More

    ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸನ್‌ರೈಸರ್ಸ್‌ ಸವಾಲು

    ದುಬೈ: ಪ್ಲೇಆ್ ಹಂತಕ್ಕೇರುವ ದೃಷ್ಟಿಯಿಂದ ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-13ರಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ. ಸೋತ ತಂಡಕ್ಕೆ ಮುಂದಿನ ಹಾದಿ ಬಹುತೇಕ ಬಂದ್ ಆಗಲಿದೆ. ಹೀಗಾಗಿ ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಹಿಂದಿನ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ 5 ವಿಕೆಟ್‌ಗಳಿಂದ ಜಯ ದಾಖಲಿಸಿತ್ತು. ಟೂರ್ನಿಯುದ್ದಕ್ಕೂ ಅಸ್ಥಿರ ನಿರ್ವಹಣೆಯಿಂದ ಬಳಲಿರುವ ಉಭಯ ತಂಡಗಳು ಮೈಚಳಿ ಬಿಟ್ಟು ಹೋರಾಡಬೇಕಿದೆ.

    * ಒತ್ತಡದಲ್ಲಿ ರಾಜಸ್ಥಾನ ರಾಯಲ್ಸ್ : ಸ್ಟೀವನ್ ಸ್ಮಿತ್ ಬಳಗ ಹಿಂದಿನ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ ಅವರನ್ನು ಕಣಕ್ಕಿಳಿಸಿ ಯಶ ಕಂಡಿರುವ ಸ್ಮಿತ್, ಸನ್‌ರೈಸರ್ಸ್‌ ವಿರುದ್ಧವೂ ಇದೇ ಮಾರ್ಗ ಅನುಸರಿಸುವ ಸಾಧ್ಯತೆಗಳಿವೆ. ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ನೀಡಿದರೂ ರಾಬಿನ್ ಉತ್ತಪ್ಪ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಜತೆಗೆ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಸಿಡಿದಿಲ್ಲ. ಆರಂಭಿಕ 2 ಪಂದ್ಯಗಳಲ್ಲಿ ಸಿಡಿದಿದ್ದ ಸಂಜು ಸ್ಯಾಮ್ಸನ್ ಬಳಿಕ ಸತತ ವೈಫಲ್ಯರಾಗುತ್ತಿದ್ದಾರೆ. ರಾಹುಲ್ ತೆವಾಟಿಯಾ, ಕನ್ನಡಿಗ ಶ್ರೇಯಸ್ ಗೋಪಾಲ್ ಜೋಡಿ ಬ್ಯಾಟಿಂಗ್‌ಗೂ ಸೈ ಹಾಗೂ ಬೌಲಿಂಗ್‌ಗೂ ಸೈ ಎನಿಸಿಕೊಂಡಿದೆ. ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್‌ಗೂ ಈ ಜೋಡಿ ಸಾಥ್ ನೀಡುತ್ತಿದೆ.

    * ಸನ್‌ರೈಸರ್ಸ್‌ಗೆ ಕೈಕೊಡುತ್ತಿರುವ ಯುವಕರು : ಹ್ಯಾಟ್ರಿಕ್ ಸೋಲಿನಿಂದ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿರುವ ಸನ್‌ರೈಸರ್ಸ್‌ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ. ಕೆಕೆಆರ್ ಎದುರು ಗೆಲುವಿನಂಚಿನಲ್ಲಿ ಎಡವಿ ಸೂಪರ್ ಓವರ್‌ನಲ್ಲಿ ಮುಗ್ಗರಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ನಂಬಿಕಸ್ತ ಬ್ಯಾಟ್ಸ್‌ಮನ್ ಇಲ್ಲದೆ ಬಳಲಿರುವ ಸನ್‌ರೈಸರ್ಸ್‌ ಪುಟಿದೇಳಬೇಕಿದೆ. ಗಾಯದ ಸಮಸ್ಯೆಯಿಂದಾಗಿ ಭುವನೇಶ್ವರ್ ಹಾಗೂ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿ ಮಧ್ಯದಲ್ಲಿಯೇ ಹೊರಬಿದ್ದಿದ್ದು, ತಂಡಕ್ಕೆ ಭಾರಿ ಹಿನ್ನಡೆ ತಂದಿದೆ. ಜಾನಿ ಬೇರ್‌ಸ್ಟೋ, ಡೇವಿಡ್ ವಾರ್ನರ್, ಮನೀಷ್ ಪಾಂಡೆ ಹಾಗೂ ಕೇನ್ ವಿಲಿಯಮ್ಸನ್ ಒಳಗೊಂಡ ಬ್ಯಾಟಿಂಗ್ ಪಡೆಯಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಟಿ.ನಟರಾಜನ್ ಹೊರತುಪಡಿಸಿ ಉಳಿದ ಬೌಲರ್‌ಗಳು ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಈ ಜೋಡಿಗೆ ಸೂಕ್ತ ಆಟಗಾರರನ್ನು ಹುಡುಕಿಕೊಳ್ಳಲು ಸನ್‌ರೈಸರ್ಸ್‌ ವಿಫಲವಾಗಿದೆ.

    ಟೀಮ್ ನ್ಯೂಸ್:
    ರಾಜಸ್ಥಾನ ರಾಯಲ್ಸ್: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆಗಳಿವೆ. ರಾಬಿನ್ ಉತ್ತಪ್ಪ ಬದಲಿಗೆ ಮನನ್ ವೋಹ್ರಾಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ.
    ಸಂಭಾವ್ಯ ತಂಡ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಾಹುಲ್ ತೆವಾಟಿಯಾ, ಆರ್ಚರ್, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

    ಕಳೆದ ಪಂದ್ಯ: ಸಿಎಸ್‌ಕೆ ಎದುರು 7 ವಿಕೆಟ್ ಜಯ.

    ಸನ್‌ರೈಸರ್ಸ್‌ ಹೈದರಾಬಾದ್: ನಿರೀಕ್ಷಿತ ನಿರ್ವಹಣೆ ತೋರಲು ವಿಫಲವಾಗುತ್ತಿರುವ ಕೇನ್ ವಿಲಿಯಮ್ಸನ್ ಹೊರಗುಳಿಯಬಹುದು. ಇವರ ಬದಲಿಗೆ ಜೇಸನ್ ಹೋಲ್ಡರ್ ಅಥವಾ ಮೊಹಮದ್ ನಬಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
    ಸಂಭಾವ್ಯ ತಂಡ: ಜಾನಿ ಬೇರ್‌ಸ್ಟೋ, ಕೇನ್ ವಿಲಿಯಮ್ಸನ್/ಜೇಸನ್ ಹೋಲ್ಡರ್/ಮೊಹಮದ್ ನಬಿ, ಪ್ರಿಯಂ ಗಾರ್ಗ್, ಡೇವಿಡ್ ವಾರ್ನರ್ (ನಾಯಕ), ಮನೀಷ್ ಪಾಂಡೆ, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮ, ಟಿ.ನಟರಾಜನ್, ಬಸಿಲ್ ಥಂಪಿ.

    ಕಳೆದ ಪಂದ್ಯ: ಕೆಕೆಆರ್ ಎದುರು ಸೂಪರ್ ಓವರ್‌ನಲ್ಲಿ ಸೋಲು.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 12, ರಾಜಸ್ಥಾನ : 6, ಸನ್‌ರೈಸರ್ಸ್‌: 6.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts