More

    ರಿಷಿ ಬಿಟ್ಟು ಯಾರನ್ನಾದ್ರೂ ಬೆಂಬಲಿಸಿ! ಬೋರಿಸ್​ ಜಾನ್ಸನ್​ಗೆ ಇನ್ಫಿ ಮೂರ್ತಿ ಅಳಿಯನ ಮೇಲೆ ಯಾಕಿಷ್ಟು ಕೋಪ?

    ಲಂಡನ್​: ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನದ ಆಯ್ಕೆಯಾಗಿ ನಡೆಯುತ್ತಿರುವ ಸ್ಪರ್ಧೆ ತೀವ್ರಗೊಂಡಿದ್ದು ಕುತೂಹಲಕಾರಿ ಘಟ್ಟ ತಲುಪಿದೆ. ಸ್ಪರ್ಧೆಯ ಮೊದಲೆರಡು ಸುತ್ತುಗಳಲ್ಲಿ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಜಯ ಗಳಿಸಿದ್ದಾರೆ. ಹೀಗಿದ್ದರೂ, ಉನ್ನತ ಸ್ಥಾನ ತಲುಪಲು ದಾರಿ ಇನ್ನೂ ದೂರವಿದೆ. ಇದರ ನಡುವೆ ಬೋರಿಸ್​ ಜಾನ್ಸನ್​ ಅವರು ರಿಷಿ ಸುನಕ್​ ಅವರಿಗೆ ಪ್ರಧಾನಿ ಹುದ್ದೆ ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಪ್ರಧಾನಿ ಸ್ಥಾನದ ಆಯ್ಕೆಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಸೋಲುಂಡಿರುವ ಟೋರಿ ಪಕ್ಷದ ಅಭ್ಯರ್ಥಿಗಳು, ರಿಷಿ ಸುನಕ್​ ಅವರನ್ನು ಬೆಂಬಲಿಸದಂತೆ ಬೋರಿಸ್​ ಜಾನ್ಸನ್​ ಕರೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜಾನ್ಸನ್​ ಅವರು ತಮ್ಮದೇ ಪಾರ್ಟಿಯಲ್ಲಿ ಸದ್ಯಸರ ಬೆಂಬಲ ಕಳೆದುಕೊಳ್ಳುವಲ್ಲಿ ರಿಷಿ ಸುನಕ್​ ಮೂಲ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಕಾರಣದಿಂದ ರಿಷಿ ವಿರುದ್ಧ ಜಾನ್ಸನ್​ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ನೀವು ಯಾರನ್ನಾದರೂ ಬೆಂಬಲಿಸಿ, ಆದರೆ ರಿಷಿ ಸುನಕ್​ ಮಾತ್ರ ಬೆಂಬಲಿಸಬೇಡಿ ಎಂದು ಜಾನ್ಸನ್​ ಹೇಳುತ್ತಿದ್ದಾರಂತೆ. ರಾಜೀನಾಮೆ ಬೆನ್ನಲ್ಲೇ ಮಾತನಾಡಿದ್ದ ಜಾನ್ಸನ್​, ನಾನು ಯಾವುದೇ ನಾಯಕತ್ವದ ಅಭ್ಯರ್ಥಿಗಳನ್ನು ಅನುಮೋದಿಸುವುದಿಲ್ಲ ಅಥವಾ ಸ್ಪರ್ಧೆಯಲ್ಲಿ ಸಾರ್ವಜನಿಕವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದಿದ್ದರು. ಆದರೆ, ಈಗ ತೆರೆಮರೆಯಲ್ಲಿ ನಿಂತು ರಿಷಿ ಸುನಕ್​ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಆಯ್ಕೆ ಸ್ಪರ್ಧೆಯಲ್ಲಿ ಸೋತಿರುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮುಂದಿನ ಪ್ರಕ್ರಿಯೆಯಲ್ಲಿ ರಿಷಿ ಸುನಕ್​ಗೆ ಬೆಂಬಲ ನೀಡದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಮೂಲಗಳ ಪ್ರಕಾರ ಬೋರಿಸ್​ ಜಾನ್ಸನ್​ ಅವರಿಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮೇಲೆ ಹೆಚ್ಚಿನ ಒಲವಿರುವಂತೆ ತೋರುತ್ತಿದೆ.

    ಜಾನ್ಸನ್​ ಬೆಂಬಲಿಗರು ರಿಷಿ ಅವರನ್ನು ದ್ವೇಷಿಸುತ್ತಿದ್ದಾರೆ. ಡೌನಿಂಗ್​ ಸ್ಟ್ರೀಟ್​ ಘಟನೆಯ ಬಳಿಕ ನಡೆದ ಎಲ್ಲ ವಿದ್ಯಾಮಾನಗಳಿಗೆ ರಿಷಿ ಕಾರಣ ಎಂದು ಭಾವಿಸಿದ್ದಾರೆ. ದ್ವೇಷ ತುಂಬಾ ವೈಯಕ್ತಿಕವಾಗಿದ್ದು, ಹೇಗಾದರೂ ಮಾಡಿ ಪ್ರಧಾನಿ ಹುದ್ದೆಯಿಂದ ತಪ್ಪಿಸಬೇಕೆಂದುಕೊಂಡಿದ್ದಾರೆ. ಹಲವು ತಿಂಗಳುಗಳಿಂದ ಜಾನ್ಸನ್​ ವಿರುದ್ಧ ರಿಷಿ ಪ್ಲಾನ್​ ಮಾಡಿದ್ದರು ಎಂದು ಜಾನ್ಸನ್​ ಬೆಂಬಲಿಗರು ನಂಬಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ರಿಷಿ ವಿರುದ್ಧ ಪ್ರಚಾರ ಮಾಡುತ್ತಿರುವ ಆರೋಪವನ್ನು ಜಾನ್ಸನ್​ ಬೆಂಬಲಿಗರೊಬ್ಬರು ನಿರಾಕರಿಸಿದ್ದಾರೆ. ಆದರೆ, ರಿಷಿ ಮಾಡಿರುವ ದ್ರೋಹದ ಬಗ್ಗೆ ಜಾನ್ಸನ್​ ಅವರಿಗೆ ಅಸಮಾಧಾನ ಇದೆ ಎಂದು ಒಪ್ಪಿಕೊಂಡಿದ್ದಾರೆ.

    ಗುರುವಾರ ಜರುಗಿದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ರಿಷಿ ಸುನಕ್ ಅವರು 101 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಈ ಸುತ್ತಿನ ನಂತರ ಪ್ರಧಾನಿ ರೇಸ್​ನಲ್ಲಿ ಒಟ್ಟು ಐವರು ಉಳಿದುಕೊಂಡಿದ್ದಾರೆ. ಎರಡು ಸುತ್ತಿನ ಮತದಾನದಲ್ಲಿ ವಿಜೇತರಾಗಿರುವ ಸುನಕ್ ಅವರು ವಾರಾಂತ್ಯದಲ್ಲಿ ತಮ್ಮ ಉಳಿದ ಪ್ರತಿಸ್ಪರ್ಧಿಗಳಾದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಮಾಜಿ ಸಚಿವ ಕೆಮಿ ಬದೆನೊಚ್ ಹಾಗೂ ಟಾಮ್ ಟುಗೆಂದಾತ್ ಜತೆ ದೂರದರ್ಶನದ ಸರಣಿ ಚರ್ಚೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಏನಿದು ಟೋರಿ ಲೀಡರ್​ಶಿಪ್ ಸ್ಪರ್ಧೆ?
    ಕನ್ಸರ್ವೆಟಿವ್ ಪಕ್ಷವನ್ನು ಟೋರಿ ಪಕ್ಷ ಎಂದೂ ಕರೆಯಲಾಗುತ್ತದೆ. ಸದ್ಯ ಬ್ರಿಟನ್​ನಲ್ಲಿ ಅದು ಅಧಿಕಾರದಲ್ಲಿದೆ. ಈ ಪಕ್ಷದ ನಾಯಕ ರಾಜೀನಾಮೆ ನೀಡಿದರೆ ಹೊಸ ನಾಯಕನನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಬ್ರಿಟನ್ ಪ್ರಧಾನಿಯಾಗಿದ್ದ ಕನ್ಸರ್ವೆಟಿವ್ ಪಕ್ಷದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿರುವುದರಿಂದ ಪಕ್ಷದ ಹೊಸ ನಾಯಕನ ಆಯ್ಕೆ ನಡೆಯುತ್ತಿದೆ. ಇಲ್ಲಿ ನಾಯಕರಾಗಿ ಆಯ್ಕೆಯಾಗುವವರೇ ನೂತನ ಪ್ರಧಾನಿ ಕೂಡ ಆಗಲಿದ್ದಾರೆ. ಕನ್ಸರ್ವೆಟಿವ್ ಪಕ್ಷವು ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನೇ ‘ಟೋರಿ ಲೀಡರ್​ಶಿಪ್ ಕಂಟೆಸ್ಟ್’ (ಟೋರಿ ಪಕ್ಷದ ನಾಯಕತ್ವ ಸ್ಪರ್ಧೆ) ಎಂದು ಕರೆಯಲಾಗುತ್ತದೆ. ಮೊದಲ ಸುತ್ತುಗಳಲ್ಲಿ ಪಕ್ಷದ ಸಂಸದರು ಈ ನಾಯಕತ್ವ ಸ್ಪರ್ಧೆಯಲ್ಲಿ ಮತದಾನ ಮಾಡುತ್ತಾರೆ.

    ಜುಲೈ 21ಕ್ಕೆ ಅಂತಿಮ ಹಂತ: ಐವರು ಕನ್ಸರ್ವೆಟಿವ್ ಸಂಸದರು ಮೂರನೇ ಸುತ್ತಿಗೆ ಸಾಗಿದ್ದಾರೆ. ಪಕ್ಷದ 358 ಸಂಸದರಲ್ಲಿ ಸುನಕ್ ಅವರು ಈಗ 101 ಮಂದಿಯ ಬೆಂಬಲ ಹೊಂದಿದ್ದಾರೆ. ಅವರು ಮೊದಲ ಸುತ್ತಿನಲ್ಲಿ 88 ಮತಗಳನ್ನು ಪಡೆದಿದ್ದು, ಎರಡನೇ ಸುತ್ತಿನಲ್ಲಿ ಸುಧಾರಿಸಿಕೊಂಡಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ, ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ತಮ್ಮ ಬೆಂಬಲದ ಸಂಖ್ಯೆಯನ್ನು 67 ರಿಂದ 83ಕ್ಕೆ ಏರಿಸಿಕೊಂಡಿದ್ದಾರೆ. ಇನ್ನೊಬ್ಬ ಭಾರತೀಯ ಮೂಲದ ಸಂಸದ ಸುಯೆಲ್ಲಾ ಬ್ರೇವರ್​ವುನ್ ಅವರು ಗುರುವಾರ ನಡೆದ ಎರಡನೇ ಸುತ್ತಿನಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಜುಲೈ 21ಕ್ಕೆ ಅಂತಿಮ ಸ್ಪರ್ಧೆ ಜರುಗಲಿದೆ. ಅಂತಿಮ ಸುತ್ತಿಗೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಮತದಾನ ಮುಂದುವರಿದು ಈಗ ರೇಸ್​ನಲ್ಲಿರುವ ಐವರ ಪೈಕಿ ಮೂವರು ಸ್ಪರ್ಧೆಯಿಂದ ಹೊರಹೋಗುತ್ತಾರೆ. ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ, ಕನ್ಸರ್ವೆಟಿವ್ ಪಕ್ಷದ ಸರಿಸುಮಾರು 2 ಲಕ್ಷ ಸದಸ್ಯರು ಸೇರಿಕೊಂಡು ನಾಯಕನನ್ನು ಆಯ್ಕೆ ಮಾಡುತ್ತಾರೆ.

    ಯಾರು ಈ ರಿಷಿ ಸುನಕ್​
    42 ವರ್ಷದ ರಿಷಿ ಸುನಕ್ ಅವರು 1980ರಲ್ಲಿ ಸೌತಾಂಪ್ಟನ್​ನಲ್ಲಿ ಜನಿಸಿದರು. ಪೂರ್ವ ಆಫ್ರಿಕಾ ದಿಂದ ಇಂಗ್ಲೆಂಡ್​ಗೆ ವಲಸೆ ಬಂದ ಭಾರತೀಯ ಮೂಲದ ದಂಪತಿಯ ಪುತ್ರ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಅಧ್ಯಯನ ಕೈಗೊಂಡಿದ್ದಾರೆ. ಅಮೆರಿಕದ ಸ್ಟ್ಯಾನ್​ಫರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ. ಅಲ್ಲಿಯೇ ಅವರು ಇನ್ಪೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿದ್ದು. ಮುಂದೆ ಅವರಿಬ್ಬರು ವಿವಾಹವಾದರು. (ಏಜೆನ್ಸೀಸ್​)

    ಬ್ರಿಟನ್ ಕದನ ಕುತೂಹಲ.. ಪ್ರಧಾನಿ ಪಟ್ಟದತ್ತ ರಿಷಿ ಸುನಕ್ ದಾಪುಗಾಲು..

    ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್​ ಬ್ಯಾನ್​ ಆದೇಶ ವಾಪಸ್​

    ನಟ ರಾಘವ ಲಾರೆನ್ಸ್​ ತಲೈವಾ​​ ರಜಿನಿಕಾಂತ್​ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಇದೇ ಕಾರಣಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts