    ಹುಬ್ಬಳ್ಳಿಯಲ್ಲಿ ರಂಗೇರದ ರಂಗಪಂಚಮಿ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಐತಿಹಾಸಿಕ ರಂಗಪಂಚಮಿ ಈ ಬಾರಿ ಅಕ್ಷರಶಃ ಸಪ್ಪೆಯಾಗಿತ್ತು. ಡಿಜೆ ಸದ್ದು ಎಲ್ಲೂ ಕೇಳಿಸಲಿಲ್ಲ. ಯುವಕ- ಯುವತಿಯರು ಕುಣಿದು ಕುಪ್ಪಳಿಸುವುದು ಅಷ್ಟಾಗಿ ಕಂಡು ಬರಲಿಲ್ಲ. ಬಗೆ ಬಗೆಯ ವೇಷಭೂಷಣ, ರತಿ-ಕಾಮಣ್ಣರ ಮೂರ್ತಿ ಮೆರವಣಿಗೆ ಒಂದೆರಡು ಕಡೆ ಮಾತ್ರ ಕಂಡು ಬಂದಿತು.

    ಹುಬ್ಬಳ್ಳಿ ಓಕುಳಿಗೆ ತನ್ನದೇ ಆದ ಇತಿಹಾಸವಿದೆ. ಒಂದೊಂದು ಓಣಿಯಲ್ಲಿ ಬಣ್ಣದ ಅಬ್ಬರವಿರುತ್ತಿತ್ತು. ಈ ಬಾರಿ ಬಣ್ಣದಾಟಕ್ಕೆ ಅಡ್ಡಿಯಾಗಿದ್ದು ಕರೊನಾ ವೈರಸ್. ಕರೊನಾ 2ನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರಳ ಹೋಳಿ ಆಚರಣೆಗೆ ಕರೆ ನೀಡಿದ್ದರಿಂದ ಈ ಬಾರಿ ರಂಗಪಂಚಮಿ ರಂಗೇರಲಿಲ್ಲ. ಮೆರವಣಿಗೆ, ಗುಂಪು ಸೇರುವುದು ನಿಷೇಧಿಸಲಾಗಿದ್ದರಿಂದ ಹೋಳಿ ಹಬ್ಬ ಕಳೆಗುಂದಿತ್ತು.

    ಚನ್ನಮ್ಮ ವೃತ್ತ, ರಾಯಣ್ಣ ವೃತ್ತ ಪ್ರತಿ ವರ್ಷ ಹೋಳಿ ಹಬ್ಬದಂದು ಜನದಟ್ಟಣೆಯಿಂದ ಕೂಡಿರುತ್ತಿತ್ತು. ಕಮರಿಪೇಟೆ, ಜೈ ಭಾರತ ಸರ್ಕಲ್, ದಾಜಿಬಾನಪೇಟೆ, ಮೇದಾರ ಓಣಿ, ಮರಾಠ ಗಲ್ಲಿ, ಬಮ್ಮಾಪುರ ಓಣಿ, ಹಳೇ ಹುಬ್ಬಳ್ಳಿ, ಚನ್ನಪೇಟೆ, ನೇಕಾರ ನಗರ, ನವನಗರ, ಮತ್ತಿತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ ಕಂಡುಬಂತು. ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಿಷೇಧದ ನಡುವೆಯೂ ಕೆಲವೆಡೆ ಯುವಕರು ಗಡಿಗೆ ಒಡೆಯುವ ಸ್ಪರ್ಧೆ ಆಯೋಜಿಸಿದ್ದರು.

    18 ಅಡಿ ಬಿದಿರಿನ ಕಾಮಣ್ಣ

    ಹೊಸ ಹುಬ್ಬಳ್ಳಿ ಮೇದಾರ ಓಣಿಯ ಬಿದಿರಿನ ಕಾಮಣ್ಣನಿಗೆ 200 ವರ್ಷಗಳ ಇತಿಹಾಸವಿದೆ. ಇಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 18 ಅಡಿ ಎತ್ತರದ ಬಿದಿರಿನ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿತ್ತು. ಪೊಲೀಸರು ನಿಯಂತ್ರಿಸಿದರೂ ಪದೇಪದೆ ಸಾಕಷ್ಟು ಜನ ಇಲ್ಲಿ ಗುಂಪು ಸೇರುತ್ತಿದ್ದರು. ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಮಧ್ಯಾಹ್ನ 3 ಗಂಟೆಗೆ ಕಾಮದಹನ ಮಾಡಲಾಯಿತು.

    225 ಕಾಮ ದಹನ

    ಹುಬ್ಬಳ್ಳಿ ನಗರದಲ್ಲಿ ಈ ವರ್ಷ 332 ಕಡೆ ಕಾಮ-ರತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗುರುವಾರ ಒಂದೇ ದಿನ 200ಕ್ಕೂ ಹೆಚ್ಚು ಕಡೆ ಕಾಮದಹನ ಮಾಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕೆಲವೆಡೆ ಕಾಮದಹನ ಮಾಡಲಾಗಿಲ್ಲ. ಚಂದ್ರನಾಥ ನಗರದಲ್ಲಿ ಬೆಳಗ್ಗೆ 10 ಗಂಟೆಯ ಒಳಗೆ ಕಾಮದಹನ ಮಾಡಲಾಯಿತು. ಚನ್ನಪೇಟೆಯಲ್ಲಿ ಸಂಜೆ 6 ಗಂಟೆಗೆ ಕಾಮದಹನ ನಡೆಯಿತು.

    ಲಾಠಿ ಹಿಡಿದು ನಿಂತಿದ್ದ ಪೊಲೀಸರು

    ರಂಗ ಪಂಚಮಿ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರಿ ಪೊಲೀಸ್ ಕಣ್ಗಾವಲು ಇತ್ತು. ಎಲ್ಲೆಲ್ಲೂ ಲಾಠಿ ಹಿಡಿದು ನಿಂತ ಪೊಲೀಸರು ಕಂಡು ಬಂದರು. ಕೆಲ ಅಧಿಕಾರಿಗಳು ಜೀಪ್​ನಲ್ಲಿ ಸಂಚರಿಸುತ್ತ ಮೈಕ್​ನಲ್ಲಿ ಕರೊನಾ 2ನೇ ಅಲೆ ಎಚ್ಚರಿಕೆ ನೀಡಿದರು. ಜನ ಗುಂಪು ಸೇರದಂತೆ ನೋಡಿಕೊಂಡರು. ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿಗಳಾದ ಕೆ. ರಾಮರಾಜನ್ ಹಾಗೂ ಆರ್.ಬಿ. ಬಸರಗಿ ನಗರ ಸಂಚಾರ ನಡೆಸಿ ಭದ್ರತೆ ಪರಿಶೀಲಿಸಿದರು. ಪ್ರತಿ ವರ್ಷ ಬಣ್ಣದಲ್ಲಿ ಮಿಂದೇಳುತ್ತಿದ್ದ ಬಹುತೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ಈ ಬಾರಿ ಅಂತರ ಕಾಯ್ದುಕೊಂಡಿದ್ದರು. ಕೆಲವರು ಮಾತ್ರ ಔಪಚಾರಿಕವಾಗಿ ಪರಸ್ಪರ ಬಣ್ಣ ಹಚ್ಚಿಕೊಂಡರು.

    ಕಮರಿಪೇಟೆಯಲ್ಲಿ ಮೆರವಣಿಗೆ

    ಕಮರಿಪೇಟೆಯ ಹಲವು ಪ್ರದೇಶಗಳಲ್ಲಿ ಸಿಆರ್​ಪಿಸಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಷೇಧದ ನಡುವೆಯೂ ಕಮರಿಪೇಟೆಯ ಜೈ ಭಾರತ ಸರ್ಕಲ್​ನಲ್ಲಿ ಕಾಮ- ರತಿಯ ಬೃಹತ್ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಕೇಳದೆ ನೂರಾರು ಜನ ನೆರೆದಿದ್ದರು. ಬಾಯಿ-ಬಾಯಿ ಬಡಿದುಕೊಂಡು ಕಾಮನನ್ನು ದಹಿಸಿದರು. ಇಲ್ಲಿ ಪೊಲೀಸರು ಹಾಗೂ ಆಯೋಜಕರೊಂದಿಗೆ ವಾಗ್ವಾದ ಉಂಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts