More

    ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಬಿಹಾರ ಸಿಎಂ: ಎನ್​ಡಿಎಗೆ ನಿತೀಶ್​ ವಿದಾಯ ಬಹುತೇಕ ಖಚಿತ

    ಪಟನಾ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದೆ. ಅಧಿಕಾರಕ್ಕೆ 2 ವರ್ಷವಾಗಿದ್ದರೂ ಬಿಜೆಪಿ ಜತೆಗೆ ನಿತೀಶ್ ಕುಮಾರ್ ಸಂಬಂಧ ಅಷ್ಟಕ್ಕಷ್ಟೇ. ಕೇಂದ್ರ ಸರ್ಕಾರದ ಹಲವು ಮಹತ್ವದ ಸಭೆಗಳಲ್ಲಿ ಗೈರಾಗುವ ಕೇಂದ್ರದ ನಾಯಕರಿಗೆ ತಮ್ಮ ಮುನಿಸಿನ ಕುರಿತ ಪರೋಕ್ಷ ಸಂದೇಶಗಳನ್ನು ರವಾನಿಸುತ್ತಿದ್ದ ನಿತೀಶ್, ಇಂದು (ಆ.9) ಪಟನಾದಲ್ಲಿ ಜೆಡಿಯು ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರೊಂದಿಗೆ ಸಭೆ ಕರೆದು ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.

    ಸಭೆಯ ಬೆನ್ನಲ್ಲೇ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಬಿಹಾರ ಸಿಎಂ ನಿತೀಶ್​ ಕುಮಾರ್​ ಅವರು 12.30ಕ್ಕೆ ರಾಜ್ಯಪಾಲರ ಭೇಟಿಯಾಗಲು ಸಮಯ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ನಡೆ ಶೀಘ್ರದಲ್ಲೇ ಬಿಜೆಪಿ ಜತೆ ಜೆಡಿಯು ಮೈತ್ರಿ ಮುರಿದುಕೊಳ್ಳುವ ಸುಳಿವು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಜೆಡಿಯು ಮತ್ತು ಬಿಜೆಪಿ ಮೈತ್ರಿ ಬಗ್ಗೆ ಹಿರಿಯ ಬಿಜೆಪಿ ನಾಯಕರೊಬ್ಬರು ಮಾತನಾಡಿದ್ದು, ಈ ಮೈತ್ರಿಯು ಉಳಿಯುತ್ತದೆ ಎಂದು ನಿರೀಕ್ಷಿಸುವುದು ಮಾರಣಾಂತಿಕ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳ ಕುಟುಂಬದಂತಿದೆ ಎಂದಿದ್ದಾರೆ.

    ಇನ್ನೊಂದೆಡೆ ಆರ್​ಜೆಡಿ ಸಹ ಸಭೆ ಸೇರಿ ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಚರ್ಚಿಸಿದೆ. ಬಿಜೆಪಿಯನ್ನು ಬಿಟ್ಟುಬಂದರೆ, ಮತ್ತೆ ಮಹಾಮೈತ್ರಿ 2.0ಗೆ ಸಿದ್ಧರಾಗಿದ್ದೇವೆ ಎಂದು ಕಾಂಗ್ರೆಸ್​ ಮತ್ತು ಆರ್​ಜೆಡಿ ಸಂದೇಶ ರವಾನಿಸಿದೆ. ಜೆಡಿಯು, ಎನ್​ಡಿಯು ತೊರೆದ ಬಳಿಕ ಕಾಂಗ್ರೆಸ್​ ಮತ್ತು ಆರ್​ಜೆಡಿ ಬೆಂಬಲ ಪಡೆದು ಸರ್ಕಾರ ಮುಂದುವರಿಸಲಿದೆ ಎಂದು ತಿಳಿದುಬಂದಿದೆ.

    ಇನ್ನೊಂದೆಡೆ ಬಿಜೆಪಿಯ ಎಲ್ಲಾ 16 ಸಚಿವರು ಇಂದು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಮುಂಜಾನೆ ಬಿಹಾರ ಬಿಜೆಪಿ ನಾಯಕರು ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಅವರು ಸಹ ರಾಜ್ಯಪಾಲರ ಬಳಿ ಸಮಯ ಕೇಳಿದ್ದಾರೆ.

    ಸೋನಿಯಾ ಭೇಟಿಗೆ ಉತ್ಸುಕ
    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಗೆ ನಿತೀಶ್ ಸಮಯ ಕೇಳಿದ್ದಾರೆ. ಸದ್ಯ ರಾಜ್ಯದಲ್ಲಿ 19 ಕಾಂಗ್ರೆಸ್ ಶಾಸಕರಿದ್ದಾರೆ. ಆರ್​ಜೆಡಿ ಬಳಿ 79 ಶಾಸಕರಿದ್ದರೆ, ಜೆಡಿಯು 45 ಶಾಸಕರಿದ್ದಾರೆ. ಈ ಮೂರೂ ಪಕ್ಷಗಳು ಮೈತ್ರಿಯಾದಲ್ಲಿ ಸಂಖ್ಯಾ ಬಲ 143ಕ್ಕೇರಲಿದೆ. 242 ಶಾಸಕರ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 122 ಶಾಸಕರ ಸಂಖ್ಯಾಬಲವಿದ್ದರೆ ಸಾಕು. ಜೆಡಿಯು-ಆರ್​ಜೆಡಿ ಮೈತ್ರಿಕೂಟ ಸರ್ಕಾರ ಬಂದರೆ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಬಹುದು. ಹೀಗಾಗಿ, ಕಾಂಗ್ರೆಸನ್ನೂ ಸೇರಿಸಿಕೊಂಡು ಸರ್ಕಾರ ರಚಿಸಿದಲ್ಲಿ ಹೊಸ ಸರ್ಕಾರ ರಾಜಕೀಯವಾಗಿ ಬಲಿಷ್ಠಗೊಳ್ಳಲಿದೆ ಎನ್ನುವುದು ನಿತೀಶ್ ಲೆಕ್ಕಾಚಾರ ಎನ್ನಲಾಗಿದೆ.

    ನಿತೀಶ್​ಗೆ ಲಾಭವೇನು?
    ಎನ್​ಡಿಎ ತೊರೆದು ನಿತೀಶ್ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ, ಇದರಿಂದಾಗುವ ರಾಜಕೀಯ ಲಾಭದ ಬಗ್ಗೆ ಸ್ಪಷ್ಟತೆ ಇಲ್ಲ. 2025ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರಾ ಎಂಬುದಕ್ಕೂ ಈಗ ಉತ್ತರ ಸಿಗದು.

    ನಿತೀಶ್ ಆಕ್ರೋಶಕ್ಕೆ ಕೆಲ ಕಾರಣಗಳು
    – ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್​ರನ್ನು (ಬಿಜೆಪಿ ಶಾಸಕ) ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆಗೆ ಒಪ್ಪಿಲ್ಲ.
    – ರಾಜ್ಯ ಮಂತ್ರಿಮಂಡಲಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ವೇಳೆ ತಮ್ಮ ಅಭಿಪ್ರಾಯಕ್ಕೆ ಆದ್ಯತೆ ಸಿಗುತ್ತಿಲ್ಲ.
    – ಅಮಿತ್ ಷಾ ಪ್ರಾಬಲ್ಯ ತಪ್ಪಿಸುವುದು ನಿತೀಶ್ ಉದ್ದೇಶ. ಆದರೆ ಇದು ಸಾಧ್ಯವಾಗುತ್ತಿಲ್ಲ.
    – ಬಿಹಾರದಲ್ಲಿ ಜಾತಿ ಆಧರಿತ ಜನಗಣತಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ.
    – ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯಬೇಕು ಎಂಬ ಕೇಂದ್ರದ ಪ್ರತಿಪಾದನೆಗೆ ನಿತೀಶ್ ಒಪ್ಪುತ್ತಿಲ್ಲ.

    ಎನ್​ಡಿಎಗೆ ನಿತೀಶ್ ವಿದಾಯ? ಮೈತ್ರಿಪಕ್ಷದ ಮೇಲೆ ನಿತೀಶ್ ಆಕ್ರೋಶಕ್ಕೆ ಕಾರಣಗಳು ಹೀಗಿವೆ…

    ಟ್ರಾಲಿ ಬ್ಯಾಗ್​ ಎಳ್ಕೊಂಡು ಬರ್ತಿದ್ದವಳ ಮೇಲೆ ಸಂಶಯಗೊಂಡು ಬ್ಯಾಗ್ ಓಪನ್​ ಮಾಡಿಸಿದ ಪೊಲೀಸರಿಗೆ ಕಾದಿತ್ತು ಶಾಕ್​!

    ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಮತ್ತೊಂದು ಗರಿ: ಅರಸಿ ಬಂದ ಗೌರವ ಡಾಕ್ಟರೇಟ್ ಪದವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts