More

    ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

    ಕೊಚ್ಚಿ: ಕೇರಳದ ಕೊಡುಮೊನ್​-ಅಂಗಾಡಿಕಲ್​ ರಸ್ತೆಯ ಬಳಿ ಅಳವಡಿಸಲಾಗಿರುವ ಫ್ಲೆಕ್ಸ್​ ಒಂದು ತನ್ನ ವಿಶಿಷ್ಟ ಕಾರಣದಿಂದಾಗಿ ಭಾರೀ ಆಸಕ್ತಿಯನ್ನು ಉಂಟುಮಾಡಿದೆ. ಫ್ಲೆಕ್ಸ್​ನಲ್ಲಿ ಹುಡುಗನೊಬ್ಬನ ಫೋಟೋ ಇದೆ ಮತ್ತು ಗಮನ ಸೆಳೆಯುವ ಅಡಿಬರಹವನ್ನು ನೀಡಲಾಗಿದೆ.

    ಇತಿಹಾಸ ಕೆಲವರಿಗೆ ದಾರಿ ಮಾಡುಕೊಡುತ್ತದೆ ಎಂದು ಅಡಿಬರಹ ಬರೆಯಲಾಗಿದೆ. ಫೋಟೋ ಕೆಳಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದಕ್ಕೆ ಕುಂಜಕ್ಕು ಅಲಿಯಾಸ್​ ನಾನೇ, ನನ್ನ ಅಭಿನಂದನೆಗಳು ಎಂಬ ಬರಹವಿದ್ದು, ಈ ಫ್ಲೆಕ್ಸ್​ ನೋಡಿದವರಿಗೆ ಒಂದು ಕ್ಷಣ ಅಲ್ಲಿನ ಬರವಣಿಗೆಯ ಮೇಲೆ ಕಣ್ಣು ಹೋಗದೇ ಇರದು. ಸದ್ಯ ಈ ಫ್ಲೆಕ್ಸ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಈಗ ಫ್ಲೆಕ್ಸ್​ ಹಿಂದಿರುವ ಅಸಲಿ ಸ್ಟೋರಿಗೆ ಬರೋಣ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿನ ತನ್ನ ಯಶಸ್ಸನ್ನು ಸಂಭ್ರಮಿಸಲು ಫ್ಲೆಕ್ಸ್​ ಅಳವಡಿಸಿದ ಬಾಲಕನ ಹೆಸರು ಕುಂಜಕ್ಕು ಅಲಿಯಾಸ್​ ಜಿಷ್ಣು. ಈತ ಅಂಗಾಡಿಕಲ್​ ನಿವಾಸಿಗಳಾದ ಒಮನಕುಟ್ಟನ್​ ಮತ್ತು ದೀಪಾ ದಂಪತಿಯ ಪುತ್ರ. ಜಿಷ್ಣು, ತನಗೆ ತಾನೇ ಈ ರೀತಿ ಯಾಕೆ ಫ್ಲೆಕ್ಸ್​ ಹಾಕಿಕೊಂಡ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಮುಂದಿದೆ.

    ಜಿಷ್ಣು ಮತ್ತು ಆತನ ಸಹೋದರಿ ವಿಷ್ಣುಪ್ರಿಯಾ ಸಾಕಷ್ಟು ಕಷ್ಟಪಟ್ಟು ಪರೀಕ್ಷೆ ಬರೆದಿದ್ದಾರೆ. ಅವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿ ಒಂದು ವಾರ ಕಳೆದಿದೆಯಷ್ಟೆ. ಇಷ್ಟು ದಿನ ಸೀಮೆಎಣ್ಣೆ ದೀಪದ ಮಂದ ಬೆಳಕಿನಲ್ಲಿ ಓದುತ್ತಿದ್ದರು. ಅವರಿಬ್ಬರ ಪಾಲಕರು ಕೂಲಿ ಕಾರ್ಮಿಕರು. ಜಿಷ್ಣುವಿನ ಕುಟುಂಬವು ಅವಳಿ ಸಹೋದರಿ, ಅಣ್ಣ ವಿಷ್ಣು, ತಂದೆಯ ಅಜ್ಜಿ ಮತ್ತು ಕಳೆದ 30 ವರ್ಷಗಳಿಂದ ಹಾಸಿಗೆ ಹಿಡಿದಿರುವ ಚಿಕ್ಕಪ್ಪನನ್ನು ಒಳಗೊಂಡಿದೆ. ಸ್ವಂತ ಮನೆಯ ವಾತಾವರಣವು ಅಧ್ಯಯನಕ್ಕೆ ಸೂಕ್ತವಲ್ಲದ ಕಾರಣ ಇಬ್ಬರೂ ಪಠಾಣಪುರಂನಲ್ಲಿರುವ ತಮ್ಮ ತಾಯಿಯ ಮನೆಯಲ್ಲಿ ವಾಸವಾಗಿದ್ದರು.

    ಅಂದಹಾಗೆ ಜಿಷ್ಣು ಕುರುಂಬಕ್ಕರದಲ್ಲಿರುವ ಸಿಎಂಎಚ್‌ಎಸ್ ವಿದ್ಯಾರ್ಥಿ. 10ನೇ ತರಗತಿಯಲ್ಲಿ ಓದುತ್ತಿದ್ದಾಗ ಜಿಷ್ಣು ಮತ್ತು ಆತನ ಸಹೋದರಿ ಇಬ್ಬರೂ ಬಸ್‌ನಲ್ಲಿ 14 ಕಿ.ಮೀ ಪ್ರಯಾಣಿಸಿ ಶಾಲೆ ತಲುಪಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ ಎಂದು ಸ್ನೇಹಿತರು ಮತ್ತು ಕುಟುಂಬದವರು ಸದಾ ಗೇಲಿ ಮಾಡುತ್ತಿದ್ದರು ಎಂದು ಜಿಷ್ಣು ಹೇಳಿದ್ದಾನೆ. ಅವರ ಮಾತು ತನಗೆ ಅತೀವ ನೋವುಂಟು ಮಾಡಿತು. ಅದಕ್ಕಾಗಿಯೇ ನಾನು ಫ್ಲೆಕ್ಸ್ ಬೋರ್ಡ್ ಅಳವಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾನೆ.

    ಫ್ಲೆಕ್ಸ್ ಬೋರ್ಡ್ ಅಳವಡಿಸಿರುವುದು ತನ್ನ ಸಿಹಿಯಾದ ಸೇಡಿನ ಭಾಗವಾಗಿದೆ ಎಂದು ಜಿಷ್ಣು ಹೇಳಿದ್ದಾನೆ. ಜಿಷ್ಣು ಕೈಯಲ್ಲಿ ಕಡಿಮೆ ಹಣವಿತ್ತು. ಆದರೆ, ನವಜ್ಯೋತಿ ಕ್ರೀಡಾ ಮತ್ತು ಕಲಾ ಸಮಿತಿಯ ಸಹಾಯ ಪಡೆದು ಫ್ಲೆಕ್ಸ್ ಅಳವಡಿಸಿದ್ದಾರೆ. ಶೀಘ್ರದಲ್ಲೇ ಪಿಯುಸಿ ವಿದ್ಯಭ್ಯಾಸ ಆರಂಭಿಸಲು ಜಿಷ್ಣು ಮತ್ತು ಆತನ ಸಹೋದರಿ ಸಿದ್ಧತೆ ನಡೆಸಿದ್ದಾರೆ. (ಏಜೆನ್ಸೀಸ್​)

    VIDEO| ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ: ಮೆಚ್ಚುಗೆಯ ಮಹಾಪೂರ

    ಒಂದು ಸಿನಿಮಾದ ಕಥೆ-ವ್ಯಥೆ: ಸಿನಿಮಾ ವಿಮರ್ಶೆ

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts