More

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!

    | ಮಾಲಂಬಿ ದಿನೇಶ್ ಶನಿವಾರಸಂತೆ

    ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್​ಬಿಎಂ ಶಾಖೆ ಪ್ರಾರಂಭಿಸಲಾಗಿದೆ! ಎಸ್​ಬಿಎಂ ಎಂದರೆ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಎಂದು ಭಾವಿಸಬೇಡಿ. ಕ್ರಿಯಾಶೀಲತೆ, ಹೊಸ ಪ್ರಯೋಗಕ್ಕೆ ಹೆಸುರುವಾಸಿಯಾಗಿರುವ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಹಣ ಉಳಿತಾಯ, ವ್ಯವಹಾರ ಜ್ಞಾನ, ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದ ವ್ಯವಸ್ಥೆ ಹಾಗೂ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ‘ಸ್ಟೂಡೆಂಟ್ ಬ್ಯಾಂಕ್ ಆಫ್ ಮುಳ್ಳೂರು (ಎಸ್​ಬಿಎಂ)’ ಸ್ಥಾಪಿಸಲಾಗಿದೆ. ಕ್ರಿಯಾಶೀಲ ಶಿಕ್ಷಕ ಸಿ.ಎಸ್.ಸತೀಶ್ ಅವರ ಪರಿಕಲ್ಪನೆಯಲ್ಲಿ ಈ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.

    ಸ್ಕೂಲ್ ಬ್ಯಾಂಕಿನ ವ್ಯವಸ್ಥೆ: ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 37 ವಿದ್ಯಾರ್ಥಿಗಳಿಗೂ ಒಂದೊಂದು ಲಾಕರ್ ಒಳಗೊಂಡಂತೆ ಒಂದು ಖಜಾನೆಯನ್ನು ಸಿದ್ದಪಡಿಸಲಾಗಿದೆ. ವಿದ್ಯಾರ್ಥಿಗಳು ತಾವು ಉಳಿಸಿರುವ ಹಣವನ್ನು ತಮ್ಮ ಲಾಕರ್​ಗಳಲ್ಲಿ ತಂದು ಹಾಕುತ್ತಾರೆ. ಶಿಕ್ಷಕರು ಅದನ್ನು ವಿದ್ಯಾರ್ಥಿಗಳಿಗೆ ನೀಡಿರುವ ಪಾಸ್ ಬುಕ್​ಗಳಲ್ಲಿ ನಮೂದಿಸುವುದರ ಜತೆಗೆ, ಖಜಾನೆಯಲ್ಲಿಟ್ಟಿರುವ ಲೆಡ್ಜರ್​ನಲ್ಲಿ ಬರೆದುಕೊಳ್ಳುತ್ತಾರೆ. ನೂರು ರೂಪಾಯಿ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಬೋನಸ್ ರೂಪದಲ್ಲಿ ಒಂದು ಪೆನ್ಸಿಲ್, ಇನ್ನೂರು ರೂಪಾಯಿ ಸಂಗ್ರಹಿಸಿದವರಿಗೆ ಒಂದು ಪೆನ್, ಮುನ್ನೂರು ರೂಪಾಯಿ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಒಂದು ನೋಟ್​ಬುಕ್ ಕೊಡುತ್ತಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಬ್ಯಾಂಕ್ ಬಡ್ಡಿ ವ್ಯವಹಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 500 ರೂ. ಸಂಗ್ರಹ ಮಾಡುವ ವಿದ್ಯಾರ್ಥಿಗಳಿಗೆ ಶೇ. 5 ಬಡ್ಡಿಯನ್ನು ನೀಡುವ ಮೂಲಕ ಉಳಿತಾಯಕ್ಕೆ ಪೋ›ತ್ಸಾಹಿಸಲಾಗುತ್ತಿದೆ.

    ವಿದ್ಯಾರ್ಥಿಗಳದೇ ಆಡಳಿತ ಮಂಡಳಿ: ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಅನುಭವಕ್ಕಾಗಿ ಚಲನ್ ತುಂಬಿ ಹಣ ಕಟ್ಟುವ, ಬ್ಯಾಂಕ್ ಫಾಮ್ರ್, ಚೆಕ್ ಮುಖಾಂತರ ಹಣ ಹಿಂಪಡೆಯುವ ಯೋಜನೆಯ ಮಾದರಿಯನ್ನು ತಯಾರಿಸಿ ಜಾರಿ ಮಾಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ರಚಿಸಲಾಗಿದ್ದು, ಶಾಲೆಯ ವಿದ್ಯಾರ್ಥಿನಿ ಎಂ.ಎ.ತನ್ವಿ ವ್ಯವಸ್ಥಾಪಕಿಯಾಗಿ, ಪುಣ್ಯ ಅಕೌಂಟರ್ ಆಗಿ ಮತ್ತು ಎಂ.ಎಲ್.ವಿದ್ಯಾ ಕ್ಯಾಶಿಯರ್ ಆಗಿ ನೇಮಕಗೊಂಡಿದ್ದಾರೆ.

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!ಸಾವಿರ ರೂ. ಉಳಿತಾಯ ಪೂರೈಸಿದ ವಿದ್ಯಾರ್ಥಿಯ ಹಣವನ್ನು ಆನ್​ಲೈನ್ ಮೂಲಕ ನೇರವಾಗಿ ಆ ವಿದ್ಯಾರ್ಥಿಯ ನೈಜ ಬ್ಯಾಂಕ್ (ರಾಷ್ಟ್ರೀಕೃತ) ಖಾತೆಗೆ ಹಾಕಲಾಗುತ್ತಿದೆ. ಹೀಗೆ ಸಂಗ್ರಹಿಸಿದ ಹಣ ವರ್ಷಾಂತ್ಯದಲ್ಲಿ ಶೈಕ್ಷಣಿಕ ಪ್ರವಾಸ, ಶಾಲಾ ವಾರ್ಷಿಕೋತ್ಸವ, ಲೇಖನ ಸಾಮಗ್ರಿಗಳನ್ನು ಕೊಳ್ಳಲು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತದೆ.

    | ಸಿ.ಎಸ್.ಸತೀಶ್ ಶಿಕ್ಷಕ ಹಾಗೂ ಬ್ಯಾಂಕ್ ರೂವಾರಿ

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!ಶಾಲೆಯಲ್ಲಿ ಈ ರೀತಿಯ ಬ್ಯಾಂಕ್ ವ್ಯವಸ್ಥೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳು ಇತ್ತೀಚೆಗೆ ಚಾಕೊಲೇಟ್ ಇನ್ನಿತರ ಜಂಕ್​ಪುಡ್ ತಿನ್ನುವುದನ್ನು ನಿಲ್ಲಿಸಿದ್ದಾರೆ. ಚಾಕೊಲೇಟ್​ಗೆ ಹಣ ವ್ಯಯ ಮಾಡುತ್ತಿಲ್ಲ. ಹಣವನ್ನು ಎಸ್​ಬಿಎಂಗೆ ವಿನಿಯೋಗಿಸುತ್ತಿದ್ದಾರೆ. ಇದರಿಂದ ಬ್ಯಾಂಕ್ ವ್ಯವಹಾರ ಮಕ್ಕಳಿಗೆ ಸುಲಭವಾಗಿ ಗೊತ್ತಾಗುತ್ತಿದೆ. ಶಿಕ್ಷಕ ಸತೀಶ್ ಅವರು ನಮ್ಮ ಮಕ್ಕಳಿಗೆ ನಮಗಿಂತಲೂ ಹೆಚ್ಚು ಪ್ರೀತಿ ಕೊಡುತ್ತಿದ್ದಾರೆ. ಹೀಗಾಗಿ, ಮಕ್ಕಳು ಶಾಲೆಗೆ ಒಂದು ದಿನ ರಜೆ ಮಾಡಿ ಎಂದರೂ ಹಿಂದೇಟು ಹಾಕುತ್ತಾರೆ. ಇಂತಹ ಶಿಕ್ಷಕರು ಎಲ್ಲ ಸರ್ಕಾರಿ ಶಾಲೆಗಳಿಗೂ ಸಿಗಬೇಕು.

    | ಬಿಂದು ಸುರೇಶ್ ಅಧ್ಯಕ್ಷೆ, ಶಾಲಾಭಿವೃದ್ಧಿ ಸಮಿತಿ

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!ಈ ರೀತಿಯ ಬ್ಯಾಂಕ್ ತೆರೆದಿರುವುದು ಉತ್ತಮ ಬೆಳವಣಿಗೆ. ಇಂತಹ ಆಲೋಚನೆಗಳು ಶಾಲೆಯ ಶಿಕ್ಷಕರಿಗೆ ಸ್ವಯಂ ಪ್ರೇರಿತವಾಗಿ ಬರಬೇಕು. ಆಸಕ್ತಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶಿಕ್ಷಕ ಸತೀಶ್ ಪ್ರೇರಣೆಯಾಗುತ್ತಿದ್ದಾರೆ. ಒಂದಲ್ಲ ಒಂದು ರೀತಿಯ ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಸಾಮಾಜಿಕ ಕೌಶಲಗಳನ್ನು ಎಲ್ಲ ಹಂತದಲ್ಲೂ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ. ಒತ್ತಾಯಪೂರ್ವಕವಾಗಿ ಈ ರೀತಿಯ ಕೆಲಸ ಮಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಎಲ್ಲರಲ್ಲೂ ಸ್ವಯಂ ಪ್ರೇರಿತವಾಗಿ ಬರಬೇಕು.

    | ಕೆ.ವಿ.ಸುರೇಶ್ ಕ್ಷೇತ್ರಶಿಕ್ಷಣಾಧಿಕಾರಿ, ಸೋಮವಾರಪೇಟೆ

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!ನಾನು ಹಿಂದೆ ಸಿಕ್ಕ ಚಿಲ್ಲರೆ ಹಣವನ್ನೆಲ್ಲ ಚಾಕೊಲೇಟ್, ಜ್ಯೂಸ್… ಹೀಗೆ ಆರೋಗ್ಯಕ್ಕೆ ಹಾನಿಕರವಾಗುವ ಜಂಕ್​ಫುಡ್ ತಿನ್ನಲು ಖರ್ಚು ಮಾಡುತ್ತಿದ್ದೆ. ಆದರೆ ಸ್ಕೂಲ್ ಬ್ಯಾಂಕ್ ಸ್ಥಾಪನೆಯಾದ ಮೇಲೆ ಎಲ್ಲರಿಗಿಂತ ಹೆಚ್ಚು ಉಳಿತಾಯ ಮಾಡಬೇಕೆಂದು ಮನೆಯಲ್ಲಿ ಕೊಡುವ ಚಿಲ್ಲರೆ ಹಣವನ್ನು ಸ್ಕೂಲ್ ಬ್ಯಾಂಕ್​ಗೆ ಹಾಕುತ್ತೇನೆ. ಈ ಬಾರಿ ಉಳಿತಾಯ ಹಣವನ್ನು ಶೈಕ್ಷಣಿಕ ಪ್ರವಾಸಕ್ಕೆ ಬಳಸಿಕೊಳ್ಳುತ್ತೇನೆ.

    | ವಿದ್ಯಾ ಎಂ.ಎಲ್. ಕ್ಯಾಷಿಯರ್ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts