More

    ಶ್ರೀಲಂಕಾದಲ್ಲಿ ಭುಗಿಲೆದ್ದ ಹಿಂಸಾಚಾರ: ಸೇನಾ ಮುಖ್ಯಸ್ಥರಿಂದ ಪ್ರತಿಭಟನಾಕಾರರಿಗೆ ಸಂದೇಶ ರವಾನೆ

    ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಜನರ ಆಕ್ರೋಶದ ಕಟ್ಟೆ ಒಡೆದಿದೆ. ಸರ್ಕಾರದ ವಿರುದ್ಧ ದಂಗೆಯೆದ್ದಿರುವ ಲಂಕಾ ಜನರು ಬೀದಿ ಬೀದಿಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದೆಡೆ ಜನರ ಪ್ರತಿಭಟನೆಯ ಭಯದಿಂದ ಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ತಮ್ಮ ಕುಟುಂಬ ಸಮೇತ ನೆರೆಯ ಮಾಲ್ಡೀವ್ಸ್​ಗೆ ಹಾರಿದ್ದರೆ, ಇನ್ನೊಂದೆಡೆ ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

    ಇಡೀ ರಾಷ್ಟ್ರವನ್ನು ಲಂಕಾ ಸೇನೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಲಂಕಾ ಸೇನಾ ಮುಖ್ಯಸ್ಥರು ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ಅಲ್ಲದೆ, ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡದಂತೆ ಪ್ರತಿಭಟನಾಕಾರರ ಬಳಿ ಮನವಿ ಮಾಡಿದ್ದಾರೆ.

    ದ್ವೀಪ ರಾಷ್ಟ್ರದ ಅತ್ಯಂತ ಕೆಟ್ಟ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಸರ್ವಪಕ್ಷ ನಾಯಕರ ಸಭೆಗೆ ಕರೆ ನೀಡುವಂತೆ ನಾನು ಮತ್ತು ಸಶಸ್ತ್ರ ಪಡೆಗಳ ಇತರ ಮುಖ್ಯಸ್ಥರು ಸಂಸತ್ತಿನ ಸ್ಪೀಕರ್‌ ಬಳಿ ಕೇಳಿಕೊಂಡಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಶವೇಂದ್ರ ಸಿಲ್ವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಲಂಕಾದಲ್ಲಿ ತುರ್ತು ಪರಿಸ್ಥಿತಿಯ ಜೊತೆಗೆ ನಿನ್ನೆಯಿಂದ ಇಂದು ಬೆಳಗ್ಗೆಯವರೆಗೂ ಕರ್ಫ್ಯೂ ಅನ್ನು ಜಾರಿ ಮಾಡಲಾಯಿತು. ಇದರ ನಡುವೆ ಲಂಕಾ ರಾಜಕೀಯ ನಾಯಕರು ಸರ್ವಪಕ್ಷ ಸಭೆಯನ್ನು ನಡೆಸಿದ್ದು, ಸಂಸತ್ತಿನ ಸ್ಪೀಕರ್ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಲಾಯಿತು ಮತ್ತು ಅಧಿಕಾರದಿಂದ ಕೆಳಗಿಳಿಯುವಂತೆ ರನಿಲ್ ವಿಕ್ರಮಸಿಂಘೆ ಅವರನ್ನು ಕೇಳಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಅವರು ಸರ್ಕಾರ ಮತ್ತು ಪ್ರತಿಪಕ್ಷಗಳೆರಡಕ್ಕೂ ಒಪ್ಪಿಗೆಯಾಗುವ ಪ್ರಧಾನಿಯನ್ನು ನಾಮನಿರ್ದೇಶನ ಮಾಡುವಂತೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರಿಗೆ ಸೂಚಿಸಿದ್ದಾರೆ.

    ಇತ್ತ ಜನರ ಆಕ್ರೋಶಕ್ಕೆ ಹೆದರಿರುವ ಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಮಾಲ್ಡೀವ್ಸ್​ನಲ್ಲಿ ಇರುವುದು ಸೇಫ್​ ಅಲ್ಲ ಅಂದುಕೊಂಡಿದ್ದು, ಸಿಂಗಾಪುರಕ್ಕೆ ಪರಾರಿಯಾಗಲು ಖಾಸಗಿ ಜೆಟ್ ವ್ಯವಸ್ಥೆ ಮಾಡುವಂತೆ ಮಾಲ್ಡೀವ್ಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಮಾಲ್ಡೀವ್ಸ್‌ನ ಸರ್ಕಾರಿ ಮೂಲಗಳು ತಿಳಿಸಿವೆ.

    ಅಧ್ಯಕ್ಷ ಗೋತಬಯ ರಾಜಪಕ್ಷ ದೇಶದಿಂದ ಪಲಾಯನ ಮಾಡಿದ್ದರೂ ಲಂಕಾದಲ್ಲಿ ಜನಾಕ್ರೋಶ ಕಡಿಮೆ ಆಗಿಲ್ಲ. ಪ್ರಧಾನಿ ಕಾರ್ಯಾಲಯ ಮತ್ತು ಅಧಿಕೃತ ನಿವಾಸದ ಮುಂದೆ ಜಮಾಯಿಸಿದ ಸಾವಿರಾರು ಜನರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದರು. ನಂತರ ಅಶ್ರುವಾಯು ಷೆಲ್ ಪ್ರಯೋಗ ಮಾಡಿದರು. ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಕೆಲವು ಹೇಳಿದ್ದಾರೆ. ಆದರೆ ಭದ್ರತಾ ಪಡೆಗಳು ಇದನ್ನು ಖಚಿತ ಪಡಿಸಿಲ್ಲ. ರನಿಲ ವಿಕ್ರಮಸಿಂಘ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾಕಾರರು ಶನಿವಾರ ಸಂಜೆ ಬೆಂಕಿ ಹಚ್ಚಿದ್ದರು. ಸಂಸತ್ ಭವನ ಮತ್ತು ಸ್ಪೀಕರ್ ನಿವಾಸಕ್ಕೂ ಮುತ್ತಿಗೆ ಹಾಕಲು ಪ್ರತಿಭಟನಾಕರರ ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸೇನೆ ಜಮಾವಣೆ ಮಾಡಲಾಗಿದೆ. ಈ ಮಧ್ಯೆ,ಕೊಲಂಬೊದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿರುವ ಕಾರಣ ಅಮೆರಿಕದ ದೂತಾವಾಸವನ್ನು ಎರಡು ದಿನ ಸ್ಥಗಿತಗೊಳಿಸಲಾಗಿದೆ.

    ಸುಮಾರು 22 ಮಿಲಿಯನ್ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರವು ತೀವ್ರವಾದ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಿದೆ. ವಿದೇಶಿ ಸಾಲದ ಹೊರೆ ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅದರಿಂದ ಹೊರಬರಲು ಸಾಕಷ್ಟು ಹೋರಾಡುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಇಂಧನ, ಆಹಾರ ಮತ್ತು ಔಷಧಿಗಳು ಸೇರಿದಂತೆ ಅಗತ್ಯ ವಸ್ತುಗಳು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯು ಲಂಕಾಗೆ ಎದುರಾಗಿದೆ.

    ದೇಶದ ಈ ಪರಿಸ್ಥಿತಿಗೆ ಅಧ್ಯಕ್ಷ ಗೋತಬಯ ಅವರೇ ಕಾರಣದ ಎಂದು ಹಲವರು ದೂಷಿಸಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿ ಕಳೆದ ಮಾರ್ಚ್‌ನಿಂದಲೇ ಲಂಕಾದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ, ಹಣದ ತೀವ್ರ ಕೊರತೆಯಿರುವ ಲಂಕಾವು, ಇಂಧನ ಆಮದು ಪಡೆಯುವುದನ್ನು ನಿಲ್ಲಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ಜನರ ಅಸಮಾಧಾನವು ಸ್ಫೋಟಗೊಂಡಿತು. ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸಾಕಷ್ಟು ದಾಂಧಲೆ ನಡೆಸಿದ್ದಾರೆ. (ಏಜೆನ್ಸೀಸ್​)

    ಜುಲೈ 16ರಿಂದ ಇಸ್ಮಾರ್ಟ್ ಜೋಡಿ; ಸ್ಟಾರ್ ಸುವರ್ಣಗಾಗಿ ಗಣೇಶ್ ಹೊಸ ರಿಯಾಲಿಟಿ ಶೋ

    ಒಂದೇ ಸರಣಿ, 18 ಸೂಪರ್ ​ಹೀರೋಗಳು; ಮಾರ್ವಲ್ ರೀತಿ ಹೊಸ ಪ್ರಪಂಚ ಸೃಷ್ಟಿ ಸಾಧ್ಯತೆ

    ಯಶಿಕಾ ಆನಂದ್ ಬಿಕಿನಿ ಫೋಟೋ ವೈರಲ್: ನಟಿಯ ಹಾಟ್​ ಅವತಾರ ಕಂಡು ಹುಬ್ಬೇರಿಸಿದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts