More

    ಕರಾವಳಿಯಲ್ಲೂ ಅಕಾಲಿಕ ಮಳೆ

    ಮಂಗಳೂರು/ಉಡುಪಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧೆಡೆ ಗುರುವಾರ ರಾತ್ರಿ, ಶುಕ್ರವಾರ ಮುಂಜಾನೆ, ಸಾಯಂಕಾಲ ವೇಳೆಯಲ್ಲಿ ತುಂತುರು, ಕೆಲವೆಡೆ ಸಾಧಾರಣ ಮಳೆಯಾಗಿದೆ.

    ದ.ಕ. ಜಿಲ್ಲೆಯ ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನ ವಿವಿಧೆಡೆ ಮಳೆಯೊಂದಿಗೆ ಗಾಳಿ, ಗುಡುಗು-ಮಿಂಚು ಅಬ್ಬರವಿತ್ತು. ಈಶ್ವರಮಂಗಲ ಪರಿಸರದಲ್ಲಿ ಶುಕ್ರವಾರ ಸಂಜೆ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದ್ದು, ಸುಳ್ಯಪದವು ರಸ್ತೆಯ ಮೀನಾವು- ಪಡ್ಪು ಎಂಬಲ್ಲಿ ರಸ್ತೆಗೆ ಮರ ಉರುಳಿ ಬಿದ್ದು, ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಂಗಳೂರು ನಗರ ಹಾಗೂ ಹೊರ ವಲಯದಲ್ಲೂ ಶುಕ್ರವಾರ ಮುಂಜಾನೆ ವೇಳೆಗೆ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲೂ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ಆಗುಂಬೆ, ಸೋಮೇಶ್ವರ, ಗೋಳಿಯಂಗಡಿ ಭಾಗದಲ್ಲಿ ಹಾಗೂ ಕಾರ್ಕಳ ತಾಲೂಕು ಗಡಿಭಾಗ ಹೊಸ್ಮಾರು ಮುಂತಾದೆಡೆ ಮಳೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.

    ಸಂಕಷ್ಟದಲ್ಲಿ ಕೃಷಿಕರು: ಅಕಾಲಿಕ ಮಳೆಯಿಂದ ಅಡಕೆ ಕೃಷಿಕರು ಪರದಾಡಬೇಕಾಯಿತು. ಗುರುವಾರ ರಾತ್ರಿ ಅಂಗಳ ಸೇರಿದಂತೆ ವಿವಿಧೆಡೆ ಒಣಗಲು ಹಾಕಿದ್ದ ಅಡಕೆ ಒದ್ದೆಯಾಗಿದೆ. ಶುಕ್ರವಾರವೂ ಸಾಯಂಕಾಲ ವೇಳೆ ಮತ್ತೆ ಮಳೆಯಾಗಿದ್ದರಿಂದ ಅಡಕೆ ಒಣಗಿಸಲು ಸಮಸ್ಯೆಯಾಗಿದೆ. ಪ್ರಸ್ತುತ ಕೊಯ್ಲಿನ ಅಡಕೆ ದೊಡ್ಡ ಪ್ರಮಾಣದಲ್ಲಿ ಅಂಗಳದಲ್ಲಿ ಇರುವುದರಿಂದ ಅದನ್ನು ಮಳೆಯಿಂದ ರಕ್ಷಿಸುವುದು ಕಷ್ಟದ ಕೆಲಸ. ಒಣಗಿದ ಅಡಕೆಯನ್ನು ರಾಶಿ ಮಾಡಿ ಸುರಕ್ಷಿತ ಜಾಗದಲ್ಲಿ ಇರಿಸುವುದು ಅಥವಾ ಟಾರ್ಪಾಲು ಹೊದೆಸುವುದಕ್ಕೂ ಅವಕಾಶ ನೀಡದೆ ಮಳೆ ಬಂದಿರುವುದರಿಂದ ಸಮಸ್ಯೆಯಾಗಿದೆ. ಪ್ರಸ್ತುತ ಅಡಕೆಗೆ ಬಂಗಾರದ ಬೆಲೆಯಿದ್ದು, ಮಳೆಗೆ ಒದ್ದೆಯಾಗುವ ಮೂಲಕ ರೈತರ ಶ್ರಮಕ್ಕೆ ಫಲ ಸಿಗದ ಭೀತಿ ಉಂಟಾಗಿದೆ.

    ಇನ್ನೆರಡು ದಿನ ಇದೇ ಸ್ಥಿತಿ: ವಾತಾವರಣದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿದ್ದು, ಎಲ್ಲ ಕಡೆಯಿಂದ ಗಾಳಿಯೊಂದಿಗೆ ಮೋಡಗಳು ಬಂದು ಸೇರಿ ಇದ್ದಕ್ಕಿಂತೆ ಮಳೆಯಾಗುತ್ತಿದೆ. ಪೂರ್ವ ಮುಂಗಾರು ಸಮಯದಲ್ಲಿ ಇದು ಸಾಮಾನ್ಯ. ಆದರೆ ಈ ಬಾರಿ ಸ್ವಲ್ಪ ಬೇಗ ಇಂತಹ ಬದಲಾವಣೆಯಾಗಿದೆ. ಇನ್ನೆರಡು ದಿನ ಮಳೆಯಾಗುವ ಸಾಧ್ಯತೆಯಿದ್ದು, ಬಳಿಕ ಮೊದಲಿನಂತಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗಾವಸ್ಕರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ದಿನದ ಕನಿಷ್ಠ ತಾಪಮಾನ 22.9ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 34.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts