More

    3.5 ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಗುಡ್​ ಬೈ ಹೇಳಿದ ಭೂಪ: ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ನ್ಯೂಯಾರ್ಕ್​: ಯಾವುದಾದರೊಂದು ಕೆಲಸ ಸಿಗಲಿ ಅಂತಾ ದೇವರ ಬಳಿ ನಾನಾ ರೀತಿಯ ಹರಕೆ ಕಟ್ಟಿಕೊಳ್ಳುವವರನ್ನು ನೋಡಿದ್ದೇವೆ. ಕೆಲಸಕ್ಕಾಗಿ ಬೀದಿ ಬೀದಿ ಅಲೆಯುವುದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ಮಹಾಶಯ ನೆಟ್​ಫ್ಲಿಕ್ಸ್​ನಂಥ ದೈತ್ಯ ಕಂಪನಿಯಲ್ಲಿ ಸಿಕ್ಕಿದ್ದ 3.5 ಕೋಟಿ ರೂಪಾಯಿ ಸಂಬಳದ ಉದ್ಯೋಗವನ್ನು ತೊರೆದಿದ್ದಾನೆ.

    ಯಾರಪ್ಪ ಆ ಮಹಾಶಯ? ಕೆಲಸ ಬಿಡುವಂಥದ್ದು ಏನಾಗಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕೆಲಸ ಬಿಟ್ಟ ಭೂಪನ ಹೆಸರು ಮೈಕೆಲ್ ಲಿನ್. ಇಂಜಿನಿಯರ್ ಆಗಿರುವ ಈತ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ನಗರದಲ್ಲಿರುವ ಚಂದಾದಾರ ಆಧಾರಿತ ಸ್ಟ್ರೀಮಿಂಗ್​ ಸರ್ವೀಸ್​ ಮತ್ತು ಪ್ರೊಡಕ್ಷನ್​ ಕಂಪನಿ ನೆಟ್​ಫ್ಲಿಕ್ಸ್​ನಲ್ಲಿ ಉದ್ಯೋಗಿಯಾಗಿದ್ದ. ವಾರ್ಷಿಕ 4,50,000 ಡಾಲರ್​​ (3.5 ಕೋಟಿ) ಸಂಬಳ ಪಡೆಯುತ್ತಿದ್ದ. ಇದಲ್ಲದೆ, ನಿತ್ಯವು ಉಚಿತವಾಗಿ ಊಟ ಸಹ ಸಿಗುತ್ತಿತ್ತು ಮತ್ತು ಬೇಕೆಂದಾಗ ಸಾಕಷ್ಟು ರಜೆಗಳನ್ನು ಪಡೆಯುವ ಅವಕಾಶವಿತ್ತು. ಸುಖ ಜೀವನಕ್ಕೆ ಇದಕ್ಕಿಂತ ಇನ್ನೇನು ಬೇಕು ಹೇಳಿ. ಆದರೆ, ಈತ ಇದೀಗ ಕೆಲಸ ತೊರೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಅಷ್ಟಕ್ಕೂ ಈತ ಕೆಲಸ ಬಿಡಲು ಕಾರಣ ಏನೆಂಬುದನ್ನು ಮುಂದೆ ನೋಡೋಣ…

    ಅಂದಹಾಗೆ ಮೈಕೆಲ್ ಲಿನ್, 2017ರಲ್ಲಿ ಅಮೇಜಾನ್‌ನಲ್ಲಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್​ ಆಗಿ ಸೇರಿಕೊಂಡರು. ಹೀಗಿರುವಾಗ 2021ರ ಮೇನಲ್ಲಿ ಈತ ತನ್ನ ಕೆಲಸಕ್ಕೆ ಗುಡ್​ ಬೈ ಹೇಳಿದ್ದಾನೆ. ವರ್ಷಕ್ಕೆ ಮೂರೂವರೆ ಕೋಟಿ ಗಳಿಸುತ್ತಿದ್ದ ಈತ ತನ್ನ ನಿರ್ಧಾರದಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಕೆಲಸ ಬಿಡಲು ಕಾರಣ ತಾನು ಮಾಡುತ್ತಿದ್ದ ಕೆಲಸ ಬೇಸರ ಉಂಟು ಮಾಡಿದೆಯಂತೆ. ತುಂಬಾ ಬೋರ್​ ಆಗಿದೆ ಅಂತಾ ಈ ಮಹಾಶಯ ಕೆಲಸ ತೊರೆದಿದ್ದಾನೆ.

    ನೆಟ್​ಫ್ಲಿಕ್ಸ್​ ಕಂಪನಿಯಲ್ಲಿ ಕೆಲಸ ಬಿಡುವಾಗ ತನ್ನ ವ್ಯವಸ್ಥಾಪಕರೊಂದಿಗೆ ಮಾತನಾಡುವ ಮೊದಲು, ಹೆಚ್ಚಿನ ಸಂಬಳದ ಕೆಲಸವನ್ನು ತ್ಯಜಿಸಲು ಕಾರಣವನ್ನು ಲಿನ್​ ಹಂಚಿಕೊಂಡರು. ಪ್ರಾರಂಭದ ವರ್ಷಗಳಲ್ಲಿ ಕೆಲಸದಲ್ಲಿ ಅನೇಕ ವಿಷಯಗಳನ್ನು ಆಸಕ್ತಿಯಿಂದ ಗ್ರಹಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಮಾಡುವುದು ಎಂಬಿಎ ಕಾರ್ಯಕ್ರಮಗಳಲ್ಲಿ ನೀವು ಕಲಿಯುವ ಕೇಸ್ ಸ್ಟಡೀಸ್‌ನಲ್ಲಿ ಕೆಲಸ ಮಾಡಲು ಹಣ ಪಡೆದಂತೆ ಎಂದು ಲಿನ್ ಹೇಳಿದರು. ಆದರೆ, ತನ್ನ ಉತ್ಸಾಹವು ಕ್ರಮೇಣ ಮರೆಯಾಯಿತು ಮತ್ತು ಕೋವಿಡ್ ಹೊಡೆತದ ನಂತರ ಕೆಲಸದ ಮೇಲಿನ ಬಹುತೇಕ ಆಸಕ್ತಿಯನ್ನು ಕಳೆದುಕೊಂಡೆ. ಕೆಲಸ ಮಾತ್ರ ಉಳಿದಿತ್ತು. ಆದರೆ, ಕೆಲಸದ ಮೇಲಿನ ಆಸಕ್ತಿ ಮಾತ್ರ ಇರಲಿಲ್ಲ. ತುಂಬಾ ಬೋರ್​ ಆಗಿದ್ದರಿಂದ ಕೆಲಸ ತೊರೆದೆ ಎಂದಿದ್ದಾರೆ ಲಿನ್​.

    ನಾನು ಕೆಲಸ ಬಿಡುವಾಗ ನನ್ನ ತಂದೆ-ತಾಯಿ ಮೊದಲು ಆಕ್ಷೇಪ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ಕೆಲಸ ಬಿಡುವುದು ಇಷ್ಟವಿರಲಿಲ್ಲ. ನನ್ನ ಮಾರ್ಗದರ್ಶಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಮುಂದಿನ ಹೊಸ ಕೆಲಸದಲ್ಲಿ ವೇತನದ ಬಗ್ಗೆ ಮಾತುಕತೆ ನಡೆಸುವಾಗ ಹೆಚ್ಚಿನ ಸಂಬಳದ ಬೇಡಿಕೆಯನ್ನು ಕಳೆದುಕೊಳ್ಳುತ್ತೀಯ. ಹೀಗಾಗಿ ಕೆಲಸ ಬಿಡಬಾರದೆಂದು ಮಾರ್ಗದರ್ಶಕರು ಸಲಹೆ ನೀಡಿದರು ಎಂದು ಲಿನ್​ ಹೇಳಿದ್ದಾರೆ.

    ಸದ್ಯ ಲೈಫ್​ ಎಂಜಾಯ್​ ಮಾಡುತ್ತಿರುವ ಲಿನ್​, ತನ್ನ ಆಸಕ್ತಿಯನ್ನು ಕೆರಳಿಸುವ ಉದ್ಯೋಗ ಸಿಕ್ಕರೆ ಮತ್ತೆ ಸೇರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ಮಗು ಜತೆಯಲ್ಲೇ ನಿತ್ಯವು ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಪೊಲೀಸ್​ ಅಧಿಕಾರಿ: ಕಾರಣ ಮನಕಲಕುವಂತಿದೆ

    ಮೈಸೂರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ? ಪಿಯುಸಿ ಓದುತ್ತಿದ್ದ ಮಗಳನ್ನೇ ಹತ್ಯಗೈದ ತಂದೆ-ತಾಯಿ

    ಇದೆಂಥಾ ವಿಸ್ಮಯ! ಆಮ್ಲೆಟ್​ ಹಾಕಲು ಮೊಟ್ಟೆ ಹೊಡೆದ ಹೋಟೆಲ್​ ಮಾಲೀಕನಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts