More

    ವರ್ಕೌಟ್ ಆಗುತ್ತಾ ದೋಸ್ತಿ ಲೆಕ್ಕಾಚಾರ?

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ‘ತೆನೆಹೊತ್ತ ಮಹಿಳೆಗೆ ಕಮಲ’ ಎಂದು ಬಿಜೆಪಿ ನಾಯಕರು ಈಗಾಗಲೇ ನಾಮಕರಣ ಮಾಡಿದ್ದಾರೆ. ಜೆಡಿಎಸ್ ಶಕ್ತಿಶಾಲಿಯಾಗಿರುವ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ಯಾವ ರೀತಿ ಕಮಾಲ್ ಆಗಲಿದೆ ಎಂಬುದು ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.

    ಈ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆಡಳಿತದ ಜತೆಗೆ ಜಾತಿ ಸಮೀಕರಣವೂ ಪ್ರಮುಖ ಪಾತ್ರವಹಿಸಲಿದೆ. ಹೀಗಾಗಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಮತ ಗಳಿಕೆ ಕೆಲ ವಿಧಾನಸಭೆಗಳಲ್ಲಿ ಕಡಿಮೆಯಾಗಬಹುದು, ಕೆಲವೆಡೆ ಏರಿಕೆಯಾಗಬಹುದು. ಎಲ್ಲಾದರೂ ಮತ ಗಳಿಕೆ ಕಡಿಮೆಯಾಗಿ ಅದನ್ನು ಸರಿದೂಗಿಸುವ ಲೆಕ್ಕಾಚಾರಕ್ಕಿಳಿದರೆ ಬಿಜೆಪಿ ನೆರವಿಗೆ ಬರುವುದು ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ.
    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಹಾಗೂ ಒಂದರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜೆಡಿಎಸ್ ಶಾಸಕರಿರುವ ಗ್ರಾಮಾಂತರದಲ್ಲಿ ಬಿಜೆಪಿ ಮತಗಳಿಕೆಯನ್ನೂ ಸೇರಿಸಿದರೆ ಮೈತ್ರಿಕೂಟದ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಎನ್ನಬಹುದಾದ ಮತಬೇಟೆ ನಡೆಸಿದೆ. ಅದಕ್ಕೆ ಜೆಡಿಎಸ್ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ನಂಬಿಕೆ ಬಿಜೆಪಿ ನಾಯಕರಲ್ಲಿದೆ.
    ಸಂಬಂಧ ವೃದ್ಧಿಗೆ ಆದ್ಯತೆ: ಬಿಜೆಪಿ-ಜೆಡಿಎಸ್ ಮೈತ್ರಿ ನಿಶ್ಚಯವಾಗುತ್ತಿದ್ದಂತೆಯೇ ಸಂಸದ ಬಿ.ವೈ.ರಾಘವೇಂದ್ರ ಜೆಡಿಎಸ್ ಜಿಲ್ಲಾ ಮುಖಂಡರೊಂದಿಗಿನ ಸಂಬಂಧ ವೃದ್ಧಿಗೆ ಒತ್ತು ನೀಡಿದರು. ಬಿಜೆಪಿ ಪ್ರಮುಖ ಸಮಾವೇಶಗಳಲ್ಲಿ ಜೆಡಿಎಸ್ ಶಾಸಕರು, ಮುಖಂಡರಿಗೆ ಅಗ್ರಪಂಕ್ತಿ ದೊರೆಯಿತು. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಿಗೆ ಪ್ರಾಶಸ್ತ್ಯ ನೀಡಲಾಯಿತು. ಇದೆಲ್ಲವೂ ಮೈತ್ರಿಧರ್ಮ ಪಾಲನೆ ಭಾಗವಾಗಿದ್ದರೂ ದೊಡ್ಡ ಫಲ ನೀಡಲಿದೆ ಎಂಬ ನಂಬಿಕೆ ಬಿಜೆಪಿಗಿದೆ.
    ಉಕ್ಕಿನ ನಗರಿಯಲ್ಲಿ ಅನುಕೂಲ:ಈವರೆಗಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭದ್ರಾವತಿಯಲ್ಲಿ ಖಾತೆ ತೆರೆದಿಲ್ಲ. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಮತಗಳಿಕೆ ಈವರೆಗಿನ ದಾಖಲೆಯಾಗಿದೆ. ಆದರೆ ಲೋಕಸಭೆ ಚುನಾವಣೆಗಳಲ್ಲಿ ಅದರಲ್ಲೂ ರಾಘವೇಂದ್ರ, ಯಡಿಯೂರಪ್ಪ ಸ್ಪರ್ಧಿಸಿದ ಚುನಾವಣೆಗಳಲ್ಲಿ ಭದ್ರಾವತಿ ಮತದಾರರು ಉತ್ತಮವಾಗಿ ಸ್ಪಂದಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 10,946 ಮತಗಳ ಮುನ್ನಡೆ ಸಿಕ್ಕಿತ್ತು. ಆಗಲೂ ಅಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಇದೆಲ್ಲವೂ ಬಿಜೆಪಿಗೆ ಆಶಾದಾಯಕ ಸಂಗತಿಗಳು.
    ವೈಯಕ್ತಿಕ ನೆಲೆ ವಿಸ್ತರಣೆ:ಒಂದೆಡೆ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿಯಲ್ಲಿ ಬಿಜೆಪಿ ಹೆಚ್ಚು ಮತ ಗಳಿಕೆ ನಿರೀಕ್ಷೆಯಲ್ಲಿದ್ದರೆ, ಜೆಡಿಎಸ್‌ಗೂ ಸವಾಲು ಕಾಡುತ್ತಿದೆ. ಇಲ್ಲಿ ಉತ್ತಮ ಸಾಧನೆ ತೋರಿದರೆ ಮಾತ್ರ ಸಾಮರ್ಥ್ಯ ಪ್ರದರ್ಶಿಸಬಹುದು. ಬಿಜೆಪಿ-ಜೆಡಿಎಸ್ ನಾಯಕರು ಈಗ ಹೇಳುತ್ತಿರುವಂತೆ ಮುಂದಿನ ವಿಧಾನಸಭೆ ಚುನಾವಣೆಗೂ ಇದೇ ಮೈತ್ರಿ ಮುಂದುವರಿದರೆ ಅದರ ಪ್ರಯೋಜನ ಪಡೆಯಬಹುದು. ವೈಯಕ್ತಿಕ ವರ್ಚಸ್ಸಿನ ಮೇಲೆ ರಾಜಕಾರಣ ಮಾಡುತ್ತಿರುವ ಶಾರದಾ ಪೂರ‌್ಯಾನಾಯ್ಕಾ ಅವರಿಗೆ ಬಿಜೆಪಿ ಮತ್ತಷ್ಟು ಶಕ್ತಿ ತುಂಬುವುದು ನಿಶ್ಚಿತ.
    ಇನ್ನೊಂದೆಡೆ ಭದ್ರಾವತಿಯಲ್ಲಿ ಕಾಂಗ್ರೆಸ್ ವಿರುದ್ಧ ಶಾರದಾ ಅಪ್ಪಾಜಿ ಹೋರಾಟ ಮುಂದುವರಿದಿದೆ. ಮತ್ತೊಂದೆಡೆ ಅನುಕಂಪದ ಅಲೆ ಮರೆಯಾಗುತ್ತಿದೆ. ಮುಂದಿನ ಚುನಾವಣೆಗೆ ಸಾಮರ್ಥ್ಯ ಹೆಚ್ಚಿಸಿಕೊಂಡರಷ್ಟೇ ರಾಜಕೀಯ ನೆಲೆ. ಈ ಚುನಾವಣೆಯಲ್ಲಿ ಬಿಜೆಪಿಯ ಲೀಡ್ ಹೆಚ್ಚಿಸಿದರೆ ವೈಯಕ್ತಿಕ ನೆಲೆ ವಿಸ್ತರಿಸಿಕೊಳ್ಳಲು ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts