More

    ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರಿಬ್ಬರ ಶವ ಪತ್ತೆ: ಯುಪಿಯಲ್ಲಿ ಘಟನೆ, ನಾಲ್ವರ ಬಂಧನ

    ಲಖಿಂಪುರ್​ ಖೇರಿ: ಹದಿನೇಳು ಮತ್ತು ಹದಿನೈದು ವರ್ಷದ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹಗಳು ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್​ನಲ್ಲಿ ಬುಧವಾರ ನಡೆದಿದ್ದು, ಸ್ಥಳೀಯ ಜನರನ್ನು ಆಘಾತಕ್ಕೆ ದೂಡಿದೆ.

    ಘಟನೆ ಸಂಬಂಧ ಸಂತ್ರಸ್ತೆಯರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಡಿಯಲ್ಲಿ ನಾಲ್ವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮೃತದೇಹಗಳು ಪತ್ತೆಯಾಗುವ ಮೂರು ಗಂಟೆಗೂ ಮುನ್ನ ಮಕ್ಕಳಿಬ್ಬರನ್ನು ಅಪಹರಿಸಲಾಯಿತು. ಮೂವರು ಯುವಕರು ಬೈಕ್​ನಲ್ಲಿ ಬಂದು ಮಕ್ಕಳನ್ನು ಬಲವಂತಾಗಿ ಕರೆದೊಯ್ದರು ಎಂದು ಸಂತ್ರಸ್ತೆಯರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

    ಎಫ್​ಐಆರ್​ನಲ್ಲಿ ಒಬ್ಬ ಹೆಸರು ಮತ್ತು ಮೂವರು ಅಪರಿಚಿತ ಆರೋಪಿಗಳನ್ನು ಉಲ್ಲೇಖಿಸಲಾಗಿದೆ. ಇದೀಗ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

    ಬೈಕ್​ನಲ್ಲಿ ಬಲವಂತವಾಗಿ ಕರೆದೊಯ್ಯುವಾಗ ತಡೆಯುವ ಪ್ರಯತ್ನ ಮಾಡಿದೆ. ಆದರೆ, ನನ್ನ ಮೇಲೆ ಹಲ್ಲೆ ಮಾಡಿ ಕೊರೆದೊಯ್ದರು. ಮಕ್ಕಳಿಗಾಗಿ ತುಂಬಾ ಹೊತ್ತು ಹುಡುಕಾಡಿದ ಬಳಿಕ ಕಬ್ಬಿನಗದ್ದೆಯ ಸಮೀಪದ ಮರವೊಂದರಲ್ಲಿ ಇಬ್ಬರು ಮೃತದೇಹಗಳು ನೇತಾಡುತ್ತಿರುವುದನ್ನು ನೋಡಿದೆವು. ನನ್ನ ಮಕ್ಕಳನ್ನು ಅತ್ಯಾಚಾರ ಮಾಡಿ, ಕೊಲೆಗೈದಿದ್ದಾರೆ ಎಂದು ಸಂತ್ರಸ್ತೆಯರ ತಾಯಿ ಆರೋಪ ಮಾಡಿದ್ದಾರೆ.

    ಸಹೋದರಿಯರಿಬ್ಬರು ತಮ್ಮ ದುಪಟ್ಟಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವುದೇ ಗೋಚರ ಗಾಯಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ. ಶವಪರೀಕ್ಷೆಗಾಗಿ ಮೃತದೇಹವನ್ನು ತರಲು ಸಂತ್ರಸ್ತೆಯರ ಮನೆಗೆ ಹೋದಾಗ ಪೊಲೀಸರಿಗೆ ಗ್ರಾಮಸ್ಥರ ಪ್ರತಿಭಟನೆ ಬಿಸಿ ತಟ್ಟಿತು. ಅಲ್ಲದೆ, ಪೊಲೀಸರು ಬರದಂತೆ ರಸ್ತೆ ಬ್ಲಾಕ್​ ಮಾಡಿಯೂ ಪ್ರತಿಭಟನೆ ನಡೆಸಿದರು. ಕೊನೆಗೂ ಗ್ರಾಮಸ್ಥರ ಮನವೊಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರ ಮಾಡಲಾಯಿತು.

    ಪ್ರಸ್ತುತ ನಡೆದಿರುವ ಘಟನೆಯು 2014 ರಲ್ಲಿ ಬದೌನ್‌ನಲ್ಲಿ ನಡೆದ ಘಟನೆಯ ಭಯಾನಕ ನೆನಪುಗಳನ್ನು ಮರಳಿ ತಂದಿದೆ. ಬದೌನ್​ನಲ್ಲಿ ಇಬ್ಬರು ಸೋದರಸಂಬಂಧಿಗಳ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಇದೀಗ ಸಹೋದರಿಯರ ಮೃತದೇಹ ಪತ್ತೆಯಾಗಿದ್ದು, ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರದಲ್ಲಿನ ಕಾನೂನು ಸುವ್ಯವಸ್ಥೆಯ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದಿವೆ.

    ಯೋಗಿ ಸರ್ಕಾರದಲ್ಲಿ ಗೂಂಡಾಗಳು ಪ್ರತಿದಿನ ತಾಯಿ ಮತ್ತು ಸಹೋದರಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರವು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಮಾಜವಾದಿ ಪಕ್ಷ ಟ್ವೀಟ್ ಮಾಡಿದೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಭಟನೆಯ ಚಿತ್ರಗಳನ್ನು ಟ್ವೀಟ್ ಮಾಡಿದ್ದು, ಒಪ್ಪಿಗೆಯಿಲ್ಲದೆ ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸುವ ಮೂಲಕ ಶವಪರೀಕ್ಷೆಯನ್ನು ನಡೆಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಘಟನೆಯ ಕುರಿತು, ಉತ್ತರ ಪ್ರದೇಶದಲ್ಲಿ ಅಪರಾಧಿಗಳಿಗೆ ಯಾವುದೇ ಭಯವಿಲ್ಲ. ಏಕೆಂದರೆ ಸರ್ಕಾರದ ಆದ್ಯತೆಗಳೇ ತಪ್ಪಾಗಿವೆ ಎಂದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ಬಗ್ಗೆ ರಾಜ್ಯ ಸರ್ಕಾರದ ಬಡಾಯಿ ಕೊಚ್ಚಿಕೊಳ್ಳುತ್ತಿರುವುದನ್ನು ಲಖಿಂಪುರ್​ ಖೇರಿಯಲ್ಲಿ ನಡೆದ ಘಟನೆಯೇ ಬಹಿರಂಗಪಡಿಸುತ್ತದೆ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಖಿಂಪುರ್​ನಲ್ಲಿ ಇಬ್ಬರು ಸಹೋದರಿಯರ ಹತ್ಯೆಯ ಘಟನೆ ಹೃದಯ ವಿದ್ರಾವಕವಾಗಿದೆ. ಆ ಹೆಣ್ಣುಮಕ್ಕಳನ್ನು ಹಗಲು ಹೊತ್ತಿನಲ್ಲಿ ಅಪಹರಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ. ಪ್ರತಿದಿನ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಅಷ್ಟಕ್ಕೂ ಯುಪಿಯಲ್ಲಿ ಮಹಿಳೆಯರ ವಿರುದ್ಧ ಘೋರ ಅಪರಾಧಗಳು ಯಾಕೆ ಹೆಚ್ಚುತ್ತಿವೆ? ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, ಟೀಕಿಸಿದ್ದಾರೆ. (ಏಜೆನ್ಸೀಸ್​)

    ಅಲಯನ್ಸ್ ವಿವಿ ಆಸ್ತಿ ಮಾರಾಟಕ್ಕೆ ಯತ್ನಿಸಿ ಗಲಾಟೆ? FIR ದಾಖಲಾಗ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಎಸ್ಕೇಪ್​

    ಬೈಕ್​ ಮೇಲೆ ಕುಳಿತು ಪ್ರಯಾಣ ಮಾಡಿದ ಗೂಳಿ! ನೀವು ಇದುವರೆಗೂ ನೋಡಿರದ ವಿಡಿಯೋ ಇದು…

    ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts