More

    ಕಾಬುಲ್​ ಏರ್​ಪೋರ್ಟ್​ನಲ್ಲಿ ಬಾಂಬ್​ ಸ್ಫೋಟ: ಭಯಾನಕವಾಗಿದೆ ದಾಳಿಯ ಹೊಣೆ ಹೊತ್ತ ಐಎಸ್​-ಕೆ ಹಿನ್ನೆಲೆ ಮತ್ತು ಗುರಿ!

    ಕಾಬುಲ್​: ಅಫ್ಘಾನಿಸ್ತಾನ ರಾಜಧಾನಿ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆದ ಉಗ್ರರ ದಾಳಿಯು 2011ರ ನಂತರದ ಅತಿ ಭಯಾನಕ ಉಗ್ರ ದಾಳಿಯಾಗಿದೆ. ಈ ದಾಳಿಯಲ್ಲಿ ಅಮೆರಿಕ ಯೋಧರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಮೃತರಾಗಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಸ್ಫೋಟದಲ್ಲಿ ಅಮೆರಿಕದ 20 ಯೋಧರು ಬಲಿಯಾಗಿದ್ದಾರೆ. 2011 ಆಗಸ್ಟ್​ನಲ್ಲಿ 30 ಯೋಧರಿದ್ದ ಅಮೆರಿಕ ಹೆಲಿಕಾಪ್ಟರ್​ ಅನ್ನು ಹೊಡೆದುರುಳಿಸಿದ ಬಳಿಕ ಒಂದೇ ಘಟನೆಯಲ್ಲಿ ಅತಿ ಹೆಚ್ಚು ಅಮೆರಿಕ ಯೋಧರು ಮೃತಪಟ್ಟ ಘಟನೆ ಇದಾಗಿದೆ. ಈ ದಾಳಿಯನ್ನು ಐಎಸ್​-ಕೆ (ಇಸ್ಲಾಮಿಕ್​ ಸ್ಟೇಟ್​ ಖೋರಾಸಾನ್) ಸಂಘಟನೆ ಹೊತ್ತುಕೊಂಡಿದ್ದು, ಅದರ ಹಿನ್ನೆಲೆ ಭಯಾನಕವಾಗಿದೆ.

    ಐಎಸ್​​-ಕೆ ಅಂದ್ರೇನು?
    ಹೆಸರೇ ಸೂಚಿಸುವಂತೆ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಅಥವಾ ಐಎಸ್-ಕೆ ಇಸ್ಲಾಮಿಕ್ ಸ್ಟೇಟ್ ಅಥವಾ ಐಎಸ್​ನ ಒಂದು ಶಾಖೆಯಾಗಿದ್ದು, ಇದನ್ನು ಮೊದಲು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಎಂದು ಕರೆಯಲಾಗುತ್ತಿತ್ತು. ಈ ಸಂಘಟನೆ ಅಫ್ಘಾನಿಸ್ತಾನದ ಖೊರಾಸನ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿದೆ. ಇದು ತನ್ನ ಕಾಲೀಫ್​ಗಿರಿಯನ್ನು ದಕ್ಷಿಣ ಏಷ್ಯಾದ ಕೇಂದ್ರ ಭಾಗದಲ್ಲಿ ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಆಗಾಗ ದುಷ್ಕೃತ್ಯಗಳನ್ನು ಎಸಗುತ್ತಾ ಬಂದಿದೆ.

    2014-15ರಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿ ಇಸ್ಲಾಮಿಕ್ ಸ್ಟೇಟ್​ ವಿಸ್ತರಣೆಯಾದಾಗ, ಐಎಸ್-ಕೆ ಪೂರ್ವ ಅಫ್ಘಾನಿಸ್ತಾನದ ಖೋರಸಾನ್‌ನಲ್ಲಿ ‘ಕ್ಯಾಲಿಫೇಟ್ ಖಡ್ಗ’ವಾಗಿ ಬೆಳೆಯಿತು. 2015-16ರಿಂದಲೂ ಐಎಸ್​ ಖೊರಾಸನ್​ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಬರುತ್ತಿದೆ.

    ಸಂಘಟನೆಯ ಮುಖ್ಯಸ್ಥ ಯಾರು?
    ಈ ಸಂಘಟನೆ ಆಫ್ಘಾನ್​ನಲ್ಲಿ ಮೊದಲು ರಚನೆಯಾದಾಗ ಪಾಕಿಸ್ತಾನಿ ಪ್ರಜೆ ಹಫೀಜ್​ ಸಯೀದ್​ ಖಾನ್​ ಇದರ ನೇತೃತ್ವ ವಹಿಸಿದ್ದನು. ಈ ಸಂಘಟನೆಯು ನಿರಂತರವಾಗಿ ಪಾಕ್​ ಸೇನೆಯ ಗುಪ್ತಚರ ಇಲಾಖೆಯ (ಐಎಸ್​ಐ) ಜತೆ ಸಂಬಂಧ ಹೊಂದಿರುವ ಪಾಕ್​ ಆಧಾರಿತ ಉಗ್ರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈ ಸಂಘಟನೆಗೆ ತಾಲಿಬಾನ್​ ಜತೆಯಲ್ಲೂ ಸಂಪರ್ಕವಿದೆ. ಮುಖ್ಯಸ್ಥ ಹಫೀಜ್​​ ಸಯೀದ್​ ಖಾನ್​ ಡೆಪ್ಯೂಟಿ ಆಗಿ ಮಾಜಿ ತಾಲಿಬ್​ ಅಧುಲ್​ ರೌಫ್​ ಅಲಿಜಾ ಸಂಘಟನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ವರದಿಗಳ ಪ್ರಕಾರ ಅಲಿಜಾ ತನ್ನ ಗ್ವಾಂಟನಾಮೊ ಕೊಲ್ಲಿಯ ಬಂಧನ ಶಿಬಿರದಲ್ಲಿ ಅಮೇರಿಕಾದ ವಶದಲ್ಲಿದ್ದನು ಎಂದು ತಿಳಿದುಬಂದಿದೆ. ಆಫ್ಘಾನ್​ನಲ್ಲಿ 2015 ಮತ್ತು 2016ರಲ್ಲಿ ನಡೆದ ವಾಯುದಾಳಿಯಲ್ಲಿ ಅಬ್ದುಲ್​ ರೌಫ್​ ಅಲಿಜಾ ಮತ್ತು ಹಫೀಜ್​ ಸಯೀದ್​ ಖಾನ್​ ಹತರಾಗಿದ್ದಾರೆ. ಪ್ರಸ್ತುತ ಶಾಹಬ್​ ಅಲ್​ ಮುಹಾಜಿರ್​ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ.

    ಯಾರು ಈ ಶಾಹಬ್​ ಅಲ್​ ಮುಹಾಜಿರ್​?
    ಅಫ್ಘಾನಿಸ್ತಾನ-ಪಾಕಿಸ್ತಾನ ವಲಯಗಳಲ್ಲಿ 1947ರ ಸ್ವಾತಂತ್ರ್ಯದ ಬಳಿಕ ದೇಶದ ವಿಭಜನೆಯ ನಂತರ ಯಾರು ಭಾರತದಿಂದ ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಪಾಕಿಸ್ತಾನಕ್ಕೆ ವಲಸೆ ಬಂದಿರುತ್ತಾರೋ ಅವರನ್ನು ಮುಹಾಜಿರ್​ ಎಂದು ಕರೆಯಲಾಗುತ್ತದೆ. ಆದರೆ, ಶಾಹಬ್​ ಅಲ್​ ಮುಹಾಜಿರ್​ಗೆ ಭಾರತದ ಪೂರ್ವಿಕರ ಇತಿಹಾಸವೇ ಇಲ್ಲ. ಈತ ಅರಬ್​ ಜನಾಂಗೀಯ ಎಂದು ತಿಳಿದುಬಂದಿದೆ. ದಕ್ಷಿಣ ಏಷ್ಯಾ ಹೊರಭಾಗದ ಐಎಸ್​-ಖೊರಸಾನ್​ನ ಮೊದಲ ಮುಖ್ಯಸ್ಥ ಎಂದು ಗುರುತಿಸಿಕೊಂಡಿದ್ದಾನೆ. ಐಎಸ್​ ಖೊರಸಾನ್​ ಮುಖ್ಯಸ್ಥನಾಗಿ ಪ್ರಮೋಷನ್​ ಸಿಗುವ ಮುನ್ನ ಮುಹಾಜಿರ್, ಅಲ್​ಖೈದಾದ ಪರ ತಾಲಿಬಾನ್ ಸ್ಥಾಪಿತ ಐಎಸ್‌ಐ ಮತ್ತು ತಾಲಿಬಾನ್‌ಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಹಕ್ಕಾನಿ ಜಾಲದಲ್ಲಿ ಮಧ್ಯಮ ವರ್ಗದ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ. ಅಬು ಮುಹಮ್ಮದ್ ಸಯೀದ್ ಖುರಸಾನಿ ಎಂಬ ಸಿರಿಯನ್ ಪ್ರಜೆ ಇಸ್ಲಾಮಿಕ್ ಸ್ಟೇಟ್ ಮತ್ತು ಶಹಾಬ್ ಅಲ್-ಮುಹಾಜಿರ್​ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಊಹಿಸಲಾಗಿದೆ. ಐಎಸ್-ಖೋರಾಸನ್ ಸಂಘಟನೆ ಅಲ್-ಮುಹಜೀರ್ ಅನ್ನು ತನ್ನ ಮುಖ್ಯಸ್ಥನಾಗಿ ಘೋಷಿಸುವ ಮೊದಲು, ಯುಎನ್ ಭದ್ರತಾ ಮಂಡಳಿಯ ಮಂಜೂರಾತಿ ಮಾನಿಟರಿಂಗ್ ತಂಡವು ಸಿರಿಯನ್ ಪ್ರಜೆಯನ್ನು ಐಎಸ್-ಕೆ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿ ಮಾಡಿತ್ತು.

    ಐಎಸ್​-ಕೆ ಎಷ್ಟು ಪ್ರಬಲ?
    ವಾಷಿಂಗ್ಟನ್ ಮೂಲದ ಥಿಂಕ್-ಟ್ಯಾಂಕ್, ದಿ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್, ಐಎಸ್-ಖೊರಾಸನ್ 2017-18ರಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನದಲ್ಲಿ ಸುಮಾರು 100 ದಾಳಿಗಳನ್ನು ನಾಗರಿಕರ ಮೇಲೆ ಮತ್ತು 250 ಕ್ಕೂ ಹೆಚ್ಚು ಯುಎಸ್-ಅಫ್ಘಾನ್ ಮತ್ತು ಪಾಕಿಸ್ತಾನಿ ಪಡೆಗಳ ಮೇಲೆ ನಡೆಸಿದೆ ಎಂದು ಅಂದಾಜಿಸಿದೆ. ಈ ವರ್ಷ ಜನವರಿಯಲ್ಲಿ, ಪಲಾಯನಗೊಂಡಿರುವ ಆಫ್ಘಾನ್​ ಮಾಜಿ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರವು ಕಾಬೂಲ್‌ನಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ರಾಸ್ ವಿಲ್ಸನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಹಲವು ಐಸಿಸ್-ಕೆ ಸದಸ್ಯರನ್ನು ಬಂಧಿಸುವುದಾಗಿ ಹೇಳಿಕೊಂಡಿತ್ತು.

    ಈ ಸಂಘಟನೆಯಲ್ಲಿ ಎಷ್ಟು ಸದಸ್ಯರಿದ್ದಾರೆ?
    ಒಂದು ಅಂದಾಜಿನ ಪ್ರಕಾರ ಐಎಸ್​-ಖೊರಸಾನ್​ ಸಂಘಟನೆಯಲ್ಲಿ 1500 ರಿಂದ 2000 ಸದಸ್ಯರಿದ್ದಾರೆ. ಆದರೂ ಒಂದು ಸಣ್ಣ ಗುಂಪು ತಾನೇ ಅಂತಾ ಸುಮ್ಮನಾಗಲೂ ಸಾಧ್ಯವೇ ಇಲ್ಲ. ಒಗ್ಗಟ್ಟಿನಿಂದ ಸಣ್ಣ ಸಣ್ಣ ಗುಂಪುಗಳಾಗಿ ಗೆರಿಲ್ಲಾ ತಂತ್ರವನ್ನು ಅಳವಡಿಸಿಕೊಂಡು ಉಗ್ರ ದಾಳಿಗಳನ್ನು ನಡೆಸುತ್ತಾರೆ.

    ಈ ಸಂಘಟನೆಯನ್ನು ತಾಲಿಬಾನ್​ ಹೇಗೆ ಕಾಣುತ್ತದೆ?
    ಎರಡು ಗುಂಪುಗಳು ನಡುವೆ ಕೊಡು ಕೊಳ್ಳುವಿಗೆ ಇದ್ದರೂ ಕೂಡ ಅಫ್ಘಾನಿಸ್ತಾನದಲ್ಲಿ ಮೇಲುಗೈ ಸಾಧಿಸಲು ತಾಲಿಬಾನ್ ಮತ್ತು ಐಎಸ್-ಖೋರಾಸನ್ ಪೈಪೋಟಿ ನಡೆಸುತ್ತಿವೆ. ಕಾಬುಲ್​ ಏರ್​ಪೋರ್ಟ್​ನಲ್ಲಿ ಗುರುವಾರ ನಡೆದ ಉಗ್ರ ದಾಳಿಯ ಬಗ್ಗೆ ಯುಎಸ್​ ನೇತೃತ್ವದ ನ್ಯಾಟೋ ಪಡೆಗಳಿಗೆ ಗುಪ್ತಚರ ಮಾಹಿತಿಯನ್ನು ಒದಗಿಸುವುದಾಗಿ ತಾಲಿಬಾನ್​ ಹೇಳಿಕೊಂಡಿದೆ. ಇನ್ನು ಐಎಸ್​-ಕೆ ಸಂಘಟನೆ ತಮ್ಮದೇಯಾದ ಷರಿಯಾ ಕಾನೂನನ್ನು ಹೇರಲು ಬಯಸಿದೆ. ಆದರೆ, ಆಗಸ್ಟ್​ 15ರಂದು ಕಾಬುಲ್​ ಅನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ತಾಲಿಬಾನ್​ ತಮ್ಮದೇಯಾದ ಷರಿಯಾ ಕಾನೂನನ್ನು ಹಂತ ಹಂತವಾಗಿ ಹೇರುತ್ತಿದೆ.

    ಇದೀಗ ಕಾಬುಲ್​ ವಿಮಾನ ನಿಲ್ದಾಣದಲ್ಲಿ ನಡೆದಿರುವ ದಾಳಿಯ ಹೊಣೆಯನ್ನು ಐಎಸ್​-ಕೆ ಹೊತ್ತುಕೊಂಡಿದ್ದು, ಇದರ ಬೆನ್ನಲ್ಲೇ ಗುಡುಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಒಬ್ಬರನ್ನು ಬಿಡುವುದಿಲ್ಲ. ಹುಡುಕಿ..ಹುಡುಕಿ ಹೊಡೆದು ಹಾಕುತ್ತೇವೆ. ನೀವು ನಿಮ್ಮ ಕೃತ್ಯಕ್ಕೆ ಬೆಲೆ ತೆರಲೇಬೇಕು ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಆಫ್ಘಾನ್​ ನೆಲದಲ್ಲಿ ಸ್ಥಳಾಂತರ ಕೆಲಸವನ್ನು ನಿಲ್ಲಿಸುವುದಿಲ್ಲ ಅಂತಲೂ ಹೇಳಿದ್ದಾರೆ. ಹೀಗಾಗಿ ತಾಲಿಬಾನಿಗಳು ಅಮೆರಿಕಕ್ಕೆ ತಮ್ಮ ಸೇನಾ ಪಡೆಗಳನ್ನು ವಾಪಸ್​ ಕರೆಸಿಕೊಳ್ಳಲು ನೀಡಿರುವ ಡೆಡ್​ಲೈನ್​ಗೆ ಕ್ಯಾರೆ ಎನ್ನದೇ ಇನ್ನು ಕೆಲವು ದಿನ ಸ್ಥಳಾಂತರ ಮುಂದುವರಿಸಬಹುದು ಎನ್ನಲಾಗಿದೆ. ಇದರ ನಡುವೆ ದಾಳಿ ಮಾಡುವರ ಮೇಲಿನ ಪ್ರತಿಕಾರಕ್ಕಾಗಿ ಈಗಾಗಲೇ ನಮ್ಮ ಸೇನೆಗೆ ಪ್ಲಾನ್​ ಮಾಡುವಂತೆ ಆದೇಶವನ್ನು ಮಾಡಿದ್ದೇನೆಂದು ಜೋ ಬೈಡೆನ್​ ಹೇಳಿದ್ದು, ಮುಂದೆ ಐಎಸ್​-ಕೆ ಮತ್ತು ಅಮೆರಿಕ ಪಡೆಗಳ ನಡುವೆ ಮತ್ತಷ್ಟು ಘರ್ಷಣೆಗಳು ಆಗುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ. ಏನೇ ಆಗಲಿ ಮತ್ತೆ ಆಫ್ಘಾನ್​ ನೆಲದಲ್ಲಿ ಶಾಂತಿ ನೆಲೆಸಲಿ ಎಂಬುದೇ ಎಲ್ಲರ ಆಶಯವಾಗಿದೆ. (ಏಜೆನ್ಸೀಸ್​)

    ಬಾಂಬ್​ ದಾಳಿ ನಡುವೆಯೂ ಕಾಬುಲ್​ನಿಂದ ಮರಳಿದ ಭಾರತೀಯ ದಂಪತಿ ಬಿಚ್ಚಿಟ್ಟ ಕರಾಳ ಅನುಭವವಿದು!

    ಪಾಕ್-ತಾಲಿಬಾನ್ ದೋಸ್ತಿ: ಅಣ್ವಸ್ತ್ರ ಉಗ್ರರ ವಶವಾದರೆ ವಿಶ್ವಕ್ಕೆ ದೊಡ್ಡ ಪ್ರಮಾದ

    ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts