More

    ದೇಶದ ಹಲವಡೆ ಪಿಎಫ್​ಐ ಕಚೇರಿಗಳ ಮೇಲೆ ಎನ್​ಐಎ, ಇಡಿ ದಾಳಿ: 100ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರ ಬಂಧನ

    ನವದೆಹಲಿ: ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆ ಪಾಲಿಗೆ ಇಂದು ಕರಾಳ ದಿನವಾಗಿದೆ. ರಾಷ್ಟ್ರೀಯ ತನಿಖಾ ಆಯೋಗ(ಎನ್​ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್​ಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲಿ ಗುರುವಾರ (ಸೆ. 22) ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ವಿವಿಧ ಪ್ರಕರಣಗಳ ಅಡಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಇಡಿ, ಎನ್​ಐಎ ಮತ್ತು ಆಯಾ ರಾಜ್ಯದ ಪೊಲೀಸರು ಬಂದಿಸಿದ್ದಾರೆ. ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಂಧನ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ.

    ಇದುವರೆಗಿನ ಅತಿ ದೊಡ್ಡ ತನಿಖಾ ದಾಳಿ ಇದಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ದಾಳಿ ನಡೆದಿದ್ದು, ಪಿಎಫ್​ಐ ಕಚೇರಿ ಮತ್ತು ಆವರಣಗಳಲ್ಲಿ ತನಿಖಾ ಸಂಸ್ಥೆಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಪಿಎಫ್​ಐ ಕಚೇರಿ ಮಾತ್ರವಲ್ಲದೆ, ಮುಖಂಡರ ಮನೆಗಳ ಮೇಲೂ ಎನ್​ಐಎ ಮತ್ತು ಇಡಿ ದಾಳಿ ನಡೆಸಿದ್ದು, ವಿಚಾರಣೆ ನಡೆಸುತ್ತಿದೆ. 10 ರಾಜ್ಯಗಳ 80 ಸ್ಥಳಗಳ ಮೇಲೆ 300ಕ್ಕೂ ಹೆಚ್ಚು ಎನ್​ಐಎ ಮತ್ತು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, 100ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರನ್ನು ಬಂಧಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ ಅವರ ಮನೆ ಸೇರಿದಂತೆ ಪಿಎಫ್‌ಐ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ಮಧ್ಯರಾತ್ರಿಯಿಂದಲೇ ಎನ್‌ಐಎ ಮತ್ತು ಇಡಿ ದಾಳಿ ನಡೆಸಿದೆ. ದಾಳಿ ನಡೆಯುತ್ತಿದ್ದಂತೆಯೇ, ಮಲಪ್ಪುರಂನಲ್ಲಿರುವ ಒಎಂಎ ಸಲಾಂ ಅವರ ಮನೆಯ ಹೊರಗೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಮಂಗಳೂರಿನಲ್ಲೂ ದಾಳಿ
    ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಪಿಎಫ್ಐ ಮತ್ತು ಎಸ್​ಡಿಪಿಐ ಕಚೇರಿ ಮೇಲೆ ಮುಂಜಾನೆ ಸುಮಾರು 3.30ರ ವೇಳೆ ಎನ್​ಐಎ ದಾಳಿ ಮಾಡಿದೆ. ದಾಳಿಗೂ ಮುನ್ನ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ನಂತರ ಎನ್ಐಎ ದಾಳಿ ಮಾಡಿದ್ದು, ಕಡತಗಳ ಪರಿಶೀಲನೆ ಸೇರಿದಂತೆ ತನಿಖೆಯನ್ನು ಚುರುಕುಗೊಳಿಸಿದೆ. ಇದರ ನಡುವೆ ಎನ್ಐಎ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. ಅರೆಮೀಸಲು ಪಡೆ ಕೂಡ ಭಾರೀ ಕಟ್ಟೆಚ್ಚರ ವಹಿಸಿದೆ. ಪಿಎಫ್ಐ, ಎಸ್ ಡಿಪಿಐ ಮುಖಂಡರ ಮನೆ ಮೇಲೆಯು ದಾಳಿ ನಡೆದಿದೆ. ಪಿಎಫ್ಐ ನಾಯಕರಾದ ಶರೀಫ್ ಬಜ್ಪೆ, ಅಶ್ರಫ್ ಜೋಕಟ್ಟೆ, ಮೊಯಿದಿನ್ ಹಳೆಯಂಗಡಿ, ನವಾಝ್ ಕಾವೂರು ಹಾಗೂ ಖಾದರ್ ಕುಳಾಯಿ ಮನೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಎನ್ಐಎ ದಾಳಿ ಮಾಡಿದೆ.

    ಕೇರಳ, ತಮಿಳುನಾಡಿನಲ್ಲೂ ಕಾರ್ಯಾಚರಣೆ
    ಕೇರಳದ ಪಿಎಫ್‌ಐನ ವಿವಿಧ ಕಚೇರಿಗಳ ಮೇಲೆ ಎನ್‌ಐಎ ಮತ್ತು ಇಡಿ ದಾಳಿ ನಡೆಸಿವೆ. ಒಟ್ಟು 50 ಸ್ಥಳಗಳಲ್ಲಿ ದಾಳಿ ನಡೆದಿರುವುದಾಗಿ ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ. ರಾಜ್ಯದ ಪಾಪುಲರ್​ ಫ್ರಂಟ್​ ನಾಯಕರ ಮನೆಗಳ ಮೇಲೆ ಕೇಂದ್ರೀಯ ಸಂಸ್ಥೆಗಳಾದ ಎನ್‌ಐಎ ಮತ್ತು ಇಡಿ ಮಧ್ಯರಾತ್ರಿ ದಾಳಿ ನಡೆಸಿರುವುದು ದೌರ್ಜನ್ಯಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದ ನಾಯಕರ ಮನೆಗಳ ಮೇಲೆಯೂ ದಾಳಿ ನಡೆಯುತ್ತಿದೆ. ರಾಜ್ಯ ಸಮಿತಿ ಕಚೇರಿ ಮೇಲೆಯೂ ದಾಳಿ ನಡೆಸಲಾಗುತ್ತಿದೆ. ಈ ಮೂಲಕ ಭಿನ್ನಾಭಿಪ್ರಾಯದ ಧ್ವನಿಗಳನ್ನು ಶಮನಗೊಳಿಸಲು, ಏಜೆನ್ಸಿಗಳನ್ನು ಬಳಸಿಕೊಳ್ಳುವ ಫ್ಯಾಸಿಸ್ಟ್ ಆಡಳಿತದ ಕ್ರಮಗಳನ್ನು ಬಲವಾಗಿ ಪ್ರತಿಭಟಿಸಿ ಎಂದು ಅಬ್ದುಲ್ ಸತ್ತಾರ್ ಕರೆ ನೀಡಿದ್ದಾರೆ.

    ತಮಿಳುನಾಡಿನ ಮಧುರೈ, ಥೇಣಿ, ದಿಂಡಿಗಲ್, ರಾಮನಾಥಪುರಂ, ಕಡಲೂರು, ತಿರುನಲ್ವೇಲಿ ಮತ್ತು ತೆಂಕಶಿಯ ಸೇರಿದಂತೆ ವಿವಿಧೆಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಪಿಎಫ್‌ಐ ಮತ್ತು ಎಸ್‌ಡಿಪಿಐಗೆ ಸಂಬಂಧಿಸಿದ ಆಸ್ತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪಿಎಫ್‌ಐನ ಕಡಲೂರು ಜಿಲ್ಲಾ ಮುಖ್ಯಸ್ಥ ಪಯಾಜ್ ಅಹ್ಮದ್ ಮತ್ತು ಮಧುರೈ ಜಿಲ್ಲಾ ಕಾರ್ಯದರ್ಶಿ ಯಾಸರ್ ಅರಾಫತ್ ಅವರನ್ನು ಎನ್‌ಐಎ ವಿಚಾರಣೆ ನಡೆಸುತ್ತಿದೆ.

    ಕಳೆದ ಕೆಲವು ದಿನಗಳಿಂದ ಪಿಎಫ್‌ಐ ಸಂಪರ್ಕಕ್ಕೆ ಸಂಬಂಧಿಸಿದಂತೆ ಎನ್‌ಐಎ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಎನ್​ಐಎ ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ, ತನಿಖಾ ಸಂಸ್ಥೆಯು ದೇಶದಲ್ಲಿ ಪಿಎಫ್​ಐ ಸಂಪರ್ಕ ಹೊಂದಿದ್ದ 100 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. (ಏಜೆನ್ಸೀಸ್​)

    ದೂರು ನೀಡಲು ಹೋದ ದೂರುದಾರನ ಮೇಲೆಯೇ ವಿಶ್ವನಾಥಪುರ ಠಾಣಾ ಪೊಲೀಸರಿಂದ ದೌರ್ಜನ್ಯ!?

    ಶಂಕಿತ ಉಗ್ರರು ಸಿಕ್ಕಿಬಿದ್ದಿದ್ದೇ ರೋಚಕ: ಭಯೋತ್ಪಾದಕರ ತಯಾರಿಕಾ ಕಾರ್ಖಾನೆ ಮಲೆನಾಡು?

    ಎಲ್ಲ ಪೌರಕಾರ್ವಿುಕರ ಸೇವೆ ಕಾಯಂ: ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅನ್ವಯ; ಸಿಎಂ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts