ಜೈಪುರ: ಕಳೆದ ವರ್ಷ ಐಎಎಸ್ ಪತಿಯಿಂದ ಡಿವೋರ್ಸ್ ಪಡೆದಿದ್ದ ಸೆಲೆಬ್ರಿಟಿ ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಎರಡನೇ ವಿವಾಹವಾಗಿದ್ದಾರೆ. ತನಗಿಂತ ಮೂರು ವರ್ಷ ಹಿರಿಯರಾದ ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ಬುಧವಾರ ಜೈಪುರದಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಟೀನಾ ಡಾಬಿ ಕೈಹಿಡಿದಿದ್ದು, ನಿನ್ನೆ ಪ್ಲಸ್ ಹೋಟೆಲ್ನಲ್ಲಿ ಅದ್ಧೂರಿ ಆರತಕ್ಷತೆ ನಡೆದಿದೆ.
ಡಾಬಿ ಮತ್ತು ಗಾವಂಡೆ ಅವರು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡು ನಗುತ್ತಿರುವುದನ್ನು ವೈರಲ್ ಆಗಿರುವ ಫೋಟೋಗಳಲ್ಲಿ ಕಾಣಬಹುದು. ಹಿನ್ನಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರವನ್ನೂ ಕಾಣಬಹುದು.
2015ರ ಬ್ಯಾಚ್ನ ಐಎಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಟೀನಾ ಡಾಬಿ, ಪ್ರಸ್ತುತ ರಾಜಸ್ಥಾನ ಸರ್ಕಾರದಲ್ಲಿ ಹಣಕಾಸು (ತೆರಿಗೆ) ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಗಾವಂಡೆ ಸಹ 2013ನೇ ಸಾಲಿನ ರಾಜಸ್ಥಾನ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಜೈಪುರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಬ್ಬರು ಐಎಎಸ್ ಅಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪರಸ್ಪರ ಭೇಟಿಯಾದರು. ಸಾಂಕ್ರಾಮಿಕ ಸಮಯದಲ್ಲಿ ನಾವು ಭೇಟಿಯಾದೆವು. ಅವರು ನನಗೆ ಮದುವೆ ವಿಚಾರವನ್ನು ಪ್ರಸ್ತಾಪಿಸಿದರು ಮತ್ತು ನಾನು ಅವರ ಪ್ರಸ್ತಾಪವನ್ನು ಒಪ್ಪಿಕೊಂಡೆ ಎಂದು ಡಾಬಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಡಾಬಿ ಅವರಿಗೆ ಇದು ಎರಡನೇ ಮದುವೆಯಾಗಿದ್ದರೆ, ಗಾವಂಡೆಗೆ ಮೊದಲ ಮದುವೆಯಾಗಿದೆ. 2015ರ ಬ್ಯಾಚ್ನ ಐಎಎಸ್ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್ ಖಾನ್ ಅವರು ಎರಡನೇ ರ್ಯಾಂಕ್ ಪಡೆದಿದ್ದರು. ತರಬೇತಿ ಸಮಯದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ, 2018ರಲ್ಲಿ ವಿವಾಹವಾಗಿದ್ದರು.
ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ ಸರ್ನೇಮ್ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಅದೇ ಸಮಯದಲ್ಲಿ ಅಥರ್ ಸಹ ಇನ್ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್ಫಾಲೋ ಮಾಡಿದ್ದು, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿತ್ತು.
ಮದುವೆಯಾದ ಎರಡು ವರ್ಷಗಳ ಬಳಿಕ 2020ರ ನವೆಂಬರ್ ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್ ತಿಂಗಳಲ್ಲಿ ದಂಪತಿಯ ಡಿವೋರ್ಸ್ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತು. ಇದೀಗ ಇಬ್ಬರು ಮಾಜಿ ದಂಪತಿಗಳಾಗಿದ್ದಾರೆ.
ಮಾಜಿ ಪತಿ ಅಥರ್ ಖಾನ್ ಮತ್ತು ಟೀನಾ ಡಾಬಿ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು. ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ದರು. ಇವರಿಬ್ಬರ ಮದುವೆ ಭಾರೀ ಸುದ್ದಿ ಸಹ ಆಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿತ್ತು. (ಏಜೆನ್ಸೀಸ್)
ಡಿವೋರ್ಸ್ ಬೆನ್ನಲ್ಲೇ ಮಾಜಿ ಪತಿಗೆ ಶಾಕ್ ಕೊಟ್ಟ ಸೆಲೆಬ್ರಿಟಿ IAS ಅಧಿಕಾರಿ ಟೀನಾ ಡಾಬಿ!
ಸಮಂತಾ ಯಾಕೆ ಈ ರೀತಿ ಟ್ವೀಟ್ ಮಾಡಿದ್ರು? ನೆಟ್ಟಿಗರ ತಲೆಗೆ ಹುಳ ಬಿಟ್ಟ ಸೌತ್ ಬ್ಯೂಟಿಯ ಈ ಒಂದು ಟ್ವೀಟ್!
ಖ್ಯಾತ ಗಾಯಕಿ ಶಿಲ್ಪಿ ರಾಜ್ ಅಶ್ಲೀಲ ವಿಡಿಯೋ ಲೀಕ್: ಲೈವ್ನಲ್ಲಿ ಕಣ್ಣೀರಿಟ್ಟು ಮನವಿ ಮಾಡಿದ ಗಾಯಕಿ