

ಮುಂಬೈ: ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ದೇಶದಲ್ಲಿ ತೀವ್ರವಾಗಿದ್ದು ದಿನೇದಿನೆ ಸೋಂಕಿತ ಪ್ರಕರಣಗಳ ಹೆಚ್ಚಳದೊಂದಿಗೆ ಮೃತ್ಯು ಕೂಪವೂ ಬೆಳೆಯುತ್ತಿದೆ. ಇದರ ನಡುವೆ ಕೋವಿಡ್ ಹೆಮ್ಮಾರಿಗೆ ಮುಂಬೈನ 51 ವರ್ಷದ ವೈದ್ಯೆ ಬಲಿಯಾಗಿದ್ದು, ಸಾಯುವ ಮುನ್ನ ಅವರ ಫೇಸ್ಬುಕ್ ಸಂದೇಶ ಮನಕಲಕುವಂತಿದೆ.
ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮನಿಶಾ ಜಾಧವ್ ಸೋಮವಾರ ಕೋವಿಡ್ಗೆ ಬಲಿಯಾಗಿದ್ದಾರೆ. ಅದಕ್ಕೂ ಮುನ್ನ ಅಂದರೆ ಭಾನುವಾರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮನಿಶಾ, ಬಹುಶಃ ಇದೇ ನನ್ನ ಕೊನೆಯ ಶುಭೋದಯ ಅನಿಸುತ್ತದೆ. ಈ ವೇದಿಕೆಯಲ್ಲಿ ನಿಮ್ಮನ್ನು ಇನ್ನು ಮುಂದೆ ಭೇಟಿ ಮಾಡುವುದಿಲ್ಲ ಅನಿಸುತ್ತಿದೆ. ಎಲ್ಲರೂ ಎಚ್ಚರಿಕೆ ವಹಿಸಿ. ದೇಹ ಮಾತ್ರ ಸಾಯುತ್ತದೆ. ಆತ್ಮ ಎಂದಿಗೂ ಸಾಯುವುದಿಲ್ಲ. ಆತ್ಮ ಅಮರ ಎಂದು ಬರೆದುಕೊಂಡಿದ್ದಾರೆ.
ಡಾ. ಮನೀಶಾ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿವಿಕ್ ಹೆಲ್ತ್ ಸೆಟಪ್ನ ಸೋಂಕಿನಿಂದ ಸಾವಿಗೀಡಾದ ಮೊದಲ ವೈದ್ಯರಾಗಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ 18,000 ವೈದ್ಯರಿಗೆ ಕರೊನಾ ಪಾಸಿಟಿವ್ ಆಗಿದೆ. ಭಾರತೀಯ ವೈದ್ಯಕೀಯ ಸಂಘದ ಪ್ರಕಾರ ಅದರಲ್ಲಿ 168 ಮಂದಿ ಈವರೆಗೂ ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್)