More

    ರೈಲ್ವೆ ಅಂಡರ್ ಬ್ರಿಡ್ಜ್ ಕೆಲಸಕ್ಕೆ ರೆಡ್ ಸಿಗ್ನಲ್ ; 4 ತಿಂಗಳ ಹಿಂದೆ ಸ್ಥಗಿತಗೊಂಡ ಕೆಲಸ ; ಜನಾಕ್ರೋಶ ಸ್ಫೋಟ

    ತುಮಕೂರು : ಸಿದ್ಧಗಂಗಾಮಠಕ್ಕೆ ತೆರಳುವ ಮಾರ್ಗದ ಕ್ಯಾತಸಂದ್ರ ‘ರೈಲ್ವೆ ಲೆವೆಲ್ ಕ್ರಾಸಿಂಗ್’ ಬಳಿಯ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕಳೆದ 4 ತಿಂಗಳಿನಿಂದ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಆಕ್ರೋಶ ಸ್ಫೋಟಗೊಂಡಿದೆ.

    ಕಳೆದ ಆಗಸ್ಟ್‌ನಲ್ಲಿ ಕೈಗೆತ್ತಿಕೊಂಡ ರೈಲ್ವೆ ಅಂಡರ್ ಬ್ರಿಡ್ಜ್ (ಆರ್‌ಯುಬಿ) ಕಾಮಗಾರಿಯನ್ನು ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ರೈಲ್ವೆ ಇಲಾಖೆ ನೀಡಿತ್ತು. ಆದರೆ, ವರ್ಷವಾಗುತ್ತಾ ಬಂದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಜನರ ಸಹನೆಯ ಕಟ್ಟೆಯೊಡೆಯುವಂತೆ ಮಾಡಿದೆ.

    ದಕ್ಷಿಣಭಾರತದಲ್ಲೇ ಹೆಸರುವಾಸಿಯಾದ ಗೌಂಡರ್ ಆ್ಯಂಡ್ ಕಂಪನಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ರೈಲ್ವೆ ಹಳಿ ಕೆಳಭಾಗದಲ್ಲಿ ಸೇತುವೆಯನ್ನು ಬಹುಬೇಗ ನಿರ್ಮಿಸಿತು. ಹಾಗಾಗಿ, ಜನರಲ್ಲಿ ಸುಗಮ, ಸುಲಲಿತ ಸಂಚಾರ ಭರವಸೆಯು ಮೂಡಿತು. ಆದರೆ, ಕ್ಯಾತಸಂದ್ರ ಭಾಗದಲ್ಲಿ ರಸ್ತೆ ಪಕ್ಕದಲ್ಲಿನ ಮೂರುವರೆ ಗುಂಟೆ ಖಾಸಗಿ ಜಾಗ ಭೂಸ್ವಾಧೀನ ಪ್ರಕ್ರಿಯೆ ತಕರಾರಿನಿಂದ ಇಡೀ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ.

    3-4 ಕಿ.ಮೀ. ಪ್ರತಿನಿತ್ಯ ಸುತ್ತಬೇಕು: ಸಿದ್ಧಗಂಗಾಮಠಕ್ಕೆ ಬರುವ ಭಕ್ತರು, ಗಣ್ಯರು, ಕ್ಯಾತಸಂದ್ರ, ಬಸವೇಶ್ವರನಗರ, ಬಸವಾಪಟ್ಟಣ ನಿವಾಸಿಗಳು, ಮಾರನಾಯಕನಪಾಳ್ಯ, ಬಂಡೇಪಾಳ್ಯ, ಶ್ರೀನಗರ, ದೇವರಾಯಪಟ್ಟಣದ ಭಾಗದ ಜನರು ಈ ಮಾರ್ಗದಲ್ಲಿ ಓಡಾಡುತ್ತಿದ್ದು ಈಗ ಪ್ರತಿನಿತ್ಯ 3-4 ಕಿ.ಮೀ. ಸುತ್ತುಬಳಸಬೇಕಿರುವುದರಿಂದ ಹೈರಾಣಾಗಿ ಹೋಗಿದ್ದಾರೆ. ದ್ವಿಚಕ್ರವಾಹನ, ಆಟೋ, ಕಾರು ಸಂಚರಿಸಲಾದರೂ ರೈಲ್ವೆ ಅಂಡರ್ ಪಾಸ್ ಮುಕ್ತಗೊಳಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಜನಾಕ್ರೋಶ ಸ್ಫೋಟಗೊಳ್ಳುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

    45 ಲಕ್ಷ ರೂ., ಪಾವತಿಸಿದ ರೈಲ್ವೆ ಇಲಾಖೆ : ಸಿದ್ಧಗಂಗಾ ಮಠಕ್ಕೆ ತೆರಳುವ ಮಾರ್ಗದಲ್ಲಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಅಂದು ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಖುದ್ದು ಆಸಕ್ತಿ ತೋರಿದ್ದರು. ಹಾಗಾಗಿ, 6 ತಿಂಗಳಲ್ಲೇ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಎಲ್ಲರದಾಗಿತ್ತು. ಅದರಂತೆ ಕಾಮಗಾರಿ ಸಹ ವೇಗವಾಗಿ ಸಾಗಿತ್ತು. ಈ ವೇಳೆ ಕ್ಯಾತಸಂದ್ರ ಭಾಗದಲ್ಲಿ ಮೂರುವರೆ ಗುಂಟೆ ಖಾಸಗಿ ಜಾಗದ ಮಾಲೀಕರು ತಗಾದೆ ತೆಗೆದಿದ್ದು ಕಾಮಗಾರಿ ಸ್ಥಗಿತಕ್ಕೆ ಕಾರಣವಾಗಿದೆ. ಟೀ ಅಂಗಡಿ ಇಟ್ಟುಕೊಂಡು ಬದುಕುಕಟ್ಟಿಕೊಂಡಿರುವ ಕುಟುಂಬದವರು ತಮಗೆ ಗುಂಟೆ ಲೆಕ್ಕದಲ್ಲಿ ಪರಿಹಾರ ನೀಡಿರುವುದಕ್ಕೆ ಆಕ್ಷೇಪಿಸಿ ಚದರ ಅಡಿ ಲೆಕ್ಕದಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ರೈಲ್ವೆ ಇಲಾಖೆ 45 ಲಕ್ಷ ರೂ.,ಗಳನ್ನು ಜಿಲ್ಲಾಡಳಿತಕ್ಕೆ ಪಾವತಿಸಿದೆ.

    ಸಿಎಂಗೆ ಸಿದ್ಧಗಂಗಾ ಶ್ರೀಗಳ ಪತ್ರ: ಭೂಸ್ವಾಧೀನ ಅಡಚಣೆ ಹಿನ್ನೆಲೆಯಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಧ್ಯಪ್ರವೇಶಿಸಿ ಕಾಮಗಾರಿ ಪೂರ್ಣಗೊಳಿಸಲಿರುವ ಅಡೆತಡೆಗಳನ್ನು ತೆರವುಗೊಳಿಸುವಂತೆ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪತ್ರ ಕೂಡ ಬರೆದಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕಾಗಿರುವ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ.

    3 ಕೋಟಿ ವೆಚ್ಚದ ಆರ್‌ಯುಬಿ : ರೈಲ್ವೆ ಹಳಿಯಿಂದ ಉಭಯ ಕಡೆಗೆ 30 ಮೀಟರ್‌ನಷ್ಟು ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ. 3 ಕೋಟಿ ವೆಚ್ಚದಲ್ಲಿ ಆರ್‌ಯುಬಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು ಪಾದಚಾರಿಗಳು, ದ್ವಿಚಕ್ರವಾಹನ, ಲಘು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕೆಳಸೇತುವೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ.

    ಕ್ಯಾತಸಂದ್ರದಲ್ಲಿರುವ ಸ್ಟುಡಿಯೋಕ್ಕೆ ನನ್ನ ಮನೆ ಬಂಡೇಪಾಳ್ಯದಿಂದ ಬರಲು ಪ್ರತಿನಿತ್ಯ 2-3 ಕಿ.ಮೀ., ಬಳಸಿಬರಬೇಕು. ನನ್ನಂತೆ ಆ ಭಾಗದಿಂದ ಹಿರೇಹಳ್ಳಿ ಸುತ್ತಮುತ್ತ ಕೆಲಸಗಳಿಗೆ ತೆರಳುವ ಸಾವಿರಾರು ಜನರ ಪಾಡು ಇದೇ ಆಗಿದೆ. ಪೆಟ್ರೋಲ್ ಬೆಲೆ ದುಬಾರಿ ಆಗಿರುವ ಇಂತಹ ಸಂದರ್ಭದಲ್ಲಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೆರವಾಗಬೇಕಿತ್ತು. 4 ತಿಂಗಳಾಗಿದೆ ಕೆಲಸ ಸ್ಥಗಿತಗೊಂಡು ಜನರ ಪಡಿಪಾಟಲು ಯಾರಿಗೂ ಬೇಡವಾಗಿದೆ.
    ಕೆ.ಪಿ.ದಿನಕರನ್ ಫೋಟೋ ಸ್ಟುಡಿಯೋ, ಕ್ಯಾತಸಂದ್ರ

    ಸಿದ್ಧಗಂಗಾಮಠಕ್ಕೆ ತೆರಳುವ ಮಾರ್ಗ ಬಂದ್ ಆಗಿರುವುದರಿಂದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಭೂಸ್ವಾಧೀನ ವಿವಾದ ಬಗೆಹರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ರೈಲ್ವೆ ಅಂಡರ್ ಬ್ರಿಡ್ಜ್ ಸಂಚಾರಕ್ಕೆ ಮುಕ್ತಗೊಳಿಸಬೇಕು.
    ಕೆ.ಎಂ.ಶಿವಕುಮಾರ್ ಆಟೋ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts