More

    ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್: ಕೇಂದ್ರದ ವೈಫಲ್ಯ ಎಂದು ವಾಗ್ದಾಳಿ; ತಿರುಗೇಟು ನೀಡಿದ ಸಚಿವರು, ಸಂಸತ್​ನಲ್ಲಿ ಅವಿಶ್ವಾಸ ಚರ್ಚೆ

    ನವದೆಹಲಿ: ಮಣಿಪುರದಲ್ಲಿ ಭಾರತಮಾತೆಯನ್ನು ಹತ್ಯೆ ಮಾಡಿರುವ ಬಿಜೆಪಿಯವರು ದೇಶಭಕ್ತರಲ್ಲ, ದೇಶದ್ರೋಹಿಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಅವಿಶ್ವಾಸ ಗೊತ್ತುವಳಿಯ ಮೇಲೆ ಬುಧವಾರ ಚರ್ಚೆಗೆ ಆರಂಭ ನೀಡಿ 30 ನಿಮಿಷ ಮಾತನಾಡಿದ ಅವರು, ಮಣಿಪುರದಲ್ಲಿ ಸತ್ತವರ ಆಕ್ರಂದನ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ. ರಾಜ್ಯವನ್ನು ಒಡೆದಿರುವ ಬಿಜೆಪಿಯವರು ಭಾರತಮಾತೆಯ ರಕ್ಷಕರಲ್ಲ, ಕೊಲೆಗೆಡುಕರು. ಸೇನೆಯನ್ನು ಸೂಕ್ತ ಸಮಯದಲ್ಲಿ ಮಣಿಪುರಕ್ಕೆ ರವಾನಿಸಿದ್ದರೆ ಹಿಂಸಾಚಾರ ತಡೆಯಲು ಅವಕಾಶ ಇತ್ತು. ಆದರೆ, ಅದನ್ನು ಕೇಂದ್ರ ಮಾಡಲಿಲ್ಲ ಎಂದು ಹರಿಹಾಯ್ದರು.

    ರಾಮಾಯಣದ ಕೆಲ ಸಾಲುಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ರಾವಣನನ್ನು ರಾಮ ಕೊಲ್ಲಲಿಲ್ಲ. ಅವನು ಸತ್ತಿದ್ದು ದುರಹಂಕಾರದಿಂದ. ಹಾಗೆಯೇ ನೀವು (ಬಿಜೆಪಿ) ಹೊಗೆಯಾಡುತ್ತಿದ್ದ ಕಡೆಯಲ್ಲಿ ಸೀಮೆಎಣ್ಣೆ ಸುರಿದಿರಿ. ಮಣಿಪುರದಲ್ಲಿ ಬೆಂಕಿ ಹಚ್ಚಿದವರು ನೀವು. ಇದನ್ನೇ ಈಗ ಹರಿಯಾಣದಲ್ಲೂ ಮಾಡುತ್ತಿದ್ದೀರಿ ಎಂದು ನುಹ್ ಮತ್ತು ಗುರುಗ್ರಾಮಗಳ ಕೋಮುಗಲಭೆಯನ್ನು ಉಲ್ಲೇಖಿಸಿ ಹೇಳಿದರು. ಮಣಿಪುರದ ಹಿಂಸಾಚಾರವನ್ನು ಸರ್ಕಾರ ಮೂಕ ಪ್ರೇಕ್ಷಕನಂತೆ ನಿಂತು ನೋಡಿತೇ ಹೊರತು ಅದನ್ನು ತಡೆಯುವ ಪ್ರಯತ್ನ ಕಿಂಚಿತ್ತೂ ಮಾಡಲಿಲ್ಲ ಎಂದು ಟಿಎಂಸಿ, ಡಿಎಂಕೆ, ಜೆಡಿಯು ಇನ್ನಿತರ ವಿರೋಧ ಪಕ್ಷಗಳು ಆರೋಪಿಸಿದವು. ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಎಂದು ಬಡಾಯಿ ಮಾಡುತ್ತದೆ, ಮಣಿಪುರದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದು ಮಾಡಿದ್ದೇನು ಎಂದು ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ ಪ್ರಶ್ನಿಸಿದರು. ಸರ್ಕಾರಿ ಶಸ್ತ್ರಾಗಾರದಿಂದ ಶಸ್ತ್ರಗಳನ್ನು ದೋಚಿಕೊಂಡು ಹೋಗಿರುವುದು ಆಶ್ಚರ್ಯಕರ. ಇದಕ್ಕೆ ರಾಜ್ಯ ಸರ್ಕಾರದ ಸಹಾಯ ಇತ್ತೇ? ಎಂದು ಪ್ರಶ್ನಿಸಿದರು. ಇದು ಮಣಿಪುರದಲ್ಲಿ ಬುಡಕಟ್ಟು ಜನರನ್ನು ಸಫಾಯಿ ಮಾಡುವ ಬಿಜೆಪಿಯ ಗುಪ್ತ ಕಾರ್ಯಚರಣೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಜೆಡಿಯು ಸಂಸದ ಲಲನ್ ಸಿಂಗ್ ಮಾತನಾಡಿ, ಮಣಿಪುರದ ಹಿಂಸಾಚಾರವು ನೆರೆಯ ನಾಗಾಲ್ಯಾಂಡ್, ಮಿಜೋರಾಂಗಳಿಗೂ ಹಬ್ಬುವ ಸಾಧ್ಯತೆ ಇದೆ. ಹೀಗಾಗಿ ಮಣಿಪುರದ ಘರ್ಷಣೆಯನ್ನು ಸರ್ಕಾರ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.

    ಡಿಎಂಕೆಯ ಕನಿಮೋಳಿ ಮಾತನಾಡಿ, ಬೇರೆ ರಾಜ್ಯಗಳ ಜನಸಂಖ್ಯೆಗೆ ಪೊಲೀಸರ ಸಿಬ್ಬಂದಿಯ ಅನುಪಾತವನ್ನು ಹೋಲಿಸಿದರೆ ಮಣಿಪುರದಲ್ಲಿ ಅತಿ ಹೆಚ್ಚು ಪೊಲೀಸರು ಇದ್ದಾರೆ. ಆದರೂ ಗಲಭೆ ನಿಯಂತ್ರಿಸಲು ಆಗದಿದ್ದು ಆಶ್ಚರ್ಯಕರ ಎಂದರು.

    ಫ್ಲೈಯಿಂಗ್ ಕಿಸ್ ಆರೋಪ: ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ನಿರ್ಗಮಿಸುತ್ತಿದ್ದ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಇಶಾರೆ ಮಾಡಿದರು ಎಂದು ಸಚಿವೆ ಸ್ಮೃತಿ ಇರಾನಿ ಗಂಭೀರ ಆರೋಪ ಮಾಡಿದ್ದಾರೆ. ಇರಾನಿಯನ್ನು ಬೆಂಬಲಿಸಿ ಬಿಜೆಪಿಯ ಸಂಸದೆಯರು ಸ್ಪೀಕರ್​ಗೆ ದೂರು ನೀಡಿದ್ದು, ರಾಹುಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನಿ, ಮಹಿಳೆಯರ ಘನತೆಗೆ ಚ್ಯುತಿ ತರುವ ಕಾರ್ಯವನ್ನು ಸ್ತ್ರೀದ್ವೇಷಿ ಪುರುಷರು ಮಾತ್ರ ಹೀಗೆ ಮಾಡಲು ಸಾಧ್ಯ. ಈ ರೀತಿಯ ಚೇಷ್ಟೆ ಸಂಸತ್​ನಲ್ಲಿ ಹಿಂದೆಂದೂ ನಡೆದಿರಲಿಲ್ಲ. ಮಹಿಳೆಯರ ಘನತೆಯನ್ನು ರಕ್ಷಿಸಲು ಶಾಸನ ಮಾಡುವ ಸಭೆಯಲ್ಲೇ ಮಹಿಳೆಯರ ಬಗ್ಗೆ ತುಚ್ಛವಾದ ನಡವಳಿಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ. ರಾಹುಲ್ ಈ ನಾಚಿಕೆಗೇಡಿನ ನಡವಳಿಕೆಯನ್ನು ಎಲ್ಲರೂ ನೋಡಿದ್ದಾರೆ. ಪ್ರೆಸ್ ಬಾಕ್ಸ್​ನಲ್ಲಿದ್ದವರೂ ಕಂಡಿದ್ದಾರೆ ಎಂದು ಬಿಜೆಪಿಯ ಸಂಸದೆ ಪೂನಂ ಮಹಾಜನ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಯಾವುದೇ ಸದಸ್ಯರನ್ನು ನಿರ್ದೇಶಿಸಿ ಈ ರೀತಿ ಮಾಡಿಲ್ಲ ಎಂದಿದೆ.

    ಪಾಪಪ್ರಜ್ಞೆಯಿಂದಾಗಿಯೇ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅವರಿಗೆ ಮಣಿಪುರ ಭಾರತದ ಭಾಗವೆಂದು ಅನಿಸಿಯೇ ಇಲ್ಲ.

    | ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

    ರಾಹುಲ್ ಭಾಷಣದ ನಂತರ ತೋರಿದ ವರ್ತನೆ ನೋವು ತಂದಿದೆ. ರಾಹುಲ್ ತಾಯಿಯ ಮುಂದೆಯೇ ಈ ರೀತಿ ನಡೆದುಕೊಂಡಿರುವುದು ಅವರ ಸಂಸ್ಕೃತಿಯ ದ್ಯೋತಕವಾಗಿದೆ. ಮಕ್ಕಳನ್ನು ಹೇಗೆ ಬೆಳೆಸಿದ್ದಾರೆ ಎಂಬುದೂ ತಿಳಿಯುತ್ತದೆ. ಈ ದುರ್ನಡತೆ ಬಗ್ಗೆ ಸ್ಪೀಕರ್​ಗೆ ದೂರು ನೀಡಲಾಗಿದೆ.

    | ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

    ಕ್ಷಮೆ ಕೋರಲು ಆಗ್ರಹ: ರಾಹುಲ್ ಗಾಂಧಿ ಕಟು ಮಾತುಗಳಿಂದ ಕೆರಳಿದ ಆಡಳಿತ ಪಕ್ಷದವರು, ರಾಹುಲ್ ವಿರುದ್ಧ ಘೋಷಣೆ ಕೂಗಿದರು. ಬಾಲಿಶ ಆರೋಪ ಮಾಡುತ್ತಿರುವ ರಾಹುಲ್ ಕೂಡಲೇ ಕ್ಷಮೆಕೋರಬೇಕು ಎಂದು ಅನೇಕ ಹಿರಿಯ ಸಚಿವರು ಆಗ್ರಹಿಸಿದರು. ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಸಚಿವೆ ಸ್ಮೃತಿ ಇರಾನಿ, ದೇಶದಲ್ಲಿ ಭ್ರಷ್ಟಾಚಾರವನ್ನು ಪೋಷಿಸಿದವರು, ದೇಶವನ್ನು ಅಸಮರ್ಥಗೊಳಿಸಿದವರು ಕಾಂಗ್ರೆಸ್ಸಿಗರು. ಭಾರತ ಅರ್ಹರನ್ನು ನಂಬುತ್ತದೆಯೆ ಹೊರತು ವಂಶಾಡಳಿತವನ್ನಲ್ಲ ಎಂದು ಕುಟುಕಿದರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಅಭಿಯಾನದಂತೆ ಈಗ ದೇಶದಿಂದ ಭ್ರಷ್ಟಾಚಾರ, ವಂಶಾಡಳಿತ, ತೊಲಗಿಸಬೇಕಿದೆ. ಭಾರತದಲ್ಲಿ ಅರ್ಹರು ಜಾಗ ಕಂಡು ಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಮಾತೆಯ ಹತ್ಯೆ ಬಗ್ಗೆ ಇಲ್ಲಿ ಮಾತನಾಡಲಾಗಿದೆ. ಇದನ್ನು ಕಾಂಗ್ರೆಸ್ಸಗರು ಮೇಜುಕುಟ್ಟಿ ಸಂಭ್ರಮಿಸಿದ್ದಾರೆ. ಇದರಿಂದಲೇ ಯಾರು ದೇಶದ್ರೋಹಿಗಳೆಂಬುದು ಗೊತ್ತಾಗುತ್ತದೆ ಎಂದರು.

    ಟೊಮ್ಯಾಟೊ ಹಾರ ಧರಿಸಿ ಬಂದ ಸಂಸದ: ಟೊಮ್ಯಾಟೊ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಟೊಮ್ಯಾಟೊ ಹಾರ ಹಾಕಿಕೊಂಡು ಮೇಲ್ಮನೆ ಕಲಾಪದಲ್ಲಿ ಗಮನ ಸೆಳೆದರು. ಗುಪ್ತಾ ಅವರ ಈ ವರ್ತನೆಯಿಂದ ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿ ಮಧ್ಯಾಹ್ನದವರೆಗೆ ಸದನವನ್ನು ಮುಂದೂಡಲಾಯಿತು. ರಾಜ್ಯಸಭೆಯ ಬುಧವಾರದ ಕಲಾಪದ ಪಟ್ಟಿಯಲ್ಲಿ ಹಣದುಬ್ಬರ ಕೂಡ ಇತ್ತು. ಆಗ ಗುಪ್ತಾ ಟೊಮ್ಯಾಟೊ ಹಾರದೊಂದಿಗೆ ಕಾಣಿಸಿದರು. ಇದನ್ನು ಗಮನಿಸಿದ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಈ ರೀತಿಯ ವರ್ತನೆಗೆ ಅವಕಾಶ ಇಲ್ಲ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ಗದರಿದರು. ಆಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಗದ್ದಲ ಏರ್ಪಟ್ಟು ಸದನ ಮುಂದೂಡಲ್ಪಟಿತು. ಮಧ್ಯಾಹ್ನ ನಂತರ ಸದನ ಸೇರಿದಾಗ ತುಷಾರ್ ಗಾಂಧಿ (ಗಾಂಧೀಜಿ ಅವರ ಮರಿಮೊಮ್ಮಗ) ಬಂಧನ ವಿಷಯವಾಗಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಕಲಾಪ ಕೆಲ ಹೊತ್ತಿನವರೆಗೆ ಮುಂದೂಡಲಾಯಿತು.

    ಯುವನಾಯಕನ ನಾಟಕ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ನಾಟಕವನ್ನಾಡಿದರು. ಚುರು ಚಂದಾಪುರಕ್ಕೆ ರಸ್ತೆ ಮಾರ್ಗದಲ್ಲಿ ಹೋಗಲು ಬಯಸಿದ್ದ ರಾಹುಲ್​ಗೆ ಭದ್ರತೆಯ ಕಾರಣ ಬೇಡ ಎಂದು ಹೇಳಲಾಯಿತು. ಆದರೂ ರಸ್ತೆ ಮಾರ್ಗದಲ್ಲಿ ಹೋಗಿ ಮತ್ತೆ ಇಂಫಾಲಕ್ಕೆ ಹಿಂದುರುಗಿ ಹೆಲಿಕಾಪ್ಟರ್​ನಲ್ಲಿ ತೆರಳಿದರು. ಇದು ನಾಟಕವಲ್ಲವೆ? ಎಂದು ಗೃಹ ಸಚಿವ ಅಮಿತ್ ಷಾ ಪ್ರಶ್ನಿಸಿದ್ದಾರೆ. ಅವಿಶ್ವಾಸ ಗೊತ್ತುವಳಿ ಚರ್ಚೆ ಮೇಲೆ ಮಾತನಾಡಿದ ಅವರು, ಮಣಿಪುರದ ವಿಷಯದಲ್ಲಿ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. ಈ ಅವಿಶ್ವಾಸ ಗೊತ್ತುವಳಿ ರಾಜಕೀಯ ಪ್ರೇರಿತವಾಗಿದ್ದು, ಜನರನ್ನು ತಪು್ಪದಾರಿಗೆ ಎಳೆಯಲು ವಿರೋಧ ಪಕ್ಷಗಳು ಮಾಡಿರುವ ಹುನ್ನಾರ ಎಂದು ದೂಷಿಸಿದ ಅವರು, ವಿರೋಧ ಪಕ್ಷದ ಓರ್ವ ನಾಯಕ ಸರ್ಕಾರದ ವಿರುದ್ಧ 13 ಬಾರಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಒಂದು ಸಾರಿಯೂ ಗೆದ್ದಿಲ್ಲ ಎಂದು ರಾಹುಲ್ ಗಾಂಧಿ ಹೆಸರು ಹೇಳದೆ ಕುಟುಕಿದರು. ಈಶಾನ್ಯದ ರಾಜ್ಯಗಳಿಗೆ ಏನೂ ಮಾಡದ ಕಾಂಗ್ರೆಸ್ ಅವಿಶ್ವಾಸ ಮಂಡಿಸಿರುವುದು ನಾಚಿಕೆಗೇಡು ಎಂದು ಜರಿದ ಷಾ, ಕಳೆದ 9 ವರ್ಷದಲ್ಲಿ ಪ್ರಧಾನಿ ಮೋದಿ 50 ಸಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 30 ವರ್ಷಗಳಿಂದ ದೇಶ ವಂಶಾಡಳಿತ, ಭ್ರಷ್ಟಾಚಾರ, ಜಾತಿಯತೆಯಿಂದ ನಲುಗಿತ್ತು. ಮೋದಿ ಪ್ರಧಾನಿಯಾದ ನಂತರ ಇಂತಹ ರಾಜಕೀಯವನ್ನು ಕೊನೆಗಾಣಿಸಿ ಅಭಿವೃದ್ಧಿ ಪರ ಆಡಳಿತ ನೀಡುತ್ತಿದ್ದಾರೆ ಎಂದರು.

    ಸ್ವಾತಂತ್ರ್ಯ ಪಡೆದ ನಂತರ ಭಾರತ ನಿಸ್ಸಂಶಯವಾಗಿ ನಂಬಿಕೆ ಇರಿಸಬಹುದಾದ ನಾಯಕನೆಂದರೆ ಅದು ಪ್ರಧಾನಿ ಮೋದಿ.ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್​ನಂತೆ ನಾವು ವಾಮಮಾರ್ಗ ಹಿಡಿಯುವುದಿಲ್ಲ. ಮತದಾರರಿಗೆ ಹಣ ಹಂಚುವುದಿಲ್ಲ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಆಗಿತ್ತು. ಬಿಜೆಪಿ ಹಣ ಖರ್ಚು ಮಾಡಿದ್ದರೆ ಸರ್ಕಾರ ಉಳಿಯುತ್ತಿತ್ತು. ಆದರೆ, ಅಧಿಕಾರಕ್ಕೆ ಅಂಟಿಕೊಳ್ಳದ ವಾಜಪೇಯಿ ಇಂಥದನ್ನು ಮಾಡಲಿಲ್ಲ. ಕೇವಲ ಒಂದು ಮತದಲ್ಲಿ ಸರ್ಕಾರ ಉರುಳಿಹೋಯಿತು ಎಂದರು.

    ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

    ಹೃದಯಾಘಾತಕ್ಕೆ ಮತ್ತೊಂದು ಬಲಿ: 15 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts