More

    ಕನ್ನಡ ಉಳಿವಿಗಾಗಿ ಹೋರಾಡಬೇಕಿರುವುದು ಕಳವಳಕಾರಿ

    ಮದ್ದೂರು: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಶೋಚನೀಯ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಕಳವಳಕಾರಿ ಎಂದು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ವಿಷಾದ ವ್ಯಕ್ತಪಡಿಸಿದರು.

    ಪಟ್ಟಣದ ವರ್ಧಮಾನ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ 110ನೇ ಸಂಸ್ಥಾಪನಾ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಶೇ. 30 ರಿಂದ 40ರಷ್ಟು ಮಾತ್ರ ಕನ್ನಡಿಗರು ವಾಸವಿದ್ದಾರೆ. ಇನ್ನುಳಿದ ಶೇ.60 ಜನರು ಅನ್ಯಭಾಷಿಕರು ಬೆಂಗಳೂರನ್ನು ಅವರಿಸಿಕೊಂಡಿದ್ದಾರೆ ಎಂದರು.

    ಕನ್ನಡಿಗರಾದ ನಾವು ಅನ್ಯ ಭಾಷಿಕರನ್ನು ಸೌಹಾರ್ದಯುತವಾಗಿ ಕೈಬೀಸಿ ಕರೆದು ಸ್ವಾಗತಿಸಿ ಅವರ ಭಾಷೆಯನ್ನು ಅನುಕರಿಸುತ್ತೇವೆ. ಆದರೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡದಿರುವುದು ಬೇಸರ ತಂದಿದೆ ಎಂದರು.

    ರಾಜ್ಯದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಮಂಡ್ಯ. 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲೇ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ.ಉಮಾಶಂಕರ್ ಮಾತನಾಡಿ, ಕನ್ನಡದ ಅಸ್ಮಿತೆ ಉಳಿಯಬೇಕಾದರೆ ಮೊದಲು ನಾವು ಕನ್ನಡವನ್ನು ಬಳಸುವ ಮತ್ತು ಬೆಳೆಸುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

    ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕ್ರಾಂತಿ ಸಿಂಹಮಾತನಾಡಿ, ಕನ್ನಡಕ್ಕೆ ಹಲವು ಕವಿ ಮಾನ್ಯರು, ದಾಸರು, 12ನೇ ಶತಮಾನದ ಬಸವಣ್ಣರ ಆದಿಯಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವುಗಳನ್ನು ನಾವೆಲ್ಲರೂ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ನಾವೆಲ್ಲರೂ ಕನ್ನಡದಲ್ಲಿ ಸಹಿ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕಾಗಿದೆ. ಕನ್ನಡಿಗರಾದ ನಾವೇ ಕನ್ನಡವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಅಲ್ಪಸಂಖ್ಯಾ ಭಾಷೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

    ವಳಗೆರಹಳ್ಳಿ ಪ್ರಮೀಳ ವೀರಪ್ಪ ಪ್ರೌಢಶಾಲೆಯ ನಿವೃತ ದೈಹಿಕ ಶಿಕ್ಷಕ ದೇಶಹಳ್ಳಿ ಸಿದ್ದರಾಜು ಅವರನ್ನು ಅಭಿನಂದಿಸಲಾಯಿತು. ಕಲಾವಿದ ಮತ್ತು ಗಾಯಕ ಅಂಬರಹಳ್ಳಿ ಸ್ವಾಮಿ ಮತ್ತು ತಂಡ ಕನ್ನಡ ಗೀತೆಗಳನ್ನು ಹಾಡಿತು. ವರ್ಧಮಾನ ಕಾಲೇಜಿನ ಕಾರ್ಯದರ್ಶಿ ಎಂ.ಎಚ್.ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಟಿ ಸಿ ವಸಂತಾ, ಕರ್ನಾಟಕ ಜಾನಪದ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ಚಾಮನಹಳ್ಳಿ ಮಂಜು, ಜಿಲ್ಲಾ ಆರೋಗ್ಯ ನಿವೃತ್ತ ಶಿಕ್ಷಣಾಧಿಕಾರಿ ಶಿವಾನಂದ, ಮುಖಂಡರಾದ ಯರಗನಹಳ್ಳಿ ಮಹಾಲಿಂಗ, ಸೋಂಪುರ ಉಮೇಶ, ಶಿವಲಿಂಗಯ್ಯ, ಪಟೇಲ್ ಹರೀಶ, ರಮೇಶ, ಉಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts