More

    ಸಾಹಿತ್ಯಾಸಕ್ತಿ ಇಲ್ಲದವರ ಕೈಯಲ್ಲಿ ಕಸಾಪ

    ನಾಗಮಂಗಲ: ಜಾತಿ, ಧರ್ಮ, ರಾಜಕೀಯ ಪಕ್ಷಗಳಿಂದ ದೂರವಿರಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಪ್ರಸ್ತುತ ಸಾಹಿತ್ಯಾಸಕ್ತಿ ಇಲ್ಲದವರ ಕೈಯಲ್ಲಿ ಸಿಲುಕಿದೆ ಎಂದು ಸಾಹಿತಿ ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 110ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪರಿಷತ್‌ನ ಮೂಲ ಧ್ಯೇಯ ಮರೆಯಾಗುತ್ತಿದ್ದು, ಹಳ್ಳಿಗಾಡಿನ ನಿಜವಾದ ಕನ್ನಡಿಗರ ಮನಸ್ಸನ್ನು ಬೆಸೆಯುವಲ್ಲಿ ಪರಿಷತ್ ವಿಫಲವಾಗಿದೆ ಎಂದು ಹೇಳಿದರು.
    ಸಾಮಾನ್ಯ ಜನರ ಬಳಿಗೆ ಪುಸ್ತಕಗಳನ್ನು ಕೊಂಡೊಯ್ದರೆ ಅನಾಚಾರಗಳಿಗೆ ಸ್ವಯಂ ನಿಯಂತ್ರಣ ಹಾಕಬಹುದಾಗಿದೆ. ಮಾತ್ರವಲ್ಲದೆ ಸಾಹಿತ್ಯದ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಆದರೆ ಇಂದು ಪುಸ್ತಕ ಸಂಸ್ಕೃತಿ ಎಂಬುದು ಕಣ್ಮರೆಯಾಗಿದೆ ಎಂದರು.

    ಕರ್ನಾಟಕದಲ್ಲಿ ಕನ್ನಡದ ಅಸ್ಮಿತೆಗಾಗಿ ಪರಿಷತ್ ಸ್ಥಾಪಿಸಲಾಯಿತು. ಪರಿಣಾಮ ಹೊರ ರಾಜ್ಯಗಳಲ್ಲಿಯೂ ಕಸಾಪ ತನ್ನ ಕಾರ್ಯವೈಖರಿಯನ್ನು ವಿಸ್ತರಿಸಿಕೊಂಡಿದೆ. ಈ ಹಿಂದೆ ಸಾಹಿತ್ಯ ಹಾಗೂ ಸಾಹಿತಿಗಳು ಬಡವರಾಗಿದ್ದು, ಅವರ ಸಾಹಿತ್ಯಗಳನ್ನು ಅಚ್ಚು ಹಾಕಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇತ್ತು. ರಾಜಾಶ್ರಯದಲ್ಲಿ ಬೆಳೆದುಬಂದಿದ್ದ ಕನ್ನಡ ಸಾಹಿತ್ಯ ಕೆಲವು ವರ್ಷಗಳ ಹಿಂದೆ ಸಾಹಿತ್ಯಕ್ಕೆ ರಾಜಾಶ್ರಯ ತಪ್ಪಿ ಹೋಗಿತ್ತು. ಆ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತೆ ಕನ್ನಡ ಸಾಹಿತ್ಯಕ್ಕೆ ರಾಜಾಶ್ರಯ ನೀಡಿದರು. ಪರಿಣಾಮ ಇಂದು ಹೆಚ್ಚು ಪುಸ್ತಕಗಳು ಮುದ್ರಣವಾಗುತ್ತಿವೆ. ಆದರೆ ಓದುಗರಿಲ್ಲದಂತಾಗಿದೆ ಎಂದು ಹೇಳಿದರು.

    ಸಾರ್ವತ್ರಿಕ ಚುನಾವಣೆಯನ್ನು ನಾಚಿಸುವಂತೆ ಕಸಾಪ ಚುನಾವಣೆ ನಡೆಯುತ್ತಿರುವುದು ನೋವಿನ ಸಂಗತಿ. ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಆಧಾರದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು ದುರದೃಷ್ಟಕರ. ಕನ್ನಡ ಬಂಧನಕ್ಕೊಳಪಟ್ಟಿರುವ ಭಾಷೆಯಲ್ಲ. ಬದಲಾಗಿ ಕನ್ನಡ ರೂಪಾಂತರಗೊಂಡು ಡಿಜಿಟಲ್ ಸ್ಪರ್ಶ ಪಡೆದಿದ್ದು, ಕನ್ನಡ ಭಾಷೆ ಅಳಿದಿಲ್ಲ ಎಂದರು.

    ಹಿರಿಯ ಸಾಹಿತಿ ತಿಮ್ಮರಾಯಿಗೌಡ ಮಾತನಾಡಿ, ವಿದ್ಯಾವಂತರು ಕನ್ನಡ ಭಾಷೆಯನ್ನು ಸರಿಯಾಗಿ ಬಳಸುತ್ತಿಲ್ಲ, ಬೆಳೆಸುತ್ತಿಲ್ಲ. ಸ್ವಾಭಾವಿಕವಾದ ಮತ್ತು ಶುದ್ಧ ಕನ್ನಡವನ್ನು ಬಳಸುತ್ತಿರುವವರು, ಬೆಳೆಸುತ್ತಿರುವವರು ಹಳ್ಳಿಯ ಜನ. ಸಾಹಿತ್ಯ ಗೊತ್ತಿಲ್ಲದಿದ್ದವರು ಇಂದು ಕಸಾಪದಲ್ಲಿ ಅಧಿಕಾರದಲ್ಲಿದ್ದಾರೆ. ಹೀಗಾಗಿಯೇ ಕಸಾಪ ಮತ್ತು ಕನ್ನಡ ಸಾಹಿತ್ಯಕ್ಕೆ ಇಂತಹ ದುಸ್ಥಿತಿ ಬಂದಿದೆ ಎಂದರು.

    ಕಸಾಪ ಸಂಸ್ಥಾಪನ ದಿನ ಅಂಗವಾಗಿ ಪ್ರಗತಿಪರ ರೈತರಾದ ವಿರುಪಾಕ್ಷಮೂರ್ತಿ ಹಾಗೂ ರಾಮನಂಜಯ್ಯ ಅವರನ್ನು ಅಭಿನಂಧಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಖರಡ್ಯಬಸವೇಗೌಡ, ಪದಾಧಿಕಾರಿಗಳಾದ ನಯಾಜ್‌ಪಾಷ, ಗಿರೀಶ್, ಸೌಂದರ್ಯ, ಅಶೋಕ್, ಚನ್ನಬಸಪ್ಪ, ಕೇಶವಮೂರ್ತಿ, ಉಮಾ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts