More

    ಬಂಡಾಯ ನಾಯಕ ಏಕನಾಥ್​ ಶಿಂಧೆಗೆ ಸವಾಲು ಎಸೆದ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ

    ಮುಂಬೈ: ತಮ್ಮ ಪಕ್ಷದ ಶಾಸಕರು ಬಂಡಾಯವೆದ್ದು ಪಕ್ಷವನ್ನು ತೊರೆಯುತ್ತಿದ್ದು, ಸರ್ಕಾರ ಪತನದ ಅಂಚಿನಲ್ಲಿರುವ ಸಮಯದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ರೆಬೆಲ್​ ನಾಯಕ ಏಕನಾಥ್​ ಶಿಂಧೆಗೆ ಸವಾಲೊಂದನ್ನು ಎಸೆದಿದ್ದಾರೆ. ಇದಲ್ಲದೆ, ಬಿಜೆಪಿಯು ಶಿವಸೇನೆ ಕಾರ್ಯಕರ್ತರನ್ನು ಮತ್ತು ಪಕ್ಷಕ್ಕೆ ಮತ ಹಾಕುವವರನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ. ಶಿವಸೇನೆಯನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಪಕ್ಷದ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಸಿಎಂ ಉದ್ಧವ್​ ಠಾಕ್ರೆ ಮಾಡಿದ ಭಾಷಣದಲ್ಲಿ, ಪ್ರತಿಯೊಬ್ಬ ಸಾಮಾನ್ಯ ಶಿವಸೇನಾ ಕಾರ್ಯಕರ್ತರು ನಮ್ಮ “ಸಂಪತ್ತು” ಎಂದು ಹೇಳಿದರು. ಕಾರ್ಯಕರ್ತರು ನಮ್ಮೊಂದಿಗೆ ಇರುವವರೆಗೂ ಇತರರ ಟೀಕೆಗಳಿಗೆ ನಾನು ಹೆದರುವುದಿಲ್ಲ ಎಂದು ಠಾಕ್ರೆ ತಿಳಿಸಿದರು.

    ಅಸ್ಸಾಂನ ಗುವಾಹಟಿಯಲ್ಲಿ ಮೊಕ್ಕಾಂ ಹೂಡಿರುವ ಏಕನಾಥ್ ಶಿಂಧೆ ಅವರ ಬಣವನ್ನು ಶಿವಸೇನೆಯ ಬಹುಪಾಲು ಶಾಸಕರು ಸೇರಿಕೊಂಡ ಬಳಿಕ ಉದ್ಧವ್​ ನೇತೃತ್ವದ ಸರ್ಕಾರ ತೀವ್ರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ತಮ್ಮದೇ ಪಕ್ಷದ ಬಂಡಾಯ ಶಾಸಕರ ವಿರುದ್ಧ ಹರಿಹಾಯ್ದಿರುವ ಠಾಕ್ರೆ, ಸ್ವಂತ ಜನರಿಂದಲೇ ದ್ರೋಹಕ್ಕೆ ಒಳಗಾಗಿದ್ದೇವೆ ಎಂದು ಹೇಳಿದರು.

    ನಿಮ್ಮಲ್ಲಿ ಹಲವರು ಟಿಕೆಟ್​ ಆಕಾಂಕ್ಷಿಗಳಾಗಿದ್ದರೂ ನಾವು ಈ ಬಂಡಾಯಗಾರರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೇವೆ. ಈ ಜನರು ನಿಮ್ಮ ಕಠಿಣ ಪರಿಶ್ರಮದಿಂದ ಆಯ್ಕೆಯಾದ ನಂತರವೂ ಅಸಮಾಧಾನಗೊಂಡಿದ್ದು, ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ನೀವು ಪಕ್ಷದ ಪರವಾಗಿ ನಿಂತಿದ್ದೀರಿ. ನಾನು ಧನ್ಯವಾದ ಹೇಳಿದರೆ ಸಾಲದು ಎಂದು ಶಿವಸೇನಾ ಅಧ್ಯಕ್ಷರೂ ಆಗಿರುವ ಠಾಕ್ರೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

    ನಮ್ಮ ಮೈತ್ರಿ ಪಕ್ಷಗಳಲ್ಲಿರುವ ದೂರುಗಳನ್ನು ಪರಿಶೀಲಿಸುವಂತೆ ಏಕನಾಥ್ ಶಿಂಧೆ ಅವರಿಗೆ ನಾನು ಹೇಳಿದ್ದೆ. ಶಿವಸೇನಾ, ಬಿಜೆಪಿ ಜತೆ ಕೈಜೋಡಿಸುವಂತೆ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು. ಆ ಶಾಸಕರನ್ನು ನನ್ನ ಬಳಿಗೆ ಕರೆತನ್ನಿ, ಚರ್ಚಿಸೋಣ ಎಂದಿದ್ದೆ. ಬಿಜೆಪಿ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ನಮ್ಮ ಭರವಸೆಗಳನ್ನು ಈಡೇರಿಸಲಿಲ್ಲ. ಈಗಾಗಲೇ ಬಂಡಾಯಗಾರರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಿಜೆಪಿಯೊಂದಿಗೆ ಹೋದರೆ ಪ್ರಕರಣಗಳಿಂದ ಹೊರಬಹುದು ಎಂಬ ವಿಶ್ವಾಸ ಇದೆ. ನಮ್ಮೊಂದಿಗೆ ಇದ್ದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯವಿದೆ ಎಂದು ಠಾಕ್ರೆ ಬಂಡಾಯಗಾರರ ಕುರಿತು ಮಾತನಾಡಿದರು.

    ಶಿವಸೇನೆಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿಯಾಗುವುದಾದರೆ ನೀವು ಬಿಜೆಪಿಯೊಂದಿಗೆ ಹೋಗಬೇಕು. ಆದರೆ ನೀವು ಉಪಮುಖ್ಯಮಂತ್ರಿ ಆಗುವುದಾದರೆ ನೀವು ಮೊದಲೇ ಹೇಳಬೇಕಿತ್ತು, ನಾನೇ ನಿಮ್ಮನ್ನು ಉಪಮುಖ್ಯಮಂತ್ರಿ ಮಾಡುತ್ತಿದ್ದೆ ಎಂದು ಶಿಂಧೆ ಅವರನ್ನು ಉಲ್ಲೇಖಿಸಿ ಹೇಳಿದರು. ನಾನು ಪಕ್ಷವನ್ನು ನಡೆಸಲು ಅಸಮರ್ಥರು ಎಂದು ಶಿವಸೇನಾ ಕಾರ್ಯಕರ್ತರು ಭಾವಿಸಿದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಠಾಕ್ರೆ ತಿಳಿಸಿದರು.

    ಶಿವಸೇನೆ ಒಂದು ಸಿದ್ಧಾಂತವಾಗಿದೆ. ಹಿಂದು ಮತ ಬ್ಯಾಂಕ್ ಅನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದ ಕಾರಣ ಬಿಜೆಪಿ ಅದನ್ನು ಮುಗಿಸಲು ಬಯಸುತ್ತದೆ ಎಂದು ಠಾಕ್ರೆ ಆರೋಪ ಮಾಡಿದರು. ಬಂಡಾಯ ಗುಂಪಿಗೆ ಬಿಜೆಪಿ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ, ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಏಕೆಂದರೆ ಅವರಲ್ಲಿ ಅನೇಕ ಶಾಸಕರು ನಿಜವಾಗಿಯೂ ಸಂತೋಷವಾಗಿಲ್ಲ ಎಂದು ಹೇಳಿದರು.

    ಮುಂದಿನ ಚುನಾವಣೆಯಲ್ಲಿ ಬಂಡಾಯಗಾರರು ಗೆಲ್ಲಲು ಸಾಧ್ಯವಿಲ್ಲ ಎಂದು ಠಾಕ್ರೆ ಹೇಳಿದ್ದಾರೆ. ಚುನಾಯಿತರಾದವರನ್ನು ದೂರ ತೆಗೆದುಕೊಂಡು ಹೋಗಿದ್ದೀರಿ, ಧೈರ್ಯವಿದ್ದರೆ ನಿಮ್ಮನ್ನು ಆಯ್ಕೆ ಮಾಡಿದವರನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿ ಎಂದು ಶಿಂಧೆಗೆ ಠಾಕ್ರೆ ಸವಾಲು ಎಸೆದಿದ್ದಾರೆ. (ಏಜೆನ್ಸೀಸ್​)

    ಹುಟ್ಟೂರಿನ ಸುಧಾರಣೆಗೆ ಮುಂದಾದ ನಟ ಅನಿರುದ್ಧ: ತನ್ನದೇಯಾದ ಕೆಲ ಸುಧಾರಣೆ ಪಟ್ಟಿ ತಯಾರಿ

    ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

    ಒಂದು ಸಿನಿಮಾದ ಕಥೆ-ವ್ಯಥೆ: ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts