More

    ಭರದಿಂದ ಸಾಗುತ್ತಿದೆ ರಾಮ ಮಂದಿರ ನಿರ್ಮಾಣ

    ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಾ.31ರ ವರೆಗಿನ ಲೆಕ್ಕಾಚಾರದ ಪ್ರಕಾರ ಮಂದಿರಕ್ಕೆ 3,200 ಕೋಟಿ ರೂ.ಸಮರ್ಪಣೆಯಾಗಿದೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ, ವಿಹಿಂಪ ಮುಖಂಡ ಗೋಪಾಲ್ ತಿಳಿಸಿದರು.

    ಪೇಜಾವರ ಮಠದಲ್ಲಿ ಸೋಮವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

    ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ 2 ಸಾವಿರ ಕೋಟಿ ರೂ.ವೆಚ್ಚ ಅಂದಾಜು ಮಾಡಲಾಗಿದೆ. ಉಳಿದ ಧನದ ಸದುಪಯೋಗ ಕುರಿತು ಅನೇಕ ಸಲಹೆಗಳು ಬಂದಿವೆ. ಆರ್ಥಿಕ ತಜ್ಞರ ಸಮಿತಿಯ ಸಲಹೆಯನ್ನೂ ಪಡೆಯಲಾಗಿದೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಕಳೆದ ವರ್ಷ ಆ.5ರಂದು ಪ್ರಧಾನಿ ಮೋದಿಯವರು ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿ, ಗರ್ಭಗುಡಿಯ ಸ್ಥಾನದಲ್ಲಿ ಕಲಶ ಸ್ಥಾಪಿಸಿದ್ದರು. ಮೇ 17ರಂದು 14 ಮೀಟರ್ ಆಳದ ಗರ್ಭಗುಡಿಯ ಭಾಗದಲ್ಲಿ ಕೂರ್ಮ ಶಿಲೆ ಹಾಗೂ ಎಂಟು ಮೂಲೆಗಳಲ್ಲಿ ವಿವಿಧ ಶಿಲೆಗಳನ್ನಿಡುವ ಕಾರ್ಯ ಶಾಸ್ತ್ರ ಶುದ್ಧ ಪೂಜಾವಿಧಿ ಪೂರ್ಣಗೊಂಡಿದೆ. ಜನ್ಮಭೂಮಿ ಮಂದಿರದ ಕೆಳಗೆ ಹಳೇ ಕಟ್ಟಡದ ಅವಶೇಷಗಳಿಂದ ಕೂಡಿದ ಶಿಥಿಲ ಮಣ್ಣು ತುಂಬಿದ್ದು, ಕಟ್ಟಡದ ಭದ್ರ ಅಡಿಪಾಯಕ್ಕೆ ಬೇಕಾದ ಗಟ್ಟಿಯಾದ ಮಣ್ಣು ಲಭ್ಯವಿರಲಿಲ್ಲ. ಹೀಗಾಗಿ 300×400 ಅಡಿ ಪ್ರದೇಶದಲ್ಲಿರುವ 12 ಮೀಟರ್ (40 ಅಡಿ) ಆಳದ ಮಣ್ಣನ್ನು ತೆಗೆಯಲಾಗಿದೆ. ಆ ಭಾಗದಲ್ಲಿ ಕಡಿ, ಮರಳು, ಬೂದಿ, ಸ್ವಲ್ಪ ಪ್ರಮಾಣದ ಸಿಮೆಂಟಿನ ಮಿಶ್ರಣ ತುಂಬಿಸುವ ಕೆಲಸ ನಡೆಯುತ್ತಿದೆ. ಈ ಕೆಲಸ ಅಕ್ಟೋಬರ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದರು.

    ಹೆಚ್ಚುವರಿ ಜಾಗ ಖರೀದಿ: ಮಂದಿರ ನಿರ್ಮಾಣಕ್ಕೆ ಅವಶ್ಯವಿರುವ ಜನ್ಮಭೂಮಿ ಪರಿಸರದ ಅಕ್ಕಪಕ್ಕದ ಸ್ಥಾನಗಳನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೋಪಾಲ ಹೇಳಿದರು. ಫಕೀರರಾಮ ಮಂದಿರ, ಕೌಸಲ್ಯಾ ಭವನವನ್ನು ಟ್ರಸ್ಟ್ ತನ್ನದಾಗಿಸಿಕೊಂಡಿದೆ. ಉಳಿದವರ ಜತೆಗೆ ಮಾತುಕತೆ ನಡೆದಿದೆ. ಅಗತ್ಯ ಭೂಮಿ ಸಿಗುವ ವಿಶ್ವಾಸ ಇದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಧರ್ಮಶಾಲೆ ನಿರ್ಮಿಸಲು ಸ್ಥಳ ಖರೀದಿಸಲಾಗುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣದ ಜತೆಗೆ ಯಾಗಶಾಲೆ, ಗೋಶಾಲೆ, ವೇದ ಪಾಠಶಾಲೆ, ಮ್ಯೂಸಿಯಂ ಇತ್ಯಾದಿಗಳ ನಿರ್ಮಾಣವಾಗಲಿದೆ. ಯೋಜನೆಗಳ ನೀಲಿನಕ್ಷೆ ಅಂತಿಮ ಹಂತದಲ್ಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts