More

    ರಾಹುಲ್ ಲಾಂಚ್ ಆಗದ ಸ್ಟಾರ್ಟಪ್!; ಕಾಂಗ್ರೆಸ್ ವಿರುದ್ಧ ಮತ್ತೆ ಗುಡುಗಿದ ಮೋದಿ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿ ಆಡಿದ ಮಾತುಗಳನ್ನೇ ತಿರುಗುಬಾಣವಾಗಿಸಿ ಕಳೆದ ಕೆಲವು ದಿನಗಳಿಂದ ಮಾತಲ್ಲೇ ಎದಿರೇಟು ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಬುಧವಾರ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯದ್ದು ಸೋತರೂ ಮತ್ತೆ ಮತ್ತೆ ಲಾಂಚ್ ಆಗುತ್ತಿರುವ ಸ್ಟಾರ್ಟಪ್ ಎಂದು ‘ತಾಂತ್ರಿಕ’ವಾಗಿ ವಾಕ್​ಪ್ರಹಾರ ನಡೆಸಿದ್ದಾರೆ.

    ‘ಸ್ಟಾರ್ಟಪ್ ಮಹಾಕುಂಭ’ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಕ್ಷೇತ್ರದ ಯುವಪೀಳಿಗೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಐಟಿ’ ಭಾಷೆಯಲ್ಲೇ ರಾಹುಲ್ ಗಾಂಧಿಯನ್ನು ಟೀಕಿಸಿದರು. ಆ ಮೂಲಕ ರಾಜಕೀಯ ಸ್ಟಾರ್ಟಪ್​ಗಳು ಹಾಗೂ ಅಸಲಿ ಸ್ಟಾರ್ಟಪ್​ಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದರು.

    ಹಲವರು ಸ್ಟಾರ್ಟಪ್​ಗಳನ್ನು ಲಾಂಚ್ ಮಾಡಲು ಪ್ರಯತ್ನಿಸುತ್ತಾರೆ. ಅದರಲ್ಲೂ ಕೆಲವರು ರಾಜಕೀಯದಲ್ಲಿ ಮತ್ತೆ ಮತ್ತೆ ಸ್ಟಾರ್ಟಪ್​ಗಳನ್ನು ಲಾಂಚ್ ಮಾಡಲು ಯತ್ನಿಸುತ್ತಾರೆ. ಆದರೆ ಆ ಸ್ಟಾರ್ಟಪ್​ಗಳಿಗೂ ಅಸಲಿ ಸ್ಟಾರ್ಟಪ್​ಗಳಿಗೂ ಇರುವ ವ್ಯತ್ಯಾಸವೆಂದರೆ ಹೊಸ ಚಿಂತನೆ. ನಿಮಗೂ ಅವರಿಗೂ ಇರುವ ವ್ಯತ್ಯಾಸ ಪ್ರಯೋಗಶೀಲತೆ. ನೀವು ಒಂದು ಲಾಂಚ್​ನಲ್ಲಿ ಸೋತರೆ ಮತ್ತೆ ಹೊಸ ಯೋಚನೆಗಳೊಂದಿಗೆ ಲಾಂಚ್ ಮಾಡುತ್ತೀರಿ ಎನ್ನುವ ಮೂಲಕ ರಾಹುಲ್ ಗಾಂಧಿಯ ಸೋಲಿನ ಕುರಿತು ಮೋದಿ ಪರೋಕ್ಷವಾಗಿ ವ್ಯಂಗ್ಯವಾಡಿದರು.

    ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗಿಸುವ ತಮ್ಮ ಚಿಂತನೆಯನ್ನು ಬಣ್ಣಿಸಿದರು. ಅಲ್ಲದೆ ಭಾರತದ ಪ್ರಗತಿಯಲ್ಲಿ ಸ್ಟಾರ್ಟಪ್​ಗಳ ಪ್ರಮುಖ ಪಾತ್ರವನ್ನೂ ವಿವರಿಸಿದರು.

    ಭಾರತದ ಯುವಕರ ಸಾಮರ್ಥ್ಯದ ಮೇಲೆ ವಿಶ್ವದ ದೃಷ್ಟಿ ನೆಟ್ಟಿದೆ. ಅವರ ಸಾಮರ್ಥ್ಯವನ್ನು ನಂಬಿ ಅವರ ಆಕಾಂಕ್ಷೆಗಳಿಗೆ ಉತ್ತೇಜನ ನೀಡಲು ನಾವು ನಿರ್ಧರಿಸಿದ್ದೇವೆ. ನಾವು ಜನರ ಚಿಂತನೆಯನ್ನೇ ಪರಿವರ್ತಿಸಿದ್ದು, ಅವರು ಈಗ ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗದಾತರಾಗಲು ಉತ್ಸುಕರಾಗಿದ್ದಾರೆ ಎಂದು ಮೋದಿ ಹೇಳಿದರು. ಕಳೆದ ಜಿ20 ಶೃಂಗಸಭೆಯಲ್ಲಿ ಭಾರತೀಯ ಯುಪಿಐ ಬಗ್ಗೆ ಜಾಗತಿಕ ನಾಯಕರು ಮೆಚ್ಚುಗೆ ಸೂಚಿಸಿದ್ದನ್ನು ತಿಳಿಸಿದ ಮೋದಿ, ತಮ್ಮ ಭಾಷಣವನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದರು.

    ಮೋದಿಯದ್ದು ಚೀನಾ ಗ್ಯಾರಂಟಿ ಎಂದ ಖರ್ಗೆ: ನರೇಂದ್ರ ಮೋದಿ ಸರ್ಕಾರ ಚೀನಾ ಜತೆ ವ್ಯವಹರಿಸುವ ಮೂಲಕ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ಅಲ್ಲದೆ ನಮ್ಮದೇ ಲಡಾಖ್​ನ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಮೇಲೆ ಆಕ್ರಮಣ ನಡೆಸುತ್ತಿದೆ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿಯದ್ದು ಚೀನಾ ಗ್ಯಾರಂಟಿ ಎಂದು ಆರೋಪಿಸಿದ್ದಾರೆ.

    ರಾಹುಲ್ ಶಕ್ತಿ ಹೇಳಿಕೆ ವಿರುದ್ಧ ಆಯೋಗಕ್ಕೆ ದೂರು: ಇತ್ತೀಚೆಗೆ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ‘ಶಕ್ತಿಯ’ ವಿರುದ್ಧ ಹೋರಾಟ ನಡೆಸುವ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

    ರಾಹುಲ್ ಗಾಂಧಿ ಹೇಳಿಕೆಯು ಧಾರ್ವಿುಕ ಮೌಲ್ಯಗಳನ್ನು ಅವಮಾನಿಸುವ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡುವ ದುರುದ್ದೇಶ ಹೊಂದಿದೆ. ಹಿಂದುಗಳ ಧಾರ್ವಿುಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದುಗಳು ‘ಶಕ್ತಿಗೆ’ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಿಯನ್ನು ಶಕ್ತಿ ಎಂದು ಕರೆಯಲಾಗುತ್ತದೆ. ಹಿಂದು ಧರ್ಮದಲ್ಲಿರುವ ಶಕ್ತಿ ವಿರುದ್ಧ ಹೋರಾಡಲು ರಾಹುಲ್ ಕರೆ ನೀಡಿದ್ದಾರೆ. ಹಿಂದು ಧರ್ಮದ ದೇವತೆಗಳ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ಹೋರಾಡಬೇಕು ಎಂದು ನೇರವಾಗಿ ಅವರು ಸೂಚಿಸಿದ್ದಾರೆ ಎಂದು ಬಿಜೆಪಿ ನಾಯಕರಾದ ಹರ್ದೀಪ್ ಸಿಂಗ್ ಪುರಿ ಮತ್ತು ಓಂ ಪಾಠಕ್ ದೂರಿನಲ್ಲಿ ತಿಳಿಸಿದ್ದಾರೆ. ಚುನಾವಣಾ ಮತಯಂತ್ರಗಳ (ಇವಿಎಂ) ಬಗ್ಗೆಯೂ ರಾಹುಲ್ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts