More

    ಮುರ್ಮುರನ್ನು ರಾಷ್ಟ್ರಪತ್ನಿ ಎಂದ ಕಾಂಗ್ರೆಸ್​ ನಾಯಕನ​ ವಿರುದ್ಧ ಟೀಕೆಗಳ ಸುರಿಮಳೆ: ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್​ ಅವಮಾನಿಸಿದೆ ಎಂದು ಆರೋಪಿಸಿರುವ ಬಿಜೆಪಿ, ಕ್ಷಮೆಯಾಚಿಸುವಂತೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದೆ.

    ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಅವರು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಉಲ್ಲೇಖಿಸಿರುವುದು ಬಿಜೆಪಿ ಪಾಳಯದ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರಿಂದ ಕ್ಷಮೆಗೆ ಆಗ್ರಹಿಸಿದೆ. ಸೋನಿಯಾ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ಸ್ಮೃತಿ ಇರಾನಿ, ದೇಶದ ಅತ್ಯುನ್ನತ ಸಾಂವಿಧಾನಿಕ ಕಚೇರಿಯಲ್ಲಿ ಮಹಿಳೆಯೊಬ್ಬರನ್ನು ಅವಮಾನಿಸಲು ಸೋನಿಯಾ ಗಾಂಧಿ ಅನುಮೋದಿಸಿದ್ದಾರೆ. ಸೋನಿಯಾ ಅವರು ಆದಿವಾಸಿ ವಿರೋಧಿ ಹಾಗೂ ದಲಿತ ವಿರೋಧಿ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಇರಾನಿ ಒತ್ತಾಯಿಸಿದ್ದಾರೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಪಕ್ಷದ ಸಂಸದರ ಜೊತೆಗೂಡಿ ಸಂಸತ್ತಿನ ಆವರಣದ ಒಳಗೆ ಅಧಿರ್​ ರಂಜನ್​ ಹೇಳಿಕೆ ವಿರೋಧಿಸಿ ಪ್ರತಿಭಟಿಸಿದರು. ಅಲ್ಲದೆ, ಸಂಸತ್ತಿನ ಕೆಳಮನೆಯಲ್ಲಿ ಮಾತನಾಡಿದ ಅವರು ಇದು ಉದ್ದೇಶಪೂರ್ವಕ ಲೈಂಗಿಕ ನಿಂದನೆ ಎಂದರು. ಈ ಹೇಳಿಕೆಗೆ ಕಾಂಗ್ರೆಸ್​ ಪರವಾಗಿ ಅವರ ಅಧ್ಯಕ್ಷೆ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

    ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೋರಿರುವ ಅಧೀರ್​ ರಂಜನ್​, ಇದು ಬಾಯ್ತಪ್ಪಿನಿಂದ ಆದ ಎಡವಟ್ಟಷ್ಟೇ, ನಾನು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದರು. ಅಲ್ಲದೆ, ದರ ಏರಿಕೆ, ಜಿಎಸ್​ಟಿ, ಅಗ್ನಿಪಥ್​ ಯೋಜನೆ, ನಿರುದ್ಯೋಗ ಮತ್ತು ಇತರೆ ಸಮಸ್ಯೆಗಳ ಮೇಲಿನ ಚರ್ಚೆಯನ್ನು ಕದಡುವ ಸಲುವಾಗಿ ಈ ಹೇಳಿಕೆಯನ್ನು ಮುನ್ನೆಲೆಗೆ ತಂದಿದ್ದಾರೆಂದು ಆರೋಪಿಸಿದ್ದಾರೆ.

    ಭಾರತದ ರಾಷ್ಟ್ರಪತಿ ಯಾರೇ ಆಗಿರಲಿ, ಅದು ಬ್ರಾಹ್ಮಣರಾಗಿರಲಿ, ಅಥವಾ ಆದಿವಾಸಿಯಾಗಿರಲಿ, ರಾಷ್ಟ್ರಪತಿಗಳು ನಮಗೆ ರಾಷ್ಟ್ರಪತಿಗಳು. ನಮ್ಮ ಗೌರವ ಆ ಹುದ್ದೆಗೆ. ನಿನ್ನೆ ನಾವು ವಿಜಯ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ನಾವು ಎಲ್ಲಿಗೆ ಹೋಗಬೇಕೆಂದು ಸುದ್ದಿಗಾರರು ಕೇಳಿದರು. ಅದಕ್ಕೆ ನಾವು ರಾಷ್ಟ್ರಪತಿ ಮನೆಗೆ ಭೇಟಿ ನೀಡಬೇಕೆಂದು ಹೇಳಿದೆವು. ಈ ಸಮಯದಲ್ಲಿ ಬಾಯ್ತಪ್ಪಿ ರಾಷ್ಟ್ರಪತ್ನಿ ಎಂದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಬೇಡವಾದ ವಿವಾದವನ್ನು ಹುಟ್ಟುಹಾಕುತ್ತಿದೆ. ಒಂದೇ ಒಂದು ಮಾತಿನಿಂದ ನಾನು ಎಟವಟ್ಟು ಮಾಡಿಕೊಂಡಿದ್ದೇನೆ. ಇದು ಉದ್ದೇಶಪೂರ್ವಕವಲ್ಲ ಎಂದು ಹೇಳಿದರು.

    ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿ, ಈಗಾಗಲೇ ಅಧೀರ್​ ರಂಜನ್​ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.

    ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್​ ರಂಜನ್​, ಸೋನಿಯಾ ಗಾಂಧಿ ಇಡಿ ವಿಚಾರಣೆ ವೇಳೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದರು. ಇದೀಗ ಆ ಹೇಳಿಕೆ ವಿವಾದಕ್ಕೆ ತಿರುಗಿದ್ದು, ಬಿಜೆಪಿ ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿದೆ.

    ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ಎಂದು ದ್ರೌಪದಿ ಮುರ್ಮು ಅವರನ್ನು ಹೆಸರಿಸಿದಾಗಿನಿಂದ ಕಾಂಗ್ರೆಸ್ ಮುರ್ಮು ಅವರನ್ನು “ದುರುದ್ದೇಶದಿಂದ” ಗುರಿಯಾಗಿಸಿಕೊಂಡಿದೆ ಎಂದು ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಮುರ್ಮು ಅವರನ್ನು “ಕೈಗೊಂಬೆ” ಮತ್ತು “ದುಷ್ಟದ ಸಂಕೇತ” ಎಂದು ಜರಿದಿದ್ದಾರೆ ಎಂದು ಇರಾನಿ ದೂರಿದ್ದಾರೆ.

    ಬಿಜೆಪಿಯ ಗದ್ದಲದ ನಡುವೆಯೇ ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು. (ಏಜೆನ್ಸೀಸ್​)

    ಪುತಿ ತುಡು ಎಂಬ ಬಾಲೆ ದ್ರೌಪದಿ ಮುರ್ಮು ಆಗಿದ್ಹೇಗೆ? ಹೆಸರಿನ ಗುಟ್ಟು ಬಿಚ್ಚಿಟ್ಟ ‘ಐತಿಹಾಸಿಕ’ ರಾಷ್ಟ್ರಪತಿ

    ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ, ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ವ್ಯರ್ಥ ಪ್ರಯತ್ನ: ಮಾಜಿ ಸಿಎಂ ಎಚ್​ಡಿಕೆ ಟೀಕೆ

    ವರಿಷ್ಠರಿಗೆ ಮಾಹಿತಿ ನೀಡಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ: ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts